Read - 2 minutes
ಶಿವಮೊಗ್ಗ, ಸೆ.15: ಹಿಂದೂ ಮಹಾಸಭಾ ವತಿಯಿಂದ ನಗರದ ಕೋಟೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಇಂದು ಅದ್ದೂರಿಯಾಗಿ ರಾಜಬೀದಿ ಉತ್ಸವ ಮಾಡುವ ಮೂಲಕ ವಿಸರ್ಜನೆ ಮಾಡಲಾಯಿತು. ನಗರದ ಪ್ರಮುಖ ಬೀದಿಗಳ ಕೇಸರಿ ಮಯವಾಗಿದ್ದು, ಎಲ್ಲೆಲ್ಲೂ ಹಿಂದೂ ಧರ್ಮದ ಸಂಕೇತಗಳು ರಾರಾಜಿಸುತ್ತಿದ್ದವು. ಈ ಎಲ್ಲವುಗಳ ಮಧ್ಯೆ ವೈಭವವಾಗಿ ಮೆರೆದಿದ್ದು, ಕರಣ್ ಆಚಾರ್ಯ ರೂಪಿಸಿರುವ ಅರ್ಧ ಮುಖದ ಹನುಮಾನ್ ಚಿತ್ರ.
ಇಂದು ಬೆಳಗ್ಗೆ ಆರಂಭವಾದ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಅವರಲ್ಲೆಲ್ಲಾ ಹಿಂದೂ ಧರ್ಮದ ಲಾಂಛನ ಹಾಗೂ ಧೈರ್ಯವಾದ ಹನುಮನ ಸಂಚಲನ ನೆರೆದಿದ್ದವರಲ್ಲಿ ಮೂಡಿತ್ತು. ಮೆರವಣಿಗೆಯಲ್ಲಿ ಸೇರಿದ್ದ ಯುವಕರು ಧರಿಸಿದ್ದ ಟಿ-ಶರ್ಟ್ ಗಳ ಮೇಲೆಲ್ಲಾ ಅರ್ಧ ಮುಖ ಹನುಮಾನ್ ಚಿತ್ರ ರಾರಾಜಿಸುತ್ತಿತ್ತು. ಗಣಪತಿ ಮೆರವಣಿಗೆಗೆ ಎಂದೇ ಟಿ ಶರ್ಟ್ ಗಳ ಮೇಲೆ ಈ ಹನುಮಾನ್ ಚತ್ರವನ್ನು ವಿನ್ಯಾಸ ಮಾಡಿಸಿಕೊಳ್ಳಲಾಗಿತ್ತು. ಮಾತ್ರವಲ್ಲ ಮೆರವಣಿಗೆಯಲ್ಲಿ ಪಾಲ್ಗೊಂಡ ನೃತ್ಯಗಾರರು, ಡೋಲು ಬಾರಿಸುವ ಕಲಾವಿದರು ಧರಿಸಿದ್ದ ಶರ್ಟ್ ಗಳ ಮೇಲೂ ಇದೇ ಹನುಮಾನ್ ರಾರಾಜಿಸುತ್ತಿದ್ದ.
ಇನ್ನು ಮೆರವಣಿಗೆ ಸಾಗುವ ದಾರಿಯನ್ನು ಹಲವು ಸಂಘ ಸಂಸ್ಥೆಗಳು ವಿಶೇಷವಾಗಿ ಸಿಂಗರಿಸಿದ್ದವು. ಈ ದಾರಿಯುದ್ದಕ್ಕೂ ಹಾಕಲಾಗಿದ್ದ ಬ್ಯಾನರ್, ಬಂಟಿಂಗ್ಸ್ ಹಾಗೂ ಹೋರ್ಡಿಂಗ್ಸ್ ಗಳಲ್ಲೂ ಇದೇ ಹನುಮನ ಹವಾ ಇತ್ತು. ಪ್ರಮುಖವಾಗಿ ಹಿಂದೂ ಯುವಕರ ಸಂಘಟನೆಗಳ ಲಾಂಛನವಾಗಿ ಈ ಹನುಮಾನ್ ಚಿತ್ರ ಬೇರೂರಿದೆ. ಮೆರವಣಿಗೆಯುದ್ದಕ್ಕೂ ಪವನಪುತ್ರ ಹನುಮಾನ್ ಕಿ ಜೈ ಎಂಬ ಘೋಷಣೆ ಕೂಗಲಾಗುತ್ತಿತ್ತು. ಅದಕ್ಕೆ ಸ್ಪೂರ್ತಿಯಾಗಿದ್ದೂ ಇದೇ ಹನುಮಾನ್ ಸ್ಟಿಕ್ಕರ್.
ಒಟ್ಟಿನಲ್ಲಿ ಪ್ರತಿವರ್ಷ ಹಿಂದೂ ಧರ್ಮದ ಪ್ರತೀಕವಾದ ಕೇಸರಿ ಬಾವುಟಗಳು, ಭಗವಾಧ್ವಜಗಳು ಶಿವಮೊಗ್ಗದ ಗಣಪತಿ ಉತ್ಸವಕ್ಕೆ ಮೆರುಗು ನೀಡುತ್ತಿದ್ದವು. ಆದರೆ, ಈ ಬಾರಿ ಇದರೊಂದಿಗೆ ಈ ಅರ್ಧ ಮುಖದ ಹನುಮಾನ್ ಸ್ಟಿಕ್ಕರ್ ಸಹ ಸೇರಿಕೊಂಡು ಮೆರವಣಿಗೆಯ ಕಳೆಯಲ್ಲಿ ಹೆಚ್ಚಿಸಿತ್ತು.
ವಿ.ಸೂ.: ಈ ಹನುಮಾನ್ ಸ್ಟಿಕ್ಕರ್ ನ್ನು ರೂಪಿಸಿದ್ದು, ಕಾಸರಗೋಡಿನ ಕರಣ್ ಆಚಾರ್ಯ. ಇವರ ಕುರಿತಾಗಿ ಟೈಮ್ಸ್ ಕನ್ನಡ ಕೆಲವು ದಿನಗಳ ಹಿಂದೆ ಲೇಖನವೊಂದನ್ನು ಪ್ರಕಟಿಸಿತ್ತು. ಆಸಕ್ತರು ಲೇಖನ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
Discussion about this post