Read - < 1 minute
ಬೆಂಗಳೂರು, ಅ.7: ಕಳೆದ ವರ್ಷ ವಿವಾದಕ್ಕೆ ತುತ್ತಾಗಿದ್ದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕಾರ್ಯಕ್ರಮದ ಹೊಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಲು ಸರ್ಕಾರ ನಿರ್ಧರಿಸಿದೆ. ಟಿಪ್ಪು ಜಯಂತಿ ಮಾತ್ರವಲ್ಲ ರಾಜ್ಯ ಸರ್ಕಾರ ಆಯೋಜಿಸುವ ಎಲ್ಲಾ ಜಯಂತಿಗಳನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಲು ಕೂಡ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಕಳೆದ ವರ್ಷ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಟಿಪ್ಪು ಜಯಂತಿ ಆಯೊಜಿಸಿತ್ತು. ಕಾರ್ಯಕ್ರಮ ಘೋಷಣೆಯಿಂದ ಮುಕ್ತಾಯದವರೆಗೂ ಒಂದಿಲ್ಲೊಂದು ವಿವಾದಕ್ಕೆ ತುತ್ತಾಗಿ ಜಯಂತಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜಯಂತಿ ಆಯೊಜನೆ ಜವಾಬ್ದಾರಿಯನ್ನು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ.
ರವೀಂದ್ರ ಕಲಾಕ್ಷೆತ್ರದಲ್ಲಿ ಕಾರ್ಯಕ್ರಮ
2015ರಲ್ಲಿ ಸರ್ಕಾರದ ವತಿಯಿಂದ ಮೊದಲ ಬಾರಿಗೆ ಆಯೊಜಿಸಲಾಗಿದ್ದ ಟಿಪ್ಪು ಜಯಂತಿ ಕಾರ್ಯಕ್ರಮ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದಿತ್ತು. 2016ರಲ್ಲೂ ಕಾರ್ಯಕ್ರಮ ನ.10ಕ್ಕೆ ನಿಗದಿಯಾಗಿದೆ. ರವೀಂದ್ರ ಕಲಾಕ್ಷೆತ್ರದಲ್ಲಿ ಆಯೋಜನೆಗೊಳ್ಳುವ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸುವ ಸಾಧ್ಯತೆ ಇದೆ ಎಂದು ಸಂಸ್ಕೃತಿ ಇಲಾಖೆ ಮೂಲಗಳು ತಿಳಿಸಿವೆ.
ದಿನಾಂಕದ ಗೊಂದಲ
ಟಿಪ್ಪು ಜನಿಸಿದ್ದು ನ.10ಕ್ಕೆ ಎಂದು ಹಲವು ಸಂಶೊಧಕರು ದೃಢಪಡಿಸಿದ್ದಾರೆ. ಎಂ.ಹೆಚ್. ಖಾನ್ ಬರೆದ ಟಿಪ್ಪು ಜೀವನಚರಿತ್ರೆಗಳ ಹಾಗೂ ನಿಶಾನ್ ಎ ಹೈದರಿ ಕೃತಿಗಳೂ ಇದನ್ನು ಖಚಿತಪಡಿಸುತ್ತವೆ. ಆದರೆ, ಅನೇಕ ವರ್ಷಗಳಿಂದ ಹಲವು ಸಂಘಟನೆಗಳು ನ.20ರಂದು ಜಯಂತಿ ಆಚರಿಸುತ್ತಿವೆ. ಇದರಿಂದ ಸದ್ಯ ಈ ಬಗ್ಗೆ ಗೊಂದಲಗಳು ಮುಂದುವರಿದಿವೆ. ಇದರ ಬೆನ್ನಲ್ಲೇ ಸಕರ್ಾರದ ಗೆಜೆಟಿಯರ್ ಕೂಡ ನ.10ಕ್ಕೆ ಟಿಪ್ಪು ಜನನವಾಗಿದ್ದು ಎಂದು ದಾಖಲಿಸಿದೆ. ಹಾಗಾಗಿ ಆ ದಿನವೇ ಟಿಪ್ಪು ಜಯಂತಿ ಆಚರಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನಿರಂತರ ವಿವಾದ:
ಹಲವು ಅಲ್ಪಸಂಖ್ಯಾತ ಸಂಘಟನೆಗಳು ಪ್ರತಿವರ್ಷ ಟಿಪ್ಪು ಜಯಂತಿ ಆಚರಿಸುತ್ತಿದ್ದವು. ಆದರೆ, 2014ರ ಡಿಸೆಂಬರ್ ನಲ್ಲಿ ಇದನ್ನು ಸರ್ಕಾರದ ವತಿಯಿಂದ ಆಯೊಜಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಸರ್ಕಾರಿ ವೆಚ್ಚದಲ್ಲಿ ಆಚರಣೆಗೆ ಬಿಜೆಪಿ, ವಿಎಚ್ಪಿ ಸೇರಿ ಹಲವು ಸಂಘಟನೆಗಳು ವಿರೋಧಿಸಿದ್ದವು. ಆದರೆ, ಕಾಂಗ್ರೆಸ್ ಮತ್ತಿತರ ಸಂಘಟನೆಗಳು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದವು.
ವಿರೋಧ ಹೆಚ್ಚಾಗಿದ್ದರಿಂದ ಕಾರ್ಯಕ್ರಮ ರದ್ದುಗೊಳಿಸಲು ಸರ್ಕಾರವನ್ನು ವಿಎಚ್ಪಿ ಆಗ್ರಹಿಸಿತ್ತು. ಮಡಿಕೇರಿಯಲ್ಲಿ ನಡೆದ ರ್ಯಾಲಿ ಸಂದರ್ಭದಲ್ಲಿ ಗಲಭೆಗಳಾಗಿ ವಿಹೆಚ್ ಪಿ ಕಾರ್ಯಕರ್ತ ಕುಟ್ಟಪ್ಪ ಕೊಲೆಯಾಗಿದ್ದರು. ರ್ಯಾಲಿ ವೀಕ್ಷಿಸುತ್ತಿದ್ದ ವೇಳೆ ಕಟ್ಟಡದಿಂದ ಕೆಳಗೆ ಬಿದ್ದು ರಾಜು ಎಂಬುವರು ಮೃತಪಟ್ಟಿದ್ದರು.
ಮುಖ್ಯಮಂತ್ರಿ ಸಮ್ಮುಖದಲ್ಲಿ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಳೆದ ವರ್ಷ ನಡೆದ ಕಾರ್ಯಕ್ರಮದಲ್ಲಿ, ಅಂತರ್ರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಬದಲಿಗೆ ಟಿಪ್ಪು ಸುಲ್ತಾನ್ ಹೆಸರಿಡಬೇಕಿತ್ತು ಎಂಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ್ ಅವರ ಹೇಳಿಕೆ ಹೊಸ ವಿವಾದ ಹುಟ್ಟುಹಾಕಿತ್ತು. ಕಾರ್ನಾಡ್ ಹೇಳಿಕೆಗೂ ತಮಗೂ ಸಂಬಂಧ ಇಲ್ಲವೆಂದು ಸ್ಪಷ್ಟಪಡಿಸಿ ಸಿದ್ದರಾಮಯ್ಯ ವಿವಾದದಿಂದ ದೂರಾಗಿದ್ದರು.
ಒಟ್ಟಾರೆ ಘೋಷಣೆಯಾದ ದಿನದಿಂದ ಮುಕ್ತಾಯದವರೆಗೂ ಸುದ್ದಿಯಾಗುತ್ತಲೇ ಇದ್ದ ಟಿಪ್ಪು ಜಯಂತಿ ಇದೀಗ ಕನ್ನಡ ಸಂಸ್ಕೃತಿ ಹೆಗಲಿಗೇರಿಸಿ, ಸರ್ಕಾರ ನೇರ ಆಯೋಜನೆಯಿಂದ ಕೈತೊಳೆದುಕೊಂಡಿದೆ.
Discussion about this post