Read - < 1 minute
ಕೊಳ್ಳೇಗಾಲ: ಸೆ;25; ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಳೆ (ಸೆ.26)ವಿವಿಧ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ.
ಮುಖ್ಯ ಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಲೆ ಮಹದೇಶ್ವರಬೆಟ್ಟ ಕ್ಷೇತ್ರಾಭಿವೃದ್ದಿ ಪ್ರಾಧಿಕಾರ ಈಗಾಗಲೇ ಸಿದ್ದತೆ ಕೈಗೊಂಡಿದ್ದು, ನಾಳೆ ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಹೆೆಲಿಕಾಪ್ಟರ್ನಲ್ಲಿ ಹೊರಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಟ್ಟದ ಹಳೆಯೂರಿನಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್ನಲ್ಲಿ ಬಂದಿಳಿಯಲಿದ್ದು. ದೇವಸ್ಥಾನದ ಮುಂಭಾಗವಿರುವ ಬಯಲು ರಂಗಮಂದಿರದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.
ಶ್ರೀಕ್ಷೇತ್ರದ ದೀಪದ ಗಿರಿವಡ್ಡಿನಲ್ಲಿ ಮಲೆ ಮಹದೇಶ್ವರ ಸ್ವಾಮಿಯ 100 ಅಡಿ ಎತ್ತರದ ವಿಗ್ರಹ ನಿರ್ಮಾಣಕ್ಕೆ ಘೋಷಣೆ ಮಾಡುವ ಮುಖ್ಯಮಂತ್ರಿಗಳು 2710 ಲಕ್ಷ ರೂ. ವೆಚ್ಚದಲ್ಲಿ ಮಲೆ ಮಹದೇಶ್ವರಬೆಟ್ಟ ಕ್ಷೇತ್ರದ ಸಮಗ್ರ ಒಳಚರಂಡಿ ಯೋಜನೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ 100 ಲಕ್ಷ ರೂ. ವೆಚ್ಚದಲ್ಲಿ ಶ್ರೀಕ್ಷೇತ್ರದ ಬಸ್ನಿಲ್ದಾಣದ ಆವರಣದಲ್ಲಿ 72 ಅಂಗಡಿ ಮಳಿಗೆಗಳ ನಿರ್ಮಾಣ, ಉಪಹಾರ ಮಂದಿರ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಶ ನೆರವೇರಿಸಲಿರುವರು.
56 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಶೂನ್ಯ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ 51 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಸತಿಗೃ ಹಗಳ ಬಟ್ಟೆಗಳನ್ನು ಯಂತ್ರಗಳಿಂದ ಶುಚಿಗೊಳಿಸುವ ಘಟಕಗಳನ್ನು ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.
ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ, ರೋಷನ್ಬೇಗ್, ರುದ್ರಪ್ಪ ಮಾನಪ್ಪ ಲಮಾಣಿ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೆಗೌಡ, ಸಂಸದ ಆರ್.ಧೃವನಾರಾಯಣ್, ಶಾಸಕರಾದ ಪಟ್ಟರಂಗಶೆಟ್ಟಿ, ಎಸ್.ಜಯಣ್ಣ, ಕೆ.ಟಿ.ಶ್ರೀಕಂಠೇಗೌಡ, ಸಂದೇಶ್ನಾಗರಾಜು, ಆರ್.ಧರ್ಮಸೇನಾ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
Discussion about this post