Read - 2 minutes
ಭಾರತೀಯ ಸಂಸ್ಕೃತಿಯಲ್ಲಿ ಶ್ರೀ ಗಣೇಶನ ಸ್ಥಾನ ಅತ್ಯಂತ ಮಹತ್ವಪೂರ್ಣ ದೇಶದ ಯಾವುದೇ ಮೂಲೆ ಮೂಲೆಗಳ ಪ್ರದೇಶಕ್ಕೂ ಕಾಲಿಟ್ಟರೂ ಗಣೇಶ್‌ನ ಗುಡಿ ನಾಮಸ್ಮರಣೆ ಆತನ ವಿಗ್ರಹ ಮೂರ್ತಿಗಳು ರಾರಾಜಿಸುತ್ತಿವೆ. ಅಷ್ಟೇ ಅಲ್ಲ ಪೂರ್ವ ಕಾಲದಿಂದಲೂ ನೇಪಾಳ, ಸಿಂಹಳ, ಮಂಗೋಲಿಯ, ಟಿಬೇಟ್, ಜಪಾನ್, ಥೈಲ್ಯಾಂಡ್ ಮತ್ತು ಚೀನಾ ಹಾಗೂ ಆಘ್ಪಾನಿಸ್ಥಾನ ಇತ್ಯಾದಿ ದೇಶಗಳಲ್ಲು ಗಣಪತಿಯ ಭವ್ಯ ಮೂರ್ತಿಗಳು ಸ್ಥಾಪಿತವಾಗಿ, ಅಲ್ಲಿನ ಸಂಸ್ಕೃತಿಯ ಬೆರೆತು, ನಾನಾ ಹೆಸರುಗಳಿಂದ ಜನಸ್ಮರಣೀಯವಾಗಿರುತ್ತಾನೆ. ಇಂದೋ ವಿಶ್ವವ್ಯಾಪಿಯಾಗಿದ್ದಾನೆ.
ಶ್ರೀ ಗಣೇಶ ದೇವನ ವಿಶೇಷವೆಂದರೆ, ಈತ ಸರ್ವಧರ್ಮ ಸಮನ್ವಯನಾಗಿದ್ದು ಹಿಂದೂ, ಜೈನ, ಬೌದ್ಧಧರ್ಮಗಳ ಸೇತುವೆಯಾಗಿದ್ದಾನೆ. ಗಣೇಶನನ್ನು ವಿಘ್ನಕಾರಕನಾಗಿಯು ಕಾಣಲಾಗುತ್ತದೆ. ಇವನ ಪೂಜೆ ಮಾಡದೇ ಯಾವುದೇ ಶುಭಕಾರ್ಯಗಳನ್ನು ಮಾಡಿದರೆ, ವಿಘ್ನವಾಗಬಹುದೆಂಬ ನಂಬಿಕೆ ಇದೆ. ಅದಕ್ಕಾಗಿಯೇ ಯಾವುದೇ ಶುಭಕಾರ್ಯವನ್ನು ಮಾಡುವ ಮುಂಚೆ, ಯಾವುದೇ ವಿಘ್ನ ಉಂಟಾಗದಂತೆ, ಗಣಪತಿಯ ಪೂಜೆ, ಸುತ್ತಿಸಿ, ವಿಘ್ನ ನಿವಾರಕ ಎಂದು ಶರಣಾಗುತ್ತಾರೆ.
ಇಂದೋ ಯಾವುದೇ ಕಲಾಕಾರನ ಕೈಯಲ್ಲಿ, ಕೆತ್ತನೆಯಲ್ಲಿ, ಆಲೋಚನೆಯಲ್ಲಿ ಗಣೇಶನ ಮೂರ್ತಿಯನ್ನು, ಆಕೃತಿಯನ್ನು ಸಾವಿರಾರು ವಿಧಗಳಲ್ಲಿ ರೂಪಿತವಾಗಿದೆ. ಗಣೇಶ ಕಲೆಗೆ ಪ್ರಚೋದನಾಕಾರಿಯೂ ಹೌದು, ಸವಾಲು ಹೌದು. ಇಂದು ಆಸ್ತಿಕರಿರಲೀ, ನಾಸ್ತಿಕರಿರಲೀ, ಭಕ್ತಿಗಾಗಿಯೋ, ಕಲಾತ್ಮಕ ಅಭಿರುವಿಗೋ ಹೊಸಹೊಸ ಮಾದರಿಯ, ವಿನೂತನ ಶೈಲಿಯ ಮೂರ್ತಿಗಳು, ರೂಪಕಗಳು ಸೃಷ್ಠಿಯಾಗುತ್ತಿದೆ.
ಗಣೇಶನನ್ನು ವೇದಮಂತ್ರಗಳು, ಸುತ್ತಿಗಳು, ಕಾವ್ಯಗಳು, ಪುರಾಣಗಳು ವಿಧವಿಧವಾಗಿ ಕಂಡಿದೆ. ಚಿತ್ರಿಸಿವೆ. ಭಕ್ತಿಯಿಂದ ಆರಾಧಿಸಿದೆ. ಶ್ರೀ ಶಂಕರರಂತ ಮಹಾಜ್ಞಾನಿಗಳು, ಅದ್ವೈತ ಪ್ರತಿಪಾದಕರು, ಶ್ರೀ ಗಣಪತಿಯನ್ನು ಭಜಿಸುತ್ತ, ಶರಣಾಗಿ
‘ಗಣೇಶ ಪ್ರಸಾದೇನ ಸಿದ್ಧ್ಯಂತಿ ವಾಚೋ|
ಗಣೇಶೇ ವಿಭೌ ದುರ್ಲಭಂ ಕಿಂ ಪ್ರಸನ್ನೇ’ ಎಂದಿದ್ದಾರೆ.
ಶ್ರೀ ಗಣಪತಿಯ ಅನುಗ್ರಹದಿಂದ ಮನುಷ್ಯ ವಾಕ್‌ಸಿದ್ಧಿಯನ್ನು ಪಡೆಯುತ್ತಾನೆ. ಅಷ್ಟೇ ಅಲ್ಲ ಸರ್ವವ್ಯಾಪಿ ಶ್ರೀ ಗಣೇಶನು ಪ್ರಸನ್ನನಾದರೆ ಯಾವುದೂ ದುರ್ಲಭವಾದದ್ದು ಇಲ್ಲ ಎಂದಿದ್ದಾರೆ.
ಶ್ರೀ ಮಹಾಗಣಪತಿಯನ್ನು ಓಂಕಾರ ಸ್ವರೂಪವಾಗಿಯು, ಪ್ರಣವ ಸ್ವರೂಪಿಯಾಗಿಯೂ ಪುರಾಣ ಪುರುಷನನ್ನಾಗಿಯೂ ಆರಾಧಿಸಲಾಗುತ್ತದೆ.
ಶ್ರೀ ಮಹಾಗಣಪತಿಯ ಭುಜಂಗ ಪ್ರಯಾತ ಸ್ತೋತ್ರಂನಲ್ಲಿ ವಿಷ್ಣುವನ್ನು ಸ್ಮರಿಸಿದರೆ ಪಾಪನಾಶವಾದರೆ, ಶಂಕರ, ಷಣ್ಮುಖರ ಸ್ಮರಣೆಯಿಂದ ಶೋಕನಾಶವಾಗುತ್ತದೆಯೆಂದು, ಆದರೆ ಗಣೇಶನ ಸ್ಮರಣೆಯಿಂದ ಸಕಲ ವಿಘ್ನಗಳ ನಾಶಹೊಂದುತ್ತದೆಯೆಂದು ಮತ್ತು ಭಕ್ತ ಸೇವಿತನಾಗಿ ಏಕದಂತನಾದ ಜ್ಞಾನರೂಪಿ ಗಣಪತಿಯನ್ನು ನಮಿಸಿ, ಪ್ರಾರ್ಥಿಸಲಾಗಿದೆ.
ಗಣಪತಿಯು ನಾನಾ ಅವತಾರಗಳನ್ನು ತಾಳಿ ಲೋಕಕಂಟಕರಾದ ರಾಕ್ಷಸರನ್ನು ಸಂಹಾರ ಮಾಡಿ, ಮಯೂರೇಶನೆಂಬ ಬಿರುದಾಂಕಿತನಾಗಿದ್ದಾನೆ. ಎಲ್ಲರ ಬುದ್ಧಿಶಕ್ತಿಯನ್ನು ಬೆಳಗಿಸುವವನಾಗಿದ್ದು, ಮುನಿಗಳ ಹೃದಯದಲ್ಲಿ ನೆಲೆಸಿದವನಾಗಿರುತ್ತಾನೆ. ಅಷ್ಟೆ ಅಲ್ಲ ಸರ್ವರೋಗಗಳನ್ನು ನಿವಾರಿಸುವವನು ಆಗಿದ್ದಾನೆಂದು ಈ ಶ್ಲೋಕ ಉಲ್ಲೇಖಿಸಿದೆ.
‘ಸರ್ವರೋಗ ನಿಹಂತಾರಂ ಸರ್ವರೋಗದ ನಿವಾರಕಂ
ಸತ್ಯ ಜ್ಞಾನಮಯಂ ಸತ್ಯಂ ಮಯೂರೇಶಂ ನಮಾಪ್ಯಂ
ಸರ್ವಜ್ಞಾನ ನಿಹಂತಾರಂ ಸರ್ವಜ್ಞಾನಕರಂ ಶುಚಿಂ
ಸರ್ವವಿದ್ಯಾಪ್ರದಾತಾರಂ ಮಯೂರೇಶಂ ನಮಾಮ್ಯಹಂ॥’’
ಶ್ರೀ ಮಹಾಗಣಪತಿಯನ್ನು ಲೋಕನಾಯಕನೆಂದ, ಆಕಾಶಪತಿಯಾಗಿಯು, ವಿದ್ಯಾ ಸಂಗೀತ ಕಲೆಗಳನ್ನು ಅನುಗ್ರಹಿಸುವವನಾಗಿಯೂ, ಭಕ್ತಸ್ತೋಮ ನಂಬಿ ಆರಾಧಿಸುತ್ತದೆ.
ಮಹಾಗಣಪತಿಗೆ, ಆ ಜಾತಿ, ಈ ಜಾತಿ, ಮೇಲು ಕೀಳುಗಳೆಂಬ ಯಾವ ತಾರತಮ್ಯವೇ ಇಲ್ಲ. ಆತ ಲೋಕರಕ್ಷಕ, ಲೋಕಪಾಲಕನಾಗಿದ್ದಾನೆ.
‘ಸಜಾತಿಕೃದ್ವಿಜಾತಿ ಕತ್ಕನಿಷ್ಠ ಭೇದ ವರ್ಜಿತಂ
ನಿರಂಜನಂ ಚ ನಿರ್ಗುಣಂ ನಿರಾಕೃತಿ ಅನಿಷ್ಕೃಯಂ॥’
ಇಂತಹ ಸರ್ವ ಜನರ ಮನಸ್ಸಿಗೂ, ಭಾವನೆಗಳಿಗೂ ನಿಲುಕುವ ಸರ್ವ ಧರ್ಮಗಳ ಬಂಧು-ನೇತಾರ ಆಗಿದ್ದಾನೆ ಇವನಿಗೆ ಯಾವುದೇ ತೆರನಾದ ಪೂಜೆ ನಮಸ್ಕಾರ, ಸ್ತುತಿ, ಆರಾಧನೆಗಳು ಆಗಬಹುದು. ಒಟ್ಟಾರೆ ಗಣಪತಿ ಭಕ್ತಪ್ರಿಯ.
‘ಏಕದಂತಾಯ ವಿದ್ಮಹೇ, ವಕ್ತತುಂಡಾಯ ಧೀಮಹಿ|
ತನ್ನೊಂದತೀ ಪ್ರಚೋದಯತ್’|
ಈ ಮಂತ್ರದ ಉಪದೇಶದಿಂದ, ಉಚ್ಚಾರದಿಂದ, ಅನುಷ್ಠಾನದಿಂದ ಸರ್ವಸಿದ್ಧಿಯನ್ನು ಪಡೆಯಬಹುದಾಗಿದೆ.
ಇಂತಹ ಮಹಾಶಕ್ತಿಯನ್ನು, ಸಮಷ್ಠಿಯ ರೂಪವಾದ ಗಣಪತಿಯನ್ನು ಅತ್ಯಂತ ಭಕ್ತಿ-ವಿಶ್ವಾಸ-ನಂಬಿಕೆಗಳಿಂದ ಪೂಜಿಸಿದರೆ, ಆರಾಧಿಸಿದರೆ ಗಣಪತಿ ಪ್ರಸನ್ನನಾಗಿ ನಾಡಿಗೆ, ಜನತೆಗೆ, ಸಂವೃದ್ಧಿ, ನೆಮ್ಮದಿ, ಸುಖಭಾಗ್ಯವನ್ನು ನೀಡುವುದರಲ್ಲಿ ಯಾವ ಸಂಶಯವೂ ಬೇಡ. ಅಷ್ಟೇ ಅಲ್ಲ ಇಂತಹ ಮಹಾನ್ ಭಗವಾನನ ಹೆಸರಿನಲ್ಲಿ ಯಾವುದೇ ಸಂಕುಚಿತ, ಶಾಂತಿಭಂಗ, ಅಕ್ರಮ ಅನ್ಯಾಯಗಳು ನಡೆಯದಂತೆ, ‘ಸದಾ ತಂ ಗಣೇಶಂ ನಮಾಮೇ ಭಜಾಮಃ’ ಎಂಬ ಶರಣಾಗತಿ ವಿನಮ್ರತೆಯ ಮನೋಭಾವ ನಮ್ಮದಾಗಿರಲಿ. ಸರ್ವೇಜನಾಃ ಸುಖಿನೋ ಭವಂತು’ ಎಂಬ ಶೃತಿ ವಾಕ್ಯ ಚಿರಾಯುವಾಗಲಿ.
ಗಣಪತಿಯನ್ನು ‘‘ಸಮಷ್ಟಿ ವ್ಯಷ್ಟಿರೂಪಂ ತ್ವಾಂ ಮಯೂರೇಶಂ ನಮಾಮ್ಯಹಂ’’ ಎಂದರೆ ಸಂಪೂರ್ಣ ಹೊಂದಿವನೆಂದರ್ಥ. ಆತನಲ್ಲಿ ಎಲ್ಲಾ ಗುಣಗಳು, ಎಲ್ಲ ವಿದ್ಯೆಗಳು ಎಲ್ಲ ಕಲೆಗಳು, ಎಲ್ಲಾ ಶಕ್ತಿಗಳು, ಮೇಳೈಸಿದೆ, ಮಾತೃವಾಕ್ತಯ ಪರಿಪಾಲಕ, ಪಿತೃ ಗೌರವರಕ್ಷಕ, ಶಿಷ್ಟಜನರಕ್ಷಕ, ದುಷ್ಟ ಸಂಹಾರಕ, ಪಂಡಿತ-ಪಾಮನರ ವಂದಿತ ಒಟ್ಟಾದರೆ ಶ್ರೀಗಣಪತಿಯು ಸಂಕಷ್ಟಹರನಾಗಿದ್ದಾನೆ.
ಗಣಪತಿಯ ದ್ವಾದಶನಾಮಸ್ತುತಿಯಲ್ಲಿ
‘ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥೀಲಭತೇ ಧನಂ|
ಪುತಾರ್ಥೀ ಲಭತೇ ಪುತ್ರಾನ್ ಮೋಕ್ಷಾರ್ಥೀಲಭತೇ ಗತಿಂ|’
ಎಂದು ಸ್ತುತಿಸಿ, ಕೇಳಿದ್ದನ್ನೆಲ್ಲ ಕರುಣಿಸುವ ಕರುಣಾಮಯನು, ಜ್ಞಾನಿಯೂ ಸರ್ವವಂದಿತನೂ ಆಗಿದ್ದಾನೆ.
ಗಣಪತಿಯು ಬುದ್ಧಿಶಕ್ತಿ, ಜ್ಞಾನಶಕ್ತಿ ಬೆಳಗಿಸುವ ಮೂಲಧಾರ ಚಕ್ರ ಸನ್ನಿಹಿತನಾಗಿ ತ್ರಿಶಕ್ತಿ ಸಹಿತನಾಗಿದ್ದಾನೆ. ಇವನನ್ನು ಬ್ರಹ್ಮ, ವಿಷ್ಣು, ರುದ್ರ, ಇಂದ್ರ, ಅಗ್ನಿ, ವಾಯು, ಸೂರ್ಯ, ಚಂದ್ರ, ವ್ಯಾಹುತಿ ರೂಪನಾಗಿದ್ದು ಗಣಪತಿ ಗಾಯತ್ರಿಮಂತ್ರ ಪ್ರಸಿದ್ಧವಾಗಿದೆ.
ಲೇಖಕರು:
ಮಾರ್ಪಳ್ಳಿ ಆರ್. ಮಂಜುನಾಥ
Discussion about this post