ಶಿವಮೊಗ್ಗ, ಸೆ.8: ಮಲೆನಾಡಿನಲ್ಲಿ ಮಳೆ ಕಣ್ಮರೆಯಾಗಿದ್ದು, ಬಿಸಿಲು ಬೀಳುತ್ತಿದೆ. ಆಕಾಶದಲ್ಲಿ ಕಪ್ಪು ಮಳೆ ಮೋಡಗಳು ದಟ್ಟೈಸಿದ್ದರೂ ಧಾರಾಕಾರ ವರ್ಷಧಾರೆ ಕಣ್ಮರೆಯಾಗಿದೆ. ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಮಳೆ ಕೊರತೆಯ ನೇರ ಎಫೆಕ್ಟ್ ಬತ್ತ ಬೆಳೆಗಾರರ ಮೇಲೆ ಬಿದ್ದಿದೆ. ಅನ್ನದಾತರ ಮೊಗದಲ್ಲಿ ಆತಂಕದ ಕರಿಛಾಯೆ ಆವರಿಸುವಂತೆ ಮಾಡಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಳೆಯ ಅಂಕಿಅಂಶದ ವಿವರಗಳ ಪ್ರಕಾರ, ಬುಧವಾರ ಬೆಳಿಗ್ಗೆ ೮.೩೦ ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಬಿದ್ದ ಮಳೆಯ ಒಟ್ಟಾರೆ ಸರಾಸರಿ ಪ್ರಮಾಣ ಕೇವಲ ೧.೫೧ ಮಿಲಿ ಮೀಟರ್ (ಮಿಮೀ) ಮಾತ್ರವಾಗಿದೆ!
ಶಿವಮೊಗ್ಗದಲ್ಲಿ ೦.೦೦ ವಿ.ಮೀ, ಭದ್ರಾವತಿಯಲ್ಲಿ ೧.೪೦ ಮಿಮೀ, ತೀರ್ಥಹಳ್ಳಿಯಲ್ಲಿ ೬.೪೦ ಮಿಮೀ, ಸಾಗರದಲ್ಲಿ ೧.೬೦ ಮಿಮೀ, ಶಿಕಾರಿಪುರದಲ್ಲಿ ೦.೦೦ ಮಿಮೀ, ಸೊರಬದಲ್ಲಿ ೦.೨೦ ಮಿಮೀ ಹಾಗೂ ಹೊಸನಗರ ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಕೇವಲ ೧ ಮಿಮೀ ಮಾತ್ರವಾಗಿದೆ.
ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿಯೂ ಮಳೆಯ ಪ್ರಮಾಣ ಸಂಪೂರ್ಣ ಇಳಿಕೆಯಾಗಿದೆ. ಧಾರಾಕಾರ ಮಳೆಗೆ ಸಾಕ್ಷಿಯಾಗುವ ಘಟ್ಟ ಪ್ರದೇಶಗಳಾದ ಮಾಣಿಯಲ್ಲಿ ೭ ಮಿಮೀ, ಹುಲಿಕಲ್ಲುವಿನಲ್ಲಿ ೯ ಮಿಮೀ, ಚಕ್ರಾದಲ್ಲಿ ೭ ಮಿಮೀ ಹಾಗೂ ಸಾವೇಹಕ್ಲುವಿನಲ್ಲಿ ೭ ಮಿಮೀ ವರ್ಷಧಾರೆಯಾಗಿದೆ.
ಡ್ಯಾಂ ವಿವರ: ಜಲಾನಯನ ವ್ಯಾಪ್ತಿಯಲ್ಲಿ ವರ್ಷಧಾರೆಯ ಅಬ್ಬರ ಕಡಿಮೆಯಾಗಿರುವುದರಿಂದ ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂನ ಒಳಹರಿವು ಸಂಪೂರ್ಣ ಕುಸಿದಿದೆ. ಬುಧವಾರ ಬೆಳಿಗ್ಗೆಯ ಮಾಹಿತಿಯಂತೆ ಡ್ಯಾಂನ ಒಳಹರಿವು ೨೬೪೦ ಕ್ಯೂಸೆಕ್‌ಗೆ ಇಳಿಕೆಯಾಗಿದೆ. ಹೊರ ಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಡ್ಯಾಂನ ನೀರಿನ ಮಟ್ಟ ೧೭೯೪.೩೦ (ಗರಿಷ್ಠ ಮಟ್ಟ : ೧೮೧೯) ಅಡಿಯಿದೆ. ಡ್ಯಾಂ ವ್ಯಾಪ್ತಿಯಲ್ಲಿ ೯.೨೦ ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ ೧೭೮೭.೧೫ ಅಡಿ ನೀರು ಸಂಗ್ರಹವಾಗಿತ್ತು.
ಶಿವಮೊಗ್ಗ – ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯೆಂದೇ ಕರೆಯಲ್ಪಡುವ ಭದ್ರಾ ಜಲಾಶಯದ ಒಳಹರಿವು ೩೪೯೦ ಕ್ಯೂಸೆಕ್ ಇದೆ. ೨೬೨೨ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂನಲ್ಲಿ ೧೫೮.೩೦ (ಗರಿಷ್ಠ ಮಟ್ಟ : ೧೮೬) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ ೧೬೮.೭೦ ಅಡಿಯಿತ್ತು.
ತುಂಗಾ ಡ್ಯಾಂ ಈಗಾಗಲೇ ಗರಿಷ್ಠ ಮಟ್ಟವಾದ ೫೮೮.೨೪ ಅಡಿ ತಲುಪಿದೆ. ಪ್ರಸ್ತುತ ಡ್ಯಾಂಗೆ ೪೬೬೧ ಕ್ಯೂಸೆಕ್ ಒಳಹರಿವಿದ್ದು, ೨೬೦೦ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಮಾಣಿ ಡ್ಯಾಂನ ನೀರಿನ ಮಟ್ಟ ೫೮೫.೪೨ (ಗರಿಷ್ಠ ಮಟ್ಟ : ೫೯೪.೩೬), ಚಕ್ರ ಡ್ಯಾಂನ ನೀರಿನ ಮಟ್ಟ ೫೭೨.೮೪ (ಗರಿಷ್ಠ ಮಟ್ಟ: ೫೭೯.೧೨) ಹಾಗೂ ಸಾವೇಹಕ್ಲು ಡ್ಯಾಂನ ನೀರಿನ ಮಟ್ಟ ೫೭೬ಜ.೫೦ (ಗರಿಷ್ಠ ಮಟ್ಟ : ೫೮೨.೦೦) ಅಡಿಯಿದೆ.
ಆತಂಕ: ಮಳೆ ಕೊರತೆಯು ಜಿಲ್ಲೆಯ ರೈತರನ್ನು ಆತಂಕಿತರನ್ನಾಗಿ ಮಾಡಿದೆ. ಈಗಾಗಲೇ ಜಿಲ್ಲೆಯ ವಿವಿಧೆಡೆ ಬಿತ್ತನೆ ಮಾಡಲಾಗಿರುವ ಮೆಕ್ಕೆಜೋಳವು ತೆನೆ ಬಿಡಲಾರಂಭಿಸಿದ್ದು, ಹದ ಮಳೆ ಬೇಕಾಗಿದೆ. ವರ್ಷಧಾರೆಯ ಕೊರತೆಯಿಂದ ರೋಗ ಆವರಿಸುವ, ಇಳುವರೆ ಕಡಿಮೆಯಾಗುವ ಆತಂಕ ರೈತರದ್ದಾಗಿದೆ. ಇನ್ನೊಂದೆಡೆ ಬತ್ತ ಬೆಳೆಗಾರರು ಕೂಡ ಮಳೆ ಕೊರತೆಯಿಂದ ತತ್ತರವಾಗುವಂತಾಗಿದೆ.
Discussion about this post