Read - 3 minutes
ಮಹದಾಯಿ ವಿಚಾರದಲ್ಲಿ ರಾಜ್ಯಕ್ಕಾದ ಅನ್ಯಾಯ ಮತ್ತೊಮ್ಮೆ ಮರುಕಳಿಸಿದ್ದು, ಇದರ ಸೈಡ್ ಎಫೆಕ್ಟ್ ಆಗಿ ಮೈಸೂರು ಪ್ರಾಂತ್ಯ ಹೊತ್ತಿ ಉರಿಯುತ್ತಿದೆ.
ಇದಕ್ಕೆ ಕಾರಣವಾಗಿದ್ದು, ರಾಜ್ಯವನ್ನಾಳಿದ ಸರ್ಕಾರಗಳು ಹಾಗೂ ಪ್ರಸ್ತುತ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಾಗೂ ವಕೀಲ ಫಾಲಿ ನಾರಿಮನ್…
ಕಾವೇರಿ ನದಿ ನೀರು ಹಂಚಿಕೆ ಕುರಿತಾಗಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಿರುವುದು ರಾಜ್ಯದ ಜನರಲ್ಲಿ ಅದರಲ್ಲೂ ಕಾವೇರಿ ಕೊಳ್ಳದಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಅಲ್ಲದೇ, ನಮ್ಮ ರಾಜ್ಯದ ರೈತರಿಗೇ ಹಾಗೂ ಜನರಿಗೆ ಕುಡಿಯುವ ನೀರು ಇಲ್ಲದೇ ಇರುವ ಪರಿಸ್ಥಿತಿಯಲ್ಲಿ ತಮಿಳುನಾಡಿದ ಸಾಂಬಾ ಬೆಳೆಗೆ ನೀರು ಬಿಡುವುದು ಎಂದರೆ ನಿಜಕ್ಕೂ ಅನ್ಯಾಯದ ಪರಮಾವಧಿಯೇ ಹೌದು.
ರಾಜ್ಯ, ನೆಲ, ಜಲ, ಭಾಷೆ ವಿಚಾರ ಬಂದಾಗ ಇಡಿಯ ರಾಜ್ಯವೇ ಒಂದಾಗಿ ಹೋರಾಟ ಮಾಡಬೇಕು. ಈ ಹೋರಾಟದ ಮುಂದಾಳುಗಳು ಸಮರ್ಥವಾಗಿರಬೇಕು. ಅಲ್ಲದೇ, ರಾಜ್ಯದ ಪರವಾಗಿ ಹೋರಾಟ ಮಾಡಿ, ಗೆಲುವನ್ನು ನಮ್ಮ ಕಡೆ ಕೊಡಿಸುವಂತಹ ಮನಸ್ಥಿತಿಯನ್ನು ಹೊಂದಿರಬೇಕು.
ಆದರೆ, ಕಾವೇರಿ ವಿಚಾರದಲ್ಲಿ ರಾಜ್ಯದ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ಫಾಲಿ ನಾರಿಮನ್, ರಾಜ್ಯದ ಹಿತಕ್ಕಾಗಿ ಯಾವ ರೀತಿಯ ಯಶಸ್ಸನ್ನು ತಂದುಕೊಟ್ಟಿದ್ದಾರೆ ಎಂದು ಪದೇ ಪದೇ ಪ್ರಶ್ನಿಸಬೇಕಿದೆ.
ನಾರಿಮನ್, 1929ರಲ್ಲಿ ವಿದೇಶದಲ್ಲಿ ಜನಿಸಿದರೂ ವೃತ್ತಿ ಬದುಕನ್ನು ಭಾರತದಲ್ಲಿ ರೂಪಿಸಿಕೊಂಡು, ಭಾರತೀಯ ಕಾನೂನು ಕ್ಷೇತ್ರದಲ್ಲಿ ಪ್ರಖಾಂಡ ಪಂಡಿತರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಾನೂನಿನ ಒಳಹೊರಗನ್ನು ಅರೆದು ಕುಡಿದಿರುವ ಅವರು, ಭಾರತ ಕಂಡ ಸಮರ್ಥ ವಕೀಲರಲ್ಲಿ ಒಬ್ಬರು ಎನ್ನುವುದನ್ನು ಒಪ್ಪಲೇ ಬೇಕಾದ ಅಂಶ.
ಆದರೆ, ನಮ್ಮ ರಾಜ್ಯದ ಪರವಾಗಿ ವಕಾಲತ್ತು ವಹಿಸಿಕೊಂಡ ಅವರಿಂದ ರಾಜ್ಯಕ್ಕೇನು ಲಾಭವಾಗಿದೆ ಎನ್ನುವುದು ರಾಜ್ಯದ ಹಿತದೃಷ್ಠಿಯಿಂದ ಮುಖ್ಯವಾಗುತ್ತದೆ. ಕಾವೇರಿ ವಿಚಾರದಲ್ಲಿ ಕಳೆದ 20 ವರ್ಷಗಳಿಂದ ರಾಜ್ಯದ ಪರ ವಾದ ಮಾಡುತ್ತಿರುವ ನಾರಿಮನ್, ರಾಜ್ಯದ ಜನರ ತೆರಿಗೆ ಹಣದಿಂದ ತಮ್ಮ ಶುಲ್ಕ ತೆಗೆದುಕೊಂಡು ರಾಜ್ಯದ ಪರವಾಗಿ ಯಾವುದೇ ಯಶಸ್ಸನ್ನು ತಂದುಕೊಟ್ಟಿಲ್ಲ ಎಂದಾದರೆ, ಅವರ ಕಾನೂನು ಪಾಂಡಿತ್ಯದಿಂದ ನಮಗೇನು ಪ್ರಯೋಜನ? ಚಿನ್ನದ ಸೂಜಿ ಎಂದು ಕಣ್ಣೀಗೆ ಚುಚ್ಚಿಕೊಳ್ಳಲು ಸಾಧ್ಯವೇ?
ರಾಜ್ಯ ಸರ್ಕಾರಕ್ಕೆ ನಾಚಿಕೆಯಿಲ್ಲವೇ?
ಕಾವೇರಿ ನದಿಯಿಂದ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಟ್ಟಿದ್ದು ನಾರಿಮನ್ ನಿರ್ಧಾರ. ನಾರಿಮನ್ ಸ್ವಯಂಪ್ರೇರಿತ ವಿವೇಚನೆಯಿಂದಲೇ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ನೀರು ಬಿಡುಗಡೆ ಅಫಿಡವಿಟ್ ಕುರಿತಾಗಿ ಸರ್ಕಾರಕ್ಕೆ ಮಾಹಿತಿಯೇ ಇರಲಿಲ್ಲ ಎಂದು ನೀರಾವರಿ ಸಚಿವ ಎಂ.ಬಿ. ಪಾಟೀಲ್ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ರಾಜ್ಯದ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿ ಕುಳಿತು ಈ ರೀತಿ ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ ಪಾಟೀಲರೇ?
20 ವರ್ಷಗಳಿಂದ ಹಿಂದಿನ ಸರ್ಕಾರಗಳು ನೀಡಿದ ರೀತಿಯೇ ನಾರಿಮನ್ ಅವರಿಗೆ ನಮ್ಮ ಸರ್ಕಾರ ಸ್ವಾತಂತ್ರ್ಯ ನೀಡಿದೆ. 10 ಸಾವಿರ ಕ್ಯೂಸೆಕ್ಸ್ ನೀರು ಬಿಡುವ ವಿಚಾರ ನಾರಿಮನ್ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳುತ್ತೀರ ಎಂದರೆ, ರಾಜ್ಯವನ್ನು ಹಾಗೂ ಕಾವೇರಿಯನ್ನು ನಾರಿಮನ್‌ಗೆ ದತ್ತು ನೀಡಿದ್ದೀರೆ?
ಕಾವೇರಿ ನೀರನ್ನು ನಂಬಿಕೊಂಡು ಲಕ್ಷಾಂತರ ಮಂದಿ ಜೀವನ ಸಾಗಿಸುತ್ತಿದ್ದಾರೆ. ಈ ಬಾರಿ ಮಳೆ ಕೊರೆತೆಯಿಂದಾಗಿ ಕಾವೇರಿ ಹಾಗೂ ಅದರ ಉಪನದಿಗಳು ನಿರೀಕ್ಷಿತ ಪ್ರಮಾಣದಲ್ಲಿ ತುಂಬಿಲ್ಲ. ಅಲ್ಲದೇ, ಈಗಿರುವ ನೀರು ಇಲ್ಲಿನ ರೈತರ ಬೆಳೆಗೆ, ಕುಡಿಯಲು ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡಲೇ ಸಾಲುವುದಿಲ್ಲ. ಕಾವೇರಿಯನ್ನೇ ನಂಬಿಕೊಂಡು ಬದುಕುತ್ತಿರುವ ಜನರ ಪಾಡನ್ನು ನೀವೇನಾದರೂ ಚಿಂತಿಸಿದ್ದೀರೆ?
ಇದಕ್ಕೂ ಮೀರಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಾರಿಮನ್ ರಾಜ್ಯದ ಪರವಾಗಿ ಸಮರ್ಥವಾದ ವಾದ ಮಂಡಿಸಿದ್ದಾರೆ. ಅವರು ಜಲ ವಿವಾದದ ವಿಚಾರದಲ್ಲಿ ಆಳವಾದ ಅಧ್ಯಯನ ಮಾಡಿದ್ದಾರೆ. ಅವರು ಮಂಡಿಸಿದ ವಾದ ಸಮರ್ಥವಾಗಿದೆ. ಸುಪ್ರೀಂ ತೀರ್ಪು ರಾಜ್ಯಕ್ಕೆ ವಿರುದ್ಧವಾಗಿ ಬರಲಿದೆ ಎಂದು ಮೊದಲೇ ಹೇಳಿದ್ದರು ಎಂದಿದ್ದಾರೆ.
ಇವರನ್ನು ಮುಖ್ಯಮಂತ್ರಿ ಮಾಡಿದ ಜನಕ್ಕೆ ಬುದ್ದಿ ಇದೆಯೇ ಎಂಬ ಪ್ರಶ್ನೆಯನ್ನು ರಾಜ್ಯದ ಜನತೆಗೆ ಕೇಳಬೇಕಿದೆ.
ಸ್ವಾಮಿ ಸಿದ್ಧರಾಮಯ್ಯನವರೇ ಹಾಗೂ ಎಂ.ಬಿ. ಪಾಟೀಲರೇ, ಮತ್ತೊಮ್ಮೆ ಕೇಳುತ್ತೇನೆ ಕಾವೇರಿಯನ್ನು ನಾರಿಮನ್‌ಗೆ ದತ್ತು ನೀಡಿದ್ದೀರಾ? ಅಥವಾ ಇಡಿಯ ಕಾವೇರಿ ನದಿಯನ್ನು ನಾರಿಮನ್ ಹೆಸರಿಗೆ ಖಾತೆ, ಪಹಣಿ ಮಾಡಿಸಿಕೊಟ್ಟಿದ್ದೀರಾ? ಚುನಾಯಿತ ಸರ್ಕಾರವಿದ್ದಾಗ್ಯೂ ರಾಜ್ಯದ ಅತಿ ಸೂಕ್ಷ್ಮ ವಿಚಾರದಲ್ಲಿ ನಾರಿಮನ್ ವಿವೇಚನಾಯುಕ್ತ ನಿರ್ಧಾರ ಎಂದು ನೀವು ಹೇಳುತ್ತೀರಾದರೆ, ಕಾವೇರಿ ನದಿಯೇನು ನಾರಿಮನ್‌ಗೆ ಸೇರಿದ ಪಿತ್ರಾರ್ಜಿತ ಆಸ್ತಿಯೇ?
ಈ ಪ್ರಕರಣದಲ್ಲಿ ಒಮ್ಮೆ ಕಾನೂನು ಹೋರಾಟ ನಡೆಸಬೇಕು ಎಂದು ನಿರ್ಧರಿಸಿದ ನಂತರ, ವಕೀಲರ ಆಯೋಗ ನೇಮಕ ಮಾಡಿ, ರಾಜ್ಯದ ಕಾನೂನು ಸಚಿವರ ನೇತೃತ್ವದಲ್ಲಿ, ಕಾನೂನು ಕಾರ್ಯದರ್ಶಿ ಹಾಗೂ ಅಡ್ವೋಕೇಟ್ ಜನರಲ್ ಉಪಸ್ಥಿತಿಯಲ್ಲಿ ನಾರಿಮನ್ ಅವರನ್ನು ನೇಮಕ ಮಾಡಲಾಗಿದೆ ಎನ್ನುವುದು ಸತ್ಯ. ಆದರೆ, ಈ ರೀತಿಯಲ್ಲಿ ನೇಮಕವಾದ ನಂತರ ಕಾವೇರಿ ವಿಚಾರದಲ್ಲಿ ನಾರಿಮನ್ ಅವರಿಂದ ರಾಜ್ಯಕ್ಕೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎನ್ನುವುದಕ್ಕೆ ಜ್ವಲಂತ ನಿದರ್ಶನವಿದೆ. ಇಷ್ಟೆಲ್ಲಾ ಅಶ್ಟೈಶ್ವರ್ಯ ಮಾಡಿ ನಾರಿಮನ್‌ರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ರಾಜ್ಯದ ರೈತರ ಹಾಗೂ ಜನರ ಹಿತವನ್ನು ಬಲಿಕೊಡುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ.
ರಾಜ್ಯದ ಜನತೆ ಪಾವತಿಸಿದ ತೆರಿಗೆ ಹಣದಿಂದ ನಾರಿಮನ್‌ಗೆ ವಕೀಲರ ಶುಲ್ಕ ನೀಡಲಾಗಿದೆಯೇ ಹೊರತು, ಸಿದ್ದರಾಮಯ್ಯರಾಗಲಿ ಅಥವಾ ಎಂ.ಬಿ. ಪಾಟೀಲರಾಗಲೀ ತಮ್ಮ ಸ್ವಂತ ‘ಬೊಕ್ಕಸ’ದಿಂದ ನೀಡಿಲ್ಲ. ರಾಜ್ಯದ ಜನರ ಋಣದಲ್ಲಿರುವ ನಾರಿಮನ್, ನಮ್ಮ ಜನರ ಹಿತಕ್ಕಾಗಿ ಹೋರಾಡಬೇಕಾದ ಆದ್ಯ ಕರ್ತವ್ಯವನ್ನು ಹೊಂದಿರುತ್ತಾರೆ. ಹೀಗಿರುವಾಗ, ಕೋಟಿಗಟ್ಟಲೆ ಹಣವನ್ನು ನೀಡಿದ ಮೇಲೂ ಪ್ರಕರಣದಲ್ಲಿ ಸೋಲುಂಟಾಗಿದೆ ಎಂದರೆ, ರಾಜ್ಯದ ಜಲಾಶಯಗಳ ಸ್ಥಿತಿಗತಿಗಳನ್ನು ಸುಪ್ರೀಂ ಕೋರ್ಟ್‌ಗೆ ನಾರಿಮನ್ ಅರ್ಥ ಮಾಡಿಸುವುದರಲ್ಲಿ ಸೋತಿದ್ದಾರೆ.
ಸಿದ್ಧರಾಮಯ್ಯನವರೇ, ರಾಜ್ಯಕ್ಕೆ ವ್ಯತಿರಿಕ್ತವಾಗಿ ಸುಪ್ರೀಂ ತೀರ್ಪು ಬರುತ್ತದೆ ಎಂದು ನಾರಿಮನ್ ಮೊದಲೇ ಹೇಳಿದ್ದರು ಎಂದಿದ್ದೀರಿ. ಅಲ್ಲಿಗೆ ರಾಜ್ಯದ ಜನರ ಕುಡಿಯುವ ನೀರಿಗೆ ಹಾಗೂ ಬೆಳೆಗೆ ಕಂಟಕವಾಗುತ್ತದೆ ಎನ್ನುವುದು ನಿಮಗೆ ಮೊದಲೇ ತಿಳಿದಿತ್ತು ಎಂದರ್ಥವಲ್ಲವೇ? ಅಲ್ಲದೇ, ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತಲೂ ಮಳೆ ಕಡಿಮೆಯಾಗಿದೆ, ಜಲಾಶಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಿಲ್ಲ. ಅಷ್ಟು ದೊಡ್ಡ ಮೊತ್ತದ ನೀರು ಹರಿಸಲು ಸಾಧ್ಯವಿಲ್ಲ. ಅದರಿಂದ ಕರ್ನಾಟಕದ ಜನತೆಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ ಎನ್ನುವ ಅಂಶವನ್ನು ನಾರಿಮನ್ ಸುಪ್ರೀಂಗೆ ದಾಖಲೆ ಸಹಿತ ಮನವರಿಕೆ ಮಾಡಿಕೊಡುವಲ್ಲಿ ಸೋತಿರುವುದು ಸತ್ಯವೇ ಆಗಿದೆ ಹಾಗೂ ಅದನ್ನೂ ತಾವೇ ಪರೋಕ್ಷವಾಗಿ ಒಪ್ಪಿಕೊಂಡಿದ್ದೀರಿ ಈ ಹೇಳಿಕೆಯ ಮೂಲಕ.
ನಾರಿಮನ್ ಎಷ್ಟೇ ಹಿರಿಯ ವಕೀಲರಾಗಿರಲಿ, ಪ್ರಖಾಂಡ ಪಂಡಿತರಾಗಿರಲಿ ಅದನ್ನು ಗೌರವಿಸೋಣ. ಆದರೆ, ಕಳೆದ 20 ವರ್ಷಗಳಿಂದ ಅವರಿಂದ ಕಾವೇರಿ ಕೊಳ್ಳದ ಜನರಿಗೆ ಅನ್ಯಾಯವಾಗುತ್ತಲೇ ಇದೆ ಎಂದಾದಾಗ ಅಂತಹ ವ್ಯಕ್ತಿಯನ್ನು ಮುಂದುವರೆಸುವ ಅನಿವಾರ್ಯತೆ ಏನಿದೆ? ಜಯಲಲಿತಾ ವಿರುದ್ಧ ಕರ್ನಾಟಕ ಸರ್ಕಾರ ಪ್ರಕರಣ ದಾಖಲಿಸಿದಾಗ, ಜಯಾ ಪರ ವಕಾಲತ್ತು ವಹಿಸಿ, ಜಯಾಗೆ ಜಯ ತಂದುಕೊಟ್ಟ ನಾರಿಮನ್ ಅವರಿಂದ ಕರ್ನಾಟಕದ ಪರವಾಗಿ ತೀರ್ಪು ಬರುವಂತೆ ಹೋರಾಡುತ್ತಾರೆ ಎಂದು ನಿರೀಕ್ಷೆ ಮಾಡಿದ ಸಿದ್ಧರಾಮಯ್ಯರ ಸರ್ಕಾರಕ್ಕೆ ನಿಜಕ್ಕೂ ಬುದ್ದಿ ಇದೆ ಎನ್ನಲು ಸಾಧ್ಯವೇ ಇಲ್ಲ.
ನಮ್ಮ ರಾಜ್ಯದವರೇ ಆದ ಸಮರ್ಥ ವಕೀಲರನ್ನು ನೇಮಿಸಿದರೆ, ಅವರಿಗೆ ಜನ್ಮತಃ ಈ ನೆಲ ಹಾಗೂ ನಮ್ಮ ಜನರ ಕುರಿತಾಗಿ ವಿಶ್ವಾಸ, ಪ್ರೀತಿ ಹಾಗೂ ಅಂತಃಕರಣವಿರುತ್ತದೆ. ಆದರೆ, ರಾಜ್ಯಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಯೊಬ್ಬರು ರಾಜ್ಯದ ಜನರ ಸಂಕಷ್ಟವನ್ನು ಅದು ಹೇಗೆ ತಾನೆ ಅರಿತಾರು ಎನ್ನುವ ಕನಿಷ್ಠ ಪ್ರಜ್ಞೆ ನಿಮಗಿಲ್ಲ ಎನ್ನುವುದು ನಿಜಕ್ಕೂ ಈ ರಾಜ್ಯದ ದುರಂತ.
Discussion about this post