Read - 2 minutes
ಬೆಂಗಳೂರು: ಸೆ:26: ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಬ್ರಿಗೇಡ್ ಕಲಹಕ್ಕೆ ಬ್ರೇಕ್ ಹಾಕಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ)ರಾಮಲಾಲ್ ಅವರು ವರಿಷ್ಟರ ಸೂಚನೆಯಂತೆ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಅಕ್ಟೋಬರ್ 3 ಹಾಗೂ 4 ರಂದು ಬೆಳಗಾವಿಯಲ್ಲಿ ನಡೆಯಲಿರುವ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲಿರುವ ರಾಮಲಾಲ್ ತದ ನಂತರ ಉಭಯ ನಾಯಕರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದು ಅದೇ ಕಾಲಕ್ಕೆ ಬ್ರಿಗೇಡ್ ರಾಜಕೀಯದ ಕುರಿತು ಪಕ್ಷದ ಇತರ ನಾಯಕರ ಅಭಿಪ್ರಾಯ ಕೇಳಲಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.
ಇದಕ್ಕೂ ಮುನ್ನ ಸೆಪ್ಟೆಂಬರ್ 25 ರಂದು ಕೇರಳದ ಕ್ಯಾಲಿಕಟ್ ನಲ್ಲಿ ನಡೆದ ಬಿಜೆಪಿಯ ನ್ಯಾಷನಲ್ ಕೌನ್ಸಿಲ್ ಸಭೆಯ ನಂತರ ಪ್ರತ್ಯೇಕವಾಗಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ನಡುವೆ ಮಾತುಕತೆ ನಡೆಸಿದ ಅಮಿತ್ ಶಾ,ಇಬ್ಬರಿಂದಲೂ ಬ್ರಿಗೇಡ್ ಕುರಿತು ವಿವರಣೆ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಈಶ್ವರಪ್ಪ ಅವರು ಸ್ಥಾಪಿಸಲು ಹೊರಟಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಂದ ಯಾವ ರೀತಿ ಪಕ್ಷಕ್ಕೆ ಘಾಸಿಯಾಗುತ್ತದೆ ಎಂದು ತಮ್ಮದೇ ಕಾರಣಗಳನ್ನು ನೀಡಿದ್ದು,ಅದೇ ರೀತಿ ಈಶ್ವರಪ್ಪ ಕೂಡಾ,ಬ್ರಿಗೇಡ್ ಮೂಲಕ ರಾಜ್ಯದಲ್ಲಿ ಪಕ್ಷದ ಸಂಘಟನೆ ಹೇಗೆ ಬಲಗೊಳ್ಳುತ್ತದೆ ಮರಳಿ ಅಧಿಕಾರಕ್ಕೆ ಬರಲು ನೆರವಾಗುತ್ತದೆ ಎಂದು ವಿವರಿಸಿದ್ದಾರೆ.
ಯಡಿಯೂರಪ್ಪ ಅವರ ಪ್ರಕಾರ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲತ: ಈ ಹಿಂದೆ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಮತ್ತೀಗ ದಕ್ಷಿಣ ಭಾರತದ ಮಟ್ಟದಲ್ಲಿ ಸಂಘಟನೆಯ ಚಟುವಟಿಕೆ ನೋಡಿಕೊಳ್ಳುತ್ತಿರುವ ಆರೆಸ್ಸೆಸ್ ನಾಯಕರೊಬ್ಬರ ಕನಸಿನ ಕೂಸು.
ರಾಜ್ಯದಲ್ಲಿ ತಮ್ಮ ಆಟ ನಡೆಯುತ್ತಿಲ್ಲ ಎಂಬ ಕಾರಣಕ್ಕಾಗಿ ಅಸಮಾಧಾನಗೊಂಡ ಈ ನಾಯಕ ಇದೀಗ ಈಶ್ವರಪ್ಪ ಅವರ ಮೂಲಕ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ್ನು ಬಲಗೊಳಿಸಲು ಹೊರಟಿದ್ದು ಈ ಬ್ರಿಗೇಡ್ ಗೆ ನನ್ನನ್ನು ಟಾರ್ಗೆಟ್ ಮಾಡುವುದೇ ಮೂಲ ಗುರಿ ಎಂದು ಯಡಿಯೂರಪ್ಪ ದೂರಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಪಕ್ಷದ ನಿರ್ದಿಷ್ಟ ಅಭ್ಯರ್ಥಿಗಳನ್ನು ಸೋಲಿಸುವುದು,ಆ ಮೂಲಕ ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರದಂತೆ ಮಾಡುವುದೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನ ಮುಖ್ಯ ಗುರಿ ಎಂಬುದು ಯಡಿಯೂರಪ್ಪ ಅವರ ದೂರು ಎಂದು ಮೂಲಗಳು ವಿವರಿಸಿವೆ.
ಹಿಂದುಳಿದ ಹಾಗೂ ದಲಿತ ಸಮುದಾಯದ ಮತಗಳು ಪಕ್ಷದ ಅಭ್ಯರ್ಥಿಗಳಿಗೆ ಗಣನೀಯ ಪ್ರಮಾಣದಲ್ಲಿ ಬರದಂತೆ ನೋಡಿಕೊಂಡರೆ ಬಿಜೆಪಿಯ ಹಲವು ಅಭ್ಯರ್ಥಿಗಳು ಸೋಲುತ್ತಾರೆ. ಹೀಗಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಾವು ಮರಳಿ ಅಧಿಕಾರಕ್ಕೆ ಬರದಂತೆ ತಡೆ ಒಡ್ಡಲಿದೆ ಎಂಬ ಅಸಮಾಧಾನವನ್ನು ವರಿಷ್ಟರಿಗೆ ಯಡಿಯೂರಪ್ಪ ಅವರು ವಿವರಿಸಿದ್ದಾರೆ.
ಈ ಮಧ್ಯೆ ಈಶ್ವರಪ್ಪ ಕೂಡಾ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮೂಲಕ ರಾಜ್ಯದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬರಲು ಕಾರಣವಾಗುವ ಅಂಶಗಳ ಕುರಿತು ವಿವರಣೆ ನೀಡಿದ್ದು,ಮೂಲತ: ಹಿಂದ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿ ಬಿಜೆಪಿಗೆ ಬರುತ್ತಲೇ ಇಲ್ಲ ಎಂದಿದ್ದಾರೆ.
ಈ ಸಮುದಾಯದ ಮತಗಳನ್ನು ಸಿದ್ಧರಾಮಯ್ಯ ಗಣನೀಯ ಪ್ರಮಾಣದಲ್ಲಿ ಇದುವರೆಗೆ ಸೆಳೆದಿದ್ದರೂ ಈಗ ಆ ಸಮುದಾಯದ ಭ್ರಮ ನಿರಸನಕ್ಕೆ ಕಾರಣರಾಗಿದ್ದಾರೆ.ಹೀಗಾಗಿ ಭ್ರಮ ನಿರಸನಗೊಂಡ ಹಿಂದ ಸಮುದಾಯಗಳ ಪಾಲಿಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆಶಾದಾಯಕ ವೇದಿಕೆ ಎಂದಿದ್ದಾರೆ.
ಬಿಜೆಪಿ ಈಗ ಪಡೆಯುವ ಮತಗಳ ಜತೆ ಹಿಂದ ಸಮುದಾಯದ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಪಡೆದರೆ ನಿಶ್ಚಿತವಾಗಿ ನಾವು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಯಡಿಯೂರಪ್ಪ ಅವರು ಸಿಎಂ ಆಗುವ ವಾತಾವರಣ ನಿರ್ಮಾಣವಾಗುತ್ತದೆ.
ಹೀಗಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆಯ ಕುರಿತು ಯಾರೇ ಅಪಸ್ವರ ಎತ್ತಿದರೂ ಅದನ್ನು ನಂಬಬೇಡಿ.ನೀವೇ ರಾಜ್ಯದಿಂದ ಮಾಹಿತಿ ತರಿಸಿಕೊಳ್ಳಿ ಎಂದು ಈಶ್ವರಪ್ಪ ವರಿಷ್ಟರಿಗೆ ಮನವಿ ಮಾಡಿಕೊಂಡಿದ್ದಾರೆ.
ಹೀಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ)ರಾಮಲಾಲ್ ಅವರಿಗೆ ಬ್ರಿಗೇಡ್ ಕಲಹಕ್ಕೆ ಬ್ರೇಕ್ ಹಾಕಿ ಬರಲು ಸೂಚಿಸಿದ್ದು ಇದರ ಬೆನ್ನಲ್ಲೇ ಅಕ್ಟೋಬರ್ 3 ಹಾಗೂ 4 ರಂದು ರಾಮಲಾಲ್ ಬೆಳಗಾವಿಗೆ ಬಂದು ರಾಜ್ಯ ಬಿಜೆಪಿಯ ಪ್ರಮುಖ ನಾಯಕರ ಜತೆ ಚರ್ಚಿಸಲಿದ್ದಾರೆ ಎಂದು ಇವೇ ಮೂಲಗಳು ಹೇಳಿವೆ.
Discussion about this post