ಈ ದೇಶದ ಸರ್ವೋಚ್ಛ ನ್ಯಾಯಾಲಯದ ಬಗ್ಗೆ ದೇಶಕ್ಕೆ ದೇಶವೇ ಗೌರವ ನೀಡುತ್ತಿತ್ತು. ಆದರೆ ಈಗ ಇಡೀ ದೇಶದ ಪ್ರಜ್ಞಾವಂತರು ಛೀಮಾರಿ ಹಾಕುವ ಕಾಲ ಬಂದಿದೆ. ನಾನು ವೈಯಕ್ತಿಕವಾಗಿ ಸುಪ್ರೀಂ ಕೋರ್ಟನ್ನು ದೇವರ ಸಮಾನವಾಗಿ ಪ್ರೀತಿಸುತ್ತಿದ್ದೆ. ಕೆಲವೊಮ್ಮೆ ಅದರಿಂದ ಪ್ರಮಾದಗಳಾದರೂ, ‘ಛೆ ಏನೋ ತೊಂದರೆ ಆಯ್ತು ಬಿಡಿ. ಅದು ನಮ್ಮೆಲ್ಲರ ದೇವಾಲಯ. ಅದನ್ನು ನಿಂದಿಸುವುದು ದೇವ ಕೋಪಕ್ಕೆ ಸಮಾನ’ ಎಂಬ ಭಾವನೆ ನನ್ನೊಳಗಿತ್ತು. ಆದರೆ ನನ್ನ, ನಮ್ಮ ನಂಬಿಕೆಗಳು ಸುಳ್ಳಾಗುತ್ತಿದೆ.
ಅಯೋಧ್ಯಾ ಪ್ರಕರಣದಲ್ಲಿ ಪುರಾತತ್ವ ಇಲಾಖೆ ಅಷ್ಟೆಲ್ಲ ಸಾಕ್ಷ್ಯ ಒದಗಿಸಿದ ಮೇಲೂ ಅದನ್ನು ಎರಡು ಪಾಲು ಮಾಡಿ, ಆಕಡೆ ಮಸೀದಿ, ಈ ಕಡೆ ಮಂದಿರವಾಗಲಿ ಎಂದು ತೀರ್ಪು ನೀಡಿ ತನ್ನ ಬೇಜವಾಬ್ದಾರಿಯನ್ನು ತೋರಿಸಿತು. ಒಂದು ವೇಳೆ ಹಾಗೇನಾದರೂ ಕೋರ್ಟಿನ ಆದೇಶ ಎಂದು ಮಂದಿರ ಮಸೀದಿ ಒಂದೇ ಗೋಡೆಯ ಇಬ್ಬದಿಗಳಲ್ಲಿ ಮಾಡುತ್ತಿದ್ದರೆ ಏನಾದೀತು ಯೋಚಿಸಿ. ಸೌಹಾರ್ದ ಇದ್ದರೂ ಅದು ನಾಶವಾಗಿ ನಿತ್ಯ ಕಲಹಗಳಾಗುತ್ತಿತ್ತು. ಇದರ ಹೊಣೆಯನ್ನು ಸುಪ್ರೀಂ ಕೋರ್ಟೇ ಹೊರಬೇಕಾಗಿತ್ತು.
ಹೌದು ಕೋರ್ಟಿನ ತೀರ್ಮಾನಕ್ಕೆ ಯಾವಾಗಲೂ ಇತ್ತಂಡಗಳ ವಾದ, ಸಾಕ್ಷ್ಯಾಧಾರಗಳು, ಬೇಕಾದಂತಹ ದಾಖಲೆಗಳ ಆಧಾರವೇ ಮುಖ್ಯ ಎಂಬುದು ಸತ್ಯ. ಆದರೆ ಎಲ್ಲಿ ಯಾವಾಗ ಎಂಬುದೂ ಅಷ್ಟೇ ಮುಖ್ಯ. ಎಲ್ಲಿ ಜನಾಭಿಪ್ರಾಯವು ತೀರ್ಪಿಗೆ ವಿರುದ್ಧವಾಗಿ ಘರ್ಷಣೆ ಆಗುತ್ತೋ ಆಗ ತೀರ್ಮಾನ ನೀಡುವುದು ಬಹಳ ಅಪಾಯ. ಆಗ ಅದು ತಟಸ್ಥವಾಗಿ ಆಡಳಿತಾರೂಢ ಪೀಠಕ್ಕೆ ಜವಾಬ್ದಾರಿಯನ್ನು ಹೇರಬೇಕು. ಇದು ಹಾಗಲ್ಲ.
ಹಿಂದೆ ಶಾಬಾನೋ ಪ್ರಕರಣದಲ್ಲಿ ಕೋರ್ಟು ಸರಿಯಾದ ತೀರ್ಮಾನ ಮಾಡಿತ್ತು. ಆದರೆ ರಾಜೀವ್ ಗಾಂಧಿ ಸರಕಾರವು ಈ ತೀರ್ಪಿಗಾಗಿ ಶಾಸನದಲ್ಲೇ ತಿದ್ದುಪಡಿ ಮಾಡಿತ್ತು. ಸುಪ್ರೀಂಗೆ ಆಗಲೂ ಈ ತಿದ್ದುಪಡಿ ವಿಚಾರದಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ ಸುಪ್ರೀಂ ಸರಕಾರದ ಪರವಾಯಿತು.
ಸಲಿಂಗ ಕಾಮಿಗಳಿಗೆ ಬಂಬಲ ಆಗುವಂತಹ ಅಸಹ್ಯ ತೀರ್ಪು ನೀಡಿದ್ದೇ ನಮ್ಮ ಸುಪ್ರೀಂ. ಯಾವುದು ಪ್ರಕೃತಿಗೆ ವಿರುದ್ಧವೋ ಅದಕ್ಕೇ ಬೆಂಬಲವಾಗಿರುತ್ತದೆ ನಮ್ಮ ಸುಪ್ರೀಂ ಕೋರ್ಟು. ಯಾಕೆ ಇಂತಹ ದುರ್ಬುದ್ಧಿ ಉಂಟಾಗಿದೆ ಎಂಬುದು ಪ್ರತಿಯೊಬ್ಬರ ಮನದಲ್ಲೂ ಇದೆ. ಆದರೆ, ಹೇಳುವ ಧೈರ್ಯ ಇಲ್ಲ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ.
ಈಗ ಕರ್ನಾಟಕದ ವಿಚಾರವನ್ನೇ ನೋಡೋಣ. ಮೊದಲು ಮಹದಾಯಿ ವಿಚಾರ. ಅಲ್ಲಿ ಐಷಾರಾಮಿ ಸ್ವಿಮ್ಮಿಂಗ್ ಪೂಲ್ ರಚನೆಗಾಗಿ ನೀರು ಬೇಕು ಎಂದು ಕೇಳಿದ್ದೇ? ಆದರೆ ನಾವು ಗೌರವ ಇಟ್ಟಿದ್ದ ಸುಪ್ರೀಂ ಕೋರ್ಟು ಮಾಡಿದ್ದೇನು? ಇನ್ನು ಇಲ್ಲಿನ ದರಿದ್ರ ಸರಕಾರ ನೀರು ಕೇಳಿದ್ದಕ್ಕೆ ಲಾಠಿ ಏಟು ನೀಡಿ, ಅನ್ನದಾತನನ್ನು ಸೆರೆಮನೆಗೆ ತಳ್ಳಿತು.
ಕಾವೇರಿ ವಿಚಾರ ನೋಡೋಣ:
ಇಲ್ಲಿ ಕುಡಿಯುವ ನೀರು ಉಳಿಸಿಕೊಡಲು ಕೇಳಿದ್ದು. ಆದರೆ ನಿರ್ದಾಕ್ಷಿಣ್ಯದ ಈ ಸುಪ್ರೀಂ ಕೋರ್ಟ್ ಕುಡಿಯುವ ನೀರಿನಿಂದ ಹೆಚ್ಚು ಮಹತ್ವ ನೀಡಿದ್ದು ತಮಿಳುನಾಡಿನ ಬೆಳೆಗೆ! ನಮ್ಮ ರೈತರ ಬೆಳೆ ಹಾಳಾಗಿ ಹೋಗಲಿ ಆದರೆ ರೈತರಿಗೆ, ನಗರಗಳಿಗೆ ಅದನ್ನೇ ನಂಬಿದ್ದ ಜನರ ಕುಡಿಯುವ ನೀರಿಗೇ ಬರೆ ಹಾಕಿತ್ತಲ್ಲವೇ? ನಾವು ನೀರಿಲ್ಲದೆ ಸಾಯುವಾಗ ನಮಗೆ ಸುಪ್ರೀಂ ಕೋರ್ಟು ಬೇಕಾ ಬಂಧುಗಳೇ? ಸಾಯುವವನಿಗೆ ಸುಪ್ರೀಂ ಕೋರ್ಟ್ ನೇಣು ಸೌಲಭ್ಯ ಕಲ್ಪಸಲು ತಮಿಳುನಾಡಿಗೆ ಆದೇಶವನ್ನು ನೀಡಿದರೂ ಅಚ್ಚರಿ ಇಲ್ಲ.
ಯಾವಾಗಲೂ ಒಂದು ಧಾವೆಯ ಮಹತ್ವ ಅಂದರೆ ಚ್ಝ್ಠಛಿ ನೋಡಬೇಕಾದದ್ದು ನ್ಯಾಯಾಲಯದ ಧರ್ಮ. ಕರ್ನಾಟಕದ ಸರ್ವ ಪಕ್ಷಗಳ ಒಕ್ಕೊರಲ ಅಭಿಪ್ರಾಯವನ್ನು ಅಧಿವೇಶನ ನಡೆಸಿ ನಿರ್ಣಯಿಸಿದೆ. ಇದು ಆರು ಕೋಟಿ ಕನ್ನಡಿಗರ ಅಭಿಪ್ರಾಯ. ಇಷ್ಟನ್ನು ನೋಡಿದರೂ ಈ ನ್ಯಾಯಾಲಯ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದರೆ ಇದು ಈ ದೇಶಕ್ಕೆ ಶ್ರೀಮಂತರಿಗೆ, ಲಂಚ ಅಮಿಷಗಳಿಗೆ ಬೆಂಬಲ ನೀಡುವ ಸರ್ವೋಚ್ಛ ನ್ಯಾಯಾಲಯ ಎಂದು ಪ್ರಜೆಗಳು ಹೇಳಲಿಕ್ಕಿಲ್ಲವೇ? ಇಂತಹ ಸಂದಿಗ್ಧ ಧಾವೆಗಳು ಬಂದಾಗ ಏಕಪಕ್ಷೀಯವಾಗಿ ತೀರ್ಮಾನ ನೀಡುವುದು ನ್ಯಾಯವೇ? ಕೇಂದ್ರಕ್ಕೆ ಇದನ್ನು ಪರಿಶೀಲಿಸಲು ಯಾಕೆ ಆದೇಶ ನೀಡಬಾರದು. ಒಂದು ಒಕ್ಕೂಟ ರಾಜ್ಯಗಳ ಜವಾಬ್ದಾರಿ ದೇಶದ ಪ್ರಧಾನ ಮಂತ್ರಿಗಳಿಗಿದೆ ಎಂಬುದನ್ನೂ ತಿಳಿಯದ ಇದನ್ನು, ನ್ಯಾಯಾಲಯ ಎಂದು ಹೇಳಲು ಮನಸ್ಸಾಗುವುದಿಲ್ಲ. ನ್ಯಾಧೀಶರಿಗೇನು ಗೊತ್ತು ಬಡವರ, ಹಸಿದವರ, ಬಳಲಿದವರ, ರೈತರ ಬವಣೆಗಳು. ತಿಂಗಳು ತಿಂಗಳು ಸಂಬಳ, ಭತ್ಯೆ ಮತ್ತು ಆಚೆ ಈಚೆಯಿಂದ ಬರುವ ಸವಲತ್ತುಗಳಿವೆ. ರೈತನಿಗೆ ಶ್ರಮದ ಬೆಳೆ ಬೆಳೆದರೆ ಮಾತ್ರ ಬದುಕು. ಅದರಲ್ಲೂ ಅನೇಕ ಮಧ್ಯವರ್ತಿಗಳಿಗೆ ಸಿಂಹ ಪಾಲಿದೆ.
ಸುಪ್ರೀಂ ಕೋರ್ಟನ್ನು ಜನ ಗೌರವಿಸುತ್ತಾರೆ, ಅದಕ್ಕೆ ವಿರುದ್ಧವಾಗಿ ಮಾತನಾಡುವುದು ಶಿಕ್ಷಾರ್ಹ ಅಪರಾಧ ಎಂಬ ಅರಿವು ಇವರ ಅಹಂಕಾರಕ್ಕೆ ಮೂಲ ಕಾರಣ ಎಂದು ಹೇಳಿದರೆ ತಪ್ಪಾಗಲಾರದು ಎಂದು ಅನ್ನಿಸುತ್ತದೆ.
ನಾಳೆ ಪಾಕ್ ಪ್ರಜೆಯೋ, ಇಲ್ಲಿನ ದುರ್ಬುದ್ದಿಗಳೋ ಸುಪ್ರೀಂ ಕೋರ್ಟಿಗೆ, ಮೊನ್ನೆ ಮೊನ್ನೆ ನಡೆದ ಸೈನಿಕರ ಹತ್ಯಾ ಕಾಂಡವು ಸರಕಾರದ ಕೃತ್ಯ ಎಂದು ವಾದಿಸಿದರೆ ಈ ನ್ಯಾಯಾಲಯ ಪಾಕಿನ ಪರ ತೀರ್ಮಾನ ಕೊಡಲಿಕ್ಕಿಲ್ಲ ಎಂದು ಏನು ಗ್ಯಾರಂಟಿ ಸ್ವಾಮೀ?
ಈ ಲೇಖನಕ್ಕೆ ಪ್ರತಿಕ್ರಿಯೆಯಾಗಿ ನನಗೆ ‘ಇದು ನ್ಯಾಯಾಲಯದ ನಿಂದನೆ’ ಎಂದು ಶಿಕ್ಷೆ ನೀಡಿದರೂ ಭಯವಿಲ್ಲ. ನಾನು ನನ್ನ ಕನ್ನಡ ನಾಡಿನ ರೈತರ ನೋವನ್ನು ಸಹಿಸಲಾರದೆ, ನನ್ನ ಬರವಣಿಗೆಯ ವಿದ್ಯೆಯನ್ನು ತೋರಿಸಿದ್ದೇನಷ್ಟೆ. ಈ ದೇಶಕ್ಕೆ ಸುಪ್ರೀಂ ಕೋರ್ಟ್ ಬೇಡ ಅನ್ನಲಿಲ್ಲ ಅಥವಾ ಅಗೌರವದ ವಾಕ್ಯಗಳನ್ನೂ ಆಡಲಿಲ್ಲ. ನಮ್ಮ ನಂಬಿಕೆಗಳನ್ನು ಹುಸಿಯಾಗಿಸಬೇಡಿ ಎಂದು ಬೇಡುತ್ತಿದ್ದೇನೆ. ಕೆಲವೊಮ್ಮೆ ಉನ್ನತ ಮಟ್ಟದಲ್ಲಿ ಅಪಚಾರಗಳು, ಪ್ರಮಾದಗಳು ನಡೆದು ಹೋಗುವುದಿದೆ. ಮನುಷ್ಯನಾದವ ತಪ್ಪು ಮಾಡುತ್ತಾನೆ. ಆದರೆ ಅದಕ್ಕೆ ನಮ್ಮ ಕ್ಷಮೆಯೂ ಇದೆ. ಆದರೆ ಬಾರಿಬಾರಿಗೂ ಅನ್ಯಾಯವಾದರೆ ಕ್ಷಮೆ ಇದೆಯೇ? ಯಾರೋ ಸುಪ್ರೀಂ ಕೋರ್ಟಿನ ನ್ಯಾಯಾಧೀಶರೊಬ್ಬರು ಸ್ತ್ರೀಯೊಬ್ಬಳಿಗೆ ಲೈಂಗಿಕ ಪೀಡನೆ ನೀಡಿದ್ದು ದೇಶದಾದ್ಯಂತ ತಿಳಿದಿದೆ. ಆದರೆ ಈ ದೇಶದ ಜನರು ಈ ಉನ್ನತಪೀಠವನ್ನು ನಿಂದಿಸಲಿಲ್ಲ. ಯಾಕೆಂದರೆ ಅದು ನಮ್ಮೆಲ್ಲರ ಘನವೆತ್ತ ಪೀಠ. ಅದಕ್ಕೆ ಅಪಚಾರವಾಗುವುದೂ, ನಾವು ಪೂಜಿಸುವ ದೇವರಿಗೆ ಅಪಚಾರವಾಗುವುದೂ ಒಂದೇ ಎಂಬ ಭಾವನೆ ನಮ್ಮಲ್ಲಿದೆ. ಇಂತಹ ಸದ್ಭಾವನೆ ಹೊತ್ತ ಪ್ರಜೆಗಳು ಕುಡಿಯಲು ನೀರು ಕೊಡಿ ಎಂದು ಅಂಗಲಾಚಿ ಬೇಡಿದರೂ ಕೊಡಲು ಅಪ್ಪಣೆ ನೀಡದ ಸುಪ್ರೀಂ ಕೋರ್ಟು ನಮಗ್ಯಾಕೆ ಸ್ವಾಮೀ? ಎಂಬ ಭಾವನೆ ಪ್ರಜೆಗಳಿಗೆ ಬರಲಾರದೇ? ಜ್ಞಾನಿಗಳು ಯೋಚಿಸಿನೋಡಿ. ಇಂತಹ ಆದೇಶದ ದುಷ್ಪರಿಣಾಮ ಏನು ಗೊತ್ತೇ? ದೇಶ ವಿಭಜನೆ. ರಷ್ಯಾದಲ್ಲಿ ಒಡೆದು ಚೂರಾದಂತೆ ಇಲ್ಲಿಯೂ ಆದರೆ? ಈ ಯೋಚನೆಯು ಆ ನ್ಯಾಯ ಪೀಠಸ್ಥ ಮನುಷ್ಯರಿಗಿರಬೇಕು. ಪಾತ್ರೆ ಒಡೆದ ಮೇಲೆ ಗಂಜಿಯ ಆಸೆ ಯಾರಿಗಿರುತ್ತದೆ.?
ಆದರೆ ಒಂದು ಮಾತು: ಪ್ರಜೆಗಳು ಸಹನೆ ಕಳೆದುಕೊಂಡರೆ ಯಾವ ಸುಪ್ರೀಂ ಕೋರ್ಟು ಕೂಡಾ ಕಾಲ ಕಸವಾದೀತು. ಇದು ಜಗತ್ತಿನ ಪ್ರಕೃತಿ. ನೀರ ದಾಹದಲ್ಲಿದ್ದವರು dehydrationಗೆ ಒಳಗಾಗಿ ಆಪತ್ತನ್ನು ಎದುರಿಸುತ್ತಿದ್ದಾರೆ. ಇದು ನಮ್ಮ ಶಾಪವಲ್ಲ. ಇದು ಅವರು ನಿರ್ದಾಕ್ಷಿಣ್ಯವಾಗಿ ವ್ಯವಹರಿಸಿದ್ದರ ಫಲ.
(ಭಾರತದ ಸಂವಿಧಾನದತ್ತವಾಗಿ ಸ್ಥಾಪಿತವಾಗಿರುವ ಸುಪ್ರೀಂ ಕೋರ್ಟ್ ಸೇರಿದಂತೆ ಇಡಿಯ ದೇಶದ ನ್ಯಾಯಾಂಗ ವ್ಯವಸ್ಥೆ ಕುರಿತಾಗಿ ನಮಗೆ ಅಪಾರ ಗೌರವವಿದೆ. ವಾಡಿಕೆಯ ಮಳೆಯಿಲ್ಲದೇ ಜಲಾನಯನ ಪ್ರದೇಶಗಳ ಬತ್ತಿ ಹೋಗುತ್ತಿರುವಾಗ ಕುಡಿಯಲು ನೀರಿಲ್ಲದೇ ಬವಣೆ ಪಡುವ ಪರಿಸ್ಥಿತಿಯಲ್ಲಿ ನಾವು ಒದ್ದಾಡುತ್ತಿರುವಾಗ ಬೆಳೆಗೆ ನೀರು ಕೊಡಿ ಎಂಬುದು ಕರ್ನಾಟಕದ ಪಾಲಿಗೆ ಮರಣ ಶಾಸನವೇ ಹೌದು. ಈ ಲೇಖನದಲ್ಲಿ ಅನ್ನದಾತ ರೈತ ಅಳಲನ್ನು ಪ್ರತಿನಿಧಿಸುವ ಸಾಲುಗಳನ್ನು ಬರೆಯಲಾಗಿದೆಯೇ ವಿನಾ, ಘನತೆವೆತ್ತ ನ್ಯಾಯಾಲಯದ ಕುರಿತಾಗಿ ಟೀಕೆ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ. ಈ ದೇಶದ ಸಾಮಾನ್ಯ ನಾಗರಿಕರಿಗಾಗಿ ನ್ಯಾಯಾಲಯ ಇದೆಯೇ ಹೊರತು, ನ್ಯಾಯಾಲಯಕ್ಕಾಗಿ ನಾಗರಿಕರಿಲ್ಲ ಎಂಬುದು ನಮ್ಮ ಭಾವನೆ)
Discussion about this post