Read - < 1 minute
ನವದೆಹಲಿ:ಸೆ:30:ಆರ್ ಜೆ ಡಿ ನಾಯಕ ಮೊಹಮ್ಮದ್ ಶಹಾಬುದ್ದೀನ್ಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ಶಹಾಬುದ್ದೀನ್ ಮತ್ತೆ ಜೈಲು ಸೇರಲಿದ್ದಾರೆ.
ಬಿಹಾರದ ಸಿವಾನ್ನಲ್ಲಿ ನಡೆದ ರಾಜೀವ್ ರೋಷನ್ ಪ್ರಕರಣದಲ್ಲಿ ಜೈಲು ಸೇರಿದ್ದ ಶಹಾಬುದ್ದೀನ್ಗೆ ಪಟ್ನಾ ಹೈಕೋರ್ಟ್ ಇತ್ತೀಚೆಗೆ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜೀವ್ ರೋಷನ್ ಕುಟುಂಬ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ, ಶಹಾಬುದ್ದೀನ್ ಜಾಮೀನು ಅರ್ಜಿಯನ್ನು ರದ್ದುಗೊಳಿಸಿದೆ. ಅಲ್ಲದೇ ಶಹಾಬುದ್ದೀನ್ ಬಿಹಾರ ಪೊಲೀಸರಿಗೆ ಶರಣಾಗಬೇಕು. ಇಲ್ಲವೇ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆಯಬೇಕು ಎಂದು ನ್ಯಾಯಮೂರ್ತಿ ಪಿ.ಸಿ. ಘೋಷ್ ಮತ್ತು ಅಮಿತಾವ್ ರಾಯ್ ಅವರಿದ್ದ ನ್ಯಾಯಪೀಠ ಆದೇಶ ನೀಡಿದೆ.
2004ರಲ್ಲಿ ಬಿಹಾರದ ಸಿವಾನ್ದಲ್ಲಿ ಇಬ್ಬರು ಸಹೋದರರ ಮೇಲೆ ಆಸಿಡ್ ಹಾಕಿ ಹತ್ಯೆ ಮಾಡಲಾಗಿತ್ತು. 2005ರಲ್ಲಿ ಈ ಪ್ರಕರಣದ ಮುಖ್ಯ ಸಾಕ್ಷಿ ರಾಜೀವ್ ರೋಷನ್ ರ ಹತ್ಯೆ ನಡೆದಿದ್ದು, ಈ ಹತ್ಯೆ ಪ್ರಕರಣದಲ್ಲಿ ಶಹಾಬುದ್ದೀನ್ ಅಪರಾಧ ಸಾಬೀತಾಗಿತ್ತು. ಈ ನಿಟ್ಟಿನಲ್ಲಿ ಸಿವಾನ್ ಕೋರ್ಟ್ ಮೊಹಮ್ಮದ್ ಶಹಾಬುದ್ದೀನ್ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 11 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಶಹಾಬುದ್ದೀನ್ ಗೆ ಸೆ.10ರಂದು ಪಾಟ್ನಾ ಹೈಕೋರ್ಟ್ ಜಾಮೀನು ನೀಡಿತ್ತು.
Discussion about this post