Read - 2 minutes
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕಾಗಿ ಇರುವ ನ್ಯಾಯಾಧಿಕರಣದಿಂದ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ. ಇದರಿಂದ ಮತ್ತೆ ಕರ್ನಾಟಕ ಪ್ರತಿನಿತ್ಯ ೧೫ ಸಾವಿರ ಕ್ಯೂಸೆಕ್ಸ್ ನೀರನ್ನು ೧೦ ದಿನಗಳ ಕಾಲ ಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ಕರ್ನಾಟಕದಲ್ಲಿ ಆತಂಕ, ತಲ್ಲಣ ಎದುರಾಗಿ ಹೋರಾಟ, ಬಂದ್ ನಡೆದಿದೆ. ಈ ಹಿನ್ನೆಲೆಯಲ್ಲಿ ವಿವಾದದ ಇತ್ಯರ್ಥಕ್ಕೆ ಪ್ರಧಾನಿ ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯತೆ ಮತ್ತೆ ಎದುರಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಕರ್ನಾಟಕದಲ್ಲಿನ ಮಳೆಯ ಅಭಾವ, ಜಲಾಶಯದ ಸ್ಥಿತಿಗತಿ, ಇಲ್ಲಿನ ಬೆಳೆ ಮತ್ತು ರೈತರಿಗೆ ಅವಶ್ಯವಿರುವ ನೀರಿನ ಪ್ರಮಾಣ ಇವೆಲ್ಲವನ್ನೂ ಪತ್ರದಲ್ಲಿ ವಿವರಿಸಿದ್ದಾರೆ. ನೀರು ಬಿಡಬೇಕೆಂಬ ಆದೇಶ ಬಂದು ನೀರು ಬಿಟ್ಟ ನಂತರ ಈ ಪತ್ರ ಬರೆಯುವ ಅವಶ್ಯಕತೆ ಇತ್ತೇ ಎನ್ನುವ ಪ್ರಶ್ನೆ ಒಂದೆಡೆಯಾದರೆ, ಇನ್ನೊಂದೆಡೆ, ಇದೇ ಕೆಲಸವನ್ನು ಎರಡು ದಿನಗಳ ಹಿಂದೆಯೇ ರಾಜ್ಯದಲ್ಲಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸಾಂಸದರನ್ನು ಸೇರಿಸಿಕೊಂಡು ಮಾಡಬಹುದಿತ್ತಲ್ಲ ಎನ್ನುವ ವಿಚಾರವೂ ನಮ್ಮೆದುರು ಇದೆ.
ಕಾವೇರಿ ನೀರು ಬಿಡುವ ವಿಚಾರ ಬಂದಾಗಲೆಲ್ಲ ಆವೇಶಭರಿತರಾಗಿ ಮಾತನಾಡುವ ನಮ್ಮ ಜನಪ್ರತಿನಿಧಿಗಳು ಹೋರಾಟಕ್ಕೆ ಮಾತ್ರ ಕಣಕ್ಕಿಳಿಯುವುದಿಲ್ಲ. ವೀರಾವೇಶದ ಹೇಳಿಕೆ ನೀಡಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಾರೆ. ಆದರೆ ಈ ವಿವಾದ ಸದಾ ಮುಂದುವರೆಯಬಾರದು ಎನ್ನುವುದಾದರೆ ಏನು ಮಾಡಬೇಕೆನ್ನುವ ಬಗ್ಗೆ ಸ್ಪಷ್ಟ ಕಲ್ಪನೆಗಳೇ ಅವರಲ್ಲಿಲ್ಲ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಕೇವಲ ತಮ್ಮ ಮತಬ್ಯಾಂಕ್ ರಕ್ಷಣೆಯ ರಾಜಕಾರಣದಲ್ಲೇ ಕಾಲಕಳೆಯುತ್ತಿರುವುದರಿಂದ ಈ ವಿವಾದ ಎದುರಾದಾಗ ಒಬ್ಬರನ್ನೊಬ್ಬರು ಟೀಕಿಸುತ್ತಲೇ ಕಾಲಕಳೆಯುತ್ತಾರೆ.
ಆದರೆ ಈ ಸಮಸ್ಯೆ ರಾಜಕೀಯಾತ್ಮಕವಾದುದಲ್ಲ. ರಾಜ್ಯದ ಹಿತೃದಷ್ಟಿಯಿಂದ ಮಾಡಬೇಕಾದ ಕೆಲಸ ಎನ್ನುವುದು ಅವರ ಗಮನದಲ್ಲಿಲ್ಲ. ಮಾಜಿ ಮುಖ್ಯಮಂತ್ರಿ ದೇವೇಗೌಡರು ಮಾತ್ರ ಕಾವೇರಿ ವಿಚಾರದಲ್ಲಿ ಸದಾ ಹೋರಾಟಕ್ಕೆ ಮುಂದಾದವರು. ಯಾರು ಏನೇ ಟೀಕಿಸಲಿ, ಈ ಸಂಬಂಧ ಅವರು ಮಣ್ಣಿನ ಮಗ ಹೌದು ಎನ್ನುವುದಕ್ಕೆ ತಾನು ಸಿಎಂ ಆದಾಗ ಮಾಡಿದ ತಂತ್ರಗಳನ್ನೇ ನಾವು ಗಮನಿಸಬಹುದು.
೧೯೯೫-೯೬ರ ಸಾಲಿನಲ್ಲಿ ಇಂತಹುದೇ ಸಮಸ್ಯೆ ಎದುರಾದಾಗ ದೇವೇಗೌಡರು ನೀರು ಬಿಡಲು ಸಿದ್ದರಾಗಿರಲಿಲ್ಲ. ಅಂದಿನ ಪ್ರಧಾನಿ ದಿ. ಪಿ.ವಿ. ನರಸಿಂಹರಾವ್ ಕರ್ನಾಟಕ ಸರ್ಕಾರದ ಕೋರಿಕೆಯ ಮೇರೆಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದ ತಣ್ಣಗಾಗಿರಿಸಿದ್ದರು. ನಂತರ ಯಾರೂ ಈ ಕೆಲಸಕ್ಕೆ ಮುಂದಾಗದೆ ಸುಪ್ರೀಂ ಆದೇಶದಂತೆ ನೀರು ಬಿಡುತ್ತಲೇ ಖುರ್ಚಿಯಲ್ಲಿ ಉಳಿದರು. ೯೫-೯೬ರಲ್ಲಿ ೩೦ ಟಿಎಂಸಿ ನೀರು ಬಿಡಲು ಸುಪ್ರೀಂ ಸೂಚಿಸಿತ್ತು. ಆದರೆ ದೇವೇಗೌಡರು ಇದಕ್ಕೆ ಸಮ್ಮತಿಸಿರಲಿಲ್ಲ. ಬದಲಾಗಿ ನ್ಯಾಯಾಧೀಕರಣಕ್ಕೆ ಹೋದರು. ಅಲ್ಲಿ ಅಹವಾಲು ಸಲ್ಲಿಸಿದರು. ಆಗ ನ್ಯಾಯಾಧಿಕರಣ ೧೧ ಟಿಎಂಸಿ ನೀರು ಬಿಡಲು ಸೂಚಿಸಿತು. ಅದಕ್ಕೂ ಕರ್ನಾಟಕ ಜಗ್ಗಲಿಲ್ಲ. ನೀರು ಬಿಡಲು ಸಾಧ್ಯವೇ ಇಲ್ಲ ಎಂದಿತ್ತು. ಆದರೆ ಸುಪ್ರೀಂ ಕೋರ್ಟಿಗೆ ಮಾತ್ರ ನ್ಯಾಯಾಧೀಕರಣ ತೀರ್ಪು ಪಾಲಿಸಬೇಕು ಎಂದಿತ್ತು. ಆಗ ಅಂದಿನ ಪ್ರಧಾನಿ ನರಸಿಂಹರಾವ್ ಮಧ್ಯಪ್ರವೇಶಿಸಿ ಕೇವಲ ೬ ಟಿಎಂಸಿ ನೀರು ಬಿಡುವಂತೆ ಸೂಚಿಸಿ ವಿವಾದಕ್ಕೆ ತಾತ್ಕಾಲಿಕ ವಿರಾಮ ಹಾಡಿದ್ದರು.
ಇದನ್ನು ಗಮನದಲ್ಲಿಟ್ಟುಕೊಂಡು ಈಗ ಕರ್ನಾಟಕ ಸಹ ಪ್ರಧಾನಿಗೆ ಪತ್ರ ಬರೆದಿದೆ. ಪತ್ರ ಬರೆದಿದ್ದು ವಿಳಂಬವಾಗಿದೆಯಾದರೂ ಪ್ರಧಾನಿ ಇದನ್ನು ಒಪ್ಪಿ ಸಭೆ ಕರೆಯುವ ವೇಳೆ ನೀರು ಹರಿದು ಮುಗಿಯಬಹುದು. ಇಂದಿನ ಪ್ರಧಾನಿ ನರೇಂದ್ರ ಮೋದಿ ಸಭೆ ಕರೆದು ವಿವಾದಕ್ಕೆ ಮತ್ತೆ ವಿರಾಮ ಹಾಕಬೇಕಿದೆ. ಇದನ್ನು ಕರ್ನಾಟಕದ ಎಂಪಿಗಳು ಸಿಎಂಗಿಂತ ಮುನ್ನ ಮಾಡಬಹುದಿತ್ತು. ಕೇಂದ್ರದ ಸಚಿವರು, ರಾಜ್ಯದ ಬಿಜೆಪಿ ಅಧ್ಯಕ್ಷರು ಪ್ರಭಾವಿಗಳಾಗಿದ್ದರಿಂದ ಈ ಸಂಬಂಧ ಮುನ್ನುಗ್ಗಬಹುದಿತ್ತು.
ಇದೇನೇ ಇರಲಿ, ಪ್ರಧಾನಿ ಮಧ್ಯಪ್ರವೇಶ ಮಾಡಬೇಕೆಂಬ ಕೂಗು ಈಗ ಮತ್ತೆ ಬಲವಾಗತೊಡಗಿದೆ. ಬಂದ್ ಕರೆಕೊಟ್ಟರೂ ಬೆರಳೆಣಿಕೆಯಷ್ಟು ರಾಜಕಾರಣಿಗಳೂ ಇದರಲ್ಲಿ ಸಕ್ರಿಯರಾಗಿ ಪಾಲ್ಗೊಂಡಿಲ್ಲ. ಎಲ್ಲ ಪಕ್ಷದ ಶಾಸಕರು, ಸಾಂಸದರು ಪಾಲ್ಗೊಂಡು ಕರ್ನಾಟಕದ ಪರ ನಿಲ್ಲಬೇಕಿತ್ತು. ರಾಜ್ಯದ ಮೂರೂ ಪಕ್ಷದ ರಾಜಕಾರಣಿಗಳು ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ನಮ್ಮಲ್ಲಿ ತಮಿಳುನಾಡಿನಂತೆ ನೆಲ, ಜಲ, ಭಾಷೆ ಮತ್ತು ಜನರ ಹಿತ ಕಾಯುವ ಪಕ್ಷಗಳಿಲ್ಲದಿರುವುದು ಇಷ್ಟೆಲ್ಲ ಹಿನ್ನಡೆಗೆ ಕಾರಣ. ಇನ್ನೊಂದೆಡೆ, ಕಲಾವಿದರು, ಬುದ್ಧಿಜೀವಿಗಳು, ಸಾಹಿತಿಗಳು ಸಹ ತಮಗೂ ಈ ಬಂದ್‌ಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ನವೆಂಬರ್‌ನಲ್ಲಿ ಮಾತ್ರ ಕನ್ನಡದ ಬಗ್ಗೆ ಮಾತನಾಡುವ ನಾವು ಉಳಿದ ತಿಂಗಳಲ್ಲಿ ಕನ್ನಡ ನೆಲ, ಜಲಕ್ಕೆ ಅನ್ಯಾಯವಾದರೂ ಸುಮ್ಮನಿರುತ್ತೇವೆ. ಕಾವೇರಿ ಕೇವಲ ರೈತರ ವಿಚಾರವಲ್ಲ. ಸಮಸ್ತ ಕರ್ನಾಟಕ ರಾಜ್ಯಕ್ಕೆ ಸೇರಿದ್ದು ಎನ್ನುವುದು ಎಲ್ಲರ ಅರಿವಿಗೆ ಬರಬೇಕಿದೆ.
Discussion about this post