Read - 2 minutes
ಶಿವಮೊಗ್ಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ರವಿ ಚನ್ನಣ್ಣವರ್ ವರ್ಗಾವಣೆಯಂತೆ ಯಾವ ಅಧಿಕಾರಿಯ ವರ್ಗಾವಣೆಯ ಬಗ್ಗೆಯೂ ಚರ್ಚೆಯಾಗಿಲ್ಲ. ರವಿ ಎಸ್ಪಿಯಾಗಿ ಕಾನೂನಿನಡಿಯಲ್ಲೇ ಹೇಗೆ ಸಮಾಜಮುಖಿ ಮತ್ತು ಜನಸ್ನೇಹಿ ಕೆಲಸ ಮಾಡಬಹುದೆನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಹಿಂದೆಯೂ ಕೆಲವು ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಿದ ಉದಾಹರಣೆ ಇದೆ ಎಂದು ಹಿರಿಯರು ಹೇಳುತ್ತಾರೆ. ಆದರೆ ರವಿ ಗಳಿಸಿದ ಜನಮನ್ನಣೆಯನ್ನು ಅವರು ಗಳಿಸಲಿಲ್ಲ ಎನ್ನುವುದು ಅಷ್ಟೇ ಸತ್ಯ.
ದಮನಿತ ಸಮಾಜದಿಂದ ಅತಿ ಕಷ್ಟದಲ್ಲಿ ಅಂದರೆ ದಿನಗೂಲಿ ಕೆಲಸ ಮಾಡಿ ಮೇಲೆ ಬಂದ ರವಿ ಅವರಿಗೆ ಸಾಮಾಜಿಕ ತುಡಿತವಿತ್ತು, ಹಸಿವು, ಕಷ್ಟ ಎದರೇನು ಎನ್ನುವುದರ ಅರಿವಿತ್ತು. ಹಾಗಾಗಿ ಅವರು ಸಮಾಜಮುಖಿ ಅಧಿಕಾರಿಯಾಗಿ ಬೆಳೆದರು. ಎಸ್ಪಿ ಎಂದಾಕ್ಷಣ ಕೇವಲ ಕಚೇರಿ, ಪೊಲೀಸ್ ಠಾಣೆ, ಐಪಿಸಿ, ಎಫ್ಐಆರ್, ಕೇಸು, ಬಂದೋಬಸ್ತ್, ಕೋರ್ಟ್, ಸಭೆ, ಸಮಾರಂಭಗಳಲ್ಲಿ ಮುಳುಗಿ ಹೋಗುವವರೇ ಜಾಸ್ತಿ. ಇದಕ್ಕಿಂತ ಮುಖ್ಯ ಸಾರ್ವಜನಿಕರೊಂದಿಗಿನ ಸಂಪರ್ಕ ಎನ್ನುವುದು ಎಷ್ಟೋ ಐಪಿಎಸ್ಗಳಿಗೆ ಗೊತ್ತಿಲ್ಲ. ಆದರೆ ಇವರು ಎಸ್ಪಿ ಕಚೇರಿಯನ್ನು ಸಾರ್ವಜನಿಕರಿಗೆ ಮುಕ್ತವಾಗಿರಿಸಿದರು. ಇಷ್ಟೇ ಅಲ್ಲದೆ ಸಾರ್ವಜನಿಕರನ್ನು ಮುಖತಃ ಭೇಟಿಯಾಗುತ್ತಿದ್ದರು, ಸಮಸ್ಯೆಗೆ ಉತ್ತರ ನೀಡಿಯೇ ಕಳುಹಿಸುತ್ತಿದ್ದರು. ಅವರ ಕಚೇರಿಗೆ ಹೋದರೆ ಅವರನ್ನು ಕಾಣಲು ಎರಡು ಸಾಲುಗಳಲ್ಲಿ ಜನ ತುಂಬಿರುತ್ತಿದ್ದುನ್ನು ಬಹುತೇಕರು ಗಮನಿಸಿರಬಹುದು.
ಸಾಮಾಜಿಕ ತುಡಿತವಿದ್ದವರು ಜನಮುಖಿಯಾಗುತ್ತಾರೆ. ಜನರಿಗೆ ಸ್ಪಂದಿಸುವ ಮನೋಭಾವ ಹೊಂದಿರುತ್ತಾರೆ. ಜನರು ತಮ್ಮ ಬಗ್ಗೆ ಇಟ್ಟುಕೊಂಡಿರುವ ಅಪಾರ ನಿರೀಕ್ಷೆಯನ್ನು ಅವರೆಂದೂ ಹುಸಿಗೊಳಿಸುವುದಿಲ್ಲ. ಅಂತಹವರಲ್ಲಿ ರವಿ ಒಬ್ಬರು. ಅವರಲ್ಲಿ ಸಾಮಾಜಿಕ ಕಳಕಳಿ, ಪ್ರಾಮಾಣಿಕತೆ, ಅಷ್ಟೇ ಪ್ರತಿಭೆಯೂ ಇತ್ತು. ಅದ್ಭುತ ವಿಚಾರಧಾರೆಯೂ ಇದೆ. ಏಕೆಂದರೆ ಸದಾ ಒಂದಲ್ಲ ಒಂದು ಪುಸ್ತಕ ಓದುವುದು ಅವರ ಹವ್ಯಾಸವಾಗಿತ್ತು. ಅವರು ಐಪಿಎಸ್ಗೆ ಕೋಚಿಂಗ್ನ್ನು ಹೈದರಾಬಾದ್ನಲ್ಲಿ ಖಾಸಗಿ ಸಂಸ್ಥೆಯಲ್ಲಿ ಪಡೆಯುವಾಗ ಅದರ ಮುಖ್ಯಸ್ಥ ನೀವು ಮುಂದಿನ ವರ್ಷ ಇಲ್ಲಿಯೇ ಕೋಚಿಂಗ್ ಕೊಡಲು ಬಂದುಬಿಡಿ ಎಂಬ ಮಾತನ್ನಾಡಿದ್ದರಂತೆ. ಅಂದರೆ ಅಷ್ಟೊಂದು ಮಾತುಗಾರಿಕೆ, ಬುದ್ಧವಂತಿಕೆ ಇತ್ತು. ಆದರೆ ಅಷ್ಟೇ ಚಾಣಾಕ್ಷಮತಿ ರವಿ, ಮುಂದಿನ ವರ್ಷ ನಾನು ಐಪಿಎಸ್ ತರಬೇತಿಯಲ್ಲಿರುತ್ತೇನೆ ಎಂದು ಉತ್ತರ ಕೊಟ್ಟಿದ್ದರಂತೆ. ಇದು ಅವರಲ್ಲಿರುವ ದೃಢ ವಿಶ್ವಾಸ, ಎಂತಹ ಕೆಲಸವನ್ನೂ ತಾನು ಸಾಧಿಸಬಲ್ಲೆ ಎಂಬ ವಿಶ್ವಾಸವನ್ನು ತೋರಿಸುತ್ತದೆ.
ರವಿ ಜಾತಿವಾದಿಯಾಗಿರಲಿಲ್ಲ, ಭ್ರಷ್ಟರಾಗಿರಲಿಲ್ಲ. ಹಾಗಾಗಿ ಎಲ್ಲ ಸಮುದಾಯದವರೂ ಅವರನ್ನು ಗೌರವಿಸಿದರು. ಅವರ ಇನ್ನೊಂದು ವಿಶೇಷವೆಂದರೆ, ಆಚಾರ, ವಿಚಾರ ಮತ್ತು ಪ್ರಚಾರ ಈ ಮೂರೂ ಅಂಶ ಅವರಲ್ಲಿತ್ತು. ಆಚಾರದಂತೆ ವಿಚಾರವಿತ್ತು. ವಿಚಾರಕ್ಕೆ ತಕ್ಕ ಪ್ರಚಾರ ದೊರೆಯಿತು. ಅವರು ಮಾಡಿದ ಕೆಲಸ ತಳಸಮುದಾಯದವರೆಗೂ ತಲುಪಿದ್ದರಿಂದ ಅವರ ಬೀಳ್ಕೊಡುಗೆಗೆ ಸಭಾಂಗಣ ತುಂಬಿತ್ತು. ಅವರ ವರ್ಗಾವಣೆಯಾದ ಬಗ್ಗೆ ಜನಸಾಮಾನ್ಯರೂ ಅಸಮಾಧಾನಗೊಂಡಿದ್ದರು.
ಅಧಿಕಾರಿಗಳು ಜನಮನ್ನಣೆ ಗಳಿಸುವುದು ಕಷ್ಟ. ಜನಸಾಮಾನ್ಯರ ಒಲವು ಗಳಿಸುವುದೂ ಸಹ ಸುಲಭದ ಕೆಲಸವಲ್ಲ. ಅವರ ಸಮಸ್ಯೆಗೆ ಸುಲಭದಲ್ಲಿ ಸ್ಪಂದಿಸಿ ಪರಿಹರಿಸಿಕೊಡುವವರನ್ನು ಯಾರಾದರೂ ಗೌರವಿಸುತ್ತಾರೆ, ಗುರುತಿಸುತ್ತಾರೆ. ರವಿ ಸಹ ಕೇವಲ ಪೊಲೀಸ್ ಇಲಾಖೆಯಲ್ಲಷ್ಟೇ ಹೆಸರುಗಳಿಸಲಿಲ್ಲ. ಅಥವಾ ಅವರ ಅಧಿಕಾರಿ, ಸಿಬ್ಬಂದಿ ವಲಯದಲ್ಲಿ ಮಾತ್ರ ಜನಪ್ರಿಯರಾಗಲಿಲ್ಲ. ಪೊಲೀಸ್ ಕಾನೂನಿನಡಿ ಇತರ ಇಲಾಖೆೆಯಿಂದಲೂ ಸಮಸ್ಯೆ ಪರಿಹರಿಸಿಕೊಡಬಹುದು ಎನ್ನುವುದು ಅವರಿಗೆ ಗೊತ್ತಿತ್ತು. ತಹಶೀಲ್ದಾರರಿಗೆ ಕರೆ ಮಾಡಿ ಜಮೀನಿನ ಸಮಸ್ಯೆ ಪರಿಸಹರಿಸಿಕೊಡುತ್ತಿದ್ದರು. ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೀಗೆ ಹತ್ತು ಹಲವು ಇಲಾಖೆಗಳಿಂದಾಗುವ ಕೆಲಸವನ್ನು ಪೊಲೀಸ್ ಕಾನೂನಿನಡಿಯೇ ಮಾಡಿಸಿಕೊಡುತ್ತಿದ್ದರು.
ಅವರು ಎಷ್ಡು ಜನಪ್ರಿಯರಾಗಿದ್ದರು ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಗಮನಿಸಿ. ಫೇಸ್ಬುಕ್ನಲ್ಲಿ ಅವರ ಪೇಜ್ಗೆ ೩೦ ಸಾವಿರ ಮೆಚ್ಚುಗೆ ಬಂದಿದೆಯಂತೆ. ಸುಮಾರು ೭ ಲಕ್ಷ ಜನ ಇದನ್ನು ಗಮನಿಸಿದ್ದಾರಂತೆ. ನಗರದಲ್ಲಿ ಅವರಿಗೆ ಟ್ರಬಲ್ ಶೂಟರ್, ಸಿಂಗಂ ಮೊದಲಾದ ಹೆಸರುಗಳು ಬಂದಿದ್ದವು. ಅವರ ಉಪನ್ಯಾಸ ಕೇಳುವುದು ಒಂದು ವಿಶೇಷ ಸಂದರ್ಭವಾಗಿ ಪರಿಣಮಿಸುತ್ತಿತ್ತು. ಜಿಲ್ಲೆಯಲ್ಲಿದ್ದ ಸುಮಾರು ಒಂದುವರೆ ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ. ಕುವೆಂಪು ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ೨ ಸಾವಿರ ವಿದ್ಯಾರ್ಥಿಗಳು ಸೇರಿದ್ದರಂತೆ. ವಿವಿ ಇತಿಹಾಸದಲ್ಲಿ ಇಷ್ಟೊಂದು ವಿದ್ಯಾರ್ಥಿಗಳು ಎಂದೂ ಸೇರಿದ್ದಿಲ್ಲ ಎನ್ನುತ್ತಾರೆ ಕುಲಪತಿ ಜೋಗನ್ ಶಂಕರ್.
ಅವರು ಉತ್ತಮ ಮಾತುಗಾರನ್ನುವುದರಲ್ಲಿ ಎರಡು ಮಾತಿಲ್ಲ. ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದ್ದರು. ತಮ್ಮ ಬಾಲ್ಯದಿಂದ ಹಿಡಿದು ಐಪಿಎಸ್ ಮಾಡಿದವರೆಗಿನ ಅನುಭವವವನ್ನು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರು. ತನಗೆ ಕಲಿಸಿದ ಶಿಕ್ಷಕರ ಹೆಸರನ್ನು ಇಂದಿಗೂ ಪಟಪಟನೆ ಹೇಳುವ ಮೂಲಕ ಅವರನ್ನು ಪ್ರತಿ ಭಾಷಣದಲ್ಲಿ ಸ್ಮರಿಸುತ್ತಿದ್ದರು. ಇಷ್ಟೊಂದು ಆಕರ್ಷಣೆ ಏಕಿತ್ತೆಂದರೆ, ಇಂದಿನ ವಿದ್ಯಾರ್ಥಿಗಳು ಸಿನಿಕತೆ ತುಂಬಿ ವಿಶ್ವಾಸವೇ ಇಲ್ಲದಂತೆ ಬದುಕುತ್ತಿದ್ದಾರೆ. ಮುಂದಿನ ಭವಿಷ್ಯವೇನು ಎನ್ನುವ ವಿಚಾರವೇ ಅವರಲ್ಲಿಲ್ಲ. ಇದರಿಂದ ರವಿ ಅವರ ಮಾತು ಮಳೆಹನಿಯ ಸಿಂಚನದಂತೆ ರೋಮಾಂಚನಕ್ಕೆ ಎಡೆಮಾಡಿಕೊಡುತ್ತಿತ್ತು. ತಾವೂ ಸಹ ಮುಂದೆ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂಬ ಚಿಂತನೆಯ ಕಿಡಿಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದ್ದರು.
ಸರ್ಕಾರದ ಜನಸ್ನೇಹಿ ಆಡಳಿತಕ್ಕೆ ಮಾದರಿಯಾದವರು ರವಿ ಚನ್ನಣ್ಣನವರ್ ಅವರು. ಅವರು ಹಾಸನದಲ್ಲಿ ಎಸ್ಪಿಯಾಗಿದ್ದಾಗಲೂ ಇದೇ ಕೆಲಸವನ್ನು ಮಾಡಿದ್ದರೆನ್ನುವುದು ಕೇಳಿಬಂದಿದೆ. ರಾಜಕೀಯದ ಪ್ರತಿಷ್ಠೆಯ ಕಣವಾದ ಹಾಸನಲ್ಲಿ ಅಧಿಕಾರಿಯೊಬ್ಬ ಹೆಸರು ಗಳಿಸುವುದು ಸುಲಭದ ಕೆಲಸವಲ್ಲ. ಅಲ್ಲಿಯೂ ಸಾವಿರಾರು ಅಭಿಮಾನಿ ಬಳಗವನ್ನು ಹೊಂದುವ ಮೂಲಕ ಛಾಪನ್ನು ಮೂಡಿಸಿದರು. ಶಿವಮೊಗ್ಗದಲ್ಲಿ ಹಾಸನಕ್ಕಿಂತ ಹೆಚ್ಚಿನ ಅಭಿಮಾನಿ ಬಳಗ ಸೃಷ್ಟಿಯಾಗಿದ್ದು ಸುಳ್ಳಲ್ಲ.
ಅವರಲ್ಲಿ ಅಪರಾಧ ಕೃತ್ಯವನ್ನು ಹೇಗೆ ತಡೆಯಬೇಕೆಂಬ ವೃತ್ತಿ ಕೌಶಲ್ಯವಿದೆ. ಇದೇ ಅವರನ್ನು ಈ ಮಟ್ಟಕ್ಕೇರಿಸಿದೆ ಎಂದರೆ ತಪ್ಪಾಗಲಾರದು. ಶಿವಮೊಗ್ಗದಲ್ಲಿ ಸಂಭವಿಸಿದ ಪಿಎಫ್ಐ ಸಂಬಂಧಿತ ಗಲಭೆಯನ್ನು ಕೇವಲ ವಾರದೊಳಗೆ ಹುಟ್ಟಡಗಿಸುವ ಮೂಲಕ ತಮ್ಮ ಕೌಶಲ್ಯವನ್ನು ಅವರು ಮೆರೆದಿದ್ದು ಅವರ ಇಷ್ಟೊಂದು ಜನಪ್ರಿಯತೆಯ ಕಾರಣದಲ್ಲೊಂದು. ಜಿಲ್ಲೆಯಲ್ಲಿ ಮೀಟರ್ ಬಡ್ಡಿಯನ್ನು ನಿಲ್ಲಿಸಿದ್ದು ಅವರ ಮಹತ್ಸಾಧನೆಯಲ್ಲೊಂದು. ಸ್ವತಃ ರೈತ ಸಂಘದ ಮುಖಂಡರೇ ಅವರನ್ನು ಇದಕ್ಕಾಗಿ ಅಭಿನಂದಿಸಿದ್ದರು. ಜನರು ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಂತೆ ಅವರು ಕೆಲಸ ಮಾಡಿದ್ದರಿಂದಲೇ ರವಿ ಹೆಸರಾದರು. ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು. ತಮ್ಮ ಮಾತಿನಂತೆ ಕೃತಿಯಲ್ಲೂ ಅವರು ಇದ್ದರು. ಇವೆಲ್ಲದಕ್ಕೂ ಮೂಲವಾದುದು ಅವರ ಹೋರಾಟದ ಬದುಕು. ಹಾಗಾಗಿ ಅವರು ಮತ್ತೆ ಮತ್ತೆ ನೆನೆಪಾಗುತ್ತಲೇ ಇರುತ್ತಾರೆ.
Discussion about this post