Read - < 1 minute
ಬೀಜಿಂಗ್:ಕಾಶ್ಮೀರ ವಿಷಯದಲ್ಲಿ ಚೀನಾ ತನ್ನನ್ನು ಬೆಂಬಲಿಸುವುದಾಗಿ ಮತ್ತು ಭಾರತ ಆಕ್ರಮಣ ನಡೆಸಿದ್ದೇ ಆದರೆ ಪಾಕ್ಗೆ ಬೆಂಬಲ ನೀಡಲಿದ್ದೇನೆ ಎಂಬುದಾಗಿ ಚೀನಾ ಭರವಸೆ ನೀಡಿದೆ ಎಂಬುದಾಗಿ ಪಾಕ್ ಮಾಧ್ಯಮಗಳು ಮಾಡಿದ ವರದಿಗಳನ್ನು ಚೀನಾ ಇದೀಗ ಎರಡನೇ ಬಾರಿಗೆ ನಿರಾಕರಿಸಿದೆ. ಇದರೊಂದಿಗೆ ಪಾಕಿಸ್ಥಾನ ಭಾರೀ ಮುಖಭಂಗ ಅನುಭವಿಸಿದೆ.
“ನೆರೆ ಮತ್ತು ಮಿತ್ರ”ನಾಗಿ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ಥಾನಕ್ಕೆ ಮನವಿ ಮಾಡಿಕೊಳ್ಳುವುದೇನೆಂದರೆ, ಕಾಶ್ಮೀರ ವಿವಾದಗಳನ್ನು ಸರಿಯಾಗಿ ಪರಿಹರಿಸಲು ಮಾತುಕತೆಯಲ್ಲಿ ತೊಡಗಿಕೊಳ್ಳಬೇಕೆಂದು ಮನವಿ ಮಾಡುವುದಾಗಿ ಚೀನಾ ತನ್ನ ಸ್ಪಷ್ಟೀಕರಣದ ಹೇಳಿಕೆಯಲ್ಲಿ ತಿಳಿಸಿದೆ.
ಯಾವುದೇ ವಿದೇಶವೊಂದು ಆಕ್ರಮಣ ನಡೆಸಿದ್ದೇ ಆದರೆ ಚೀನಾ ಪಾಕಿಗೆ ಬೆಂಬಲ ನೀಡಲಿದೆ ಮತ್ತು ಕಾಶ್ಮೀರ ವಿಚಾರದಲ್ಲಿ ಪಾಕನ್ನು ಬೆಂಬಲಿಸಲಿದೆ ಎಂಬುದಾಗಿ ಲಾಹೋರ್ನಲ್ಲಿರುವ ಚೀನಾ ಕಾನ್ಸುಲ್ ಜನರಲ್ ಯೂ ಬೋರೆನ್ ಹೇಳಿದ್ದಾರೆ ಎಂಬುದಾಗಿ ಬಂದಿರುವ ವರದಿಗಳಿಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಷುವಾಂಗ್ ಸ್ಪಷ್ಟೀಕರಣ ನೀಡಿದ್ದಾರೆ. ಕಾನ್ಸುಲ್ ಜನರಲ್ ಅಂತಹ ಯಾವುದೇ ಹೇಳಿಕೆ ನೀಡಿದ ಬಗ್ಗೆ ತನಗೆ ಗೊತ್ತಿಲ್ಲ ಎಂದಿದ್ದಾರೆ.
ನೀವು ಹೇಳಿದಂತಹ ವಿಚಾರ ನನಗೆ ಗೊತ್ತಿಲ್ಲ. ಆದರೆ ಚೀನಾ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿ ಸ್ಪಷ್ಟ ನಿಲುವು ಹೊಂದಿದೆ.ವಿವಾದಗಳ ಬಗೆಗೆ ನೆರೆಯ ಎರಡು ದೇಶಗಳು ಪರಸ್ಪರ ಮಾತುಕತೆ ಮತ್ತು ಸಮಾಲೋಚನೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂಬುದು ನಮ್ಮ ಅಪೇಕ್ಷೆ. ಕಾಶ್ಮೀರ ವಿವಾದವು ಇತಿಹಾಸದ ಅಂಶಗಳನ್ನು ಒಳಗೊಂಡ ವಿಚಾರವಾಗಿದೆ.ಇದನ್ನು ಶಾಂತಿಯುತವಾಗಿ ಇತ್ಯರ್ಥ ಪಡಿಸಿಕೊಳ್ಳಬೇಕೆಂಬುದು ನಮ್ಮ ಸಲಹೆ ಎಂದರು.
ಸೋಮವಾರ ಚೀನಾ ನೀಡಿರುವ ಸ್ಪಷ್ಟನೆ ಸೆ.22ರ ಬಳಿಕ ಎರಡನೇ ಬಾರಿಗೆ ನೀಡಿದಂತಾಗಿದ್ದು ಗಮನಾರ್ಹವಾಗಿದೆ . ಪಾಕಿಸ್ಥಾನದ ಡಾನ್ ಪತ್ರಿಕೆ , ಭಾರತ ಯುದ್ಧ ಸಾರಿದರೆ ಚೀನಾ ಪಾಕನ್ನು ಬೆಂಬಲಿಸಲಿದೆ ಎಂಬಂತೆ ಬಿಂಬಿಸುವ ವರದಿ ಮಾಡಿತ್ತು.
Discussion about this post