ಇಸ್ಲಾಮಾಬಾದ್, ಅ.5: ಭಾರತೀಯ ಸೇನೆಯ ಗುಂಡಿಗೆ ಹತನಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿಯನ್ನು ಮತ್ತೆ ಹೊಗಳಿರುವ ಪಾಕಿಸ್ಥಾನ ಪ್ರಧಾನಿ ನವಾಜ್ ಷರೀಫ್, ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿನ ಹೋರಾಟದಲ್ಲಿ ಬಲಿದಾನ ಮಾಡಿದ ವ್ಯಕ್ತಿ ಎಂದು ಪ್ರಶಂಸಿಸಿದ್ದಾರೆ.
ಉರಿ ಸೆಕ್ಟರ್ ಮೇಲಿನ ದಾಳಿ ಬಳಿಕ, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಗಡಿಯಲ್ಲಿ ನುಗ್ಗಿ 18 ಉಗ್ರರನ್ನು ಸದೆ ಬಡಿದ ಭಾರತೀಯ ಸೇನೆಯ ಕ್ರಮದ ನಂತರ ಭಾರತ ಹಾಗೂ ಪಾಕಿಸ್ಥಾನ ಸಂಬಂಧ ಮತ್ತಷ್ಟು ಹಳಸಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪರ ಪ್ರಶಂಸೆಗಳು ಕೇಳಿಬಂದಿದ್ದರೆ, ಪಾಕಿಸ್ಗಾನದ ವಿರುದ್ಧ ವಾಗ್ದಾಳಿಗಳು ನಡೆದಿವೆ. ಇದರ ಬೆನ್ನಲ್ಲೇ ಉಗ್ರಗಾಮಿ ಬುರ್ಹಾನ್ ವನಿಯನ್ನು ಷರೀಫ್ ಹೊಗಳಿರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಪಾಕಿಸ್ಥಾನದ ಜಂಟಿ ಸಂಸತ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿರುವ ಷರೀಫ್, ಉರಿ ಸೆಕ್ಟರ್ ಮೇಲೆ ದಾಳಿ ವಿಚಾರದಲ್ಲಿ ಯಾವುದೇ ರೀತಿಯ ತನಿಖೆ ನಡೆದು ವರದಿ ಬರುವ ಮುನ್ನವೇ, ದಾಳಿ ನಡೆದ ಕೇವಲ ಒಂದು ಗಂಟೆಯಲ್ಲೇ ಭಾರತ ಪಾಕಿಸ್ಥಾನದ ವಿರುದ್ಧ ಬೊಟ್ಟು ಮಾಡಿ ತೋರಿಸಿ, ದಾಳಿಗೆ ಕಾರಣ ಪಾಕ್ ಎಂದು ಆರೋಪಿಸಿದೆ. ಯುಎನ್‌ಜಿಎನಲ್ಲಿ ನಾನು ಭಾಷಣ ಮಾಡುವ ವೇಳೆ ಇಲ್ಲಿ ಉರಿ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಈ ದಾಳಿ ಕುರಿತಾಗಿ ಅಂತರ‌್ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಷರೀಫ್ ಹೇಳಿದ್ದಾರೆ.
ನಾವು ಯುದ್ಧಕ್ಕೆ ವಿರುದ್ಧವಾಗಿದ್ದು, ಶಾಂತಿಯನ್ನು ಬಯಸುತ್ತೇವೆ. ಕಾಶ್ಮೀರ ವಿವಾದವನ್ನು ನಾವು ಶಾಂತರೀತಿಯಂದ ಪರಿಹಾರ ಮಾಡಿಕೊಳ್ಳಲು ಇಚ್ಛಿಸುತ್ತೇವೆ. ನಾವು ಭಾರತಕ್ಕೆ ಅನುಕೂಲಕರವಾದ ಎಲ್ಲ ಕಾರ್ಯಗಳನ್ನು ಮಾಡಿದ್ದೇವೆ. ಆದರೆ, ಭಾರತ ನಮ್ಮ ವಿರುದ್ಧವೇ ಆರೋಪ ಮಾಡುತ್ತಿದೆ ಎಂದಿರುವ ಷರೀಫ್, ಭಾರತದೊಂದಿಗೆ ಶಾಂತಿಯುವಾಗಿ ಮಾತುಕತೆ ನಡೆಸಲು ನಾವು ಸರ್ವರೀತಿಯಲ್ಲೂ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.
ಪಾಕಿಸ್ಥಾನ ಜಗತ್ತಿನ ಭಯೋತ್ಪಾದನೆಯ ಬಲಿಪಶು ರಾಷ್ಟ್ರವಾಗಿದೆ ಎಂದಿರುವ ಷರೀಫ್, ಎಲ್ಲರ ಮುಂದೆ ನಾವು ಕೆಟ್ಟವರಾಗುತ್ತಿದ್ದೇವೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
Discussion about this post