Read - < 1 minute
ಬೆಂಗಳೂರು, ಸೆ.3: ಆಮ್ನೆಸ್ಟಿ ಪ್ರಕರಣದಲ್ಲಿ ದೇಶ ಹಾಗೂ ಸೇನೆಯ ವಿರುದ್ಧ ಘೋಷಣೆ ಕೂಗಿಲ್ಲ. ದೇಶದ್ರೋಹದಂತಹ ಯಾವುದೇ ಚಟುವಟಿಕೆಗಳು ನಡೆದಿಲ್ಲ ಎಂದು ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗಲೇ ಪ್ರತಿಭಟನೆ ಮಾಡಿದ್ದಾರೆ. ಮರು ದಿನವೇ ಆಮ್ನೆಸ್ಟಿ ಖಂಡಿಸಿ ಪ್ರತಿಭಟನೆಗಳು ನಡೆದಿವೆ. ಇವೆಲ್ಲವನ್ನೂ ಗಮನಿಸಿದರೆ ಪೂರ್ವನಿಯೋಜಿತ ಎನಿಸುತ್ತದೆ ಎಂದರು.
ಕಾರ್ಯಕ್ರಮದ ವಿಡಿಯೋ ನೋಡಿದ್ದೇವೆ. ಇದರಲ್ಲಿ ಯಾವುದೇ ರೀತಿಯಲ್ಲೂ ದೇಶ ಹಾಗೂ ಸೇನೆಯ ವಿರುದ್ಧ ಘೋಷಣೆ ಕೂಗಿಲ್ಲ ಅಥವಾ ದೇಶದ್ರೋಹದ ಚಟುವಟಿಕೆಗಳು ನಡೆದಿಲ್ಲ ಎಂದು ಹೇಳಿದರು.
ರಾಜದ್ರೋಹ ಎಂಬುದು ಬ್ರಿಟೀಷರ ಕಾನೂನು. ಅದನ್ನು ಐಪಿಸಿ ಸೆಕ್ಷನ್ 124(ಎ)ಯಿಂದ ಕೈ ಬಿಡಬೇಕು. ಇದರ ವ್ಯಾಖ್ಯಾನದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಮಹಾತ್ಮಾಗಾಂಧೀಜಿಯಿಂದ ಹಿಡಿದು ಬಹಳಷ್ಟು ಜನರ ವಿರುದ್ಧ ಈ ಆರೋಪ ಹೊರಿಸಲಾಗಿದೆ.
ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಅವರ ಭಾವಚಿತ್ರಕ್ಕೆ ಪೊರಕೆಯಿಂದ ಹೊಡೆಯುವುದು, ಕೆಟ್ಟ ಹೇಳಿಕೆಗಳ ಮೂಲಕ ಅವಮಾನ ಮಾಡುವುದು ಬಿಜೆಪಿ ಸಂಸ್ಕೃತಿಯೇ ಎಂದು ಪ್ರಶ್ನಿಸಿದ್ದಾರೆ.
ರಮ್ಯಾ ಅವರು ಪಾಕ್ ಪರವಾಗಿ ಮಾತನಾಡಿರುವುದು ಸರಿಯಾಗಿಯೇ ಇದೆ ಎಂದು ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ.
ದೊರೆಸ್ವಾಮಿ ಅವರ ವಿರುದ್ಧವೂ ಈ ಆರೋಪ ಹೊರಿಸುವ ಪ್ರಯತ್ನ ನಡೆದಿತ್ತು. ಇಂತಹ ಅನಗತ್ಯ ಕಾನೂನನ್ನು ಕೈ ಬಿಡಬೇಕು. ಈ ಸಂಬಂಧ ರಾಜ್ಯ ಸರ್ಕಾರ ಮುಂದಾಳತ್ವ ವಹಿಸಬೇಕು ಎಂದ ಅವರು, ವಿಶೇಷ ಅಧಿವೇಶನ ಕರೆದು ರಾಜ್ಯ ಸರ್ಕಾರ ಈ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಸುಪ್ರೀಂಕೋರ್ಟ್ ತೀರ್ಪುನಂತೆ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಹೇಳಿಕೆ, ಬರವಣಿಗೆ ರಾಜದ್ರೋಹವಾಗುತ್ತದೆ. ಆದರೆ, ಆಮ್ನೆಸ್ಟಿ ಪ್ರಕರಣದಲ್ಲಿ ರಾಜದ್ರೋಹವಾಗಿಲ್ಲ ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಇರಬೇಕು. ವಾಲ್ಮೀಕಿ ಕುರಿತು ನಾರಾಯಣಾಚಾರ್ ಬರೆದಿರುವ ಪುಸ್ತಕವನ್ನು ನಿಷೇಧ ಮಾಡಲಾಗಿದೆ ಇದು ಸರಿಯಲ್ಲ. ಶಂಕರಾಚಾರ್ಯರು ಕಾಶ್ಮೀರದ ಪರವಾಗಿ ಮಾತನಾಡಿದ್ದಾರೆ. ಇದು ರಾಜದ್ರೋಹವಲ್ಲ ಎಂದು ತಿಳಿಸಿದರು.
ಈ ರೀತಿಯ ವಾದಗಳೇ ಸರಿಯಲ್ಲ ಎಂದ ಅವರು, ರಮ್ಯಾ ಹೇಳಿಕೆಯಲ್ಲೂ ತಪ್ಪಿಲ್ಲ. ಮಾತನಾಡುವುದೇ ದೇಶ ದ್ರೋಹ ಎಂದರೆ ಸರಿಯೇ ಎಂದು ಪ್ರಶ್ನಿಸಿದರು.
ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ಭ್ರಮೆ ಹುಟ್ಟಿಹಾಕಿತ್ತು. ಆದರೆ, ಬಿಹಾರ ಚುನಾವಣೆ ನಂತರ ಇದು ಸಾಧ್ಯವಿಲ್ಲ ಎಂದು ಸಾಬೀತಾಗಿ ಭ್ರಮ ನಿರಸನವಾದ ಮೇಲೆ ಬೇರೆ ದಾರಿ ಕಂಡುಕೊಂಡಿದೆ. ದೇಶದ್ರೋಹ ಎಂದು ಹೇಳುತ್ತಿದೆ ಎಂದರು.
Discussion about this post