Read - < 1 minute
ಮೈಸೂರು, ಅ.10: ವಿಶ್ವ ವಿಖ್ಯಾತ ಜಂಬೂಸವಾರಿಗೆ ಅರಮನೆ ನಗರಿ ಭರ್ಜರಿಯಾಗಿ ಸಜ್ಜಾಗಿದೆ. ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ಮಧ್ಯಾಹ್ನ 2.45ಕ್ಕೆ ಚಾಲನೆ ನೀಡಲಿದ್ದಾರೆ.
750 ಕೆಜಿ ತೂಕದ ಬಂಗಾರದ ಅಂಬಾರಿಯಲ್ಲಿ ಬರುವ ನಾಡ ದೇವತೆ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಜೆ 4.45ಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ.
6ನೇ ಬಾರಿ ಅರ್ಜುನ ಅಂಬಾರಿ ಹೊರಲಿದ್ದಾನೆ. ಈತನ ಜತೆ ಅಭಿಮನ್ಯು, ಬಲರಾಮ, ವಿಕ್ರಮ, ವಿಜಯ, ಕಾವೇರಿ, ಗಜೇಂದ್ರ, ಗೋಪಾಲಕೃಷ್ಣ, ದುರ್ಗಾಪರಮೇಶ್ವರಿ, ಗೋಪಿ, ಪ್ರಕಾಶ್ ಹೆಜ್ಜೆ ಹಾಕಲಿದ್ದಾರೆ.
ಮಧ್ಯಾಹ್ನ 2.15ಕ್ಕೆ ಅರಮನೆಯ ಉತ್ತರ ದ್ವಾರದಲ್ಲಿ ನಂದಿ ದ್ವಜದ ಪೂಜೆ ನಡೆಯಲಿದೆ. ಈ ಬಾರಿ 42 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. 30 ಜಿಲ್ಲೆಗಳ ವಿವಿಧ ಸ್ತಬ್ಧಚಿತ್ರಗಳು ಹಾಗೂ ಹೊರ ರಾಜ್ಯಗಳ ಸ್ತಬ್ಧ ಚಿತ್ರಗಳು ಕೂಡ ದಸರಾ ಮೆರವಣಿಗೆಯಲ್ಲಿ ಕಂಗೊಳಿಸಲಿವೆ.
ರಾಜ್ಯ ಹಾಗೂ ವಿವಿಧ ರಾಜ್ಯಗಳ 50 ಜಾನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆಯಲ್ಲಿ ಮೆರಗು ಹೆಚ್ಚಿಸಲಿದೆ. ಮೈಸೂರು ಮೇಯರ್ ಬೈರಪ್ಪ ಹಾಗೂ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಯೀಮ್ ಸುಲ್ತಾನ್ ಅವರು ಕುದುರೆ ಮೇಲೆ ಬರಲಿರುವುದು ವಿಶೇಷ ಆಕರ್ಷಣೆಯಾಗಲಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಮಹದೇವಪ್ರಸಾದ್, ಶಿಕ್ಷಣ ಸಚಿವ ತನ್ವೀರ್ ಸೇಠ್, ಜಿಲ್ಲಾಧಿಕಾರಿ ರಂದೀಪ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
Discussion about this post