ಬೆಂಗಳೂರು, ಸೆ.16: ಕಾವೇರಿ ವಿಚಾರವಾಗಿ ಉಭಯ ರಾಜ್ಯಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಒತ್ತಾಯಿಸಿದ ಬಿ ಎಸ್ ಯಡಿಯೂರಪ್ಪ ಪ್ರಧಾನಿ ಮಧ್ಯಪ್ರವೇಶ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್ ವೈ, ಸದ್ಯಕ್ಕೆ ಪ್ರಧಾನಿಗಳ ಮಧ್ಯಸ್ಥಿಕೆಗೆ ಅವಕಾಶವಿಲ್ಲ, ಹಿರಿಯ ವಕೀಲರಾದ ಮೋಹನ್ ಕಾತರಕಿ ಅವರೇ ಪ್ರಧಾನಿಗಳು ಈ ಹಂತದಲ್ಲಿ ಮಧ್ಯಪ್ರವೇಶ ಮಾಡುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಸದ್ಯ ಪ್ರಧಾನಿ ಮದ್ಯ ಪ್ರವೇಶ ಮಾಡಲ್ಲ ಎಂದು ಹೇಳಿದರು.
ಕಾವೇರಿ ವಿಚಾರವಾಗಿ ಈ ಮೊದಲೇ ರಾಜ್ಯ ಸರ್ಕಾರ ಉಭಯ ರಾಜ್ಯಗಳಲ್ಲಿರುವ ವಾಸ್ತವ ಸ್ಥಿತಿಯನ್ನು ಅವಲೋಕಿಸಲು ತಾಂತ್ರಿಕ ಪರಿಣಿತರ ತಂಡವನ್ನು ಕಳಿಸುವಂತೆ ಈಗ ಸುಪ್ರೀಂ ಕೋರ್ಟ್ಗೆ ಮನವಿ ಮಾಡಲು ನಿರ್ಧರಿಸಬೇಕಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಕಡೆಗೂ ಗಾಢ ನಿದ್ರೆಯಿಂದ ಎಚ್ಚೆತ್ತಿದೆ,ಬಹಳ ಮೊದಲೇ ಈ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಕಳೆದ ಕೆಲವು ವಾರಗಳ ಹಿಂದೆ ಕಾವೇರಿ ವಿವಾದ ಉದ್ಭವಿಸಿದ್ದಾಗಲೇ ನಾನು ಪದೇ ಪದೆ ಈ ಒತ್ತಾಯ ಮಾಡಿದ್ದೆ. ಮೂರು ನಾಲ್ಕು ವಾರಗಳ ಹಿಂದೆಯೇ ಈ ತೀರ್ಮಾನ ಕೈಗೊಂಡಿದ್ದರೆ ರಾಜ್ಯಕ್ಕೆ ಈಗ ಆಗಿರುವ ಹೆಚ್ಚಿನ ಹಾನಿಯನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಿದರು. ಕಡೆಗಾದರೂ ಬಿಜೆಪಿ ನಿಲುವನ್ನೇ ಸರ್ಕಾರ ಒಪ್ಪಿದೆ. ಇದು ತಡವಾದರೂ ಸ್ವಾಗತಾರ್ಹ.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರೂ ಕೂಡ ಈ ಹಂತದಲ್ಲಿ ಪ್ರಧಾನಿ ಮಧ್ಯಸ್ಥಿಕೆ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.ಪದೇ ಪದೇ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸುವುದರ ಹಿಂದೆ ವಿಷಯಾಂತರ ಮಾಡಿ ರಾಜ್ಯ ಸರ್ಕಾರದ ವೈಫಲ್ಯವನ್ನು ಮುಚ್ಚಿಕೊಳ್ಳವ ಉದ್ದೇಶವಿದೆ. ಇದು ಕೇವಲ ರಾಜಕೀಯ ಪ್ರೇರಿತ ಹೇಳಿಕೆ ಎಂದು ಆರೋಪಿಸಿದರು.
ಸರ್ಕಾರ ಈ ರೀತಿಯ ಚಿಲ್ಲರೆ ರಾಜಕಾರಣವನ್ನು ಬಿಟ್ಟು ಕಾನೂನು ಹೋರಾಟವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸರ್ಕಾರ ಗಮನ ನೀಡಬೇಕು.ಕಾನೂನು ಸುವ್ಯವಸ್ಥೆಯ ಬಗ್ಗೆ ಗಮನ ನೀಡಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಉಭಯ ರಾಜ್ಯಗಳ ನಡುವಿನ ಸೌಹಾರ್ದಯುತ ಸಂಬಂಧಕ್ಕೆ ಧಕ್ಕೆಯಾಗದಂತೆ ಅಗತ್ಯ ಭದ್ರತಾ ಪಡೆ ಮತ್ತು ಇತರ ಸಹಕಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವರಾದ ರಾಜನಾಥ್ ಸಿಂಗ್ ಇಬ್ಬರೂ ಭರವಸೆ ನೀಡಿದ್ದಾರೆ.ರಾಜ್ಯ ಸರ್ಕಾರ ಇದರ ನೆರವಿನಿಂದ ರಾಜ್ಯದ ಜನರ ಜೀವ ಮತ್ತು ಆಸ್ತಿ ರಕ್ಷಣೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಬಿಬಿಎಂಪಿ ಮೈತ್ರಿ ತೀರ್ಮಾನ ಇಲ್ಲ:
ಬಿಜೆಪಿ ಈವರೆಗೂ ಜೆ.ಡಿ.ಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. . ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷಕ್ಕೆ ಮೇಯರ್ ಸ್ಥಾನ ಬಿಟ್ಟುಕೊಡುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಮಾತನಾಡಿದ್ದಾರೆ. ಬಿಜೆಪಿ ಈ ರೀತಿಯ ಯಾವುದೇ ಷರತ್ತುಗಳಿಗೆ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಈವರೆಗೆ ಈ ವಿಷಯದ ಬಗ್ಗೆ ಬಿಜೆಪಿ ಯಾವುದೇ ಚಿಂತನೆ ನಡೆಸಿಯೂ ಇಲ್ಲ, ಕೆಲವು ಪಕ್ಷದ ನಾಯಕರು ಜೆಡಿಎಸ್ ನಾಯಕರೊಂದಿಗೆ ಅನೌಪಚಾರಿಕವಾಗಿ ಮಾತನಾಡಿರಬಹುದು ಅಷ್ಟೇ ಎಂದರು.
Discussion about this post