ಮಂಡ್ಯ, ಸೆ.6: ತಮಿಳುನಾಡಿಗೆ ಪ್ರತಿದಿನ ೧೫ ಸಾವಿರ ಕ್ಯೂಸೆಕ್ಸ್‌ನಂತೆ ೧೫ ದಿನಗಳ ಕಾಲ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಇಂದು ಕರೆ ನೀಡಲಾಗಿರುವ ಮಂಡ್ಯ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಿನ್ನೆ ತೀರ್ಪು ಪ್ರಕಟವಾದ ನಂತರದಲ್ಲಿ ಭುಗಿಲೆದ್ದ ಆಕ್ರೋಶ ಇಂದು ಮತ್ತಷ್ಟು ವ್ಯಾಪಕವಾಗಿದೆ. ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ರಸ್ತೆ ಮಧ್ಯೆ ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ ಪ್ರತಿಭಟನೆ ನಡೆಸುತ್ತಿರುವುದರಿಂದ ರಸ್ತೆ ಸಂಚಾರ ಅಸ್ತವಸ್ಯಗೊಂಡಿದೆ. ಮೈಸೂರು ಮಾರ್ಗದಲ್ಲಿ ಬಸ ಸಂಚಾರ ತಡೆದಿರುವ ರೈತರು ಪ್ರತಿಭಟನೆ ನಡೆಸಿದ್ದಾರೆ. ರಾಮನಗರ, ಚನ್ನಪಟ್ಟಣದವರೆಗೆ ಮಾತ್ರ ಬಸ್ ಸಂಚರಿಸುತ್ತಿದ್ದು, ಅಲ್ಲಿಂದ ಮುಂದೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.
ಪ್ರಯಾಣಿಕರ ಪರದಾಟ
ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಸರ್ಕಾರಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮಂಡ್ಯದಿಂದ ವಿವಿಧೆಡೆ ತೆರಳುವ ಎಲ್ಲಾ ಸರ್ಕಾರಿ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದ್ದು ನೂರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ. ತಮಿಳುನಾಡಿನ ತಂಜಾವೂರಿನಲ್ಲಿ ಕೆಎಸ್‌ಆರ್ಟಿಸಿ ರಾಜಹಂಸ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ತಮಿಳುನಾಡಿಗೆ ನೀರು ಬಿಡಬೇಕೆಂಬ ಸುಪ್ರೀಂಕೋರ್ಟ್ ನೀಡಿರುವ ಆದೇಶ ಹೊರಬಿದ್ದ ನಂತರ ಬಸ್‌ಗೆ ಕಲ್ಲು ತೂರಿದ್ದಾರೆ. ಬಸ್‌ನ ಮುಂಭಾಗದ ಗಾಜು ಪುಡಿ ಪುಡಿಯಾಗಿದ್ದು, ಬಸ್‌ನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಕಿಡಿಗೇಡಿಗಳು ಬಸ್‌ಗೆ ಕಲ್ಲು ತೂರಿದ ನಂತರ ಪ್ರಯಾಣಿಕರಿಗೆ ಬೇರೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಾದ್ಯಂತ ಸಾವಿರಾರು ಹೋರಾಟಗಾರರು ಪ್ರತಿಭಟನೆ ನಡೆಸಿದ್ದು, ಹಲವೆಡೆ ಬೈಕ್ ರಾಲಿ ನಡೆಸಿ ಘೋಷಣೆಗಳನ್ನು ಕೂಗಲಾಗಿದೆ. ಬಾಗಿಲು ತೆರೆದಿದ್ದ ಕೆಲ ಅಂಗಡಿಗಳ ಬಾಗಿಲುಗಳನ್ನು ಬಲವಂತವಾಗಿ ಮುಚ್ಚಿದ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಯಾವುದೇ ಶಾಲಾ ಕಾಲೇಜುಗಳು ಬಾಗಿಲು ತೆರೆದಿಲ್ಲ.
ಪಂಪ್ ಹೌಸ್‌ಗೆ ಬೀಗ
ಮೈಸೂರು ಭಾಗದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಮೈಸೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಮೇಗಳಾಪುರ ಸಮೀಪದ ಪಂಪ್ ಹೌಸ್ ಘಟಕಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಮಂಡ್ಯಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಸಂಚಾತ ಸ್ಥಗಿತಗೊಳಿಸಲಾಗಿದೆ. ಮಂಡ್ಯ, ಶ್ರೀರಂಗಪಟ್ಟಣ, ಕೆಆರ್‌ಎಸ್, ಮದ್ದೂರು, ಮಳವಳ್ಳಿ ಸೇರಿ ಹಲವೆಡೆ ರೈತರು, ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ. ವಿವಿಧೆಡೆ ರಸ್ತೆ ತಡೆದು, ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಹಾಸನದ ಗೊರೂರು ಜಲಾಶಯಕ್ಕೂ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು. ಇಬ್ಬರು ಡಿವೈಎಸ್‌ಪಿ, ಇಬ್ಬರು ಸರ್ಕಲ್ ಇನ್ಸ್‌ಪೆಕ್ಟರ್, ೮ ಪಿಎಸ್‌ಐ ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಯಲಲಿತಾ ವಿರುದ್ಧ ಆಕ್ರೋಶ
ಕಾವೇರಿ ನದಿ ನೀರು ವಿಚಾರದಲ್ಲಿ ಪದೇ ಪದೇ ತಗಾದೆ ತೆಗೆಯುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಹಳೆ ಮೈಸೂರು ಭಾಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಂಡ್ಯ ವಿವಿ ಬಳಿ ಇರುವ ಪೋಸ್ಟ್ ಆಫೀಸ್ ಬಳಿ ಪ್ರತಿಭಟನೆ ನಡೆಸಿದ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಜಯಲಲಿತ ಶವ ಯಾತ್ರೆ ನಡೆಸಿ, ಜಯಲಲಿತ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕರ್ನಾಟಕದ ಪರ ವಾದ ಮಾಡಿರುವ ಹಿರಿಯ ವಕೀಲ ಫಾಲಿ ನಾರಿಮನ್ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Discussion about this post