ಮಾಸ್ಕೋ, ಅ.13: ಭಾರತ ಹಾಗೂ ಪಾಕಿಸ್ಥಾನ ನಡುವಿನ ವಿವಾದ ತಾರಕಕ್ಕೇರಿರುವಂತೆಯೇ, ಭಯೋತ್ಪಾದಕರ ಹಾವಳಿಯೂ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಉಗ್ರವಾದದ ವಿರುದ್ಧ ಜಾಗತಿಕ ಮಟ್ಟದಲ್ಲಿ ಒಟ್ಟಾಗಿ ಹೋರಾಡುವ ಸನ್ನಿವೇಶ ಸೃಷ್ಠಿಯಾಗುತ್ತಿರುವಂತೆಯೇ ರಷ್ಯಾ ಮೂರನೆಯ ಮಹಾಯುದ್ಧಕ್ಕೆ ಸಿದ್ಧವಾಗುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಪ್ರಪಂಚದಾದ್ಯಂತ ನೆಲೆಸಿರುವ ತನ್ನ ನಾಗರಿಕರು ಆದಷ್ಟು ಶೀಘ್ರ ಸ್ವದೇಶಕ್ಕೆ ಮರಳುವಂತೆ ಸೂಚಿಸಿದ್ದು, ಈ ಕುರಿತಂತೆ ಬ್ರಿಟನ್‌ನ ಪ್ರಮುಖ ಟ್ಯಾಬ್ ಲಾಯ್ಡ ಪತ್ರಿಕೆ ದ ಸನ್ ವರದಿ ಮಾಡಿದೆ.
ಮೂರನೆಯ ಮಹಾಯುದ್ಧದ ಸಾಧ್ಯತೆಗಳಿಗೆ ಕಾರಣವಾಗುವ ರೀತಿಯ ಉದ್ವಿಗ್ನತೆ, ಬಿಕ್ಟಟ್ಟು ಕಂಡು ಬರುತ್ತಿರುವ ಕಾರಣ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಯುದ್ಧ ಸನ್ನದ್ಧತೆಯ ಆದೇಶವನ್ನು ನೀಡಿರುವುದಾಗಿ ಪತ್ರಿಕೆ ಹೇಳಿದೆ.
ಸಂಪೂರ್ಣ ಅಣು ಸಮರದ ಸಂಭಾವ್ಯತೆಯ ಹಿನ್ನೆಲೆಯಲ್ಲಿ ರಷ್ಯಾ ತನ್ನ ನಾಲ್ಕು ಕೋಟಿ ಪ್ರಜೆಗಳಿಗೆ ರಕ್ಷಣಾ ಕವಾಯತನ್ನು ನಡೆಸಿರುವ ಕೆಲವೇ ದಿನಗಳ ತರುವಾಯ ರಷ್ಯಾ, ಮಹಾಯುದ್ಧದ ಸನ್ನದ್ಧತೆಯಲ್ಲಿ ತೊಡಗಿರುವಂತೆ ಕಂಡು ಬರುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ.
ರಷ್ಯಾ ಸರ್ಕಾರ ವಿದೇಶಗಳಲ್ಲಿರುವ ತನ್ನ ಎಲ್ಲ ಅಧಿಕಾರಿಗಳಿಗೆ, ತಮ್ಮ ಮಕ್ಕಳು ಹಾಗೂ ಸಂಬಂಧಿಕರೊಂದಿಗೆ, ದೇಶಕ್ಕೆ ಮರಳುವಂತೆ ಆದೇಶಿಸಿರುವುದಾಗಿ ವರದಿ ತಿಳಿಸಿದೆ. ಈ ಸಂಬಂಧ ರಷ್ಯಾದ ರಾಜಕಾರಣಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳಿಗೆ ಖುದ್ದು ಪುಟಿನ್ ಅವರೇ ಸೂಚನೆ ನೀಡಿದ್ದಾರೆಂದು ವರದಿ ತಿಳಿಸಿದೆ.
ಸಿರಿಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪುಟಿನ್ ಅವರು ದಿಢೀರ್ ಆಗಿ ತಮ್ಮ ಫ್ರಾನ್ಸ್ ಭೇಟಿಯನ್ನು ರದ್ದು ಪಡಿಸಿರುವುದು ಕೂಡ ಹಲವು ಊಹಾಪೋಹಗಳಿಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.
ಶೀತಲ ಸಮರದ ಬಳಿಕ ಈಗ ರಷ್ಯಾ ಮತ್ತು ಅಮೆರಿಕಾ ಸಂಬಂಧಗಳು ಅತ್ಯಂತ ಕೆಳ ಮಟ್ಟವನ್ನು ತಲುಪಿವೆ. ಸಿರಿಯ ಮಾತುಕತೆಯಿಂದ ದಿಢೀರನೆ ಹಿಂದೆ ಸರಿದಿರುವ ಅಮರಿಕ, ರಷ್ಯಾ ದಾಳಿಗಳನ್ನು ಹ್ಯಾಕ್ ಮಾಡುತ್ತಿದೆ ಎಂದು ಕಟುವಾಗಿ ಆರೋಪಿಸಿದೆ.
ಗೂಢಾಚಾರಿಕೆ ಆರೋಪ: ಇಬ್ಬರ ಬಂಧನ
ಅಹ್ಮದಾಬಾದ್: ಭಾರತ-ಪಾಕ್ ನಡುವಿನ ಉದ್ವಿಗ್ನತೆ ಪರಾಕಾಷ್ಠೆಯನ್ನು ತಲುಪಿರುವ ನಡುವೆಯೇ ಇದೀಗ ಗುಜರಾತ್ ಉಗ್ರ ನಿಗ್ರಹ ದಳದ ಸಿಬಂದಿಗಳು ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದರೆನ್ನಲಾದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಪಾಕ್ ಮಹಿಳೆಯೊಬ್ಬಳು ಈ ಇಬ್ಬರನ್ನು ಹನಿ ಟ್ರ್ಯಾಪ್ ಮಾಡಿರುವುದಾಗಿ ಶಂಕಿಸಲಾಗಿದೆ. ಗುಜರಾತ್‌ನ ಕಚ್ ಜಿಲ್ಲೆ ಪಾಕ್‌ನೊಂದಿಗೆ ಗಡಿಯನ್ನು ಹೊಂದಿದೆ.
ಕಚ್ ಜಿಲ್ಲೆಯ ಖಾವಡಾ ಗ್ರಾಮದ ಇಬ್ಬರು ನಿವಾಸಿಗಳು ಪಾಕ್ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸುತ್ತಿರುವರೆಂಬ ಶಂಕೆಯಲ್ಲಿ ಕಳೆದೊಂದು ವರ್ಷದಿಂದ ಅವರ ಮೇಲೆ ತೀವ್ರ ನಿಗಾ ಇಡಲಾಗಿತ್ತು. ಗುಜರಾತ್ ಎಟಿಎಸ್‌ನವರು ಇಂದು ಆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದರು ಎಂದು ಗುರುತು ತಿಳಿಸಬಯಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಬಂಧಿತ ವ್ಯಕ್ತಿಗಳ ಮನೆಯನ್ನು ಶೋಧಿಸಿದ ಎಟಿಎಸ್ ಸಿಬಂದಿಗಳು ಪಾಕಿಸ್ಥಾನದ ಸಿಮ್ ಕಾರ್ಡ್ ಹಾಗೂ ಮೊಬೈಲನ್ನು ಒಂದನ್ನು ವಶಪಡಿಸಿಕೊಂಡಿದ್ದಾರೆ.
Discussion about this post