ಶಿವಮೊಗ್ಗ, ಸೆ.22: ರಾಯಣ್ಣ ಬ್ರಿಗೇಡ್ ಆಶಯವೊಂದೇ, ಅದು ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವುದು. ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿಸುವುದು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮತ್ತೊಮ್ಮೆ ಘೋಷಿಸಿದರು.
ಅ.1ರಂದು ಹಾವೇರಿಯಲ್ಲಿ ನಡೆಯಲಿರುವ ಸಂಗೊಳ್ಳಿರಾಯಣ್ಣ ಬ್ರಿಗೇಡ್‌ನ ಸಮಾವೇಶದ ಸಿದ್ದತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಯಣ್ಣ ಬ್ರಿಗೇಡ್ ಮೂಲಕ ಬಿಜೆಪಿಯನ್ನು ಬೆಂಬಲಿಸಬೇಕು. ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತಿರುವ ಅನೇಕರು ಕಾಂಗ್ರೆಸ್ ಬಿಟ್ಟು ಅನೇಕರು ಬ್ರಿಗೇಡ್‌ಗೆ ಸೇರಿದ್ದಾರೆ. ಹಲವು ಮಠಾಧೀಶರು, ನಿವೃತ್ತ ಅಧಿಕಾರಿಗಳು ನೇರವಾಗಿ ಬಿಜೆಪಿಯನ್ನು ಸೇರದಿರುವವರು ಬ್ರಿಗೇಡ್ ಮೂಲಕ ಬಿಜೆಪಿಯನ್ನು ಕಟ್ಟಲಿದ್ದಾರೆ. ಇದರಿಂದ ಬಿಜೆಪಿ ಮತ್ತಷ್ಟು ಗಟ್ಟಿಯಾಗುತ್ತದೆ. ಇದನ್ನು ನಾವು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ.
ಕಾಂಗ್ರೆಸ್ ಸರ್ಕಾರ ದಲಿತರಿಗೆ ಯಾವ ನ್ಯಾಯವನ್ನು ನೀಡಿಲ್ಲ ಕೇವಲ ಅವರನ್ನು ತಮ್ಮ ವೋಟ್‌ಬ್ಯಾಂಕ್‌ನ್ನಾಗಿ ಮಾಡಿಕೊಂಡಿದೆಯೇ ವಿನಾ ಯಾವ ಕಲ್ಯಾಣವನ್ನು ಮಾಡಿಲ್ಲ. ಅವರ ಅಭಿವೃದ್ಧಿಯೂ ಆಗಿಲ್ಲ, ದಲಿತರಿಗೆ ಕುಡಿಯಲು ನೀರು ಸಹಾ ಸಿಗದ ಪರಿಸ್ಥಿತಿ ಬಂದಿದೆ. ಅವರ ಸ್ಥಿತಿ ಹೀನಾಯವಾಗುತ್ತಿದೆ. ಸಿದ್ದರಾಮಯ್ಯನವರು ಚುನಾವಣೆ ಬರುತ್ತಿದ್ದಂತೆ ನಾವಿರುವುದು ದಲಿತರ, ಬಡವರ, ಹಿಂದುಳಿದ ವರ್ಗದವರ ಉದ್ದಾರಕ್ಕೆ ಅವರಿಗೆ ನ್ಯಾಯ ದೊರಕಿಸಿಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಅವರ ಮೂರುವರೆ ವರ್ಷದ ಆಡಳಿತದಲ್ಲಿ ಕೇವಲ ಇವರಿಗೆ ಅನ್ಯಾಯವಾಗಿದೆ ಹೊರತು ಯಾವುದೇ ಸೌಲಭ್ಯವಾಗಲಿ ಸಹಾಯವಾಗಲಿ ಸಿಗುತ್ತಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ರಾಯಣ್ಣ ಬ್ರಿಗೇಡ್ ಹುಟ್ಟಿರುವುದೇ ದಲಿತರ, ಹಿಂದುಳಿದವರ ಮತ್ತು ಬಡವರ ಏಳಿಗೆಗಾಗಿ. ಅವರಿಗೆ ಸಿಗಬೇಕಾದ ನ್ಯಾಯ, ಸೌಲಭ್ಯಗಳನ್ನು ದೊರಕಿಸುವುದಕ್ಕಾಗಿ. ದಲಿತರ ಹಿಂದುಳಿದವರ ಮತ್ತು ಬಡವರ ಅಭಿವೃದ್ಧಿ ಮಾಡುವುದೇ ಬಿಜೆಪಿಯ ಗುರಿ. ದಲಿತ, ಹಿಂದುಳಿದ ಮತ್ತು ಬಡವರಿಗೆ ಅನ್ಯಾಯವಾಗಲು ಎಂದಿಗೂ ಬಿಡುವುದಿಲ್ಲ. ಯಾವಾಗ ಕಾಂಗ್ರೆಸ್ ಸರ್ಕಾರ ದಲಿತರನ್ನ ಕಡೆಗಾಣಿಸಿತೋ ಆಗ ನಾವು ಬ್ರಿಗೇಡ್ ಮೂಲಕ ದಲಿತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ. ಆ ಮೂಲಕ ಬಿಜೆಪಿಯನ್ನು ಬೆಳೆಸುತ್ತಿದ್ಧೇವೆ ಎಂದರು.
ರಾಯಣ್ಣ ಬ್ರಿಗೇಡ್‌ನ ಪ್ರಮುಖರಾದ ವಿರೂಪಾಕ್ಷಪ್ಪ, ಹುಲ್ತಿಕೊಪ್ಪ ಶ್ರೀಧರ್, ವಿಶ್ರಾಂತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ, ವೆಂಕಟೇಶ ಮೂರ್ತಿ, ನೀಲಮೇಗನಾ, ಕೊಟ್ರೇಸ್, ಸೋಮಶೇಖರ್, ಹೊಳಲೂರು ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಇ. ಕಾಂತೇಶ್, ವೆಂಕ್ಯಾನಾಯ್ಕ ಸೇರಿದಂತೆ ಹಲವರಿದ್ದರು.
ಈಶ್ವರಪ್ಪ ಹೇಳಿದ್ದು…
*ನಾನು ಎಂದಿಗೂ ಜಾತಿವಾದಿಯಲ್ಲ, ಹಿಂದುತ್ವದ ಪರ
*ಕಾಂಗ್ರೆಸ್‌ನಿಂದ ದಲಿತರಿಗೆ ನ್ಯಾಯ ದೊರೆತಿಲ್ಲ
*ದಲಿತವರ್ಗ ಕಾಂಗ್ರೆಸ್ ಪಾಲಿಗೆ ವೋಟ್‌ಬ್ಯಾಂಕ್
*ನಮ್ಮ ಗುರಿ ದಲಿತೋದ್ಧಾರ, ಬಿಜೆಪಿಗೆ ಬೆಂಬಲ
*ಹಾವೇರಿ ಸಮಾವೇಶಕ್ಕೆ ಬಿಎಸ್‌ವೈ ಬರುತ್ತಾರೆ
*ಬ್ರಿಗೇಡ್ ಸ್ಥಾಪನೆ ಹಿಂದೆ ರಾಜಕೀಯ ಹಿತಾಸಕ್ತಿಯಿಲ್ಲ
ನಮ್ಮ ಮುಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ. ಬ್ರಿಗೇಡ್ ಮೂಲಕ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು. ಹಾವೇರಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ತಮ್ಮ ಜೊತೆಗೆ ತಮ್ಮ ತಂಡವನ್ನು ಕರೆದುತರಬೇಕು. ೫೦ ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಆ ಮೂಲಕ ದಲಿತರ, ಹಿಂದುಳಿದವರ ಏಳಿಗೆಗಾಗಿ ನಾವು ದುಡಿಯೋಣ. ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದವರ ಮತ್ತು ದಲಿತ ವರ್ಗಗಳ ಉದ್ದಾರಕ್ಕೆ ಪ್ರಥಮ ಆದ್ಯತೆ. ಹಿಂದುಳಿದವರ, ದಲಿತರ, ಬಡವರ ಶ್ರೇಯೋಭೀವೃದ್ಧಿಗೆ, ಅತಿ ಹೆಚ್ಚು ಹಣ ಬಜೆಟ್‌ನಲ್ಲಿ ಮೀಸಲಿಡಲಾಗುವುದು.
– ಕೆ.ಎಸ್. ಈಶ್ವರಪ್ಪ
ಗಮನ ಸೆಳೆದ ಬೈಕ್ ರ‌್ಯಾಲಿ
ಕಾರ್ಯಕ್ರಮಕ್ಕೂ ಮುನ್ನಾ ಸರ್ಕ್ಯೂಟ್ ಹೌಸ್‌ನಿಂದ ಕಾರ್ಯಕ್ರಮ ಸ್ಥಳ ಕುವೆಂಪು ರಂಗಮಂದಿರದವರೆಗೂ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು. ನೂರಾರು ಕಾರ್ಯಕರ್ತರು ರ‌್ಯಾಲಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದರಲ್ಲಿ ಬಿಜೆಪಿ ಕಾರ್ಯಕರ್ತರು, ಅದರಲ್ಲೂ ವಿಶೇಷವಾಗಿ ಮಹಿಳಾ ಕಾರ್ಯಕರ್ತರು ಅತಿ ಹೆಚ್ಚು ಪಾಲ್ಗೊಂಡಿದ್ದು ಕಂಡುಬಂದಿತು.
ಸಂಗೊಳ್ಳಿ ರಾಯಣ್ಣ ಭಾವಚಿತ್ರದ ಸಹಿತ ಈ ರ‌್ಯಾಲಿ ನಡೆಯಿತು. ಹೊಳಲೂರು ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಈ. ಕಾಂತೇಶ್ ರ‌್ಯಾಲಿಯ ನೇತೃತ್ವವಹಿಸಿ ಯುವಕರ ಉತ್ಸಾಹ ಇಮ್ಮಡಿಗೊಳಿಸುತ್ತಿದ್ದರು.
ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ನಿಂತುಕೊಂಡು ರ‌್ಯಾಲಿಯನ್ನು ಕಣ್ತುಂಬಿಕೊಂಡರು.
ಅತಿ ಹೆಚ್ಚು ಮಹಿಳೆಯರು ಭಾಗಿ
ಬಿಜೆಪಿ ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತೆಯರು ಅತಿ ಹೆಚ್ಚು ಮಂದಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಮಟ್ಟದ ವಿವಿಧ ಪ್ರಮುಖರು, ಕಾರ್ಯಕರ್ತರ ಉಪಸ್ಥಿತಿ ಕಂಡುಬಂದಿತು. ಕುವೆಂಪು ರಂಗಮಂದಿರದ ತುಂಬಿ ತುಳುಕುತ್ತಿತ್ತು. ರಂಗಮಂದಿರದಲ್ಲಿ ಇರುವ ಆಸನಗಳು ಸಾಲದೇ, ಕಾರ್ಯಕರ್ತರು ನಿಂತುಕೊಡೇ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಯುವಕ, ಯುವತಿಯರು ಗಮನವಿಟ್ಟು ಆಲಿಸುತ್ತಾ, ಮುಖಂಡರ ಮಾತುಗಳಿಗೆ ಹರ್ಷೋದ್ಘಾರ, ಕೇಕೆಯ ಪ್ರತಿಕ್ರಿಯೆ ನೀಡುತ್ತಿದ್ದರು.
ಹಿಂದುಳಿದ ವರ್ಗಗಳನ್ನು ಸಂಘಟಿಸಿ, ಅಭಿವೃದ್ಧಿ ಕಾರ್ಯಕ್ರಮ ರೂಪಿಸಿದವರು ಬಂಗಾರಪ್ಪ. ಅವರ ನಂತರ ಈಶ್ವರಪ್ಪ ಈ ವಿಚಾರದಲ್ಲಿ ಟೊಂಕ ಕಟ್ಟಿ ನಿಂತಿದ್ದಾರೆ. ಹಾವೇರಿ ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು 200 ಬಸ್‌ನಲ್ಲಿ ಕಾರ್ಯಕರ್ತರು ತೆರಳಲಿದ್ದಾರೆ.
– ಆರ್. ಶ್ರೀಧರ್ ಹುಲ್ತಿಕೊಪ್ಪ
ಬ್ರಿಗೇಡ್ ಜಿಲ್ಲಾ ಸಂಚಾಲಕ
ಬ್ರಿಗೇಡ್ ಕಾರ್ಯಕ್ರಮಕ್ಕೆ ಯಾರೂ ಹೋಗಬಾರದು ಎಂದು ಕೆಲವರು ಹೇಳುತ್ತಿದ್ದಾರೆ. ತಾಕೀತು ಮಾಡುತ್ತಿದ್ದಾರೆ. ಹಾಗೆ ಹೇಳುವವರಿಗೆ ಈಗಾಗಲೇ ನಮ್ಮ ಸಂಘಟನೆಯ ಬಗ್ಗೆ ಭಯ ಆರಂಭವಾದಂತಿದೆ. ಬಿಜೆಪಿ ಬಲವರ್ಧನೆಯೊಂದೇ ನಮ್ಮ ಗುರಿ. ಬಿಗ್ರೇಡ್‌ಗೆ ಬೆಂಬಲಿಸಿ, ಗುರುತಿಸಿಕೊಳ್ಳಲು ಭಯಪಡುವ ಅಗತ್ಯವಿಲ್ಲ.
– ವಿರೂಪಾಕ್ಷಪ್ಪ
ಬ್ರಿಗೇಡ್ ರಾಜ್ಯಾಧ್ಯಕ್ಷ
ಯಡಿಯೂರಪ್ಪ ಹಾಗೂ ರಾಘವೇಂದ್ರ ಬ್ರಿಗೇಡ್ ಕಾರ್ಯಕ್ರಮಕ್ಕೆ ತೆರಳಬೇಡ ಎಂದು ನನ್ನನ್ನು ವಿಮುಖಗೊಳಿಸಲು ಯತ್ನಿಸಿದರು. ಅವರಿಗೆ ಬ್ರಿಗೇಡ್ ಉದ್ದೇಶ ಬಿಜೆಪಿ ಬೆಂಬಲ ಹಾಗೂ ತಮ್ಮನ್ನು ಮುಖ್ಯಮಂತ್ರಿ ಮಾಡುವುದು ಎಂದು ತಿಳಿಸಿ, ಇಲ್ಲಿಗೆ ಬಂದಿದ್ದೇನೆ.
– ಈಸೂರು ಬಸವರಾಜ್
ಬ್ರಿಗೇಡ್ ಜಿಲ್ಲಾ ಸಂಚಾಲಕ
ಪಾಲ್ಗೊಂಡಿದ್ದ ಪ್ರಮುಖರು
ಬ್ರಿಗೇಡ್ ರಾಜ್ಯ ಸಂಚಾಲಕ ವಿರೂಪಾಕ್ಷಪ್ಪ, ವಿಶ್ರಾಂತ ಐಎಎಸ್ ಅಧಿಕಾರಿ ಪುಟ್ಟಸ್ವಾಮಿ, ಬೆಂಗಳೂರು ಮಾಜಿ ಮಹಾಪೌರ ವೆಂಕಟೇಶ ಮೂರ್ತಿ, ನೇಕಾರ ಸಮಾಜದ ರಾಜ್ಯ ಪ್ರಮುಖ ಸೋಮಶೇಖರ್, ಸವಿತಾ ಸಮಾಜದ ರಾಜ್ಯ ಮುಖಂಡ ತ್ಯಾಗರಾಜ್, ಮಡಿವಾಳ ಸಮಾಜದ ರಾಜ್ಯ ನಾಯಕ ಎಂಜೀರಪ್ಪ, ಉಪ್ಪಾರ ಸಮಾಜದ ರಾಜ್ಯ ಮುಖಂಡ ಸೋಮಶೇಖರ್, ಹೊಳಲೂರು ಜಿಲ್ಲಾಪಂಚಾಯ್ತಿ ಸದಸ್ಯ ಕೆ.ಈ. ಕಾಂತೇಶ್, ವೆಂಕ್ಯಾನಾಯ್ಕ, ಬ್ರಿಗೇಡ್ ಜಿಲ್ಲಾ ಸಂಚಾಲಕ ಆರ್. ಶ್ರೀಧರ್ ಹುಲ್ತಿಕೊಪ್ಪ , ಈಸೂರು ಬಸವರಾಜ್ ಪ್ರಮುಖರಾದ ಎಸ್. ಜ್ಞಾನೇಶ್ವರ್, ಕೃಷ್ಣಪ್ಪ, ಮೋಹನ್ ರೆಡ್ಡಿ, ಸುರೇಖಾ ಮುರಳೀಧರ್, ರೇಖಾ ಪ್ರವೀಣ್ ಇನ್ನಿತರರು.
Discussion about this post