Read - < 1 minute
ಮುಂಬೈ, ಸೆ.23: ವಾಣಿಜ್ಯ ನಗರಿ ಮುಂಬೈನಲ್ಲಿ ನಿನ್ನೆ ಶಸ್ತ್ರಾಸ್ತ್ರ ಒಯ್ಯುತ್ತಿದ್ದರು ಎಂದು ಶಂಕಿಸಲಾಗಿರುವ ಉಗ್ರರಿಗಾಗಿ ವ್ಯಾಪಕ ಶೋಧ ನಡೆಯುತ್ತಿದೆ. ಈ ನಡುವೆಯೇ ಮಕ್ಕಳು ನೀಡಿದ ಮಾಹಿತಿಯನ್ನು ಆಧರಿಸಿ ಶಂಕಿತ ಉಗ್ರನ ರೇಖಾ ಚಿತ್ರವನ್ನು ಇಂದು ಬಿಡುಗಡೆ ಮಾಡಲಾಗಿದೆ.
ಶಂಕಿತರನ್ನು ಪ್ರತ್ಯಕ್ಷವಾಗಿ ಕಂಡ ಶಾಲಾ ಮಕ್ಕಳು ನೀಡಿದ ಮಾಹಿತಿಯನ್ನು ಆಧರಿಸಿ ರೇಖಾ ಚಿತ್ರ ಬಿಡಿಸಲಾಗಿದ್ದು, ಮುಂಬೈನ ಎಲ್ಲಾ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿದೆ. ಮುಂಬೈ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇದೇ ವೇಳೆ ಮುಂಬೈ ಕರಾವಳಿ ತೀರದಲ್ಲಿರುವ ನೌಕಾ ಶಸ್ತ್ರಾಸ್ತ್ರ ಸಂಗ್ರಹಾಗಾರ ಐಎನ್‌ಎಸ್ ಅಭಿಮನ್ಯು ಘಟಕಕ್ಕೆ ಒದಗಿಸಲಾಗಿರುವ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಉಗ್ರ ನಿಗ್ರಹ ದಳ ಹಾಗೂ ಇತರ ಭದ್ರತಾ ದಳಗಳೊಂದಿಗೆ ಭಾರತೀಯ ನೌಕಾ ಪಡೆಯನ್ನು ಗಣನೀಯ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನಗರದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ವ್ಯಕ್ತಿಗಳು ಸಂಚರಿಸುತ್ತಿರುವ ಬಗ್ಗೆ ಈವರೆಗೂ ಗುಪ್ತಚರ ಇಲಾಖೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಶಾಲಾ ಮಕ್ಕಳು ನೀಡಿರುವ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿವುದಿಲ್ಲ. ಹೀಗಾಗಿ ಭದ್ರತೆಯನ್ನು ಬಿಗಿಗೊಳಿಸಲು ಆದೇಶಿಸಲಾಗಿದೆ. ೨೦೦೮ರ ಮುಂಬೈ ದಾಳಿ ಹಿನ್ನೆಲೆಯಲ್ಲಿ ನಾವು ಸಾಕಷ್ಟು ಪಾಠ ಕಲಿತಿದ್ದೇವೆ ಎಂದು ತಿಳಿಸಿದ್ದಾರೆ.
ಇದಲ್ಲದೆ ಸಾಗರ ಭದ್ರತಾ ಪಡೆಯ ಮಾರ್ಕೋಸ್ ಕಮಾಂಡೋಗಳನ್ನು ಉರಾನ್ ನೌಕಾ ನೆಲೆಗೆ ರವಾನಿಸಲಾಗಿದ್ದು, ಮುಂಬಯಿ ಪೊಲೀಸರು ನಗರದಾದ್ಯಂತ ನಾಕಾಬಂದಿ ಜಾರಿಗೊಳಿಸಿ ಪರಿಸ್ಥಿತಿಯನ್ನು ಕಟ್ಟೆಚ್ಚರದಿಂದ ಅವಲೋಕಿಸುತ್ತಿದ್ದಾರೆ. ಕೊಲಾಬಾ ಪೊಲೀಸ್ ದಳ ಕೂಡ ತನ್ನ ಉನ್ನತ ಅಧಿಕಾರಿಗಳನ್ನು ವಿಚಕ್ಷಣಾ ಕಾರ್ಯಕ್ಕೆ ನಿಯೋಜಿಸಿದೆ. ಇವರಿಗೆ ಎನ್‌ಎಸ್‌ಜಿ ಕಮಾಂಡೋಗಳು ಕೂಡ ಇಂದು ಸಾಥ್ ನೀಡಲಿದ್ದು, ವ್ಯಾಪಕ ಶೋಧ ಕಾರ್ಯಾಚರಣೆಯಲ್ಲಿ ತೊಡಗಲಿದ್ದಾರೆ.
Discussion about this post