ಬೆಂಗಳೂರು: ಕಾಶ್ಮೀರದ ಉರಿ ವಲಯದಲ್ಲಿ ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 17 ಮಂದಿ ಸೇನಾ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡ ಹೇಯ ಕೃತ್ಯವನ್ನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯು ತೀವ್ರವಾಗಿ ಖಂಡಿಸಿದ್ದು ಈ ಸಂಬಂಧ ನಿರ್ಣಯವೊಂದನ್ನು ಅಂಗೀಕರಿಸಿದೆ.
ಪಾಕಿಸ್ಥಾನದಲ್ಲಿ ತರಬೇತಿ ಪಡೆದು ಬಂದ ಉಗ್ರಗಾಮಿಗಳು ಭಾರತದಲ್ಲಿನ ಶಾಂತಿಯನ್ನು ಕದಡಲು ನಡೆಸಿದ ಹೇಡಿ ಕೃತ್ಯವಿದು.ಇದರ ಹಿಂದೆ ಪಾಕಿಸ್ಥಾನದ ಶಾಂತಿ ಕದಡುವ ನಿಶ್ಚಿತ ಉದ್ದೇಶವಿದೆ.ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವವು ಪಾಕಿಸ್ಥಾನದ ಕುತಂತ್ರಕ್ಕೆ ತಕ್ಕ ಪಾಠ ಕಲಿಸಲು ಸಮರ್ಥವಾಗಿದೆ ಎಂದು ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯು ಅಭಿಪ್ರಾಯಪಟ್ಟಿದೆ. ಭಾರತದ ದಿಟ್ಟ ಕ್ರಮಕ್ಕೆ ಪಾಕಿಸ್ಥಾನವು ಭಾರೀ ಬೆಲೆ ತೆರಬೇಕಾಗುತ್ತದೆ ಎಂದೂ ಕಾರ್ಯಕಾರಿಣಿ ಸಭೆ ಭಾವಿಸಿದೆ.
ಮಯನ್ಮಾರ್ನ ಕಾಡಿನಲ್ಲಿ ಅಡಗಿದ್ದು ಮಣಿಪುರದಲ್ಲಿ ಸೈನಿಕರ ಮೇಲೆ ಕೆಲವು ತಿಂಗಳ ಹಿಂದೆ ದಾಳಿ ನಡೆಸಿದ್ದ ನಾಗಾ ಉಗ್ರರನ್ನು ಭಾರತೀಯ ಸೇನಾ ಪಡೆಯು ಸೆದೆಬಡಿದಿತ್ತು. ಈ ಕಾರ್ಯಾಚರಣೆಗೆ ಹೆಚ್ಚಿನ ಪ್ರಚಾರವನ್ನೇನೂ ನೀಡದೇ ಕಾರ್ಯಾಚರಣೆಯ ಉದ್ದೇಶವನ್ನು ಈಡೇರಿಸಲಾಗಿತ್ತು.ಈ ಘಟನೆಯನ್ನು ಭಾರತ ಮರೆತಿಲ್ಲ.
ಪದೇ ಪದೆ ಭಾರತದ ವಿರುದ್ಧ ಸಮರ ಸಾರುತ್ತಿರುವ ಪಾಕಿಸ್ಥಾನಕ್ಕೆ ಹಿಂದೆಂದೂ ಕಲಿಯದಂತಹ ಪಾಠವನ್ನು ಕಲಿಸುವ ಭಾರತ ಸರ್ಕಾರದ ಯತ್ನಕ್ಕೆ ಮಹಿಳಾ ಮೋರ್ಚಾ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಇದಕ್ಕಾಗಿ ತಾನು ಯಾವ ತ್ಯಾಗಕ್ಕಾದರೂ ಸಿದ್ಧ ಎಂದು ಘೋಷಿಸಿದೆ.
ಹುತಾತ್ಮರಾಗಿರುವ ವೀರ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಿರುವ ಮಹಿಳಾ ಮೋರ್ಚಾ ಕಾರ್ಯಕಾರಿಣಿಯು ಎರಡು ನಿಮಿಷಗಳ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದೆ.
Discussion about this post