Read - < 1 minute
ನವದೆಹಲಿ, ಸೆ.7: ಪಾಕಿಸ್ಥಾನದಲ್ಲಿರುವ ಭಾರತದ ಹೈ ಕಮಿಷನರ್ ಗೌತಮ್ ಬಂಬವಾಲೆ ಅವರು ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮವನ್ನು ಕರಾಚಿ ಚೇಂಬರ್ ಆಫ್ ಕಾಮರ್ಸ್ ಕೊನೆಗಳಿಗೆಯಲ್ಲಿ ರದ್ದುಗೊಳಿಸಿದ ಅಸಭ್ಯ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತ ಈ ಸಂಬಂಧ ಪಾಕಿಸ್ಥಾನ ಹೈಕಮಿಷನರ್ ಅಬ್ದುಲ್ ಬಸಿತ್ ಮೂಲಕ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.
ಭಾರತೀಯ ರಾಯಭಾರಿಗೆ ಅಗೌರವ ತೋರಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ, ಭಾರತದಲ್ಲಿರುವ ಪಾಕಿಸ್ತಾನ ಹೈ ಕಮಿಷನರ್ ಗೆ ಸಮನ್ಸ್ ನೀಡಿದೆ.
ಕಾಶ್ಮೀರ ವಿಷಯದಲ್ಲಿ ಪಾಕಿಸ್ಥಾನದ ಹಸ್ತಕ್ಷೇಪವನ್ನು ವಿರೋಧಿಸಿ ಕಳೆದ ಸೋಮವಾರ ಭಾರತದ ಹೈ ಕಮಿಷನರ್ ಗೌತಮ್ ಬಂಬವಾಲೆ ಅವರು ಹೇಳಿಕೆ ನೀಡಿದ್ದರು. ಇದನ್ನೇ ನೆಪವಾಗಿಸಿಕೊಂಡ ಕರಾಚಿ ಚೇಂಬರ್ ಆಫ್ ಕಾಮರ್ಸ್ ಮಂಗಳವಾರ ಗೌತಮ್ ಬಂಬವಾಲೆ ಅವರು ಪಾಲ್ಗೊಳ್ಳಬೇಕಿದ್ದ ಕಾರ್ಯಕ್ರಮವನ್ನು ಕೊನೆಯ ಗಳಿಗೆಯಲ್ಲಿ ರದ್ದುಗೊಳಿಸಿ, ಮುಖಭಂಗವಾಗುವಂತೆ ಮಾಡಿತ್ತು.
ಗೌತಮ್ ಬಂಬವಾಲೆ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ಕರಾಚಿಗೆ ಅವರ ಮೊದಲ ಭೇಟಿಯಾಗಿತ್ತು. ಕಾರ್ಯಕ್ರಮಕ್ಕೆ ಪಾಲ್ಗೊಳ್ಳುವಂತೆ ವಾರಗಳ ಹಿಂದಷ್ಟೇ ಅವರಿಗೆ ಆಹ್ವಾನ ಬಂದಿತ್ತು. ಆಹ್ವಾನವನ್ನು ಗೌತಮ್ ಬಂಬವಾಲೆ ಸ್ವೀಕರಿಸಿದ್ದರು. ಅದರೆ ಕಾರ್ಯಕ್ರಮಕ್ಕೆ ಕೇವಲ ಅರ್ಧತಾಸು ಮೊದಲಷ್ಟೇ ಅದನ್ನು ರದ್ದುಗೊಳಿಸಿದ ಬಗ್ಗೆ ಅವರಿಗೆ ಹೇಳಲಾಯಿತು ಎಂದು ಸುದ್ದಿಸಂಸ್ಥೆಗೆ ಮೂಲಗಳು ತಿಳಿಸಿವೆ. ಕೊನೆ ಕ್ಷಣದಲ್ಲಿ ಕಾರ್ಯಕ್ರಮ ರದ್ದುಗೊಳಿಸಿದ್ದರ ಬಗ್ಗೆ ಸಂಘಟಕರು ಯಾವುದೇ ಕಾರಣಗಳನ್ನು ತಿಳಿಸಿಲ್ಲ.
Discussion about this post