ಇಸ್ಲಾಮಾಬಾದ್: ಸೆ:30: ಭಾರತ ದಾಳಿಯನ್ನು ಒಪ್ಪಲೂ ಆಗದ ಬಿಡಲೂ ಆಗದ ಬಿಸಿತುಪ್ಪ ಹಾಕಿಕೊಂಡ ಪರಿಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಚಿಂತನ-ಮಂಥನ ನಡೆದಿದೆ.
ಒಂದೆಡೆ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಸೇನೆ ಎಲ್ಲದಕ್ಕೂ ಸನ್ನದ್ಧವಾಗಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು. ಲಾಹೋರ್ ನಲ್ಲಿ ಗ್ಯಾರಿಸನ್ ಯುದ್ಧ ತರಬೇತಿ ಶಾಲೆಗೆ ಭೇಟಿ ನೀಡಿದ ಅವರು, ಸೇನಾ ಸಿದ್ಧತೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ ಎಂದರು.
ಇತ್ತ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಭಾರತ ಯಾವುದೇ ದಾಳಿ ನಡೆಸಿದರೂ ಎದುರಿಸಲು ಸಿದ್ಧ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ ಪ್ರಧಾನಿ ನವಾಜ್ ಷರೀಫ್ ಭಾರತದ ದಾಳಿ ಕುರಿತು ಚರ್ಚಿಸಲು ಸೋಮವಾರ ತುರ್ತು ಸಂಸತ್ ಅಧಿವೇಶನ ಕರೆದಿದ್ದಾರೆ.
ಈ ಅಧಿವೇಶನದಲ್ಲಿ ಸರ್ಕಾರ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಸಾರ್ಕ್ ಸಂಘಟನೆಯಲ್ಲಿಯೂ ಏಕಾಂಗಿಯಾಗಿರುವ ಪಾಕಿಸ್ತಾನಕ್ಕೆ ಪಕ್ಕದ ಇಸ್ಲಾಂ ರಾಷ್ಟ್ರವೇ ಆಗಿರುವ ಅಫ್ಘಾನಿಸ್ತಾನವೂ ಅಯ್ಯೋ ಪಾಪ ಎನ್ನಲಾಗದಂತಹ ಪರಿಸ್ಥಿತಿಯಲ್ಲಿದೆ. ಅಲ್ಲದೇ ಈಗಾಗಲೇ ಅಮೇರಿಕಾ , ಬ್ರಿಟನ್, ಚೀನಾ, ಫ್ರಾನ್ಸ್ ಮುಂತಾದ ಪ್ರಮುಖ ರಾಷ್ಟ್ರಗಳು ಸೇರಿದಂತೆ 22 ದೇಶಗಳ ಪ್ರಮುಖರಿಗೆ ಈ ಘಟನೆ ಬಗ್ಗೆ ವಿವರಣೆ ನೀಡಿರುವುದನ್ನು ಆ ದೇಶಗಳು ಬಹುತೇಕ ಒಪ್ಪಿಕೊಂಡಿವೆ. ಹೀಗಾಗಿ ಬಹುತೇಕ ದೇಶಗಳು ಮಾತುಕತೆ ಮೂಲಕ ಭಯೋತ್ಪಾದನೆ ನಿಗ್ರಹವನ್ನು ಮಾಡಬೇಕು ಎಂದೇ ಸಲಹೆ ನೀಡಿವೆಯಾದರೂ ಭಾರತದ ವಿರುದ್ಧ ಯಾರೂ ದನಿಯೆತ್ತಿಲ್ಲ ಇದು ಪಾಕಿಸ್ತಾನದ ಚಿಂತನೆ ದಿಕ್ಕೆಡುವಂತೆ ಮಾಡಿರುವುದು ಸುಳ್ಳಲ್ಲ.
Discussion about this post