Read - < 1 minute
ಬೆಂಗಳೂರು, ಅ.4: ಪರಿಶಿಷ್ಟ ಜಾತಿ ಮತ್ತು ಪಂಗಡದ 2,500 ಕೃಷಿ ಕಾರ್ಮಿಕರಿಗೆ ಒಂದು ವಾರ ಕಾಲ ಚೀನಾ ದೇಶದಲ್ಲಿ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪಯೋಜನೆಯಡಿ ಮೀಸಲಿಟ್ಟ ಹಣ ಬಳಕೆಗೆ ಸಂಬಂಧಿಸಿದಂತೆ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೂ-ಹಣ್ಣು, ತರಕಾರಿ ಸೇರಿದಂತೆ ವಿವಿಧ ಬೆಳೆಗಳ ಅಧ್ಯಯನಕ್ಕಾಗಿ ಇದೇ ಮೊದಲ ಬಾರಿಗೆ ಕೃಷಿ ಕಾರ್ಮಿಕರ ಅಧ್ಯಯನ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದರು.
ಮಾರ್ಚ್ ಅಂತ್ಯದೊಳಗೆ 2,500 ಕೃಷಿ ಕಾರ್ಮಿಕರ ಚೀನಾ ಪ್ರವಾಸ ಮುಗಿಯಲಿದೆ. ಪ್ರವಾಸ ಮುಗಿಸಿದ ಕೃಷಿ ಕಾರ್ಮಿಕರಿಗೆ ಭೂ ಒಡೆತನ ಯೋಜನೆಯಡಿ 2 ಎಕರೆ ಜಮೀನು ನೀಡಿ ಭೂ ಮಾಲೀಕರನ್ನಾಗಿ ಮಾಡಲಾಗುವುದು ಎಂದರು.
ತಂಡೋಪತಂಡವಾಗಿ ಕೃಷಿ ಕಾರ್ಮಿಕರ ಪ್ರವಾಸದ ವ್ಯವಸ್ಥೆ ಮಾಡಲಾಗುವುದು. ಅವರಿಗೆ ಅಗತ್ಯವಿರುವ ವೀಸಾ, ಪಾಸ್ ಪೋರ್ಟ್ ಮಾಡಿಸಿಕೊಡುವ ಕೆಲಸವನ್ನು ಅಧಿಕಾರಿಗಳೇ ವಹಿಸಿಕೊಳ್ಳಲಿದ್ದಾರೆ ಎಂದರು.
ಶೇ.25ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡ ಸಣ್ಣ ರೈತರಿದ್ದರೆ, ಶೇ.75ರಷ್ಟು ಕೃಷಿ ಕಾರ್ಮಿಕರಿಗೆ ಚೀನಾ ಪ್ರವಾಸದ ಭಾಗ್ಯ ದೊರೆಯಲಿದೆ. ಆಧುನಿಕ ತಂತ್ರಜ್ಞಾನ ಬಳಸಿ ಚೀನಾದಲ್ಲಿ ಬೇಸಾಯ ಮಾಡುವ ಮಾದರಿಯನ್ನು ಅಧ್ಯಯನ ಮಾಡಲಾಗುತ್ತದೆ ಎಂದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಶೇ.50ರಷ್ಟು ಪ್ರಗತಿ ಸಾಧಿಸಿದ್ದು, ಡಿಸೆಂಬರ್ ಅಂತ್ಯದೊಳಗೆ ಶೇ.70ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಮಾರ್ಚ್ ಅಂತ್ಯದೊಳಗೆ ಶೇ.100ರಷ್ಟು ಗುರಿ ತಲುಪಬೇಕು ಎಂದು ತಾಕೀತು ಮಾಡಲಾಗಿದೆ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ ವೆಲ್ ವಿದ್ಯುತ್ ಸಂಪರ್ಕದ ಜೊತೆಗೆ ಶೇ.90ರಷ್ಟು ಸಹಾಯಧನದಲ್ಲಿ ಹನಿ ಮತ್ತು ತುಂತುರು ನೀರಾವರಿ ವ್ಯವಸ್ಥೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಶೇ.90ರಷ್ಟು ಸಹಾಯಧನದಡಿ ಪಾಲಿಹೌಸ್ ನಿರ್ಮಾಣಕ್ಕೂ ಅವಕಾಶವಿದ್ದು, ಹೂವು, ತರಕಾರಿ ಬೆಳೆಯಬಹುದಾಗಿದೆ. 2 ಲಕ್ಷದವರೆಗೆ ಸಹಾಯಧನ ಸಿಗಲಿದೆ. ಕೃಷಿ ಭಾಗ್ಯಯೋಜನೆಯಡಿ ಕೃಷಿ ಹೊಂಡ ನಿರ್ಮಮಿಸಿ ಅದರಲ್ಲಿ ಸಂಗ್ರಹವಾದ ನೀರನ್ನು ರೈತರು ಬಳಸಿಕೊಳ್ಳಲು ಅನುಕೂಲವಾಗುವಂತೆ ಪೈಪ್ ಅಳವಡಿಸಲು ಸಹಾಯ ನೀಡಲಾಗುವುದು ಎಂದರು.
33 ವಿವಿಧ ಇಲಾಖೆಗಳ ಪೈಕಿ ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪಶುಸಂಗೋಪನೆ, ತೋಟಗಾರಿಕೆ ಸೇರಿದಂತೆ 18 ಇಲಾಖೆಗಳ ಪ್ರಗತಿ ಪರಿಶೀಲನೆ ಇಂದು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎಸ್ಸಿ-ಎಸ್ಟಿ ಉಪಯೋಜನೆ ಹಣ ಬಳಕೆಗೆ ಸಂಬಂಧಿಸಿದ ಜುಲೈ 15 ರಂದು ಅನುಮೋದನೆ ನೀಡಲಾಗಿದೆ.ಈ ಮೂಲಕ 19 ಸಾವಿರ 542 ಕೋಟಿ ರೂ. ಹಣ ಮೀಸಲಿಡಲಾಗಿದೆ. ಮುಂದಿನ ಮಾರ್ಚ್ ವೇಳೆಗೆ ಹಣ ಖರ್ಚು ಮಾಡದ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಆಂಜನೇಯ ತಿಳಿಸಿದರು.
Discussion about this post