ಶ್ರೀನಗರ, ಅ.20: ಕಾಶ್ಮೀರದಲ್ಲಿ ಹಿಂಸಾಚಾರ ಪ್ರಚೋದನೆಗೆ ಕುಮ್ಮಕ್ಕು ನೀಡಿದ್ದ ಆರೋಪದ ಮೇರೆಗೆ ಜಮ್ಮು ಮತ್ತು ಕಾಶ್ಮೀರದ 12 ಉನ್ನತ ಅಧಿಕಾರಿಗಳನ್ನು ಸೇವೆಯಿಂದ ವಜಾಮಾಡಲಾಗಿದೆ. ಇತ್ತ ಉಗ್ರ ಬುರ್ಹಾನ್ ವನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಅ.27ರವರೆಗೆ ಮುಂದುವರೆಸುವಂತೆ ಪ್ರತ್ಯೇಕವಾದಿ ನಾಯಕರು ಕರೆ ನೀಡಿದ್ದಾರೆ.
ವನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ , ಭಾರತೀಯ ಸೇನೆ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿತ್ತು. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು, ಹಿಂಸಾಚಾರಕ್ಕೆ ಕುಮ್ಮಕು ನೀಡಿದ್ದರು ಎಂಬ ಆರೋಪವಿತ್ತು. ಆರೋಪಿಗಳಾದ ೧೨ಅಧಿಖಾರಿಗಳನ್ನು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ವಜಾ ಮಾಡಿದ್ದಾರೆ. ೧೦೦ ಅಧಿಕಾರಿಗಳ ವಿರುದ್ಧ ಸರ್ಕಾರ ಶಂಕೆ ವ್ಯಕ್ತಪಡಿಸಿದ್ದು, ಈ ಅಧಿಕಾರಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಶೀಘ್ರದಲ್ಲಿ ಈ ಎಲ್ಲ ೧೦೦ ಅಧಿಕಾರಿಗಳು ಸೇವೆಯಿಂದ ವಜಾ ಆಗುವ ಸಾಧ್ಯತೆ ಇದೆ.
ಭೂ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಈಗ ವಜಾ ಆಗಿದ್ದಾರೆ ಎಂದು ತಿಳಿದುಬಂದಿದೆ. ಇವರ ವಿರುದ್ಧ ದೇಶಧ್ರೋಹ ಪ್ರಕರಣ ದಾಖಲಾಗಿದ್ದು, ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಪ್ರತಿಭಟನೆ ಮುಂದುವರೆಸಿ : ಪ್ರತ್ಯೇಕತಾವಾದಿಗಳು
ಉಗ್ರ ವನಿ ಹತ್ಯಾ ನಂತರ ಪ್ರತ್ಯೇಕತಾವಾದಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಅ. ೨೭ರವರೆಗೂ ನಡೆಸುವಂತೆ ಹಾಗೂ ಶಾಸಕರ ಮನೆಗಳ ಮುಂದೆ ನಾಳೆ ಪ್ರತಿಭಟನೆ ನಡೆಸಲು ತೀರ್ಮಾಸಲಾಗಿದೆ. ಅ.೨೪,೨೫ರಂದು ಹಲವು ಪ್ರದೇಶಗಳಲ್ಲಿ ರ‌್ಯಾಲಿ, ಪ್ರತಿಭಟನಾ ದಿನದಂದೂ ಸಂಪೂರ್ಣವಾಗಿ ರಾಜ್ಯ ಬಂದ್‌ಗೆ ಕರೆ ನೀಡಲಾಗಿದೆ.
ಸನತ್ ನಗರ, ಜವಾಹರ ನಗರ, ರಾಜ್ಭಾಗ್ ಮತ್ತು ಬಿಷ್ಮೆಂಬರ್ ನಗರ ಹಾಗೂ ಇನ್ನಿತರೆ ನಾಗರಿಕ ಪ್ರದೇಶಗಳಲ್ಲಿ ಎಂದಿನಂತೆ ವ್ಯಾಪಾರ ವ್ಯವಹಾರ ಚಟುವಟಿಕೆಗಳು ನಡೆಯುತ್ತಿದೆ.
ಸೀಮಿತ ದಾಳಿ ಬಳಿಕ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಭಾರತೀಯ ಯೋಧರ ಕಣ್ಣು ತಪ್ಪಿಸಲು ಯತ್ನಿಸುತ್ತಿರುವ ಪಾಕಿಸ್ಥಾನ ಉಗ್ರರು ಗಡಿ ನುಸುಳಲು ಪ್ರತಿನಿತ್ಯ ಯತ್ನ ನಡೆಸುತ್ತಲೇ ಇದ್ದಾರೆ. ಪಾಕ್ ಸೇನೆ ಕೂಡ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ. ಸೀಮಿತ ದಾಳಿ ಬಳಿಕ ಪಾಕ್ ಸೇನೆ ೩೧ ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ ಎನ್ನಲಾಗಿದೆ.
Discussion about this post