Read - < 1 minute
ಭೋಪಾಲ್, ಅ.14: ಭಾರತೀಯ ಸೈನಿಕರು ಸಮರ ವೀರರಷ್ಟೇ ಅಲ್ಲ, ಮಾನವತೆಯ ಸಾಕಾರ ಮೂರ್ತಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ `ಶೌರ್ಯ ಸ್ಮಾರಕ’ವನ್ನು ಉದ್ಘಾಟಿಸಿ, ಭಾರತೀಯ ಯೋಧರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಈ ಐತಿಹಾಸಿಕ ದಿನದಂದು ಯೋಧರನ್ನು ಉದ್ದೇಶಿಸಿ ಮಾತನಾಡಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದರು.
ಯೋಧರ ಬಗ್ಗೆ ಮಾತನಾಡುವಾಗ ಬಹುತೇಕ ಅವರ ಸಮವಸ್ತ್ರ, ಶೌರ್ಯದ ಬಗ್ಗೆ ಮಾತ್ರ ಮಾತನಾಡುತ್ತೇವೆ. ಆದರೆ ಅವರು ಮಾನವತೆಯ ಸಾಕಾರ ಮೂರ್ತಿಗಳು ಎಂಬುದನ್ನೂ ನಾವು ಗಮನಿಸಬೇಕು ಎಂದು ಹೇಳಿದರು.
ಶ್ರೀನಗರ ಪ್ರವಾಹದಲ್ಲಿ ಸಿಲುಕಿ ಕಂಗೆಟ್ಟಾಗ ನಮ್ಮ ಸೈನಿಕರು ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಪ್ರವಾಹದ ಮಧ್ಯೆ ಸಿಲುಕಿದ್ದವರನ್ನು ರಕ್ಷಿಸಿ ಹೊರ ತಂದರು. ಹೀಗೆ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸುವಾಗ ಸೈನಿಕರು, ಇವರಲ್ಲಿ ನಮಗೆ ಕಲ್ಲು ಹೊಡೆದವರೂ ಇರಬಹುದು ಎಂದು ಒಂದುಕ್ಷಣಕ್ಕೂ ಯೋಚಿಸುವುದಿಲ್ಲ. ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ನೆರವಿನ ಕಾರ್ಯಾಚರಣೆಗೆ ಇಳಿಯುವಾಗ ಅವರು ಸಂಕಷ್ಟದಲ್ಲಿ ಇದ್ದ ಎಲ್ಲರಿಗೂ ಮನಃಪೂರ್ವಕ ನೆರವು ನೀಡುತ್ತಾರೆ ಎಂದರು.
ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಭಾರತ ಅತ್ಯಂತ ದೊಡ್ಡ ಪ್ರಮಾಣದ ಸಹಾಯ ಹಸ್ತವನ್ನು ನೀಡಿದೆ. ಯೆಮೆನ್ ನಲ್ಲಿ ಭಾರತೀಯರನ್ನು ರಕ್ಷಿಸುವ ಸಂದರ್ಭದಲ್ಲಿ ಭಾರತೀಯ ಸೇನೆ ಕೆಲವು ಪಾಕಿಸ್ಥಾನಿಯರನ್ನೂ ರಕ್ಷಿಸಿತು. ಇದು ಭಾರತೀಯ ಸೇನೆಯ ಮಾನವೀಯತೆಗೆ ಉದಾಹರಣೆ ಎಂದು ಮೋದಿ ಹೇಳಿದರು.
ಎರಡು ಜಾಗತಿಕ ಸಮರಗಳಲ್ಲಿ 1.5 ಲಕ್ಷ ಮಂದಿ ಭಾರತೀಯ ಯೋಧರು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ವಿಶ್ವವು ಇದನ್ನು ಎಂದಿಗೂ ಮರೆಯಬಾರದು. ಸೇನೆ, ಬಿಎಸ್ಎಫ್, ಸಿಆರ್ ಪಿಎಫ್, ಕರಾವಳಿ ಕಾವಲು ಪಡೆಗಳ ಯೋಧರು ತಮ್ಮ ಜೀವವನ್ನು ಬಲಿದಾನ ಮಾಡುತ್ತಿರುವುದರಿಂದ ನಾವು ಶಾಂತಚಿತ್ತರಾಗಿ ನಿದ್ರಿಸಲು ಸಾಧ್ಯವಾಗಿದೆ ಎಂದು ಪ್ರಧಾನಿ ನುಡಿದರು. ಯೋಧರಿಗಾಗಿ ನಿರ್ಮಿಸಲಾಗಿರುವ ಈ ಶೌರ್ಯ ಸ್ಮಾರಕ ನಮಗೆ ಮತ್ತು ಮುಂಬರುವ ತಲೆಮಾರುಗಳಿಗೆ ಪವಿತ್ರ ಸ್ಥಾನ ಎಂದು ಮೋದಿ ಹೇಳಿದರು.
Discussion about this post