ನವದೆಹಲಿ, ಅ.14: ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮಿಸಿದ್ದು, ಭಾರತ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ಕೋರಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಸ್ವಾಗತ ಸಂದೇಶ ರವಾನಿಸಿರುವ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷರನ್ನು ಸ್ವಾಗತಿಸುವುದನ್ನು ಭಾರತ ಗೌರವ ಎಂದು ಭಾವಿಸುತ್ತದೆ. ಈ ಭೇಟಿಯಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಪುಟಿನ್ ಅವರ ಭೇಟಿ ಭಾರತ ಮತ್ತು ರಷ್ಯಾ ದೇಶಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದಲ್ಲದೇ ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಪಾಲುದಾರಿಕೆ ವಿಸ್ತರಣೆಗೆ ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಬ್ರೆಜಿಲ್ ಅಧ್ಯಕ್ಷ ಮೈಕೆಲ್ ಟೆಮರ್ ಕೂಡ ಆಗಮಿಸಿದ್ದು, ಅವರಿಗೂ ಸ್ವಾಗತ ಕೋರಿರುವ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆಗೆ ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ. ಟೆಮರ್ ಅವರ ಭೇಟಿ ಉಭಯ ದೇಶಗಳ ಸಹಕಾರದ ಕ್ಷೇತ್ರಗಳ ವಿಸ್ತರಣೆಗೆ ಅವಕಾಶ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.
ಗೋವಾ ಬ್ರಿಕ್ಸ್ ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕೂಡ ಆಗಮಿಸುತ್ತಿದ್ದು, ಚೀನಾದೊಂದಿಗಿನ ದ್ವಿಪಕ್ಷೀಯ ಮಾತುಕತೆಗೆ ತಾವು ಉತ್ಸುಕರಾಗಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಹಿಂದೆ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಚಿಗೆ ಸೇರಿಸಲು ಚೀನಾ ಸತತ ಎರಡನೆಯ ಬಾರಿಗೆ ಅಡ್ಡಗಾಲು ಹಾಕುತ್ತಿದ್ದು, ಈ ಹಿನ್ನಲೆಯಲ್ಲಿ ಮೋದಿ-ಜಿನ್ ಪಿಂಗ್ ಭೇಟಿ ಕುತೂಹಲ ಕೆರಳಿಸಿದೆ.
ಇನ್ನು ಬ್ರಿಕ್ಸ್ ಶೃಂಗಸಭೆ ನಡುವೆಯೇ ಪ್ರಧಾನಿ ಮೋದಿ ಬಿಮ್ ಸ್ಟೆಕ್ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡುತ್ತಿದ್ದು, ಸಭೆಯಲ್ಲಿ ಬಾಂಗ್ಲಾದೇಶ, ಭೂತಾನ್, ಮಯನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಪ್ರತಿನಿಧಿಗಳನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಜಾಗತಿಕ ಸಮಸ್ಯೆಗಳನ್ನು ಬೇಧಿಸುವ ನಿಟ್ಟಿನಲ್ಲಿ ಸಾಮಾನ್ಯ ಪರಿಹಾರ ಕಂಡುಕೊಳ್ಳಲು ವಿಶ್ವ ಸಮುದಾಯದ ಪ್ರಮುಖ ರಾಷ್ಟ್ರಗಳ ಭೇಟಿ ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಾಳೆ ಒಪ್ಪಂದಕ್ಕೆ ಸಹಿ
ಭಾರತ ಭೇಟಿಯಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಭಾರತದೊಂದಿಗೆ 5 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಮೂಲಗಳ ಪ್ರಕಾರ ಭಾರಿ ಪ್ರಮಾಣದ ಈ ಬೃಹತ್ ಒಪ್ಪಂದದಲ್ಲಿ ಪ್ರಮುಖವಾಗಿ ರಷ್ಯಾದ ಅತ್ಯಾಧುನಿಕ ಹೆಲಿಕಾಪ್ಟರ್‌ಗಳನ್ನು ಭಾರತದಲ್ಲಿ ನಿರ್ಮಿಸುವ ಒಪ್ಪಂದ ಹಾಗೂ ಭಾರತೀಯ ಸೇನೆ ಆಧುನೀಕರಣಕ್ಕೆ ನೆರವಾಗಬಲ್ಲ ರಷ್ಯಾದ ಕೆಲ ಪ್ರಮುಖ ಕ್ಷಿಪಣಿಗಳನ್ನು ಪೂರೈಕೆ ಮಾಡುವ ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು ಸಹಿಹಾಕಲಿದ್ದಾರೆ. ಭಾರತ ಮತ್ತು ರಷ್ಯಾ ದೇಶಗಳ ನಡುವೆ ಏರ್ಪಡುತ್ತಿರುವ ನೂತನ ಒಪ್ಪಂದಗಳಿಂದಾಗಿ ರಷ್ಯಾ ಸೇನೆಯ ಪ್ರಬಲ ಯುದ್ಧ ಹೆಲಿಕಾಪ್ಟರ್ ಎಂದು ಹೇಳಲಾಗುತ್ತಿರುವ ಕಮಾವ್ ೨೨೬ಟಿ ಹೆಲಿಕಾಪ್ಟರ್ ಭಾರತದಲ್ಲೇ ತಯಾರಾಗಲಿದೆ. ಮೂಲಗಳ ಪ್ರಕಾರ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಸುಮಾರು ೨೦೦ ಹೆಲಿಕಾರ್ಪ್ಟ ಗಳನ್ನು ಭಾರತದಲ್ಲಿ ತಯಾರಿಸುವ ಒಪ್ಪಂದಕ್ಕೆ ರಷ್ಯಾ ಸಹಿ ಹಾಕಲಿದೆ. ಇದಲ್ಲದೆ ಅತ್ಯಾಧುನಿಕ ಎಸ್-೪೦೦ ಟ್ರಂಪ್ ಕ್ಷಿಪಣಿ ಒಪ್ಪಂದಕ್ಕೂ ರಷ್ಯಾ ಭಾರತದೊಂದಿಗೆ ಸಹಿ ಹಾಕಲಿದೆ. ಸುಮಾರು ೩೯ ಸಾವಿರ ಕೋಟಿ ರು. ವೆಚ್ಚದಲ್ಲಿ ೫ ಎಸ್-೪೦೦ ಟ್ರಂಪ್ ಕ್ಷಿಪಣಿಗಳನ್ನು ಭಾರತ ರಷ್ಯಾದಿಂದ ಖರೀದಿಸಲಿದೆ.
Discussion about this post