Read - < 1 minute
ಬೆಂಗಳೂರು, ಸೆ.8: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಾಳೆ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಪ್ರಯಕ್ತ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರಜೆ ಘೋಷಣೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಸರ್ಕಾರಿ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಮಾತ್ರವಲ್ಲದೇ, ನಾಳೆ ಸರ್ಕಾರಿ ಕಚೇರಿಗಳು ಇರುವುದಿಲ್ಲ. ಸರ್ಕಾರಿ ಬಸ್ ಸೇವೆ ಕೂಡಾ ಇರೋದಿಲ್ಲ ಎಂದಿದ್ದಾರೆ. ಅಲ್ಲದೆ ಬಂದ್ ವೇಳೆ ಶಾಂತಿ ಕಾಪಾಡುವಂತೆಯೂ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಬಂದ್ ಹಿನ್ನೆಲೆ ನಾಳೆ ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಬ್ಧವಾಗಲಿದೆ. ಈ ಮೂಲಕ ಬಂದ್ ಗೆ ರಾಜ್ಯ ಸರ್ಕಾರವೇ ಪರೋಕ್ಷ ಬೆಂಬಲ ನೀಡಿದೆ.
ಜನರು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದ ಸಿಎಂ ಕರ್ನಾಟಕ ಬಂದ್ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಹೊರರಾಜ್ಯಗಳಿಂದಲೂ ಪೊಲೀಸ್ ಪಡೆಗಳನ್ನು ಕರೆಸಿಕೊಳ್ಳಲಾಗುತ್ತಿದೆ. ಬಂದ್ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಬಾರದು ಎಂದು ಎಚ್ಚರಿಸಿದರು. ಅಲ್ಲದೆ ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬಂದ್ ವೇಳೆ ಸಾರ್ವಜನಿಕರು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾಗಿ ವಿನಂತಿ. ನಮಗಾದ ಅನ್ಯಾಯಕ್ಕೆ ನಮ್ಮದೇ ಆಸ್ತಿಪಾಸ್ತಿಗಳ ಹಾನಿ ಬೇಡ. ಬಂದ್ ಶಾಂತಿಯುತವಾಗಿರಲಿ ಎಂದು ಮನವಿ ಮಾಡಿದ್ದಾರೆ.
Discussion about this post