ನವದೆಹಲಿ, ಆ.31: ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಟಾಟಾ ನ್ಯಾನೋ ಕಾರು ತಯಾರಿಕಾ ಘಟಕಕ್ಕೆ ಸುಪ್ರೀಂ ತಡೆ ನೀಡಿದ್ದು, ಈ ಮೂಲಕ ಸಿಂಗೂರು ಒಪ್ಪಂದವನ್ನು ರದ್ದು ಪಡಿಸಿದೆ.
ಈ ಕುರಿಂತಂತೆ ಇಂದು ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಪಶ್ಚಿಮ ಬಂಗಾಳದ ಹಿಂದಿನ (2006ರ) ಎಡಪಕ್ಷ ಸಿಂಗೂರಿನಲ್ಲಿ ನೀಡಿದ್ದ ಒಂದು ಸಾವಿರ ಎಕರೆ ಭೂಮಿಯ ಒಪ್ಪಂದವನ್ನು ಸುಪ್ರೀಂಕೋರ್ಟ್ ಇಂದು ರದ್ದುಪಡಿಸಿದ್ದು, ಭೂಮಿಯನ್ನು ರೈತರಿಗೆ ಹಿಂದಿರುಗಿಸಲು ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಎಡಪಕ್ಷಗಳಿಗೆ ಭಾರೀ ಮುಖಭಂಗವಾಗಿದೆ.
೨೦೦೬ರಲ್ಲಿ ಬುದ್ಧದೇವ ಭಟ್ಟಾಚಾರ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟಾಟಾ ಕಂಪೆನಿಗೆ 997 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಅಂದು ಪ್ರತಿಪಕ್ಷದಲ್ಲಿದ್ದ ಮಮತಾ ಬ್ಯಾನರ್ಜಿ ರೈತರ ಪರವಾಗಿ ಹೋರಾಟ ನಡೆಸಿದ್ದರು. ಆ ವೇಳೆ ಗಲಭೆ ಉಂಟಾಗಿ ಹಿಂಸಾಚಾರ ಸಂಭವಿಸಿ, ಆ ವಿಚಾರ ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸಾವಾಗಿತ್ತು.
2011ರಲ್ಲಿ ನಡೆದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿ ಅಧಿಕಾರಕ್ಕೇರಿತ್ತು. ಬಳಿಕ ಸಿಎಂ ಮಮತಾ ಟಾಟಾ ಮೋಟಾರ್ಸ್ ಲಿಮಿಟೆಡ್ (ಟಿಎಂಎಲ್) ಸಂಸ್ಥೆಗೆ ಗುತ್ತಿಗೆ ನೀಡಿದ್ದ ಭೂಮಿಯನ್ನು ಮಾರಾಟಗಾರರಿಗೇ ಮರಳಿ ಒಪ್ಪಿಸುವ ನಿಟ್ಟಿನಲ್ಲಿ ಸಿಂಗೂರು ಭೂಮಿ ಪುನರ್ವಸತಿ ಮತ್ತು ಅಭಿವೃದ್ಧಿ ಕಾಯ್ದೆಯನ್ನು ಜಾರಿಗೆ ತಂದಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ವಿ ಗೋಪಾಲ್ ಗೌಡ ಹಾಗೂ ನ್ಯಾ. ಅರುಣ್ ಮಿಶ್ರಾ ಅವರಿದ್ದ ಪೀಠ, ಅಂದಿನ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಿಯಮಾವಳಿಗಳನ್ನು ಪಾಲಿಸಿಲ್ಲ. ಹೀಗಾಗಿ, ಸದರಿ ಭೂಮಿಯನ್ನು ರೈತರಿಗೆ ಹಿಂತಿರುಗಿಸಿ ಎಂದು ತೀರ್ಪು ನೀಡಿದೆ.
Discussion about this post