ನಾಗರಿಕತೆಯ ಹಾದಿಯಲ್ಲಿ ಉತ್ತಮವಾದ ಜೀವನ ಸಾಗಿಸಲು ಮಾನವ ಹಲವಾರು ಆವಿಷ್ಕಾರಗಳನ್ನು ಸಂಶೋಧಿಸುತ್ತಲೇ ಇರುತ್ತಾನೆ. ಇದೇ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹತ್ತೊಂಬತ್ತನೆಯ ಶತಮಾನದಿಂದ ಈಚೆಗೆ ಆಚ್ಚರಿ ಮೂಡಿಸುವಷ್ಟು ಅನ್ವೇಷಣೆ ಮಾಡಲಾಗಿದೆ. ಶಿರದಿಂದ ಪಾದಗಳವರೆಗೂ ವೈದ್ಯಕೀಯ ವಿಭಾಗಗಳು ವಿಭಾಗಿಸುತ್ತಲ್ಲೇ ಇವೆ. ಜಗತ್ತಿನ ಬೆಳವವಣಿಗೆ ಹಾಗೂ ನಾಗರಿಕತೆಗೆ ಪ್ರಭಾವ ಬೀರುವುದು ವ್ಯಕ್ತಿಯ ಮಾನಸಿಕ ಆರೋಗ್ಯ. ಕಳೆದ ಐವತ್ತು ವರ್ಷಗಳಿಂದ ಮಾನಸಿಕ ಆರೋಗ್ಯದ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಪ್ರಯೋಗಾತ್ಮಕ ಚಿಕಿತ್ಸೆ ನಡೆಯುತ್ತಲೇ ಇವೆ.
ಶೀತ ಆದಾಗ ಏನಾದ್ರು ತಡ್ಕೊಬಹುದು, ಜ್ವರ ಬಂದ್ರೆ ಬೆಚ್ಚಗೆ ಮಲಗಬಹುದು. ಆದ್ರೆ ಕೆಮ್ಮು ಬಂದ್ರೆ ಆಗಲ್ಲಪ್ಪಾ, ಕೈ ಮುರಿದರೇ ಹೇಗಾದರೂ ಬದುಕಬಹುದು ಕಾಲ್ಲಿಲ್ಲ ಅಂದ್ರೆ ಕಷ್ಟ ಕಂಡ್ರಿ ಎಂದು ಸಾಮಾನ್ಯ ಜನಗಳು ಮಾತಾಡುವುದನ್ನು ಕೆಳಿರುತ್ತೇವೆ. ವಯಸ್ಸಿನಲ್ಲಿ ಸ್ವಲ್ಪ ಹಿರಿಯನೊಬ್ಬ, ದೇಹದ ಎಲ್ಲ ಭಾಗಗಳು ಮುಖ್ಯ. ಒಂದಿಲ್ಲ ಅಂದ್ರೂ ಕಷ್ಟ ಕಣ್ರಯ್ಯ ಎಂದು ವಿಷಯಕ್ಕೆ ಮಂಗಳ ಹಾಡುತ್ತಾನೆ.
ದೇಹದ ಪ್ರತಿ ಭಾಗಗಳು ಎಷ್ಟು ಮುಖ್ಯವೋ ಅದಕ್ಕಿಂತಲೂ ತುಸು ಹೆಚ್ಚು ಅವಶ್ಯ ಹಾಗೂ ಅನಿವಾರ್ಯವಾದುದು ಮಾನಸಿಕ ಆರೋಗ್ಯ. ಇಡೀ ದೇಹ ಸುಸ್ಥಿತಿಯಲ್ಲಿರುಲು ದೈನಂದಿನ ಆಗು-ಹೋಗುಗಳ ಒಡನಾಡಿ ಮಾನಸಿಕ ಸ್ಥಿತಿ. ಸದೃಢ ಆರೋಗ್ಯ ಅಂದರೆ ದೈಹಿಕವಾಗಿ ಪೋಷಿಸಿಸುವುದಷ್ಟೇ ಅಲ್ಲ ನಾವು ವಾಸಿಸುವ ಜನ ಸಮುದಾಯದ ರೀತಿನೀತಿಗಳು ಪ್ರಭಾವ ರೂಪಿಸುವ ನಡವಳಿಕೆ ನಿರ್ಧರಿಸುತ್ತವೆ.
ಈ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು. ಮೊದಲ ಭಾರಿಗೆ ವಿಶ್ವ ಮಾನಸಿಕ ಆರೋಗ್ಯ ಸಂಸ್ಥೆ ೧೯೯೨ ರಲ್ಲಿ ವಿಶ್ವ ಆರೋಗ್ಯ ದಿನಾಚರಣೆಯನ್ನು ಪ್ರತಿ ಅಕ್ಟೋಬರ್ ೧೦ ರಂದು ಆಚರಿಸಲು ನಿರ್ಧರಿಸಿ, ಚಾಲನೆ ನೀಡಿತು. ೨೦೧೬ ರ ಘೋಷ ವಾಕ್ಯ ಎಲ್ಲರಿಂದಲೂ ಪ್ರಥಮ ಚಿಕಿತ್ಸೆ ಮಾನಸಿಕ ಆರೋಗ್ಯಕ್ಕಾಗಿ (mental health first aid for all) ಎನ್ನುವುದಾಗಿದೆ. ಭಾರತದಂತಹ ದೇಶದಲ್ಲಿ ಮಾತ್ರ ಮಾನಸಿಕ ವೈಕಲ್ಯಗಳು ಅತಿಹೆಚ್ಚು ಕಾಡುತ್ತಿಲ್ಲ. ಆದರೆ, ವಿಶ್ವದಲ್ಲೆಡೆ ಗಂಭೀರ ಮಾನಸಿಕ ಅಸ್ವಸ್ಥತೆಯಿಂದ ಬಳಲುವವರು ಕಂಡು ಬರುತ್ತಾರೆ. ಮನುಷ್ಯ ದೇಹದ ಭಾಗಗಳಿಗೆ ಬರುವ ಕಾಯಿಲೆಗಳಿಗೆ ಔಷಧವನ್ನು ಕಂಡುಹಿಡಿದಿರುವ ಹಂತ ತಲುಪುತ್ತಿರುವ ಈ ಘಟ್ಟದಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಸಿದಂತೆ ಸಂಶೋಧಿಸುವ ವೇಗ ಕಡಿಮೆ ಎಂದೇ ಹೇಳಬಹುದು. ಲಭ್ಯವಿರುವ ಚಿಕಿತ್ಸಾ ವಿಧಾನಗಳು ಅವಶ್ಯವಿರುವ ಅಸ್ವಸ್ಥರಿಗೆ ತಲುಪುವಲ್ಲಿ ವಿಫಲವಾಗಿರುವುದು ಸ್ಪಷ್ಟ.
ಭಾರತದಂತಹ ದೇಶದಲ್ಲಿ ದೇಹಕ್ಕೆ ಬರುವ ಕಾಯಿಲೆಯಷ್ಟೆ ಮಾನಸಿಕ ವೈಕಲ್ಯವೂ ಸಹಜವಾದದ್ದು ಎನ್ನುವ ಗುಣಾತ್ಮಕ ಮನೋಭಾವನೆ ಬೆಳೆಯಬೇಕಿದೆ. ಇನ್ನೂ ಕೆಲವು ಕಡೆ ಸ್ಕಿಜೋಫ್ರೀನಿಯಾದಂತಹ ಗಂಭೀರ ಅಸ್ವಸ್ಥತೆ ಕಂಡುಬಂದಾಗ ಮೌಢ್ಯಗಳಿಗೆ ಬಲಿಯಾಗಿ ಮಾಟ-ಮಂತ್ರ ಎಂದೆಲ್ಲ ಕಾಯಿಲೆ ತೀವ್ರತೆ ಹೆಚ್ಚಾಗುವಂತೆ ವರ್ತಿಸುತ್ತಾರೆ ಎನ್ನುವುದು ವಿಷಾಧನೀಯ.
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶ ವಾಸಿಗಳಿಗೆ ಮಾತ್ರ ಮಾನಸಿಕ ಒತ್ತಡ ಇದೆ ಎನ್ನುವ ಪಿಡುಗು ಗ್ರಾಮೀಣರ ಬದುಕಿಗೂ ಆವರಿಸಿದೆ. ಮಕ್ಕಳಿಂದ ವೃದ್ಧರವರೆಗೆ ಆಂತಕ, ಭಯ, ಕಲಿಕೆಯಲ್ಲಿ ಹಿನ್ನಡೆ, ತಳಮಳ, ಖಿನ್ನತೆ ಇವೇ ಇತ್ಯಾದಿ ಪೀಡಿತರಲ್ಲಿ ಮಾನಸಿಕ ವೈಕಲ್ಯವನ್ನುಂಟು ಮಾಡುತ್ತದೆ.
ಸ್ವಸ್ಥ್ಯ ಸಮಾಜವನ್ನು ನಿರ್ಮಾಣವಾಗಬೇಕಾದರೆ, ದೈಹಿಕ ಆರೋಗ್ಯಕ್ಕಿಂತಲೂ ಮಾನಸಿಕ ಆರೋಗ್ಯ ಹಾಗೂ ಮಾನಸಿಕ ಸ್ವಾಸ್ಥ್ಯ ಮುಖ್ಯವಾದುದು. ಹೀಗಾಗಿ, ಮುಖ್ಯವಾಗಿ ಇಂತಹ ರೋಗಿ ಹಾಗೂ ಆತನ ಕುಟುಂಬದವರು ಒಡನಾಟ ಸಮಾಜದಿಂದ ವಿಮುಖವಾಗದಂತೆ ನೋಡಿಕೊಳ್ಳಬೇಕು. ಸರ್ಕಾರಗಳು ಆರೋಗ್ಯಕ್ಕೆಂದು ಮೀಸಲಿಡುವಷ್ಟು ಮೊತ್ತವನ್ನು ಮಾನಸಿಕ ಸ್ವಾಸ್ಥ್ಯ ಕಾಡುವುದಕ್ಕಾಗಿ ವಿನಿಯೋಗಿಸಬೇಕು. ಪ್ರತಿ ಹಳ್ಳಿಗಳಲ್ಲಿ ಮಾನಸಿಕ ಸದೃಢತೆಯನ್ನು ಬೆಳೆಸುವ ಕಾರ್ಯ ನಡೆಯಬೇಕಿದೆ.
ಅಪಘಾತದಿಂದ ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದರ ಜೊತೆಗೆ ಮಾನಸಿಕವಾಗಿ ಸದೃಡರನ್ನಾಗಿಸುವುದು ಅತಿ ಮುಖ್ಯವಾಗಿದೆ. ಸರ್ಕಾರಗಳು ಎನ್‌ಜಿಓ, ಪ್ರಬುದ್ಧರು ಸಾಮಾಜಿಕ ಕಾಳಜಿವುಳ್ಳ ಸಂಸ್ಥೆಗಳು ಜನ ಸಾಮಾನ್ಯರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯವನ್ನು ವೃದ್ಧಿಸುವ ಹಾಗೂ ಆಮೂಲಕ ಸ್ವಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಈಗ ಆಚರಿಸಲಾಗುತ್ತಿರುವ ವಿಶ್ವ ಮಾನಸಿಕ ಆರೋಗ್ಯ ಸಪ್ತಾಹಕ್ಕೆ ಎಲ್ಲರೂ ಕೈಜೋಡಿಸಬೇಕಾದ ಅಗತ್ಯವಿದೆ.
—–>
ಲೇಖಕರು: ಯು.ಜೆ. ನಿರಂಜನ ಮೂರ್ತಿ, ಶಿವಮೊಗ್ಗ
Discussion about this post