Read - < 1 minute
ಬೆಂಗಳೂರು, ಅ.14: ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳು ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಸಮವಸ್ರ್ತ ಸೈಕಲ್ ಮತ್ತು ಶೂ ಹಾಗೂ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ಚೂಡಿದಾರ್ ಕಡ್ಡಾಯ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಘೋಷಿಸಿದ್ದಾರೆ.
ಮುಖ್ಯಮಂತ್ರಿಗಳ ಜೊತೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈಕಲ್ ವಿತರಣೆಗಾಗಿಯೂ ಕೂಡ ಪೂರ್ವಬಾವಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು,ನವಂಬರ್ ಅಂತ್ಯದೊಳಗೆ ಟೆಂಡರ್ ಕರೆಯಲಾಗುವುದು, ಪಠ್ಯಕ್ರಮಕ್ಕೂ ನವಂಬರ್ ನಲ್ಲೇ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಈ ಮಧ್ಯೆ ಮುಂದಿನ ವರ್ಷ ವಿತರಣೆ ಮಾಡಬೇಕಿರುವ ಸಮವಸ್ತ್ರ, ಸೈಕಲ್ ಮತ್ತು ಶೂ ಖರೀದಿಗೆ ಈಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿಯವರು, ಪ್ರತಿ ವರ್ಷ ಜೂನ್ ಅಂತ್ಯದ ವೇಳೆಗಾದರೂ ಸೈಕಲ್ ಮತ್ತು ಶೂಗಳನ್ನು ವಿತರಿಸುವುದು ಸೂಕ್ತ. ಇದರಲ್ಲಿ ವಿಳಂಬಬೇಡ ಎಂದರು.
8, 9 ಮತ್ತು 10ನೇ ತರಗತಿಯ ಹೆಣ್ಣು ಮಕ್ಕಳಿಗೆ ಸಮವಸ್ತ್ರವಾಗಿ ಚೂಡಿದಾರ್ ನೀಡುವ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದರು.
2016-17ರಲ್ಲಿ ಹತ್ತು ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ, ಪ್ರಸ್ತಾವನೆಗೆ ಸಿಎಂ ಸಮ್ಮತಿ.
ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಸೂಚಿಸಿದರು.
ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಅತೀಕ್ ಮತ್ತು ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Discussion about this post