Read - < 1 minute
ಬೆಂಗಳೂರು, ಅ.20: ಪೊಲೀಸ್ ಇಲಾಖೆಯಲ್ಲೇ ಅಶಿಸ್ತು ಘಟನೆಗಳು ಜರುಗುತ್ತವೆ, ಮುಂದೆ ಈ ರೀತಿ ಘಟನೆ ನಡೆದರೆ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ರಾಜಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿ ರಾಷ್ಟ್ರಪತಿ ಪದಕ ವಿಜೇತರಾದ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಗುಪ್ತದಳ ಇಲಾಖೆ ಬಲಯುತವಾಗಿದ್ದರೆ ಮುಂದಾಗುವ ಹಲವಾರು ಘಟನೆಗಳು, ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಇದಕ್ಕಾಗಿ ಗುಪ್ತದಳ ಬಲವರ್ಧನೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಪೊಲೀಸ್ ಗುಪ್ತದಳ ಬಲಯುತವಾಗಿದ್ದರೆ ಸಂಭಾವ್ಯ ಅಪರಾಧಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಗುಪ್ತದಳ ಬಲವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು,
ಕೇವಲ ಮಾಧ್ಯಮಗಳಲ್ಲಿ ಬರುವ ವರದಿಯನ್ನು ಆಧರಿಸಿ ಮಾಹಿತಿ ನೀಡುವುದು ಗುಪ್ತಚರದ ಕೆಲಸವಲ್ಲ. ಮುಂದಾಗುವುದನ್ನು ತಿಳಿಸಬೇಕು. ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡಬೇಕು ಎಂದು ಗರಂ ಆದರು.
ಅಪರಾಧ ಸಂಭವಿಸಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅಪರಾಧಗಳನ್ನೇ ನಿಯಂತ್ರಿಸುವುದು ಸೂಕ್ತ. ಗುಪ್ತಚರ ಇಲಾಖೆ ಬಲವರ್ಧನೆಯಾದರೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಣದ ಹಂಗು ತೊರೆದು ಕೆಲಸ ಮಾಡುವ ಪೊಲೀಸರನ್ನು ಸಮಾಜ ಗುರುತಿಸಲಿ, ಬಿಡಲಿ ತಮ್ಮ ಕರ್ತವ್ಯದಿಂದ ವಿಮುಖರಾಗಬಾರದು. ಸಮಾಜ ನಿಮ್ಮಿಂದ ಉತ್ತಮ ಸೇವೆ ನಿರೀಕ್ಷೆ ಮಾಡುತ್ತದೆ ಎಂದು ಹೇಳಿದರು.
ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಇತ್ಯರ್ಥ ಮಾಡಬೇಕು. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ, ಅಶಿಸ್ತನ್ನು ಸಹಿಸುವುದಿಲ್ಲ. ಇತ್ತೀಚಿಗೆ ಅಶಿಸ್ತು ತೋರಿದ ಕೆಲವು ಘಟನೆಗಳು ಜರುಗಿರುವುದು ವಿಷಾದಕರ ಎಂದು ಅವರು ತಿಳಿಸಿದರು.
ಇಲಾಖೆಯಲ್ಲಿ ಅಶಿಸ್ತು ಕಾಣಿಸಿದರೆ ನಿಮ್ಮ ಮೇಲಿನ ನಂಬಿಕೆ, ಗೌರವ ಕಡಿಮೆಯಾಗುತ್ತದೆ. ಪೊಲೀಸರಿಗೆ ಖಾಸಗಿ ಜೀವನ ಇಲ್ಲ. ಆದರೆ, ಅದು ಅನಿವಾರ್ಯ. ನಾವೇ ಒಪ್ಪಿ ಈ ಸೇವೆಗೆ ಬಂದಿರುವುದರಿಂದ ಇದರ ಬಗ್ಗೆ ಗೊಣಗುವ ಅಗತ್ಯವಿಲ್ಲ. ಪೊಲೀಸರ ಮೇಲೆ ಸದಾ ಒತ್ತಡವಿರುತ್ತದೆ. ಪೊಲೀಸರಿಗೆ ಶೌರ್ಯ ಅಗತ್ಯ. ಅವರು ಫಿಟ್ನೆಸ್ ಕಾಪಾಡಿಕೊಳ್ಳಬೇಕು. ಆಗ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ ಎಂದರು.
ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಸಂಭವಿಸಿರುವುದು ದುರದೃಷ್ಟಕರ ಎಂದು ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು. ಉತ್ತಮ ಸೇವೆ ಸಲ್ಲಿಸಬೇಕಾದರೆ ಕುಟುಂಬದವರ ಸಹಕಾರವೂ ಅಗತ್ಯ. ಅವರ ಸಹಕಾರ ಇಲ್ಲದಿದ್ದರೆ ಸಾಧನೆ ಮಾಡಲಾಗದು. ಪೊಲೀಸರ ಈ ಸಾಧನೆಯ ಪ್ರಶಸ್ತಿಯಲ್ಲಿ ಕುಟುಂಬದವರ ಪಾಲೂ ಇದೆ. ಹೀಗಾಗಿ ಮೊದಲು ನಾನು ನಿಮ್ಮ ಕುಟುಂಬದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಪೊಲೀಸರಿಗೆ ಹಳೆಯ ಕಾಲದ ತರಬೇತಿ ಬದಲಾಗಿದೆ. ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠರಾಗುವ ಬಗ್ಗೆಯೂ ತರಬೇತಿ ಅವಶ್ಯವಾಗಿದೆ ಎಂದರು.
ರಾಜ್ಯಪಾಲ ವಾಜುಬಾಯಿ ವಾಲಾ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
Discussion about this post