Read - 2 minutes
ಬೆಂಗಳೂರು, ಸೆ.15: ಕಾವೇರಿ ನದಿಯಿಂದ ತಮಿಳುನಾಡಿಗೆ ಸೆ.20ರವರೆಗೆ ನೀರು ಬಿಡುಗಡೆ ಮಾಡಿ, ನಂತರ ಪುನಃ ನೀರು ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ ನೀಡದಂತೆ ನೋಡಿಕೊಳ್ಳಲು ರಹಸ್ಯ ಸಂಧಾನ ಪ್ರಕ್ರಿಯೆ ನಡೆಸುವಂತೆ ರಾಜ್ಯದ ಪರ ವಕೀಲ ನಾರಿಮನ್ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿರುವ ಅಂಶ ಬೆಳಕಿಗೆ ಬಂದಿದೆ.
ವಾಸ್ತವವಾಗಿ ಸಂಕಷ್ಟ ಸೂತ್ರ ಅಸ್ತಿತ್ವದಲ್ಲಿ ಇಲ್ಲದೆ ಇದ್ದರೂ ಕರ್ನಾಟಕ ನದಿ ಪಾತ್ರದಲ್ಲಿ ಲಭ್ಯವಾಗುವ ಒಟ್ಟು ನೀರಿನಲ್ಲಿ ನ್ಯಾಯಮಂಡಳಿ ನಿಗದಿ ಮಾಡಿದ ಪ್ರಮಾಣದಲ್ಲಿ ನೀರು ಹಂಚಿಕೆ ಮಾಡಿಕೊಳ್ಳಬೇಕು ಎಂದು ತಮಿಳುನಾಡು ಪಟ್ಟು ಹಿಡಿದಿದ್ದು,ಈ ವಿಷಯದಲ್ಲಿ ಸುಪ್ರೀಂಕೋರ್ಟ್ ಕೂಡ ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಸೆ.20 ರ ತನಕ ಮಾತ್ರವಲ್ಲ, ನಂತರವೂ ನೀರು ಬಿಡುಗಡೆಗೆ ಸುಪ್ರೀಕೋರ್ಟ್ ಆದೇಶ ನೀಡಿದರೆ ಕರ್ನಾಟಕದ ಕಾವೇರಿ ನದಿ ಪಾತ್ರ ಭೀಕರ ಕ್ಷಾಮಕ್ಕೆ ಗುರಿಯಾಗುತ್ತದೆ. ಹೀಗಾಗಿ ಸೆ.20 ರವರೆಗೆ ಮಾತ್ರ ನೀರು ಬಿಡುಗಡೆ ಮಾಡಿ ಅಷ್ಟರೊಳಗಾಗಿ ಉನ್ನತ ಮಟ್ಟದಲ್ಲಿ ರಹಸ್ಯ ಸಂಧಾನ ನಡೆಸಿಕೊಂಡು ಸಮಸ್ಯೆಯಿಂದ ಪಾರಾಗುವಂತೆ ನಾರಿಮನ್ ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಕಾವೇರಿ ನ್ಯಾಯಮಂಡಳಿ 2007 ರಲ್ಲಿ ನೀಡಿದ ಅಂತಿಮ ಆದೇಶದ ಪ್ರಕಾರ ನಾಲ್ಕು ರಾಜ್ಯಗಳನ್ನು ಒಳಗೊಂಡ ಕಾವೇರಿ ನದಿ ಪಾತ್ರದಲ್ಲಿ 740 ಟಿಎಂಸಿ ನೀರು ಲಭ್ಯವಾಗುತ್ತದೆ. ಈ ಪೈಕಿ ಕರ್ನಾಟಕದಲ್ಲಿ 462 ಟಿಎಂಸಿ ನೀರು ದಕ್ಕುತ್ತದೆ.
ಈ ಪೈಕಿ ಕರ್ನಾಟಕ 270 ಟಿಎಂಸಿ ನೀರನ್ನು ಇಟ್ಟುಕೊಂಡು ತಮಿಳುನಾಡಿಗೆ 192 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು.
ಅಂದರೆ ಲಭ್ಯವಾಗುವ ನೀರಿನಲ್ಲಿ ಶೇ.57 ರಷ್ಟು ಪ್ರಮಾಣದ ನೀರು ಕರ್ನಾಟಕಕ್ಕೆ ಸಿಗುವಂತಾಗಬೇಕು.ಶೇ.43 ರಷ್ಟು ನೀರು ತಮಿಳುನಾಡಿಗೆ ಲಭ್ಯವಾಗಬೇಕು.ಹೀಗಾಗಿ ಈ ಬಾರಿ ಕರ್ನಾಟಕದಲ್ಲಿ 120 ಟಿಎಂಸಿಯಷ್ಟು ನೀರು ಸಿಕ್ಕಿದೆ ಎಂದರೂ ಅದರಲ್ಲೇ ಶೇ.43 ರಷ್ಟು ಪ್ರಮಾಣದ ನೀರು ತನಗೆ ದೊರೆಯಬೇಕು ಎಂಬುದು ತಮಿಳುನಾಡು ಸರ್ಕಾರದ ವಾದ.
ಇದನ್ನು ಲೆಕ್ಕ ಹಾಕಿದರೂ ತಮಿಳುನಾಡಿಗೆ ಕರ್ನಾಟಕದಿಂದ 49 ಟಿಎಂಸಿಯಷ್ಟು ನೀರು ಬಿಡುಗಡೆಯಾಗಬೇಕು. ಹೀಗಾಗಿ ಸೆ.20 ರಂದು ಸುಪ್ರೀಂಕೋರ್ಟ್ ಮುಂದೆ ವಿಚಾರಣೆ ನಡೆಯುವುದಕ್ಕಿಂತ ಮುನ್ನ ರಹಸ್ಯ ಸಂಧಾನ ನಡೆಸಿಕೊಂಡು ಕಂಟಕದಿಂದ ಪಾರಾಗಿ ಎಂಬುದು
ನಾರಿಮನ್ ಸಲಹೆ
ಈ ಸಂದರ್ಭದಲ್ಲಿ ಉನ್ನತ ಮಟ್ಟದಲ್ಲೇ ರಹಸ್ಯ ಸಂಧಾನ ನಡೆಯಬೇಕು. ಸೆ.20 ರ ನಂತರ ಮತ್ತೆ ನೀರು ಬಿಡುಗಡೆಗೆ ತಮಿಳುನಾಡು ಪಟ್ಟು ಹಿಡಿಯದಂತೆ ನೋಡಿಕೊಳ್ಳಬೇಕು ಎಂದು ನಾರಿಮನ್ ಸಲಹೆಗೆ ದೇವೇಗೌಡರೂ ಸಹಮತ ವ್ಯಕ್ತಪಡಿಸಿದ್ದು ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಂಧಾನ ಪ್ರಕ್ರಿಯೆಗೆ ಈಗಾಗಲೇ ಚಾಲನೆ ದೊರೆತಿದೆ ಎಂದು ಇವೇ ಮೂಲಗಳು ಹೇಳಿವೆ.
ನಾರಿಮನ್ ಸಲಹೆಯ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡ ಕೂಡಾ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ್ದು ಒಕ್ಕೂಟ ವ್ಯವಸ್ಥೆಯಲ್ಲಿ ನೀರು ಬಿಡುಗಡೆ ಮಾಡುವುದಿಲ್ಲ ಎನ್ನಲು ಸಾಧ್ಯವೇ ಇಲ್ಲ. ಹಾಗೇನಾದರೂ ಹೇಳಿದರೆ ಕೇಂದ್ರ ಸರ್ಕಾರ ಸೈನ್ಯವನ್ನು ಕಳುಹಿಸಿ ನೀರು ಬಿಡುಗಡೆಯಾಗುವಂತೆ ನೋಡಿಕೊಳ್ಳುತ್ತದೆ. ಇದೇ ರೀತಿ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ನೀಡಿದರೂ ಸಮಸ್ಯೆ ಪರಿಹಾರವಾಗುವುದಿಲ್ಲ. ಮೇಲ್ನೋಟಕ್ಕೆ ಪ್ರಧಾನಿ ಮೋದಿ ಮಧ್ಯೆ ಪ್ರವೇಶಿಸಬೇಕೆಂದು ಹೇಳಿದರೂ ಬಹಿರಂಗವಾಗಿ ಅವರೂ ಬರಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.
ಕಾವೇರಿ ನದಿ ನೀರಿನ ವಿಷಯದಲ್ಲಿ 2007 ರ ಟ್ರಿಬ್ಯುನಲ್ ಆದೇಶಕ್ಕೆ ಅಂಟಿಕೊಂಡಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಮನ ಒಲಿಸುವುದು ಈ ಸಂಧಾನ ಪ್ರಕ್ರಿಯೆಯ ಬಹುಮುಖ್ಯ ಅಜೆಂಡಾ (ಕಾರ್ಯಸೂಚಿ) ಎಂದಿರುವ ಮೂಲಗಳು,ರಹಸ್ಯ ಸಂಧಾನದ ಸ್ವರೂಪ ಯಾವ ಮಟ್ಟದಲ್ಲಿರಲಿದೆ ಎಂಬುದನ್ನು ಹೇಳಲು ನಿರಾಕರಿಸಿವೆ.
ಈ ಮಧ್ಯೆ ರಾಜ್ಯದ ಬಿಜೆಪಿ ನಾಯಕರೂ ಕೇಂದ್ರ ಸಚಿವ ಅನಂತಕುಮಾರ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದು ಅವರು ಕೂಡಾ ಉನ್ನತ ಮಟ್ಟದ ರಹಸ್ಯ ಸಂಧಾನಕ್ಕೆ ತೆರೆಮರೆಯ ಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
Discussion about this post