ಶಿವಮೊಗ್ಗ, ಆ.31: ನಗರದ ವಿವಿಧ ಬಡಾವಣೆಗಳಲ್ಲಿ ಹೆಚ್ಚುತ್ತಿರುವ ತಿಂಡಿಗಾಡಿಗಳನ್ನು ನಿಯಂತ್ರಿಸುವ ಸಂಬಂಧ ಮತ್ತು ಅವುಗಳಿಗೆ ವೇಳೆ ನಿಗದಿಗೊಳಿಸುವ ಸಂಬಂಧ ನಗರ ಪಾಲಿಕೆಯ ಇಂದಿನ ಮಾಸಿಕ ಸಭೆಯಲ್ಲಿ ವಿಶೇಷ ಚರ್ಚೆ ನಡೆಯಿತು.
ತಿಂಡಿಗಾಡಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ಪಾದಚಾರಿ ಮಾರ್ಗಗಳಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜೊತೆಗೆ ಹೊಟೆಲ್ ವ್ಯಾಪಾರಸ್ಥರಿಗೂ ನಷ್ಟವಾಗುವಂತಾಗಿದೆ. ಕಂಡಕಂಡಲ್ಲಿ ಈ ಗಾಡಿಗಳನ್ನು ಇಟ್ಟುಕೊಟ್ಟುಕೊಂಡಿರುವುದರಿಂದ ಸಂಚಾರಕ್ಕೂ ಸಹ ತೊಂದರೆಯಾಗುವಂತಾಗಿದೆ. ಆದ್ದರಿಂದ ಇವುಗಳ ನಿಯಂತ್ರಣದ ಬಗ್ಗೆ ಕ್ರಮ ಅಗತ್ಯ ಎಂದು ಬಹುತೇಕ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ನಾಯಕ ಎನ್.ಜೆ. ರಾಜಶೇಖರ್ ಮಾತನಾಡಿ, ಬೀದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದರೆ ಮುಂದಿನಗಳಲ್ಲಿ ಪರಿಸ್ಥಿತಿ ಕಠಿಣವಾಗುತ್ತದೆ. ಆಯುಕ್ತರು ಈ ಬಗ್ಗೆ ಪ್ರತ್ಯೇಕ ಸಭೆ ಕರೆದು ಚರ್ಚೆ ನಡೆಸಬೇಕು. ಅಥವಾ ಇದೇ ಸಭೆಯಲ್ಲಿ ಚರ್ಚೆ ನಡೆಸಲು ಮೇಯರ್ ಅವಕಾಶ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಶಿವಮೊಗ್ಗ ನಗರವು ಸ್ಮಾರ್ಟ್ ಸಿಟಿ ಆಗುತ್ತಿರುವುದರಿಂದ ಅದಕ್ಕನುಗುಣವಾಗಿ ವ್ಯವಸ್ಥೆ ಮಾಡಿಕೊಡಬೇಕು. ಸಾಕಷ್ಟುಕಡೆ ಖಾಲಿ ಜಾಗಗಳಿದ್ದು, ಅಲ್ಲಿ ಅವರಿಗೆ ಅವಕಾಶ ಮಾಡಿಕೊಡಬಹುದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ವಿಶ್ವನಾಥ್ ಕಾಶಿ ಮಾತನಾಡಿ, ತಿಂದಿಗಾಡಿಯವರಿಗೆ ವೇಳೆ ನಿಗದಿ ಮಾಡದಿದ್ದರೆ ಇಡೀ ದಿನ ನಗರದ ತುಂಬಾ ವ್ಯಾಪಾರ ಮಾಡುತ್ತಾರೆ. ಸಂಜೆ ೪ ಗಂಟೆ ನಂತರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಜೊತೆಗೆ ವ್ಯಾಪಾರ ಮಾಡುವ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಲು ಸೂಚಿಸಬೇಕೆಂದು ಹೇಳಿದರು.
ಎನ್.ಜೆ. ರಾಜಶೇಖರ್ ಮಾತನಾಡಿ, ನಗರ ಪಾಲಿಕೆಯು ಕಾರ್ನರ್ ಸೈಟ್ಗಳನ್ನು ಯಾವಕಾರಣಕ್ಕೂ ಹರಾಜು ಮಾಡಬಾರದು. ಇಂತಹ ಜಾಗಗಳಲ್ಲಿ ತಿಂಡಿಗಾಡಿಗಳಿಗೆ ಒಂದೇ ಕಡೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ನಂತರ ಈ ಸಂಬಂಧ ಮಾತನಾಡಿದ ಮೇಯರ್ ಎಸ್.ಕೆ. ಮರಿಯಪ್ಪ, ಸಂಜೆ ೪ ಗಂಟೆ ನಂತರ ತಿಂಡಿಗಾಡಿಗಳು ವ್ಯಾಪಾರ ನಡೆಸಬೇಕೆಂಬ ಆದೇಶವನ್ನು ಅಧಿಕಾರಿಗಳು ಹೊರಡಿಸುವಂತೆ ಸೂಚಿಸಿದರು. ಮತ್ತು ಪ್ರಕಾರ ನಡೆದುಕೊಳ್ಳಲು ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ವಿಚಾರವಾಗಿ ಹೆಚ್.ಸಿ. ಯೋಗೇಶ್, ಮಾಲತೇಶ್, ನರಸಿಂಹಮೂರ್ತಿ, ನಾಗರಾಜ್ ಕಂಕಾರಿ ಮೊದಲಾದವರು ಮಾತನಾಡಿದರು.
ಬೀದಿ ವ್ಯಾಪಾರಸ್ಥರ ನಿಯಂತ್ರಣಕ್ಕೆ ಟೌನ್ ವೆಂಡಿಂಗ್ ಕಮಿಟಿ ರಚನೆ: ಆಯುಕ್ತೆ
ಬೀದಿ ವ್ಯಾಪಾರಸ್ಥರನ್ನು ನಿಯಂತ್ರಿಸುವ ಸಂಬಂಧ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದ್ದು, ಆ ಪ್ರಕಾರ ಟೌನ್ ವೆಂಡಿಂಗ್ ಕಮಿಟಿಯನ್ನು ರಚಿಸಬೇಕಾಗುತ್ತದೆ ಎಂದು ಆಯುಕ್ತೆ ತುಷಾರಮಣಿ ಹೇಳಿದ್ದಾರೆ.
ಪಾಲಿಕೆ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಸಮಿತಿಯಲ್ಲಿ ಪಾಲಿಕೆಯ ಸದಸ್ಯರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇರುತ್ತಾರೆ. ಈ ಸಮಿತಿಯನ್ನು ರಚಿಸುವ ಪ್ರಕ್ರಿಯೆ ಆರಂಭವಾಗಿದೆ. ಸಮಿತಿಯ ರಚನೆಯ ನಂತರ ಸಭೆ ಸೇರಿ ಯಾವ್ಯಾವ ಜಾಗಗಳಲ್ಲಿ ಬೀದಿ ವ್ಯಾಪಾರಸ್ಥರಿಗೆ ಅವಕಾಶ ಕೊಡಬೇಕು ಎನ್ನುವುದನ್ನು ನಿರ್ಧರಿಸಲಾಗುವುದು ಎಂದರು.
ನಗರದ ಆಯ್ದ ಭಾಗಗಳಲ್ಲಿ ಮಾತ್ರ ಬೀದಿ ವ್ಯಾಪಾರಸ್ಥರಿಗೆ ಅವಕಾಶಕೊಡಲಾಗುವುದು. ಉಳಿದೆಡೆ ನೋ ಪಾರ್ಕಿಂಗ್ ರೀತಿಯಲ್ಲಿ ನೋ ವೆಂಡಿಂಗ್ ನಾಮಫಲಕ ಅಳವಡಿಸಬೇಕಾಗುತ್ತದೆ. ಈ ವ್ಯಾಪಾರಸ್ಥರು ಇರುವ ಜಾಗಳಲ್ಲಿ ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆಗಳನ್ನು ಪಾಲಿಕೆ ಕಲ್ಪಿಸಬೇಕಾಗುತ್ತದೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ನಗರದಲ್ಲಿ ಹೆಚ್ಚುತ್ತಿರುವ ಬೀದಿ ವ್ಯಾಪಾರಸ್ಥರು ಮತ್ತು ತಿಂಡಿಗಾಡಿಗಳು ಹಾಗೂ ಅವರಿಂದ ಉಂಟಾಗುತ್ತಿರುವ ಕಿರಿಕಿರಿ, ಸಮಸ್ಯೆಗಳ ಬಗ್ಗೆ ಬಹುತೇಕ ಎಲ್ಲಾ ಸದಸ್ಯರು ಮಾತನಾಡಿ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದರು.
ಈ ವೇಳೆ ಎನ್.ಜೆ. ರಾಜಶೇಖರ್ ಬೀದಿ ವ್ಯಾಪಾರಸ್ಥರ ಬಗ್ಗೆ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶದ ವಿವರವನ್ನು ಆಯುಕ್ತೆ ವಿವರಿಸಬೇಕೆಂದು ಕೋರಿದರು. ಈ ಹಿನ್ನೆಲೆಯಲ್ಲಿ ಆಯುಕ್ತೆ ತುಷಾರಮಣಿ ಆದೇಶದ ವಿವರವನ್ನು ಸದಸ್ಯರಿಗೆ ನೀಡಿದರು.
ಬಗೆ ಹರಿಯದ ತರಕಾರಿ ಮಾರುಕಟ್ಟೆ ಹರಾಜು ವಿಚಾರ: ಮೇಯರ್ಗೆ ಅಧಿಕಾರ ನೀಡಿದ ಪಾಲಿಕೆ
ವಿನೋಬನಗರದ ಶಿವಾಲಯದ ಬಳಿ ನಿರ್ಮಿಸಲಾಗಿರುವ ಮಹಾನಗರ ಪಾಲಿಕೆಯ ತರಕಾರಿ ಮಾರುಕಟ್ಟೆಯ ಹರಾಜು ಪ್ರಕ್ರಿಯ ಬಗ್ಗೆ ಪಾಲಿಕೆಯ ಮಾಸಿಕ ಸಭೆಯಲ್ಲಿ ಇಂದು ತೀವ್ರ ಚರ್ಚೆ ನಡೆಯಿತು.
ಸಭೆಯ ಆರಂಭದಲ್ಲಿ ಮಾತನಾಡಿದ ಸದಸ್ಯ ಫಾಲಾಕ್ಷಿ, ಹರಾಜು ಮೂಲಕ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪೊಲೀಸ್ ಚೌಕಿ ಮತ್ತು ಲಕ್ಷ್ಮೀ ಟಾಕೀಸ್ ಬಳಿ ಬೀದಿಯಲ್ಲಿ ತರಕಾರಿ ವ್ಯಾಪಾರ ಮಾಡುವವರಿಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಟೆಂಡರ್ ಮೂಲಕ ಹರಾಜು ಪ್ರಕ್ರಿಯೆ ನಡೆಸಿದರೆ ಹಣ ಇರುವವರು ಮಾತ್ರ ಮಳಿಗೆಗಳನ್ನು ಪಡೆಯುತ್ತಾರೆ. ಇದಕ್ಕೆ ಅಕಾಶವಾಗದಂತೆ ಮಾಡಲು ಟೆಂಡರ್ ಪ್ರಕ್ರಿಯೆಯನ್ನು ಕೈಬಿಟ್ಟು ಮಳಿಗೆ ನಿರ್ಮಿಸಿದ ಮೂಲ ಉದ್ದೇಶಕ್ಕೆ ಧಕ್ಕೆ ಬಾರದಂತೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ವಿಶ್ವನಾಥ್ಕಾಶಿ ಮಾತನಾಡಿ, ಶಿವಾಲಯ ಸುತ್ತಮುತ್ತ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಈ ಮಳಿಗೆಗಳಲ್ಲಿ ಮಾನವೀಯ ದೃಷ್ಠಿಯಿಂದ ಅವಕಾಶಕೊಡುವುದು ಸೂಕ್ತ ಎಂದರು.
ಎನ್.ಜೆ. ರಾಜಶೇಖರ್ ಮಾತನಾಡಿ, ನಗರದ ಬಹುತೇಕ ಕಡೆ ಈ ಸಮಸ್ಯೆ ಇದೆ. ಆದ್ದರಿಂದ ಸೂಕ್ತ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಬೇಕು. ಸರ್ಕಾರದ ಅನುದಾನದಡಿ ಎಲ್ಲೆಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಅವಕಾಶವಿದೆಯೋ ಸಾಧ್ಯವಾದಷ್ಟು ಮಟ್ಟಿಗೆ ನಿರ್ಮಿಸಿ ಈ ಬಡ ವ್ಯಾಪಾರಸ್ಥರಿಗೆ ಹಂಚಬೇಕೆಂದರು.
ಮೇಯರ್ ಮರಿಯಪ್ಪ ಮಾತನಾಡಿ, ೨೭ ಫಲಾನುಭವಿಗಳಿಗೆ ಈಗ ಮಳಿಗೆಯಲ್ಲಿ ವ್ಯವಸ್ಥೆ ನೀಡಲು ಅವಕಾಶವಿದೆ. ಆದರೆ ಹಿಂದಿನ ಸಭೆಯಲ್ಲಿ ನಿರ್ಣಯಿಸಿದಂತೆ ಸದಸ್ಯಕ್ಕೆ ಮಳಿಗೆ ವಿತರಿಸಿಲ್ಲ. ಜಿಲ್ಲಾಧಿಕಾರಿಯವರು ಕಾನೂನಿನ ಪ್ರಕಾರ ಟೆಂಡರ್ ಮೂಲಕವೇ ಮಳಿಗೆ ವಿತರಿಸಲು ಸೂಚಿಸಿದ್ದಾರೆ ಎಂದರು.
ಹೆಚ್.ಸಿ. ಯೋಗೀಶ್, ನಾಗರಾಜ ಕಂಕಾರಿ, ರಾಜಶೇಖರ್, ಕಾಶಿ ವಿಶ್ವನಾಥ್, ಮಾಲತೇಶ್ ಮೊದಲಾದವರು ಮಾತನಾಡಿ, ಸೂಕ್ತ ಕ್ರಮಕೈಗೊಳ್ಳುವ ಅಧಿಕಾರವನ್ನು ಮೇಯರ್ಗೆ ಒಪ್ಪಿಸಲು ತೀರ್ಮಾನಿಸಿದರು. ಇದಕ್ಕೆ ಸಭೆ ಒಪ್ಪಿಗೆ ನೀಡಿತು. ಸಭೆಯಲ್ಲಿ ಉಪಮೇಯರ್ ಮಂಗಳಾ ಅಣ್ಣಪ್ಪ, ಆಯುಕ್ತೆ ತುಷಾರಮಣಿ ಉಪಸ್ಥಿತರಿದ್ದರು.
Discussion about this post