Thursday, June 19, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Army

ಈ ಸಮಯ ಶೃಂಗಾರಮಯ!

September 24, 2016
in Army
0 0
0
Share on facebookShare on TwitterWhatsapp
Read - 6 minutes

ವಿಶ್ವದಲ್ಲಿ ಸೃಷ್ಟಿ ಹೇಗಾಯಿತು? ಎನ್ನುವ ಮೂಲಭೂತ ತಾತ್ವಿಕ ಪ್ರಶ್ನೆಗೆ ನಮ್ಮ ಪ್ರಾಚೀನರು ಒಂದು ಪರಿಹಾರವನ್ನು ಕೊಟ್ಟಿದ್ದಾರೆ. ಅದೆಂದರೆ, ದೇವರಿಗೆ ತಾನೊಬ್ಬನೇ ಇದ್ದು ಬೋರ್ ಆಗಿ ಕೊನೆಗೆ ತನ್ನನ್ನೇ ಎರಡಾಗಿ ಒಡೆದುಕೊಂಡನಂತೆ. ಆಗ ಅವನ ಅರ್ಧಭಾಗ ಪುರುಷ ರೂಪವೂ ಇನ್ನರ್ಧ ಸ್ತ್ರೀ ಆಗಿಯೂ ಹುಟ್ಟಿದವು; ಅಲ್ಲಿಂದ ಈ ಜಗತ್ತಿನ ಸೃಷ್ಟಿಕ್ರಿಯೆ ಶುರುವಾಯಿತು ಎನ್ನುವುದು ಅವರ ತರ್ಕ. ವಿಶ್ವದಲ್ಲಿ ಪ್ರಕೃತಿ-ಪುರುಷರು ಹೀಗೆ ಜನ್ಮತಾಳಿದ ನಂತರ ಏನಾಯಿತು? ರಸಗಳು ಹುಟ್ಟಿದವು. ಜಗತ್ತಿನಲ್ಲಿ ಹುಟ್ಟಿದ ಮೊದಲ ಭಾವ ಅಥವಾ ರಸವೇ ಶೃಂಗಾರ ಎಂದು ಸ್ಮತಿಕಾರರು ಬರೆದಿದ್ದಾರೆ. ಅಮರಕೋಶವು ಅಷ್ಟರಸಗಳನ್ನು ಪಟ್ಟಿ ಮಾಡುವಾಗ “ಶೃಂಗಾರ ವೀರ ಕರುಣಾ..” ಎಂದೇ ಶುರುಮಾಡುತ್ತದೆ. ಅದು ಸರಿ, ಆದರೆ ಶೃಂಗಾರವೇ ಏಕೆ ಮೊದಲು ಹುಟ್ಟಿದ್ದು ಎಂಬ ಕೀಟಲೆ ಮಾಡುವವರಿಗೆ ಸಂಸ್ಕೃತದ ಒಬ್ಬ ಕವಿ ಹೀಗೆ ಉತ್ತರ ಕೊಡುತ್ತಾನೆ:

ದರ್ಪಣಾರ್ಪಿತಮಾಲೋಕ್ಯ

ಮಾಯಾಸ್ತ್ರೀರೂಪಮಾತ್ಮನ:

ಆತ್ಮನ್ಯೇವಾನುರಕ್ತೋ ವಃ

ದಿವಂ ದಿಶತು ಕೇಶವಃ

-ಅಂದರೆ, ದೇವರು ತನ್ನನ್ನೇ ಅರ್ಧರ್ಧ ಹೋಳುಗಳನ್ನಾಗಿ ವಿಭಾಗಿಸಿಕೊಂಡು ಗಂಡು ಹೆಣ್ಣುಗಳನ್ನು ಸೃಷ್ಟಿ ಮಾಡಿದನಷ್ಟೆ? ಈ ಅರ್ಧಗಳಲ್ಲಿ ಒಂದಾದ ಹೆಣ್ಣು, ಹುಟ್ಟಿದೊಡನೆ ಮಾಡಿದ ಮೊದಲ ಕೆಲಸ ಏನು ಎಂದರೆ ಕನ್ನಡಿಯೆದುರು ನಿಂತದ್ದು! ಹಾಗೆ ಕನ್ನಡಿಯನ್ನು ನೋಡುನೋಡುತ್ತಲೇ ಆ ಹೆಣ್ಣಿಗೆ (ಅದು ಮೂಲತಃ ಗಂಡಿನದೇ ಒಂದು ಭಾಗವಾದ್ದರಿಂದ) ತನ್ನ ಮೇಲೆಯೇ ಅನುರಕ್ತಿ ಮೂಡಿತಂತೆ! ಅಂದರೆ ಕನ್ನಡಿಯು ಶೃಂಗಾರ ಎಂಬ ಪದದ ಫ್ಯಾಶನ್ ಮತ್ತು ಪ್ಯಾಶನ್ ಎಂಬೆರಡು ಅರ್ಥಗಳಿಗೂ ಕಾರಣೀಭೂತವಾಯಿತು ಎಂದು ಹೇಳಬಹುದು! ಆದ್ದರಿಂದ ಜಗತ್ತಿನಲ್ಲಿ ಮೊದಲು ಹುಟ್ಟಿದ ರಸ ಶೃಂಗಾರ – ಇದು ಕವಿಯ ವಾದ!

ವಿಶೇಷವೆಂದರೆ, ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಈ ರಸೋತ್ಪತ್ತಿಯ ಬಗ್ಗೆ ಮಾಡಿದಷ್ಟು ಆಳವಾದ ಸಂಶೋಧನೆ, ಚಿಂತನೆಗಳನ್ನು ಬೇರಾವ ನಾಗರಿಕತೆಯೂ ಮಾಡಿಲ್ಲ! ಕೇವಲ ಶೃಂಗಾರ ಎಂಬ ಒಂದೇ ರಸವನ್ನು ತೆಗೆದುಕೊಂಡರೂ; ಅದಕ್ಕೆ ಸಂವಾದಿಯಾದ ಭಾವವನ್ನಾಗಲೀ ಪದವನ್ನಾಗಲೀ ಬೇರಾವ ಸಾಹಿತ್ಯದಲ್ಲೂ ನಾವು ಕಾಣುವುದು ಸಾಧ್ಯವಿಲ್ಲ. ಇಂಗ್ಲೀಷಿನಲ್ಲಿರುವ ಸೆಕ್ಸ್, ಡಿಸೈರ್, ಪ್ಯಾಶನ್, ಎಕ್ಸ್ಟಸಿ – ಇತ್ಯಾದಿ ಯಾವ ಪದವೂ ಶೃಂಗಾರದ ಆಳ-ವ್ಯಾಪ್ತಿಗಳನ್ನು ಧ್ವನಿಸುವುದಿಲ್ಲ ಎನ್ನುವುದು ಆಶ್ಚರ್ಯಕರ. ಹಾಗಾದರೆ, ಈ ಪದಕ್ಕೆ ಹೇಗೆ ಅರ್ಥ ಬರೆಯಬೇಕು? ಭೋಜರಾಜ ತನ್ನ “ಶೃಂಗಾರ ಪ್ರಕಾಶ” ಎಂಬ ಕೃತಿಯಲ್ಲಿ “ಯೇನ ಶೃಂಗಂ ರೀಯತೇ ಸ ಶೃಂಗಾರಃ” ಎನ್ನುತ್ತಾನೆ. ಶೃಂಗ ಎಂದರೆ ಜಿಂಕೆಯ ಕೊಂಬು ಎಂದೂ, ಪರ್ವತಾಗ್ರ ಎಂದೂ, ದೇವಸ್ಥಾನ ಅಥವಾ ಯಾವುದೇ ಕಟ್ಟಡದ ಕಳಶ ಎಂದೂ ಅರ್ಥವುಂಟು. ಅಂತಹ ತುತ್ತತುದಿಯನ್ನು ತಲುಪುವುದೇ ಶೃಂಗಾರ ಎಂದು ಹೇಳಿ ಭೋಜ ಸುಲಭದಲ್ಲಿ ಜಾರಿಕೊಂಡುಬಿಡುತ್ತಾನೆ! ಒಂದು ಪರ್ವತವನ್ನು ಹತ್ತಿ ಅದರ ಶಿಖರದಲ್ಲಿ ನಿಂತಾಗ ಸುತ್ತಿಕೊಳ್ಳುವ ಆನಂದ, ಅನುಭೂತಿಗಳು ಯಾವ ಬಗೆಯವು ಎನ್ನುವುದನ್ನು ಅನುಭವಿಸಿ ಅರಿತಿದ್ದವರಿಗೆ ಭೋಜರಾಜನ ಮಾತು ಅಷ್ಟಿಷ್ಟಾದರೂ ಅರ್ಥವಾದೀತೇನೋ! “ಧ್ವನ್ಯಾಲೋಕ”ದಲ್ಲಿ “ಶೃಂಗಾರೀ ಚೇತ್ ಕವಿಃ ಕಾವ್ಯೇ ಜಾತಂ ರಸಮಯಂ ಜಗತ್” ಎಂಬ ಮಾತು ಬರುತ್ತದೆ. ಶೃಂಗಾರವನ್ನು ಬಲ್ಲ ಕವಿಯ ಕಾವ್ಯದಲ್ಲಿ ಜಗತ್ತು ರಸಮಯವಾಗುತ್ತದಂತೆ. ಹಾಗಿಲ್ಲದೆ ಅವನಿಗೆ ಶೃಂಗಾರವನ್ನು ಸರಿಯಾಗಿ ನಿರ್ವಹಿಸಲು ಬರುವುದಿಲ್ಲವಾದರೆ, ಅವನ ಕಾವ್ಯವೇ ನೀರಸ ತಿಳಿಸಾರು ಎನ್ನುವುದು ಆನಂದವರ್ಧನನ ಅನಿಸಿಕೆ.

ಪಾಶ್ಚಾತ್ಯರೇನೋ ಪ್ರೇಮಿಗಳಿಗಾಗಿ ಕಡು ಲೋಭಿಗಳಂತೆ ವರ್ಷದಲ್ಲಿ ಒಂದೇ ಒಂದು ದಿನ ಮೀಸಲಿಟ್ಟರು. ಆದರೆ, ನಮ್ಮ ಸಂಸ್ಕೃತ ಕವಿಗಳು ಬಹಳ ಉದಾರಿಗಳು. ಅವರಿಗೆ ವರ್ಷವೆಲ್ಲ ಶೃಂಗಾರ ಮಾಸವೇ! ಕಾಳಿದಾಸನಂತಹ ಮಹಾಕವಿಯಂತೂ ವರ್ಷದ ಆರು ಮಾಸಗಳಲ್ಲಿ ಗಂಡು-ಹೆಣ್ಣುಗಳು ಹೇಗೆ ಹೇಗೆ ಶೃಂಗಾರದಲ್ಲಿ ತೊಡಗಿಕೊಳ್ಳುತ್ತಾರೆ ಎಂಬುದರ ಮೇಲೆಯೇ “ಋತುಸಂಹಾರ” ಎಂಬ ಪಿಎಚ್‌ಡಿ ಪ್ರಬಂಧ ಬರೆದಿದ್ದಾನೆ! ಜೀವನದಲ್ಲಿ ಪ್ರೇಮ-ವೈರಾಗ್ಯಗಳ ನಡುವೆ ಏಳೇಳು ಬಾರಿ ನೆಗೆದಾಡಿದನೆಂಬ ಐತಿಹ್ಯ ಇರುವ ಭರ್ತೃಹರಿ ಪ್ರೇಮಪಾಶಕ್ಕೆ ಬಿದ್ದಾಗ ಶೃಂಗಾರಶತಕವನ್ನೂ, ಪ್ರೇಮ ಕೈ ಕೊಟ್ಟಾಗ – ಅರ್ಥಾತ್ ಪ್ರೀತಿಸಿದ ಹೆಣ್ಣು ಟಾಟಾ ಎಂದಾಗ ವೈರಾಗ್ಯಶತಕವನ್ನೂ, ಆ ಎಲ್ಲ ಗೋಳಾಟಗಳು ಮುಗಿದ ಮೇಲೆ ಬುದ್ಧಿ ಬಂದು ನೀತಿಶತಕವನ್ನೂ ಬರೆದನೆಂದು ಹೇಳುತ್ತಾರೆ. ಅವನ ಶೃಂಗಾರಶತಕ ಶುರುವಾಗುವುದೇ ಮನ್ಮಥನ ಆರಾಧನೆಯೊಂದಿಗೆ!

ಶಂಭುಃ ಸ್ವಯಂಭು ಹರಯೋ ಹರಿಣೇಕ್ಷಣಾನಾಂ

ಯೇನಾಕ್ರಿಯಂತ ಸತತಂ ಗೃಹಕರ್ಮ ದಾಸಾಃ

ವಾಚಾಮಗೋಚರ ಚರಿತ್ರ ವಿಚಿತ್ರತಾಯ

ತಸ್ಮೈ ನಮೋ ಭಗವತೇ ಕುಸುಮಾಯುಧಾಯ

ಮನ್ಮಥದೇವನು ಅರವಿಂದ, ಅಶೋಕ, ನೀಲೋತ್ಪಲ, ಚೂತ, ನವಮಲ್ಲಿಕಾ ಎಂಬ ಐದು ಜಾತಿಯ ಹೂಗಳಿಂದ ಮಾಡಿದ ಬಾಣವನ್ನು ಹಿಡಿದು ಬರುವವನಾದ್ದರಿಂದ ಕುಸುಮಾಯುಧ. ಮಾತಿಗೂ ನೋಟಕ್ಕೂ ಸಿಗಲಾರದವನಾದ್ದರಿಂದ ಅನಂಗ. ಆದರೆ, ದೇಹವೇ ಇಲ್ಲದವನೆಂದೋ ಕೇವಲ ಹೂಬಾಣ ಹಿಡಿದ ಅಲ್ಪನೆಂದೋ ಕಡೆಗಣಿಸಬೇಡಿ ಸ್ವಾಮಿ; ಈ ಆಸಾಮಿಯ ದೆಸೆಯಿಂದ ಹರಿಹರಬ್ರಹ್ಮರು ಕೂಡ ತಮ್ಮ ಹೆಂಡತಿಯರ ಪ್ರೇಮಪಾಶಕ್ಕೆ ಬಿದ್ದು ಮನೆಯಲ್ಲಿ ಮುಸುರೆ ತಿಕ್ಕುವಂತಾಗಿದೆ – ಇದು ಭರ್ತೃಹರಿಯ ನಾಂದೀಪದ್ಯ!

ಶೃಂಗಾರರಸದ ಅಧಿದೇವತೆಯಾದ ಮನ್ಮಥ ಕೈಯಲ್ಲಿ ಹೂಬಾಣ ಹಿಡಿದಿದ್ದಾನೆ ಎನ್ನುವುದು ಕೇವಲ ಉತ್ಪ್ರೇಕ್ಷೆಯಲ್ಲ. ಅವನ ಮಡದಿಯೇ ರತಿ. ರತಿಯನ್ನು ಮನಸ್ಸಿನೊಳಗೆ ಶಾಶ್ವತವಾಗಿ ಇರಗೊಟ್ಟವನೇ ರಸಿಕ. ಅವನ ಮನಸ್ಸೆಂಬ ಸರೋವರದಲ್ಲಿ ಉದಿಸುವ ಅಲೆಯೇ ಶೃಂಗಾರವಂತೆ! ಒಬ್ಬ ಕವಿ ಹೇಳುತ್ತಾನೆ:

ಅಣುಮಾತ್ರಂ ಮನಸ್ತಸ್ಮಾದಾಶಾ ನಾಮ ಲತೋದ್ಗತಾ

ತಸ್ಯಾ ನಾಲಮುಪಘ್ನಾಯ ಭುವನಾನಿ ಚತುರ್ದಶ

ಅಂದರೆ, ಮನಸ್ಸು ಎಂಬುದು ಅಣುವಿನಷ್ಟೇ ಇರುವ ಒಂದು ಅಸದೃಶ ಸಂಗತಿ. ಅದಕ್ಕೆ ಗಾತ್ರ-ರೂಪಗಳೆರಡೂ ಇಲ್ಲ – ಅನಂಗನಂತೆ! ಮನುಷ್ಯನೊಳಗೆ ಬಹುಶಃ ಎಲ್ಲೋ ಸೂಜಿಯ ಮೊನೆಯಷ್ಟು ಸಣ್ಣ ಕಣವಾಗಿ ಅಡಗಿ ಕೂತಿರುವ ಈ ಮನಸ್ಸು ಎಂಬ ಬೀಜ ಮೊಳೆತಾಗ ಅದರಿಂದ ಬಯಕೆ ಎಂಬ ಬಳ್ಳಿ ಹುಟ್ಟುತ್ತದಂತೆ. ಆದರೆ, ಈ ಬಳ್ಳಿ ಮಾತ್ರ ರಾಕ್ಷಸ ಶಕ್ತಿಯನ್ನು ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಅದು ದಾಂಗುಡಿಯಿಡುತ್ತ ಹಬ್ಬಲು ಶುರುಮಾಡಿತೆಂದರೆ ಹದಿನಾಲ್ಕು ಲೋಕವೂ ಸಾಲುವುದಿಲ್ಲವಂತೆ! ಕಾಮ, ಇಚ್ಛೆ, ಬಯಕೆ, ತೀಟೆಗಳು ಹಬ್ಬತೊಡಗಿದರೆ ಹೇಗೆ ಒಬ್ಬನ ಜೀವನವನ್ನೇ ವ್ಯಾಪಿಸಿಬಿಡಬಲ್ಲವು ಎನ್ನುವುದನ್ನು ಬಹುಶಃ ಇದಕ್ಕಿಂತ ಪರಿಣಾಮಕಾರಿಯಾಗಿ ಹೇಳುವುದು ಕಷ್ಟ.

ಶೃಂಗಾರವನ್ನು ಹೆಚ್ಚಿನವರು ಕಾಮಕ್ಕೆ ಪರ್ಯಾಯವಾಗಿ ಬಳಸುತ್ತಾರೆ. “ಕಾಮ” ಅನ್ನುವ ಪದಕ್ಕೂ ಸಂಸ್ಕೃತದಲ್ಲಿ ನೂರಾರು ಅರ್ಥವಿಸ್ತಾರಗಳು ಇರುವುದರಿಂದ ಇದನ್ನು ಒಂದು ಹಂತದವರೆಗೆ ಒಪ್ಪಬಹುದೆನ್ನೋಣ. ಆದರೆ, ಕಾಮಕ್ಕೆ ಇಂಗ್ಲೀಷಿನಲ್ಲಿ ಸೆಕ್ಸ್ ಎನ್ನುವುದು ಬಿಟ್ಟರೆ ಬೇರೆ ಅರ್ಥ ಪ್ರಚಲಿತದಲ್ಲಿ ಇಲ್ಲದಿರುವುದರಿಂದ, ಶೃಂಗಾರಕ್ಕೂ ಸೆಕ್ಸ್‌ಗೂ ಅನೇಕರು ಸುಲಭದಲ್ಲಿ ಗಂಟು ಹಾಕಿಬಿಡುತ್ತಾರೆ. ಸಂಸ್ಕೃತದ ಕವಿಗಳು ಶೃಂಗಾರ ಎಂಬ ಹೂವಿನ ಮೇಲಿನ ಪರಾಗರೇಣುವನ್ನು ಹೇಗೆ, ಎಷ್ಟು ನಾಜೂಕಿನಿಂದ ಹ್ಯಾಂಡಲ್ ಮಾಡಿದ್ದಾರೆನ್ನುವುದಕ್ಕೆ ಒಂದು ಉದಾಹರಣೆ ಇದು:

ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ

ಕುಸುಂಭಾರುಣಂ ಚಾರುವಾಸೋ ವಸಾನಾ

ಸಮಸ್ತಸ್ಯ ಲೋಕಸ್ಯ ಚೇತಃಪ್ರವೃತ್ತಿಂ

ಗೃಹೀತ್ವಾ ಘಟೇ ನ್ಯಸ್ಯ ಯಾತೀವ ಭಾತಿ

ಇಲ್ಲಿನ ಮೊದಲ ಸಾಲಲ್ಲಿ ಕವಿ ಕುಂಭಾ ಎಂಬ ಪದವನ್ನು ಬಳಸಿ ಚಮತ್ಕಾರವನ್ನು ಮೆರೆದಿದ್ದಾನೆ. ಬಟ್ಟಮೊಲೆಗಳ ಷೋಡಶ ಹರೆಯದ ಹುಡುಗಿ ತಲೆಯಲ್ಲಿ ಕೊಡವನ್ನು ಹೊತ್ತಿದ್ದಾಳೆ. ನದೀತೀರಕ್ಕೆ ಹೋಗಿ ಖಾಲಿಕೊಡವನ್ನು ನೀವಾಳಿಸಿ ನೀರು ತುಂಬಿಸಿಕೊಂಡು ಮತ್ತೆ ತಲೆ ಮೇಲೆ ಹೊತ್ತು ಆಕೆ ಹೊರಟಿರುವ ದೃಶ್ಯ, ಕವಿಗೆ ಆಕೆ ಇಡೀ ಲೋಕದ ಮನಸ್ಸುಗಳನ್ನೆಲ್ಲಾ ತನ್ನ ಕೊಡದಲ್ಲಿ ತುಂಬಿಸಿಕೊಂಡು ಹೊರಟಿದ್ದಾಳೋ ಎನ್ನಿಸುತ್ತದಂತೆ! ಎಂತಹ ಅದ್ಭುತ ಕಲ್ಪನೆ!

ಇನ್ನೊಂದು ಪದ್ಯ ಹೀಗಿದೆ:

ಕಿಮಕಾರಿ ಮಂದಮತಿನಾ

ರತಿಪತಿನಾ ಕಾಮಸೂತ್ರ ನಿಪುಣೇನ

ಸ್ಯೂತಾಸಿ ಹರಿಣನಯನೇ

ಹಂತ ಹೃದಿ ಸ್ನೇಹತಂತುನಾ ನ ತನೌ

ರತಿದೇವಿಯ ಪತಿ ಮನ್ಮಥನನ್ನೇ ಇಲ್ಲಿ ಕವಿಗೆ ದರ್ಜಿಗೆ ಹೋಲಿಸಿದ್ದಾನೆ. ಆದರೆ, ಅವನೇನೂ ಬುದ್ಧಿವಂತ ಟೇಲರ್ ಅಲ್ಲವಂತೆ. ಯಾಕೆಂದರೆ, ಈ ಮನ್ಮಥನೆಂಬ ಸಿಂಪಿಗ ಪ್ರಿಯತಮನ ಹೃದಯವನ್ನು ಎಳೆದು ಆತನ ಪ್ರೇಯಸಿಯ ಮನಸ್ಸಿಗೆ ಪ್ರೀತಿಯ ಎಳೆಯಿಂದ ಹೊಲಿದನಂತೆ; ಆದರೆ ಮೈ ಮಾತ್ರ ಬೇರೆಯೇ ಬಿಟ್ಟನಂತೆ! ಶೃಂಗಾರಲೋಕದಲ್ಲಿ ವಿಹರಿಸ ಬಯಸಿದ ಇನ್ನೊಬ್ಬ ಕವಿಗಂತೂ ಪ್ರೇಯಸಿಯ ಕಂಚುಕದ ಮೇಲೆಯೇ ಸಿಟ್ಟು! ಅವನು “ಎಲೆಲೆ ಕುಪ್ಪಸ! ನೀನು ಜನ್ಮಜನ್ಮಾಂತರದಿ ಮಾಡಿರುವೆ ಏನು ಪುಣ್ಯ? ಈ ಹರಿಣಲೋಚನೆಯ ಹಾರವಲಯಿತ ಹೃದಯದೇಶದಲಿ ಕಳೆವೆ ಜನ್ಮ!” ಎಂದು ಕೈಕೈಹಿಸುಕಿಕೊಳ್ಳುತ್ತಾನೆ!

ಇನ್ನು “ಸಾಪೇಕ್ಷ ಸಿದ್ಧಾಂತವನ್ನು ದಾರಿ ಬದಿ ಕಳ್ಳೇಪುರಿ ಮಾರುವವರಿಗೂ ಅರ್ಥವಾಗುವಂತೆ ವಿವರಿಸಿ” ಎಂದಾಗ ಐನ್‌ಸ್ಟೈನ್ ಹೇಳಿದರೆಂಬ ಒಂದು ಉಕ್ತಿ ಪ್ರಸಿದ್ಧವಾಗಿದೆ ತಾನೆ? ಸುಂದರವಾದ ಹೆಣ್ಣೊಡನೆ ಮಾತಾಡುವಾಗ ಗಂಟೆಗಳೂ ನಿಮಿಷಗಳಂತೆ, ವೃದ್ಧೆಯ ಜತೆ ಕೂತಾಗ ನಿಮಿಷವೂ ತಾಸಿನಂತೆ. ಅದೇ ಸಾಪೇಕ್ಷ ಸಿದ್ಧಾಂತ – ಎಂದು ಅವರು ವಿವರಣೆ ಕೊಟ್ಟದ್ದು ಗೊತ್ತಿದೆ. ಅಂಥಾದ್ದೇ ಒಂದು ಕವಿತೆಯನ್ನು ಸಂಸ್ಕೃತ ಸುಭಾಷಿತಕಾರರೂ ಬರೆದಿಟ್ಟಿದ್ದಾರೆ. “ನಿಜವಾದ ಪ್ರೇಮಕ್ಕೆ ನಿಕಷ ಯಾವುದು? ಎಂದರೆ ಪ್ರೇಮಿಗಳು ಕೂಡಿದಾಗ ವರುಷವೂ ಒಂದು ದಿನದಂತೆ ಅನ್ನಿಸಬೇಕು; ಅವರು ಪರಸ್ಪರ ಅಗಲಿದಾಗ ಒಂದು ದಿನವೂ ವರುಷದಷ್ಟು ದೀರ್ಘವೆನ್ನಿಸಬೇಕು. ಅದುವೇ ನಿಕಷ”ವಂತೆ. ವಿರಹದ ಕಷ್ಟವನ್ನು ಗಂಡಸರು ಮಾತ್ರ ಅನುಭವಿಸುತ್ತಾರೆಂಬುದು ತಪ್ಪು ಕಲ್ಪನೆ. “ಅದೃಷ್ಟೇ ದರ್ಶನೋತ್ಕಂಠಾ ದೃಷ್ಟೇ ವಿಶ್ಲೇಷಭೀರುತಾ  ನಾದೃಷ್ಟೇನ ಚ ದೃಷ್ಟೇನ ಭವತಾ ವಿದ್ಯತೇ ಸುಖಮ್” ಎಂದು ಹಲುಬುವ ಹೆಣ್ಣುಗಳೂ ಇದ್ದಾರೆ. “ನೀನು ಕಣ್ಣೆದುರಿಗಿಲ್ಲದಾಗ ಎಂದು ಕಂಡೇನೋ ಎಂಬ ಆಸೆ; ನೀನು ಕಣ್ಣೆದುರು ಕಾಣಿಸಿಕೊಂಡಾಗ ಮತ್ತೆ ಅಗಲುವೆಯಲ್ಲಾ ಎಂಬ ಕಳವಳ. ಅಂತೂ ಕಂಡರೂ ಕಾಣದಿದ್ದರೂ ನಿನ್ನಿಂದ ಕಿಂಚಿತ್ತೂ ಸುಖವಿಲ್ಲವಲ್ಲಯ್ಯ!” ಎನ್ನುತ್ತಾಳೆ ಹುಡುಗಿ. “ಪ್ರಿಯಕರನನ್ನು ಕನಸಲ್ಲಿ ಕಾಣುವ ಹುಡುಗಿಯರು, ಆಹಾ ಎಂಥಾ ಸುಖಿಗಳಪ್ಪಾ! ನನಗೋ ಆ ಕಾಂತನ ಜತೆಗೇ ನಿದ್ರೆಯೂ ಹೇಳದೆ ಕೇಳದೆ ಪಲಾಯನ ಮಾಡಿದೆ. ಕನಸು ಕಾಣುವುದಾದರೂ ಹೇಗೆ?” ಎನ್ನುವ ಚಿಂತೆ ಇನ್ನೊಬ್ಬಳದ್ದು. “ಹೋಗಲೇಬೇಕಿರಲು ಹೋಗಿಬಿಡು ನಲ್ಲ, ಹೋಗುವೆನು ಹೋಗುವೆನು ಎನ್ನುತಿರಬೇಡ; ಸಿಡಿಲು ಬಂದೆರಗಿದರೆ ನೋವಿನರಿವಿಲ್ಲ, ಎರಗಲಿದೆಯೆಂಬರಿವು ಕಲಕುವುದು ಜೀವ” ಎಂದು ಮತ್ತೊಬ್ಬಾಕೆ ಅಂಗಲಾಚುತ್ತಾಳೆ. ಹೋಗ್ತೇನೆ ಎಂದ ಮೇಲೆ ಹೋಗಿಯೇಬಿಡುವುದು ಅವನಿಗಾದರೂ ಎಂಥಾ ಕಷ್ಟದ ಕೆಲಸ ಎಂದು ಅವಳಿಗೆ ಗೊತ್ತಾಗಬೇಡವೇ? ಒಟ್ಟಲ್ಲಿ, ಪ್ರೇಮಿಗಳ ಕಷ್ಟ ಯಾರಿಗೆ ಹೇಳೋಣ ಸ್ವಾಮಿ!

ಸಂಸ್ಕೃತ ಸಾಹಿತ್ಯದಲ್ಲಿ ಇರುವುದೆಲ್ಲ ಮಡಿಮಡಿಯಾದ ಭಾಷೆ-ಭಾವನೆಗಳೇ ಎಂದು ಬಗೆದವರಿಗೂ ಶಾಕ್ ಕೊಡುವಂತಹ ನೂರಾರು ಸುಂದರ ರಚನೆಗಳು ನಮಗೆ ಸುಭಾಷಿತಗಳ ಗಣಿಯಲ್ಲಿ ಸಿಗುತ್ತವೆ. ಶೃಂಗಾರಲೋಕದ ಗುತ್ತಿಗೆಯನ್ನು ನಮ್ಮ ಪ್ರಾಚೀನ ಕವಿಗಳೂ ಈಗಿನವರಂತೆ ಹೆಂಗಸರಿಗೇ ಬಿಟ್ಟುಕೊಟ್ಟುಬಿಟ್ಟಿದ್ದಾರೆ. ಅಲ್ಲಿನ ಪಾರುಪತ್ಯವೇನಿದ್ದರೂ ಹೆಂಗಸರದೇ ಬಾಬ್ತು ಎನ್ನುವಂತೆ! ಒಬ್ಬ ಚೆಲುವೆಗೆ ತನ್ನ ರಮಣನನ್ನು ಶೃಂಗಾರಕ್ಕೆ ಎಳೆಸಬೇಕಾಗಿದ್ದರೆ ಅವಳು ಏನೆಲ್ಲ ಆಟಗಳನ್ನು ಆಡಬಹುದು ಎನ್ನುವುದಕ್ಕೆ ನೋಡಿ ಒಂದು ಉದಾಹರಣೆ:

ಇದಂ ಸ್ಫುಟಂ ತಿಷ್ಠತಿ ನಾಥ ಕಂಟಕಃ

ಶನೈಶ್ಶನೈಃ ಕರ್ಷ ನಖಾಗ್ರಲೀಲಯಾ

ಇತಿ ಚ್ಛಲಾತ್ ಕಾಚಿದಲಗ್ನಕಂಟಕಂ

ಪದಂ ತದುತ್ಸಂಗತಲೇ ನ್ಯವೇಶಯತ್

ಒಬ್ಬಾಕೆ ಬಿನ್ನಾಣದಿಂದ ತನ್ನ ನಲ್ಲನ ತೊಡೆ ಮೇಲೆ ಕಾಲಿಟ್ಟು “ನೋಡಿಲ್ಲಿ ಕಾಂತ! ಎಂಥಾ ಮುಳ್ಳು ನನ್ನಡಿಗೆ ನಾಟಿದೆ, ತೆಗೆಯೋ ಹಾಯ್ ಮೆಲ್ಲನೆ ಉಗುರಿಂದ” ಎಂದು ನರಳುತ್ತ, ನೋವು ನಟಿಸುತ್ತ, ಇಲ್ಲದ ಮುಳ್ಳನ್ನು ಬೆರಳಿಂದ ತೋರಿದಳಂತೆ! ಈ ಸಾಲುಗಳನ್ನು ಹಾಗಾಗೇ ಮನಸ್ಸಲ್ಲಿ ಕಲ್ಪಿಸಿಕೊಂಡವರಿಗೆ ರವಿಚಂದ್ರನ್ ಚಿತ್ರಗಳ ರೋಮ್ಯಾಂಟಿಕ್ ದೃಶ್ಯವೊಂದು ಕಣ್ಣ ಮುಂದೆ ಹಾದುಹೋದಂತೆ ಅನಿಸಬಹುದು!

ಗಂಡ ಅಥವಾ ಪ್ರಿಯಕರ ಬಹುಶಃ ಸ್ನಾನ ಮಾಡಿ ಮಡಿಯುಟ್ಟು ಬಂದು ಪೂಜೆಗೆ ಕೂತಿದ್ದಾನೆ ಎಂದುಕೊಳ್ಳೋಣ. ಆಗಲೇ ಅವನ ಪ್ರೇಯಸಿಗೆ ಅವನ ಮೇಲೆ ಆಸೆಯಾಗಬೇಕೆ! ಆಕೆ ಇನ್ನೇನು ಅವನ ತುಟಿಗೆ ತುಟಿಯೊತ್ತಿ ಅಂಕಿತ ಹಾಕಿಯೇ ಬಿಡಬೇಕೆನ್ನುವಷ್ಟರಲ್ಲಿ ಅವನ ಧರ್ಮಪ್ರಜ್ಞೆ ಜಾಗೃತವಾಗುತ್ತದೆ.

ಸಾಮಗಾಯನಪೂತಂ ಮೇ

ನೋಚ್ಛಿಷ್ಟಮಧರಂ ಕುರು

ಉತ್ಕಂಠಿತಾಪಿ ಚೇದ್ ಭದ್ರೇ

ವಾಮಂ ಕರ್ಣಂ ದಶಸ್ವ ಮೇ

ಎನ್ನುತ್ತಾನೆ. ಅಂದರೆ, ಬಾಯಿಯಲ್ಲಿ ಸಾಮಗಾನ ಹಾಡುತ್ತಿದ್ದೇನೆ ಮಹರಾಯ್ತೀ. ಅದನ್ನು ಉಚ್ಛರಿಸುತ್ತಿರುವ ತುಟಿಗಳಿಗೆ ಚುಂಬಿಸಿ ಅಪಚಾರ ಎಸಗಿಬಿಡಬೇಡ. ಒಂದೋ ನನ್ನ ಪೂಜೆ-ಪುನಸ್ಕಾರಗಳು ಮುಗಿಯುವವರೆಗೆ ತಡೆದುಕೋ. ಇಲ್ಲವೋ ಇಗೋ ನನ್ನ ಎಡಗಿವಿ, ಅದನ್ನು ಕಚ್ಚಿ ನಿನ್ನ ತೀಟೆ ತೀರಿಸಿಕೋ ಎಂದು ತನ್ನ ಕಿವಿಯನ್ನು ಆಕೆಯತ್ತ ಒಡ್ಡುತ್ತಾನೆ! ಅದೇ ಧಾಟಿಯಲ್ಲಿ “ಶ್ರಮಣಃ ಶ್ರಾವಕವಧ್ವಾ..” ಎಂಬ ಇನ್ನೊಂದು ಸುಭಾಷಿತವೂ ಇದೆ. ಭಿಕ್ಷುಗಳನ್ನು, ಸನ್ಯಾಸಿಗಳನ್ನು ಪ್ರೀತಿಸಬೇಡಿ. ಅವರು ಶೃಂಗಾರದಲ್ಲಿ ಮೈಮರೆತಿರುವ ವೇಳೆಯಲ್ಲೂ ಧರ್ಮಾತ್ಮರಾಗಿರುತ್ತಾರೆ. ಎಂಜಲುಣ್ಣುವುದು ಶಾಸ್ತ್ರನಿಷಿದ್ಧ ಎನ್ನುವ ಕಾರಣ ಮುಂದೊಡ್ಡಿ ತುಟಿ ಕಚ್ಚುವುದಕ್ಕೂ ಬಿಡುವುದಿಲ್ಲ – ಎಂದು ಸುಭಾಷಿತಕಾರ ಎಲ್ಲ ಹೆಣ್ಣುಗಳನ್ನೂ ಎಚ್ಚರಿಸಿ ಕಾಪಾಡಿದ್ದಾನೆ!

ಅಮರುಶತಕದಲ್ಲಿ ಬರುವ ಒಂದು ಪದ್ಯದಲ್ಲಿ ಜಗಳ ಮಾಡಿಕೊಂಡ ಗಂಡಹೆಂಡಿರ ಚಿತ್ರ ಬರುತ್ತದೆ. ಇಬ್ಬರೂ ಮಾತು ಬಿಟ್ಟಿದ್ದಾರೆ. ಆದರೆ, ಗತ್ಯಂತರವಿಲ್ಲದೆ ಹಾಸಿಗೆಯಲ್ಲಿ ಅಕ್ಕಪಕ್ಕ ಮಲಗಿದ್ದಾರೆ. ಅಷ್ಟರಲ್ಲಿ ಗಂಡ ಕಡೆಗಣ್ಣಿನಿಂದ ಅವಳ ಮುಖ ನೋಡುತ್ತಾನೆ. ಜಗಳದಿಂದ ಮನಸ್ಸಿಗೆ ಕೆಟ್ಟದೆನಿಸಿದರೂ “ಸ್ಸಾರಿ ಕಣೆ” ಎನ್ನಬೇಕೆನಿಸಿದರೂ ಸ್ವಾಭಿಮಾನವೇ ಮೇಲಾಗಿ ಬಿಗುಮಾನದಿಂದ ಮಲಗಿದ್ದಾನೆ. ಅವಳಿಗೂ ಅಷ್ಟೇ, ಎಲ್ಲ ತಪ್ಪನ್ನೂ ಒಪ್ಪಿಕೊಂಡು ಹಗುರಾಗೋಣ ಎಂದು ಒಳಗೊಳಗೇ ಅನ್ನಿಸಿದರೂ ಗಂಡನ ಭಂಡತನದೆದುರು ತಾನೇಕೆ ಸೋಲಬೇಕೆಂದು ಹಠ ಸಾಧಿಸಿ ಮಲಗಿದ್ದಾಳೆ. ಆದರೂ ಕಡೆಗಣ್ಣಿಂದ ಇವನ ಮುಖವನ್ನು ನೋಡುತ್ತಾಳೆ. ಇಬ್ಬರ ನೋಟಗಳೂ ಏಕಕಾಲಕ್ಕೆ ಸಂಧಿಸಿ ಇಬ್ಬರಿಗೂ ನಡುವೆ ಪರದೆಯಂತೆ ಎದ್ದಿದ್ದ ಮನಸ್ತಾಪದ ಗೋಡೆ ತಟ್ಟನೆ ಮುರಿದುಬೀಳುತ್ತದೆ. ಆತ ಆಕೆಯನ್ನು, ಆಕೆ ಅವನನ್ನು ಪರಸ್ಪರ ತೋಳಲ್ಲಿ ಬಳಸಿ ಒಂದಾಗುತ್ತಾರೆ. ಅಶ್ಲೀಲತೆಯ ಸೆರಗಿನಂಚು ಕೂಡ ಸೋಕದೆ ಶೃಂಗಾರದ ತಂತಿ ಮೀಟುವುದರಲ್ಲಿ ಅಮರುಕನಿಗೆ ಅಮರುಕನೇ ಸಾಟಿ!

ಆದರೆ ಎಲ್ಲರೂ ಅಮರುಕನಷ್ಟು ಮಡಿವಂತ, ಸಜ್ಜನ, ಸುಸಂಸ್ಕೃತರಿರುತ್ತಾರೆಂದು ಬಯಸಬಾರದು. ಶೃಂಗಾರವೆಂದರೇನೇ ಸೇಳೆ, ಬಿಂಕ, ಬಿನ್ನಾಣ, ಬಳುಕುಗಳಿರುವ ರಸ. ಅದರಲ್ಲಿ ಮಿಲಿಟರಿ ಶಿಸ್ತು ತಂದರೆ ಏನು ಸೊಗಸು? ಅದಕ್ಕೇ ಒಬ್ಬ ಸುಭಾಷಿತಕಾರ ಹೇಳುತ್ತಾನೆ: “ಪ್ರಿಯೆ, ತುಟಿಗೆ ತುಟಿ ಸೇರಿತು. ಮೊಲೆಗಳನ್ನೂ ಮಿಡಿದಾಯ್ತು, ತೊಡೆಯ ಬಟ್ಟೆ ಕೂಡ ಸರಿದುಹೋಯಿತು. ಇಷ್ಟೆಲ್ಲಾ ಆದ ಮೇಲೆ ಉಡಿಯ ಒಂದು ತುಂಡುಗಂಟನ್ನು ಮಾತ್ರ ಬಿಚ್ಚಹೋಗುವಾಗ ತಡೆಯುವೆ ಏಕೆ! ಆನೆ ಮಾರಿದ ಮೇಲೆ ಅಂಕುಶಕ್ಕೆ ಜಗಳವೇ!”. ಅವನು ಈ ಪಾಂಡಿತ್ಯದ ಖೆಡ್ಡಾ ಒಡ್ಡಿದ ಮೇಲೆ ಮುಂದೇನಾಯಿತೆಂದು ಹೇಳಬೇಕೆ! ಯಾವ್ಯಾವ ಬಗೆಯ ಹೆಣ್ಣುಗಳಿರುತ್ತಾರೆ ಎನ್ನುವ ಕ್ಲಾಸಿಫಿಕೇಶನ್ನು ಕೊಡುವಾಗ ವಾತ್ಸಾಯನ ಯಾವ ಬಗೆಯ ಧೈರ್ಯ ತೋರಿದ್ದಾನೋ ಅಂಥದ್ದೇ ಬಿಚ್ಚುಹೃದಯದಿಂದ ಕೆಲ ಸುಭಾಷಿತಕಾರರು ಶೃಂಗಾರದ ಉತ್ತುಂಗದಲ್ಲಿ ಏನೇನಾಗುತ್ತದೆ ಎನ್ನುವುದನ್ನು ವಿವರಿಸಿದ್ದಾರೆ. “ವಿಧೃತಾಃ ಪ್ರಿಯಸ್ಯ ಕೇಶಾಃ, ಕಂಠೇ ಲಗ್ನಂ ಭುಜೇ ವಲಿತಮ್, ಮಜ್ಜಂತ್ಯಾ ರಸಸಿಂಧೌ ಕಿಂ ಕಿಂ ನ ಕೃತಂ ತಯಾ ಸುದೃಶಾ!” ಎನ್ನುತ್ತಾನೊಬ್ಬ. ಆಕೆ ಪ್ರಿಯನ ಕೂದಲನ್ನೆಳೆದಳಂತೆ, ಕೊರಳ ಮೇಲೆ ಬಿದ್ದು ತೊನೆದಳಂತೆ, ಭುಜವನ್ನು ಬಳಸಿ ಅವನನ್ನೇ ಎರಡೆರಡು ಬಾರಿ ತಿರುಗಿಸಿ ಏದುಸಿರು ಬಿಡುವಂತೆ ಮಾಡಿದಳಂತೆ! “ಅಬ್ಬಾ, ರಸದ ಸೊಕ್ಕಲಿ ಈ ಬಾಲೆ ಏನೇನೆಸಗುವುದಿಲ್ಲ!” ಎಂದು ಸುಭಾಷಿತಕಾರನೇ ಬಾಯಿಬಾಯಿ ಬಿಡುತ್ತ ಬರೆದಿದ್ದಾನೆ. ಸ್ವಂತ ಅನುಭವ ಇದ್ದರೂ ಇದ್ದೀತು!

ಸ್ವಂತಾನುಭದ ಮಾತು ಬಂದಾಗ, ಬಿಲ್ಹಣ ಕವಿಯ ನೆನಪಾಗುತ್ತದೆ. ಕಾಶ್ಮೀರದ ರಾಜ ತನ್ನ ಮಗಳಾದ ಶಶಿಕಲೆಗೆ ಸಂಸ್ಕೃತ ಕಲಿಸಲಿಕ್ಕೆಂದು ಪಂಡಿತ ಬಿಲ್ಹಣನನ್ನು ನೇಮಿಸಿದ. ಆದರೆ, ಈ ರಸಿಕ ಶಿಖಾಮಣಿ ಪಾಠ ಮಾಡುವುದು ಬಿಟ್ಟು ಬೇರೆಲ್ಲ ವ್ಯವಹಾರಗಳನ್ನು ಅವಳ ಜೊತೆ ಹಚ್ಚಿಕೊಂಡ. ಕೊನೆಗೆ ಒಂದು ದಿನ ರಾಜನ ಕೈಯಲ್ಲೇ ರೆಡ್‌ಹ್ಯಾಂಡಾಗಿ ಸಿಕ್ಕಿಯೂ ಬಿದ್ದ! ಕೋಪದಿಂದ ಉರಿದುಬಿದ್ದ ರಾಜ ಬಿಲ್ಹಣನಿಗೆ ಮರಣದಂಡನೆ ವಿಧಿಸಿದ. ಆದರೆ, ಕಾನೂನು ಕಟ್ಟಳೆ ಮುರಿಯುವುದು ಉಚಿತವಲ್ಲ ನೋಡಿ; ಹಾಗಾಗಿ ಸಾಯುವ ಮೊದಲು ಕೊನೆಯ ಆಸೆ ಏನು ಎಂದು ಬಿಲ್ಹಣನನ್ನು ಕೇಳಿದ. ಆಗ, ನೇಣಿನ ಮುಂದೆ ನಿಂತುಕೊಂಡೇ, ತನಗೆ ಜೀವನದಲ್ಲಿ ಏನೇನೂ ಬೇಡ; ತನ್ನ ಪ್ರಿಯತಮೆಯ ಜೊತೆ ಮತ್ತೆ ಒಂದಾಗುವ ಭಾಗ್ಯ ಸಿಕ್ಕಿದರೆ ಅಷ್ಟೇ ಸಾಕು ಎನ್ನುತ್ತ ಭಯದಿಂದ, ಪ್ರೇಮದಿಂದ, ವಿರಹವೇದನೆಯಿಂದ ಅಲ್ಲೇ ಆಶುವಾಗಿ ಐವತ್ತು ಶೃಂಗಾರ ಪದ್ಯಗಳನ್ನು ಈ ಕವಿಪುಂಗವ ಹೇಳಿಬಿಟ್ಟನಂತೆ! ವಿಶೇಷವೆಂದರೆ ಈ ಅಷ್ಟೂ ಪದ್ಯಗಳು “ಅದ್ಯಾಪಿ” (ಈಗಲೂ) ಎಂದು ಪ್ರಾರಂಭವಾಗಿ “ಸ್ಮರಾಮಿ” (ಸ್ಮರಿಸುತ್ತೇನೆ) ಎಂದು ಮುಗಿಯುತ್ತವೆ. ತಾನು ಸಂಸ್ಕೃತ ಕ್ಲಾಸಿನಲ್ಲಿ ತನ್ನ ಶಿಷ್ಯೆಯೊಂದಿಗೆ ಏನೇನು ಆಟಗಳನ್ನು ಆಡಿದೆ ಎನ್ನುವ ಎಲ್ಲಾ ವಿವರಗಳನ್ನೂ ಬಿಟ್ಟೂಬಿಡದೆ ಡೈರಿಯಂತೆ ಬಿಚ್ಚಿಡುತ್ತಾ ಪ್ರತಿಯೊಂದಕ್ಕೂ “ಈಗಲೂ ನೆನೆಯುತ್ತೇನೆ” ಎಂಬ ಇಮೋಶನಲ್ ಟಚ್ ಕೊಟ್ಟು ಬಿಲ್ಹಣ ಹಾಡಿದಾಗ, ಅವನ ಶೋಕಕ್ಕೆ ರಾಜ ಕರಗಿ ನೀರಾದನಂತೆ! ಮಾತ್ರವಲ್ಲ ನೇಣುಗಂಬದಿಂದ ಅವನನ್ನು ಇಳಿಸಿ ತನ್ನ ಮಗಳಿಗೆ ಮದುವೆ ಮಾಡಿಕೊಟ್ಟನೆಂದು ಕತೆ ಇದೆ. ಈ ಪುಟ್ಟ ಕಾವ್ಯವನ್ನು “ಚೌರಸುರತಪಂಚಾಶಿಕಾ” ಎಂದು ಕರೆಯುತ್ತಾರೆ. ಕನ್ನಡದಲ್ಲಿ “ಕಳ್ಳತನದಲ್ಲಿ ಮಾಡಿದ ಬೇಟದ ವಿವರಗಳುಳ್ಳ 50 ಪದ್ಯಗಳು” ಎನ್ನಬಹುದು.

ಕವಿಗೂ ರಸಿಕನಿಗೂ ಹೆಚ್ಚು ವ್ಯತ್ಯಾಸವಿಲ್ಲ ಎನ್ನುವುದು ಅದಕ್ಕೇ ಇರಬೇಕು.

ಸಾ ಕವಿತಾ ಸಾ ವನಿತಾ

ಯಸ್ಯಾಃ ಶ್ರವಣೇನ ದರ್ಶನೇನಾಪಿ

ಕವಿಹೃದಯಂ ವಿಟಹೃದಯಂ

ಸರಲಂ ತರಲಂ ಚ ಸತ್ವರಂ ಭವತಿ

– ಎಂದು ಒಂದು ಸುಭಾಷಿತ ಹೇಳುತ್ತದೆ. ಕವಿತೆಯನ್ನು ಕೇಳಿದಾಗ ಕವಿಹೃದಯ ಹೇಗೆ ಅರಳಿ ನಿಲ್ಲುವುದೋ ಹಾಗೆಯೇ ಸುಂದರವಾದ ವನಿತೆಯನ್ನು (ಅಥವಾ ಮನದನ್ನೆಯನ್ನು) ನೋಡಿದಾಗ ವಿಟನ ಮನಸ್ಸು ಕೂಡ ನಿಮಿರಿ ನಿಲ್ಲುತ್ತದಂತೆ. ವಿಟ ಎಂದರೆ ಸಂಸ್ಕೃತದಲ್ಲಿ, ಶೃಂಗಾರದ ಎಲ್ಲ ಪಟ್ಟುಗಳನ್ನೂ ಬಲ್ಲವನು ಎಂದರ್ಥ. ಅವನು ಕಳ್ಳಪ್ರಿಯಕರನೇ ಆಗಿರಬೇಕಿಲ್ಲ; ಗಂಡನೂ ಆಗಿರಬಹುದು.

ಸುಭಾಷಿತಕಾರರು ತಮ್ಮ ಸಾಹಿತ್ಯಕ್ಕೆ ಸಾಮಗ್ರಿ ಹುಡುಕಲು ಎಲ್ಲೆಲ್ಲಿ ಅಲೆದಿದ್ದಾರೆ ಎನ್ನುವುದೇ ಕುತೂಹಲಕರ ಅಧ್ಯಯನಕ್ಕೆ ವಸ್ತುವಾಗಬಲ್ಲುದು. ಉದಾಹರಣೆಗೆ, ವೇಶ್ಯೆಯ ಮನಸ್ಸಿನಲ್ಲಿ ಶೃಂಗಾರಕ್ಕೆ ಏನರ್ಥ ಇರುತ್ತದೆ ಎನ್ನುವ ಬಗ್ಗೆಯೂ ಒಬ್ಬ ಕವಿ ಸಂಶೋಧನೆ ಮಾಡಿದ್ದಾನೆ ಎಂದರೆ ಆಶ್ಚರ್ಯವಾದೀತಲ್ಲವೆ?

ವರ್ಣನದಯಿತಃ ಕಶ್ಚಿತ್

ಧನದಯಿತೋ ದಾನಕರ್ಮದಯಿತೋ ಅನ್ಯಃ

ರಕ್ಷಾದಯಿತಶ್ಚಾನ್ಯೋ

ವೇಶ್ಯಾಯಾ ನರ್ಮದಯಿತೋ ಅನ್ಯಃ

ಎಂಬ ಒಂದು ಚುರುಕು ಸುಭಾಷಿತವಿದೆ. ವೇಶ್ಯೆಯ ಜೀವನದಲ್ಲಿ ಬಂದುಹೋಗುವ ಗಂಡಸರಿಗೆ ಲೆಕ್ಕವಿರುವುದಿಲ್ಲ. ಅವಳ ಹೊಗಳುನಲ್ಲ ಬೇರೆ, ಕೊಡುವ ನಲ್ಲ ಬೇರೆ! ಅವಳಿಂದ ಸುಖ-ಕಾಸುಗಳನ್ನು ಸೂರೆಗೊಳ್ಳುವುದಕ್ಕೂ ಕೆಲವರು ಕಾದಿರುತ್ತಾರೆ; ಅಂತಹ ನಲ್ಲರು ಬೇರೆ. ಇನ್ನು ಅವಳಿಗೆ ರಕ್ಷಣೆ ಕೊಡುವ ನಲ್ಲ – ಅವನೂ ಬೇರೆ. ಹೀಗೆ ಒಂದೊಂದು ಕಾರಣಕ್ಕಾಗಿ ಒಬ್ಬೊಬ್ಬರನ್ನು ಆಶ್ರಯಿಸುವ, ನೆಚ್ಚುವ, ಮೆಚ್ಚುವ ಆಕೆಯ ಹೃದಯದಲ್ಲಿ “ತನ್ನ ಪ್ರಿಯತಮ” ಎಂಬ ಸ್ಪೆಷಲ್ ವ್ಯಕ್ತಿಯನ್ನೂ ಪ್ರತಿಷ್ಠಾಪಿಸಿಕೊಂಡಿರುತ್ತಾಳೆ. ಬಹುಶಃ ಅವನು ಇವರ‌್ಯಾರೂ ಅಲ್ಲದೆ ಇನ್ನೊಬ್ಬನಾಗಿರುವ ಸಾಧ್ಯತೆ ಇದೆ! ಏಕಕಾಲಕ್ಕೆ ಈ ಸುಭಾಷಿತ ಒಬ್ಬಾಕೆಯ ಮನಸ್ಸಿನ ಆಳಗಳನ್ನು ಟಾರ್ಚ್ ಹಿಡಿದು ತೋರಿಸುವ ಜೊತೆಗೆ, ಬದುಕಿನ ಅಸಂಗತೆಯನ್ನೂ ಸೂಚಿಸಿ ಓದುಗನನ್ನು ಬೆಚ್ಚಿಬೀಳಿಸುವಂತಿದೆ. ಇದೇ ಸಾಲಿಗೆ ಸೇರುವ ಇನ್ನೊಂದು ಸುಭಾಷಿತ ಪದ್ಯ ಇದೆ. ಶೃಂಗಾರದ ಒಳಸುಳಿಗಳನ್ನು, ಅದರ ಸಂಕೀರ್ಣ ಪದರಗಳನ್ನು ಅಷ್ಟೇ ಅದ್ಭುತವಾಗಿ ಕಟ್ಟಿಕೊಡುವ ಆ ಪದ್ಯದ ಕನ್ನಡ ಅನುವಾದ ಹೀಗೆ:

ಸದ್ದಡಗಿತು ಮನೆ; ಎದ್ದಳು ಮೆಲ್ಲನೆ ಮುಗ್ಧೆ

ಹಾಸಿಗೆಯಲರ್ಧರ್ಧ

ನಿದ್ದೆ ಬಂದಹಾಗಿದ್ದ ಪತಿಯ ಮುಖ

ನೋಡುತ್ತಿದ್ದಳೆಷ್ಟೋ ನಿಮಿಷ;

ಮೂಡಿತು ನಂಬಿಕೆ; ಮುತ್ತಿಟ್ಟಳು ಮೆತ್ತಗೆ;

ಕಂಡಳು ಕೆನ್ನೆಯಲೆದ್ದ

ಪುಳಕ; ನಾಚಿ ತಗ್ಗಿಸಿದಳು ತಲೆ; ಅವ

ಬಾಚಿ ಕರೆದ ಮುತ್ತಿನ ವರ್ಷ.

ಇದರ ಅರ್ಥ ಏನು? ಅಥವಾ “ಇದರ ಅರ್ಥಗಳೆಷ್ಟು?”. ಅದು ಕವಿತೆ; ನಿಮಗೆ ಕಂಡಂತೆ, ಕಂಡಷ್ಟು ಅರ್ಥ!

(ಇಲ್ಲಿ ಬಂದಿರುವ ಕನ್ನಡಾನುವಾದಗಳಿಗೆ ಪಾವೆಂ-ರನ್ನು ನೆನೆಯುತ್ತೇನೆ)

Previous Post

ಹರಿಸರ್ವೋತ್ತಮ ವಾಯು ಜೀವೋತ್ತಮ. (ಇದು ಶೈವ ವೈಷ್ಣವಬೇಧವಲ್ಲ)

Next Post

ಕೆ.ಕೆ.ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿಗೆ ಪ್ರಕಾಶ ಮಲ್ಯ ಆಯ್ಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕೆ.ಕೆ.ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿಗೆ ಪ್ರಕಾಶ ಮಲ್ಯ ಆಯ್ಕೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮನಸೂರೆಗೊಂಡ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ

June 19, 2025
Internet Image

ಗಮನಿಸಿ! ಜೂ.20ರಂದು ಶಿವಮೊಗ್ಗ ನಗರದ ಹಲವೆಡೆ ಕರೆಂಟ್ ಇರಲ್ಲ

June 19, 2025
Internet Image

ಗಮನಿಸಿ | ಜೂ.20ರಂದು ಚಿತ್ರದುರ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 19, 2025

ಯೋಗ ಜಗತ್ತಿನಾದ್ಯಂತ ಪಸರಿಸುತ್ತಿರುವುದು ಹರ್ಷದಾಯಕ ವಿಚಾರ: ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ

June 19, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮನಸೂರೆಗೊಂಡ ‘ಚೆಕಾವ್ ಟು ಶಾಂಪೇನ್’ ನಾಟಕ ಪ್ರದರ್ಶನ

June 19, 2025
Internet Image

ಗಮನಿಸಿ! ಜೂ.20ರಂದು ಶಿವಮೊಗ್ಗ ನಗರದ ಹಲವೆಡೆ ಕರೆಂಟ್ ಇರಲ್ಲ

June 19, 2025
Internet Image

ಗಮನಿಸಿ | ಜೂ.20ರಂದು ಚಿತ್ರದುರ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

June 19, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!