Read - 3 minutes
ಕಣಿವೆ ರಾಜ್ಯದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 20ಕ್ಕೇರಿದೆ. ಇಂತಹ ದುರಂತಕ್ಕೆ ಇಡಿಯ ಭಾರತವೇ ಮರುಗುತ್ತಿದೆ. ಪಾಕಿಸ್ಥಾನದ ವಿರುದ್ಧ ಭಾರತೀಯರ ರಕ್ತ ಕುದಿಯುತ್ತಿದೆ. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಏನಾಗಿದೆ ಎಂಬ ಪ್ರಶ್ನೆ ಈಗ ಮೂಡತೊಡಗಿದೆ.
ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಭಾರತದ ಮೇಲೆ ಮೇಲಿಂದ ಮೇಲೆ ಭಯೋತ್ಪಾದಕ ದಾಳಿಗಳು ನಡೆಯುತ್ತಲೇ ಇದ್ದವು. ಆದರೆ, ಇದಕ್ಕೆ ಮೌನವಾಗಿಯೇ ಪ್ರತಿಭಟಿಸಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ಭಾರತೀಯರಲ್ಲಿ ರೇಸಿಗೆ ಹುಟ್ಟುವಂತೆ ಮಾಡಿದ್ದರು. ಪಾಪಿ ಪಾಕಿಸ್ಥಾನಿಯರು ಭಾರತದ ಐವರು ಯೋಧರ ತಲೆ ಕಡಿದುಕೊಂಡು ಹೋದರೂ ತುಟಿ ಬಿಚ್ಚದ ಅಂದಿನ ಪ್ರಧಾನಿ ಸಿಂಗ್, ಇಡಿಯ ಭಾರತವನ್ನು ನೋವಿನ ಕಡಲಲ್ಲಿ ದೂಡಿದ್ದರು.
ಈ ಎಲ್ಲದರ ಪರಿಣಾಮವೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಡ್ಡಡ್ಡ ಮಲಗಿಸಿದ ಭಾರತೀಯ ಮತದಾರ ಭರವಸೆಯ ಹರಿಕಾರ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಪೂರ್ಣ ಬಹುಮತ ಅಧಿಕಾರ ನೀಡಿದ. ಅಂದಿನಿಂದ ಭಾರತೀಯ ನಿರೀಕ್ಷೆಗಳ ವ್ಯಾಪ್ತಿ ಬೆಳೆಯುತ್ತಲೇ ಹೋಯಿತು. ಅದರಲ್ಲಿ ಪ್ರಮುಖವಾದುದು ಭಯೋತ್ಪಾದಕರ ನಿಗ್ರಹ ಹಾಗೂ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸುವುದು. ಆದರೆ, ಮೋದಿ ಭಾರತೀಯರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಇದೀಗ ಮೂಡತೊಡಗಿದೆ.
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜಾಗತಿಕ ಮಟ್ಟದಲ್ಲಿ ಉಗ್ರವಾದವನ್ನು ಹತ್ತಿಕ್ಕಲು ಎಲ್ಲ ರಾಷ್ಟ್ರಗಳನ್ನು ಒಂದುಗೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ತಾವು ಹೋದ ದೇಶದಲ್ಲೆಲ್ಲಾ, ಭಾಗವಹಿಸಿದ ಸಭೆಗಳಲ್ಲೆಲ್ಲಾ ಉಗ್ರವಾದವನ್ನು ಮಟ್ಟ ಹಾಕಲು ಜಾಗತಿಕ ಸಹಕಾರ, ಒಗ್ಗಟ್ಟಿನ ಹೋರಾಟ ಮುಖ್ಯ ಎಂಬ ಅಂಶದೊಂದಿಗೆ ಸಮಷ್ಠಿ ಪ್ರಜ್ಞೆಯನ್ನು ಬೆಳೆಸಲು ಯತ್ನಿಸುತ್ತಲೇ ಇದ್ದಾರೆ.
ಆದರೆ, ಭಾರತದಲ್ಲೇನಾಗುತ್ತಿದೆ? ಗಡಿ ಭಾಗದಲ್ಲಿ ಉಗ್ರರ ದಾಳಿಗಳು, ಪಾಕಿಸ್ಥಾನದ ಅಪ್ರಚೋದಿತ ದಾಳಿಗಳು ನಡೆಯುತ್ತಲೇ ಇವೆ. ದೇಶದ ಒಳಗಡೆ ಉಗ್ರರ ಜಾಡು ವ್ಯಾಪಿಸುತ್ತಲೇ ಇದೆ. ಇವೆಲ್ಲವನ್ನೂ ನಿಗ್ರಹ ಮಾಡಲು ಮೋದಿ ಕ್ರಮ ಕೈಗೊಂಡಿಲ್ಲವೇ? ಅಥವಾ ಈ ಕುರಿತಂತೆ ಅವರು ನಿಜಕ್ಕೂ ಮೌನವಹಿಸಿದ್ದಾರೆಯೇ? ಭಾರತೀಯರಲ್ಲಿ ಕಾಡುತ್ತಿರುವ ಈ ಪ್ರಶ್ನೆಗೆ ಅವರು ಉತ್ತರ ನೀಡುವ ಸಂದರ್ಭ ಈಗ ಬಂದಿದೆ.
ಮೋದಿ ಪ್ರಧಾನಿಯಾದ ನಂತರ, ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಸ್ಫೋಟ ಸಂಭವಿಸಿ ಮಹಿಳೆ ಅಸು ನೀಗಿದರು, ಜಮ್ಮುವಿನಲ್ಲಿ ಉಗ್ರರ ದಾಳಿಗೆ 20 ಮಂದಿ ಸಾವನ್ನಪ್ಪಿದರು, ಪಂಜಾಬ್ ನ ಗುರುದಾಸ್ ಪುರದಲ್ಲಿ ಉಗ್ರರ ದಾಳಿಗೆ 10 ಮಂದಿ ಸಾವನ್ನಪ್ಪಿದರು, ಪಾಂಪೋರ್‌ನಲ್ಲಿ ನಡೆದ ದಾಳಿಗೆ 8 ಮಂದಿ ಸಾವನ್ನಪ್ಪಿದರು, ಅಸ್ಸಾಂನಲ್ಲಿ ನಡೆದ ದಾಳಿಗೆ 14 ಮಂದಿ ಸಾವನ್ನಪ್ಪಿದರು. ಆನಂತರ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದರು.
ಇಷ್ಟೆಲ್ಲಾ ದಾಳಿಗಳು ನಡೆದರೂ ಪ್ರಧಾನಿ ಮೋದಿಯಾಗಲೀ ಅಥವಾ ಕೇಂದ್ರ ಸರ್ಕಾರವಾಗಲೀ ಯಾವುದೇ ರೀತಿಯ ಕ್ರಿಯಾತ್ಮಕ ಕಠಿಣ ಕ್ರಮ ಕೈಗೊಳ್ಳಲಿಲ್ಲ ಎನ್ನುವುದು ವಾಸ್ತವ. ಹಾಗೆಂದು, ಸಂಪೂರ್ಣ ಮೌನವಾಗಿದ್ದಾರಾ? ಅದೂ ಇಲ್ಲ.
ಗಡಿ ಭಾಗಗಳಿಗೆ ತೆರಳಿ ಯೋಧರನ್ನು ಹುರಿದುಂಬಿಸುವ ಕಾರ್ಯವನ್ನು ಇಡೀ ಕೇಂದ್ರ ಸರ್ಕಾರ ಹಲವು ಬಾರಿ ಮಾಡಿದೆ. ರಕ್ಷಣಾ ಸಾಮಗ್ರಿಗಳನ್ನು ಉನ್ನತೀಕರಿಸಲು ಕ್ರಮ ಕೈಗೊಂಡಿದ್ದು, ಫ್ರಾನ್ಸ್‌ನಿಂದ ರಾಫೆಲ್ ಜೆಟ್ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಯೋಧರಿಗೆ ಕೊರೆಯುವ ಚಳಿಯಿಂದ ರಕ್ಷಣೆ ಮಾಡಿಕೊಳ್ಳಲು ಉನ್ನತ ಗುಣಮಟ್ಟದ ಜಾಕೇಟ್‌ಗಳು, ಬುಲೆಟ್‌ಪ್ರೂಫ್ ಜಾಕೇಟ್‌ಗಳನ್ನು, ಶಸ್ತ್ರಾಸ್ತ್ರಗಳ ಉನ್ನತೀಕರಣಕ್ಕೆ ಕ್ರಮ ಕೈಗೊಂಡಿದೆ.
ಆದರೆ, ದೇಶದ ಮೇಲೆ ನಡೆಯುವ ಪ್ರಮುಖವಾಗಿ ಗಡಿ ಭಾಗದಲ್ಲಿ ನಡೆಯುವ ಉಗ್ರರ ದಾಳಿ ಮಾತ್ರ ಕಡಿಮೆಯಾಗಿಲ್ಲ. ಪರಿಣಾಮ, ಸಾಲು ಸಾಲಾಗಿ ಯೋಧರು ಪಾಪಿಗಳ ಗುಂಡಿಗೆ ಬಲಿಯಾಗುತ್ತಿದ್ದಾರೆ. ಇದು ದೇಶದ ಜನರಲ್ಲಿ ರಕ್ತ ಕುದಿಯುವಂತೆ ಮಾಡುತ್ತಿದೆ.
ಮೋದಿ, ಪ್ರಧಾನಿಯಾದ ನಂತರ ಕೆಲವೊಂದು ಕಠಿಣ ನಿಲುವುಗಳನ್ನು ಕೈಗೊಂಡರು. ಕಳೆದ ವರ್ಷ ಹೇಳಿಕೆ ನೀಡಿದ್ದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಪಾಕ್ ಕಡೆಯಿಂದ ಒಂದು ಗಂಡು ಬಂದರೆ ನಮ್ಮ ಕಡೆಯಿಂದ ನಾಲ್ಕು ಗುಂಡ ಹಾರಲಿ ಎಂದು ಆದೇಶ ನೀಡಿದ್ದರು. ಇಂತಹ ಮಾತುಗಳು ಸೇನೆಗೆ ನೈತಿಕ ಬಲ ತುಂಬಿತ್ತು. ಆದರೆ, ಪಾಪಿಗಳ ದಾಳಿಗಳೇನೂ ಕಡಿಮೆಯಾಗಿಲ್ಲ.
ಭಯೋತ್ಫಾದಕತೆಯನ್ನು ಹುಟ್ಟಿಸಿ, ತನ್ನೊಡಲಲ್ಲೇ ಬೆಳೆಸಿ, ಅದರಿಂದಲೇ ನರಳುತ್ತಿದ್ದರೂ, ಪಾಠ ಕಲಿಯದ ಪಾಕ್ ಭಾರತದ ಮೇಲೆ ಕಾಲು ಕೆರೆದುಕೊಂಡು ಜಗಳ ಮಾಡುತ್ತಲೇ ಇದೆ.
ಮುಸ್ಲಿಂ ಮೂಲಭೂತವಾದದ ಹೆಸರಿನಲ್ಲಿ ಪ್ರಪಂಚಕ್ಕೆ ತಲೆ ನೋವಾಗಿ ಪರಿಣಮಿಸಿರುವ ಭಯೋತ್ಪಾದನೆಯ ಕಾರಸ್ಥಾನ ಪಾಕಿಸ್ಥಾನ ಹಾಗೂ ತತ್ ಪ್ರೇರಿತ ಭಾಗಗಳ ರಾಕ್ಷಸರು ಇಡಿಯ ಭಾರತಕ್ಕೆ ಕಂಟಕಪ್ರಾಯರಾಗಿದ್ದಾರೆ. ವಿಶ್ವದ ಶ್ರೀಮಂತ ಉಗ್ರ ಸಂಘಟನೆ ಐಎಸ್ ಐಎಸ್ ನ ಬೇರು ಈಗಾಗಲೇ ಭಾರತದಲ್ಲಿ ಸಾಕಷ್ಟು ಹರಡಿದೆ. ಈ ಐಎಸ್ ಐಎಸ್ ಹಾಗೂ ಪಾಕಿಸ್ಥಾನ ಎರಡೂ ಒಂದೇ ತಾಯಿಯ ಮಕ್ಕಳು. ಒಂದೆಡೆ ದೇಶದೆಲ್ಲೆಡೆ ಐಎಸ್ ತನ್ನ ಬೇರನ್ನು ಬಿಡುತ್ತಿದ್ದರೆ, ಇನ್ನೊಂದೆಡೆ ಗಡಿಯಲ್ಲಿ ಪಾಕಿಸ್ಥಾನ ಹಾಗೂ ಅದರ ಕೃಪಾಪೋಷಿತ ಉಗ್ರರು ಗಡಿಯಲ್ಲಿ ದಾಳಿ ನಡೆಸುತ್ತಲೇ ಬಂದಿದ್ದಾರೆ. ಆಮೂಲಕ ಭಾರತವನ್ನು ಕೆಣಕುವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇದರ ಪರಿಣಾಮ ಸಾಲು ಸಾಲಾಗಿ ಗುಂಡಿನ ದಾಳಿಗಳು ಹಾಗೂ ಭಾರತೀಯ ಯೋಧರ ವೀರಮರಣ.
ಇಂತಹ ಸಂದರ್ಭಗಳನ್ನು ನೋಡಿದಾಗ ಮೋದಿ ಸರ್ಕಾರದ ನಿಲುವುಗಳು ಇನ್ನೂ ಸಾಲದು ಎಂದು ತೋರುತ್ತಿದೆ. ಈ ಮುನ್ನವೇ ಹೇಳಿದಹಾಗಿ ಭಯೋತ್ಪಾದನಾ ನಿಗ್ರಹಕ್ಕೆ ಮೋದಿ ರಚನಾತ್ಮಕ ಯೋಜನೆ ರೂಪಿಸಿ, ಕಾರ್ಯ ಮಾಡುತ್ತಿದ್ದಾರೆ ಎನ್ನುವುದು ಸತ್ಯ. ಆದರೆ, ಪದೇ ಪದೇ ನಮ್ಮ ಮೇಲೆರಗುತ್ತಿರುವ ರಾಕ್ಷಸರ ಸಂಹಾರಕ್ಕೆ ತತಕ್ಷಣದ ರಚನಾತ್ಮಕ ಕಾರ್ಯ ಏನು ಎನ್ನುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೋದಿ ನಿರ್ಧಾರ ಕೊಂಚ ಕಡಿಮೆಯೇ ಎಂಬ ಮಾತನ್ನು ಬೇಸರದಿಂದಲೇ ಹೇಳಬೇಕಿದೆ.
ಪಾಕ್ ನೊಂದಿಗೆ ಶಾಂತಿ ಕಾಪಾಡುವ ಮೂಲಕ, ಎರಡೂ ರಾಷ್ಟ್ರಗಳ ನಡುವೆ ಬಾಂಧವ್ಯವನ್ನು ವೃದ್ಧಿಸುವ ಆ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಸಮಸ್ಯೆಯನ್ನು ಪರಿಹರಿಸುವ ಯತ್ನದ ಭಾಗವಾಗಿ ಮೋದಿ ಮೌನ ಹಾಗೂ ಪಾಕ್ ನೊಂದಿಗಿನ ಸ್ನೇಹ ಎಲ್ಲವನ್ನೂ ಒಪ್ಪಿಕೊಳ್ಳೋಣ. ಆದರೆ, ಪಾಕಿಸ್ಥಾನ ಎನ್ನುವುದು ಎಂದೂ ಬದಲಾಗದ ಒಂದು ನೀಚರಾಷ್ಟ್ರ. ಒಂದು ರೀತಿಯಲ್ಲಿ ಕೊಳಕು ಮಂಡಲದಂತೆ. ಮೈಯೆಲ್ಲಾ ವಿಷ. ಆ ವಿಷವನ್ನು ತೆಗೆಯಲು ಸಾಧ್ಯವಿಲ್ಲ. ಹೊಸಕಿ ಹಾಕಬೇಕಷ್ಟೆ. ಅದು ಸಾಧ್ಯವಾಗಲು ಕಠಿಣ ನಿಲುವು ಅನಿವಾರ್ಯ.
ಪಾಪಿಗಳ ಗುಂಡಿಗೆ ಭಾರತದ ಒಬ್ಬೊಬ್ಬ ಯೋಧ ಹುತಾತ್ಮನಾದಾಗಲೂ ಭಾರತೀಯರ ರಕ್ತ ಕುದಿಯುತ್ತದೆ. ನಮ್ಮ ಸೇನೆಯಲ್ಲಿರುವ ಯೋಧರೇನು ಹೇಡಿಗಳಲ್ಲ. ಮೈಯೆಲ್ಲಾ ರಕ್ತ ಜಿನುಗುತ್ತಿದ್ದರೂ ಕಡೆ ಗಳಿಗೆಯವರೆಗೂ ಭಾರತಾಂಬೆಗಾಗಿ ಹೋರಾಡುವ ವೀರಾಗ್ರಣಿಗಳು. ಒಮ್ಮೆ ಅವರಿಗೆ ಸ್ವಾತಂತ್ರ್ಯ ಕೊಟ್ಟು ನೋಡಿ… ಪಾಕ್ ಸೇನೆಗೆ ಸರಿಯಾದ ಪಾಠ ಕಲಿಸಿ, ಮುಂದಾಗುವ ಯಾವುದೇ ತೊಂದರೆಯನ್ನು ನಾವು ನೋಡಿಕೊಳ್ಳುತ್ತೇವೆ ಎಂಬ ಮಾತನ್ನು ಹಾಗೂ ಸ್ವಾತಂತ್ರ್ಯವನ್ನು ನಮ್ಮ ಸೈನಿಕರಿಗೆ ಹೇಳಿ ನೋಡಿ. ಪಾಕಿಸ್ಥಾನ ಇನ್ನೆಂದೂ ಭಾರತದ ವಿರುದ್ಧ ಮಾತ್ರವಲ್ಲ, ಇನ್ನಾರ ವಿರುದ್ಧವಾದರೂ ಬಂದೂಕು ಎತ್ತುವಾಗ ಸಾವಿರ ಬಾರಿ ಚಿಂತಿಸಬೇಕು. ಆ ರೀತಿ ಪಾಠ ಕಲಿಸುತ್ತಾರೆ ನಮ್ಮ ಯೋಧರು.
ಈ ರೀತಿ ಕ್ರಮ ಕೈಗೊಂಡದರೆ, ದಾಳಿಗಳನ್ನು ಆರಂಭಿಸಿದರೆ, ಅದು ಜಾಗತಿಕ ಮಟ್ಟದಲ್ಲಿ ಭಾರತದ ವಿಚಾರದಲ್ಲಿ ಯಾವ ಸಂದೇಶ ರವಾನೆಯಾಗುತ್ತದೆ. ಅದು ದೇಶದ ವ್ಯಾವಹಾರಿಕ ದೃಷ್ಠಿಯಿಂದ ಎಂತಹ ಪರಿಣಾಮ ಬೀರುತ್ತದೆ ಎಂಬ ಚಿಂತನೆ ನಿಮಗೆ ಇರಬಹುದು ಪ್ರಧಾನಿಯವರೇ. ಆದರೆ, ಈ ಎಲ್ಲವುಗಳ ಜೊತೆಯಲ್ಲಿ ನಮಗೆ ಮಾರಕವಾಗಿ ಕಾಡುತ್ತಿರುವ ವಿಷದ ಮುಳ್ಳನ್ನು ಕಿತ್ತು ಹಾಕುವುದು ಅಷ್ಟೇ ಮುಖ್ಯ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಗೂ ಇಂದಿನ ಪ್ರಧಾನಿ ಮೋದಿಗೂ ಕೃತಿಯಲ್ಲಿ ಬದಲಾವಣೆಯನ್ನು ಭಾರತೀಯ ನಿರೀಕ್ಷೆ ಮಾಡುತ್ತಿದ್ದಾನೆ.
ಭಯೋತ್ಪಾದನಾ ನಿಗ್ರಹಕ್ಕೆ ನಿಮ್ಮ ರಚನಾತ್ಮಕ ಕಾರ್ಯವನ್ನು ಟೀಕಿಸುವಂತೆಯೇ ಇಲ್ಲ. ಆದರೆ, ರಕ್ಷಣೆ ದೃಷ್ಟಿಯಿಂದ ತತಕ್ಷಣದ ಕ್ರಿಯಾತ್ಮಕ ಕಾರ್ಯವೂ ಅಷ್ಠೇ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮದ ನಿರ್ಧಾರ ಕೈಗೊಳ್ಳಿ ಪ್ರಧಾನಿಯವರೇ. ಒಮ್ಮೆ ಪಾಕ್ ಗೆ ತಕ್ಕ ಪಾಠ ಕಲಿಸಿ. ನಿಮ್ಮ ಬಗ್ಗೆ ದೇಶದ ಬಹಳಷ್ಟು ನಂಬಿಕೆ ಹಾಗೂ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಅದಕ್ಕೆ ತಕ್ಕ ನಿರ್ಧಾರಗಳನ್ನು ಪ್ರಕಟಿಸಿ. ಮುಂದೇನಾಗುವುದೋ ಎಂಬ ಚಿಂತೆ ಬೇಡ. ಇಡಿಯ ದೇಶ ನಿಮ್ಮ ಜೊತೆಯಲ್ಲಿದೆ. ಮುನ್ನುಗ್ಗಿ…..
Discussion about this post