ನವದೆಹಲಿ, ಅ.13: ಮುಸ್ಲಿಮರಲ್ಲಿ ಜಾರಿಯಲ್ಲಿರುವ ತ್ರಿವಳಿ ತಲಾಖ್ ಪದ್ದತಿ ಕುರಿತಂತೆ ಕೇಂದ್ರ ಸರ್ಕಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಸ್ಲಿಂ ಕಾನೂನು ಮಂಡಳಿ, ಏಕರೂಪ ನಾಗರಿಕ ಸಂಹಿತೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದು, ಮುಸ್ಲೀಮರ ವೈಯಕ್ತಿಕ ಕಾನೂನಿನಲ್ಲಿ ಮೂಗು ತೂರಿಸಬೇಡಿ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟು ಹಾಕಿದೆ.
ಈ ಕುರಿತಂತೆ ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿರುವ ಮುಸ್ಲಿಂ ಕಾನೂನು ಮಂಡಳಿಯ ಹಝರತ್ ಮೌಲಾನಾ ವಾಲಿ ರೆಹಮಾನ್, ಪ್ರಧಾನಿ ನರೇಂದ್ರ ಮೋದಿ ಈ ದೇಶದೊಳಗೆ ಆಂತರಿಕ ಯುದ್ಧ ಸೃಷ್ಟಿಸುವ ಹುನ್ನಾರದಲ್ಲಿದ್ದಾರೆ. ಇದಕ್ಕೆ ಬಹುಸಂಖ್ಯೆಯಲ್ಲಿ ಎಲ್ಲಾ ಮುಸ್ಲಿಮರು ಪ್ರತಿಕ್ರಿಯಿಸಬೇಕಾಗಿದೆ ಎಂದು ಕರೆ ನೀಡಿರುವ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ನಿಮಗೆ ಈ ದೇಶದಲ್ಲಿ ಏಕರೂಪದ ಕಾನೂನು ಜಾರಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಆಯೋಗದ ಕುರಿತಾಗಿ ಮಾತನಾಡಿರುವ ಅವರು, ಆಯೋಗ ಸ್ವತಂತ್ರ್ಯ ಇಲಾಖೆಯಲ್ಲ. ಆದರೆ, ಅದು ಸರ್ಕಾರ ಅಡಿಯಲ್ಲಿದ್ದು ಕಾರ್ಯ ನಿರ್ವಹಿಸುತ್ತಿದೆ. ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಲಾ ಕಮಿಷನ್ ಅನ್ನು ನಾವು ಬಹಿಷ್ಕರಿಸುತ್ತೇವೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಅವರು, ಕೇಂದ್ರ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಯತ್ನಿಸುವ ಮೂಲಕ, ಇಸ್ಲಾಂ ಕಾನೂನನ್ನು ಹತ್ತಿಕ್ಕಿ, ದೇಶದ ಬಹುಸಂಸ್ಕೃತಿಯನ್ನು ನಾಶ ಮಾಡಲು ಮುಂದಾಗಿದೆ. ಸರ್ಕಾರ ಮುಸ್ಲಿಮರ ಧಾರ್ಮಿಕ ಕಾನೂನಿನಲ್ಲಿ ಮೂಗು ತೂರಿಸಬಾರದು, ಮೋದಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದಿದ್ದಾರೆ.
ನಾವು ಭಾರತೀಯ ಸಂವಿಧಾನದ ಪುರಾವೆಯ ಆಧಾರದಲ್ಲಿ ಬದುಕುತ್ತಿದ್ದೇವೆ. ಭಾರತೀಯ ಸಂವಿಧಾನ ಅವಕಾಶ ಕಲ್ಪಿಸಿದಂತೆ ನಾವು ನಮ್ಮ ಧರ್ಮದ ಆಧಾರದಲ್ಲಿ, ಧರ್ಮವನ್ನು ಅನುಸರಿಸಲು ಅವಕಾಶವಿದೆ. ಕೇಂದ್ರ ಸರ್ಕಾರ ಇದರಲ್ಲಿ ಮೂಗು ತೂರಿಸಬಾರದು ಎಂದಿದ್ದಾರೆ.
Discussion about this post