Read - < 1 minute
ಚೆನ್ನೈ, ಅ.7: ಅತ್ಯಂತ ಕುತೂಹಲಕರ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ವಿಚಾರಿಸಿದರು. ರಾಹುಲ್ ಅವರ ಈ ಅನಿರೀಕ್ಷಿತ ಭೇಟಿ ಅಚ್ಚರಿ ಮೂಡಿಸಿದೆ.
ಚೆನ್ನೈಗೆ ಆಗಮಿಸಿದ ಎಐಸಿಸಿ ಉಪಾಧ್ಯಕ್ಷ ರಾಹುಲ್, ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ತಿರುವನಕ್ಕರಸ್ ಅವರೊಂದಿಗೆ ಅಪೋಲೋ ಆಸ್ಪತ್ರೆಗೆ ಆಗಮಿಸಿದರು.
ಜಯಾರನ್ನು ಭೇಟಿ ಮಾಡಲು ಅವರೊಬ್ಬರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ನಂತರ ಎರಡನೇ ಮಹಡಿಯಲ್ಲಿರುವ ವಿಶೇಷ ತೀವ್ರ ನಿಗಾ ಘಟಕದಲ್ಲಿನ ಚಿಕಿತ್ಸಾ ಕೊಠಡಿಗೆ ತೆರಳಿ ಅವರ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗಲು ಹಾರೈಸಿದರು ಮತ್ತು ಆಸ್ಪತ್ರೆ ಅಧ್ಯಕ್ಷ ಡಾ.ಪ್ರತಾಪ್ ರೆಡ್ಡಿ ಅವರೊಂದಿಗೆ ಚರ್ಚಿಸಿ ಜಯಾ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಜಯಾ ಭೇಟಿಗೆ ಅವರ ಸಂಬಂಧಿಕರಿಗೂ ಅವಕಾಶ ನೀಡಿದ ಆಸ್ಪತ್ರೆಯವರು, ರಾಹುಲ್ಗೆ ಭೇಟಿ ಅವಕಾಶ ನೀಡಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.
ರಾಹುಲ್ ದಿಢೀರ್ ಭೇಟಿ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆ ಬಳಿ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಜಯಲಲಿತಾರ ಬದ್ಧ ವೈರಿಯಾದ ಡಿಎಂಕೆ ಜೊತೆ ಕಾಂಗ್ರೆಸ್ ನಿಕಟ ಮೈತ್ರಿ ಹೊಂದಿದ್ದು, ಅಣ್ಣಾಡಿಎಂಕೆ ಅಧಿನಾಯಕಿಯನ್ನು ಭೇಟಿ ಮಾಡಲು ರಾಹುಲ್ ಏಕಾಏಕಿ ಚೆನ್ನೈಗೆ ಬಂದಿರುವುದು ಹೊಸ ರಾಜಕೀಯ ಬೆಳವಣಿಗೆಯಾಗಿದೆ.
Discussion about this post