ತೀರ್ಥಹಳ್ಳಿ: ಭಾರೀ ಮಳೆಯ ಹಿನ್ನೆಲೆಯಲ್ಲಿ ಇಲ್ಲಿನ ರಾಮ ಮಂಟಪ ಮುಳುಗಿ ನೀರು ಹರಿಯುತ್ತಿದ್ದು, ಕಮಾನು ಸೇತುವೆ ಬಳಿಗೆ ಜಿಲ್ಲಾಧಿಕಾರಿ ದಯಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಂದು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ನದಿ ಪಾತ್ರದಲ್ಲಿರುವ ಅಲೆಮಾರಿ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಕಮಾನು ಸೇತುವೆ ಬಳಿ ವಾಸವಿರುವ ಅಲೆಮಾರಿ ಕುಟುಂಬದವರ ಛಾಯಚಿತ್ರದ ಸಮೇತ ವರದಿಯನ್ನು ಪಡೆದು ವರದಿಯನ್ನು ನೀಡಿ, ಸೂಕ್ತ ಸುರಕ್ಷಿತ ಸ್ಥಳವನ್ನು ನಿಗದಿ ಮಾಡಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಳಿಗೆ ಸೂಚಿಸಿದರು.
ಇದಕ್ಕೂ ಮುನ್ನ ಮಂಡಗದ್ದೆ ಹೋಬಳಿಯ ಬೇಗುವಳ್ಳಿ ಬಳಿ ಕೆರೆಯ ತಡೆಗೋಡೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಹನಗಳು ಸುರಕ್ಷಿತವಾಗಿ ತೆರಳಲು ಬ್ಯಾರಿಕೇಡ್ ನಿರ್ಮಿಸಿ ಪೋಲಿಸರನ್ನು ನೇಮಿಸುವಂತೆ ಮಾಳೂರು ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರಿಗೆ ತಾತ್ಕಾಲಿಕ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿದರು.
Discussion about this post