ಮಡಿಕೇರಿ ಅ.24 : ಕಾಕೋಟುಪರಂಬು ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ 4ನೇ ವರ್ಷದ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಗೆ ಅ.26 ರಂದು ಚಾಲನೆ ದೊರೆಯಲಿದ್ದು, ಪ್ರಶಸ್ತಿಗಾಗಿ 21 ತಂಡಗಳ ನಡುವೆ ಪೈಪೋಟಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್ನ ಉಪಾಧ್ಯಕ್ಷರಾದ ಐಚೆಟ್ಟೀರ ಮೋಹನ್, ಕಾಕೋಟುಪರಂಬುವಿನಲ್ಲಿ ಅ.26ರಿಂದ ನ.1 ರವರೆಗೆ ಹಾಕಿ ಪಂದ್ಯಾವಳಿ ನಡೆಯಲಿದೆ ಎಂದು ತಿಳಿಸಿದರು.
ಅ.26 ರಂದು ನಡೆಯುವ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಕ್ಲಬ್ನ ಅಧ್ಯಕ್ಷರಾದ ಮೇವಡ ಚಿಣ್ಣಪ್ಪ, ಜಿಲ್ಲಾಧಿಕಾರಿಗಳಾದ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಅಚ್ಚಪ್ಪಂಡ ಮಹೇಶ್ ಗಣಪತಿ ಹಾಗೂ ಹಾಕಿ ಕೂರ್ಗ್ ಸಂಸ್ಥೆಯ ಉಪಾಧ್ಯಕ್ಷರಾದ ಮೇಕೇರಿರ ರವಿ ಪೆಮ್ಮಯ್ಯ ಉಪಸ್ಥಿತರಿರುವರು.
ಕಾಕೋಟುಪರಂಬುವಿನಲ್ಲಿ ಆರು ದಿನಗಳ ಕಾಲ ನಡೆಯುವ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ ನ.1 ರಂದು ಸಮಾರೋಪಗೊಳ್ಳಲಿದ್ದು, ಫೈನಲ್ ಪಂದ್ಯವನ್ನು ವೀಕ್ಷಿಸಲು ಮತ್ತು ಬಹುಮಾನಗಳನ್ನು ವಿತರಿಸಲು ಸಂಸದರಾದ ಪ್ರತಾಪ ಸಿಂಹ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಕ್ಲಬ್ನ ಮಾಜಿ ಅಧ್ಯಕ್ಷರಾದ ಮೇವಡ ಅಚ್ಚಯ್ಯ, ಹಾಕಿ ಕೂರ್ಗ್ ಸಂಸ್ಥೆಯ ಉಪಾಧ್ಯಕ್ಷರಾದ ಕಳ್ಳಿಚಂಡ ಪ್ರಸಾದ್, ಕಾರ್ಯದರ್ಶಿ ಪಳಂಗಂಡ ಲವ ಕುಮಾರ್ ಹಾಗೂ ವಿಜೇತ ತಂಡಕ್ಕೆ ಪಾರಿತೋಷಕದ ಪ್ರಾಯೋಜಕರಾದ ಮಹೇಂದ್ರ ಸಂಸ್ಥೆಯ ರೆಸಾರ್ಟ್ ವ್ಯವಸ್ಥಾಪಕರಾದ ಸ್ವಪನ್ ಕುಮಾರ್ ದಾಸ್ ಆಗಮಿಸಲಿದ್ದಾರೆ. ಪಂದ್ಯಾವಳಿಯಲ್ಲಿ ಒಟ್ಟು 1 ಲಕ್ಷ ರೂ. ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದೆಂದು ಐಚೆಟ್ಟೀರ ಮೋಹನ್ ತಿಳಿಸಿದರು.
ಸಮಾರೋಪ ಸಮಾರಂಭದ ದಿನದಂದು ಸಂಜೆ 7 ಗಂಟೆಯ ನಂತರ ರ್ಜೀರೋ ಡಿಗ್ರಿ ಗ್ರೂಪ್ನಿಂದ ಡಿಜೆ ಕಾರ್ಯಕ್ರಮವಿರುತ್ತದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್ನ ನಿರ್ದೇಶಕರುಗಳಾದ ಪಳೆಯಂಡ ರಾಬಿನ್ ದೇವಯ್ಯ ಹಾಗೂ ಚೆಂಬಂಡ ಸುಬ್ರಮಣಿ ಉಪಸ್ಥಿತರಿದ್ದರು.
news: Indresh
Discussion about this post