ನವದೆಹಲಿ, ಅ.17: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚನೆ ಮಾಡಿದ್ದ ತಜ್ಞರ ಸಮಿತಿ ಕರ್ನಾಟಕ, ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶಕ್ಕೆ 4 ದಿನಗಳ ಭೇಟಿ ನೀಡಿ ನಡೆಸಿದ್ದ ಅಧ್ಯಯ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದೆ.
ಕೇಂದ್ರ ಜಲ ಆಯೋಗದ ಮುಖ್ಯಸ್ಥ ಜಿಎಸ್ ಝಾ ಅವರ ನೇತೃತ್ವದ ತಜ್ಞರ ಸಮಿತಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರವಾಸ ಮಾಡಿ ತನ್ನ ವರದಿ ತಯಾರಿಸಿದ್ದು, ಸುಮಾರು 39 ಪುಟಗಳ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ ಮಾಡಿದೆ. ಎರಡೂ ರಾಜ್ಯಗಳ ನೀರಿನ ಲಭ್ಯತೆ ಹಾಗೂ ನೀರಿನ ಅವಶ್ಯಕತೆಗಳ ಕುರಿತು ಮಾತ್ರ ಮಾಹಿತಿ ನೀಡಲಾಗಿದ್ದು, ತಮಿಳುನಾಡಿಗೆ ನೀರು ಬಿಡುವ ಕುರಿತು ಅಥವಾ ನೀರು ಬಿಡಬಾರದು ಎಂಬುದರ ಕುರಿತು ಯಾವುದೇ ರೀತಿಯ ಶಿಫಾರಸ್ಸು ಮಾಡಿಲ್ಲ ಎನ್ನಲಾಗಿದೆ.
ಜಿಎಸ್ ಝಾ ನೇತೃತ್ವದ ತಂಡ ತಮ್ಮ ವರದಿಯಲ್ಲಿ ಎರಡೂ ರಾಜ್ಯಗಳ ನೀರಿನ ಕೊರತೆ ಹಾಗೂ ನೀರಿನ ಲಭ್ಯತೆ ಕುರಿತಂತೆ ಮಾಹಿತಿ ನೀಡಿದ್ದಾರೆ. ಅದರಂತೆ ಕರ್ನಾಟಕದಲ್ಲಿ ನೀರಿನ ಸಮಸ್ಯೆಯಿಂದಾಗಿ 42 ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಕರ್ನಾಟಕದಲ್ಲಿನ ನೀರಿನ ಕೊರತೆಯಿಂದಾಗಿ ಅಲ್ಲಿ ಉದ್ಯೋಗ ಸೃಷ್ಟಿಗೂ ಸಮಸ್ಯೆಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಬೆಳೆ ನಾಶದಿಂದಾಗಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಿನ ಕೊರತೆಯಿಂದಾಗಿ ಕರ್ನಾಟಕದ ಮೀನುಗಾರರು ಕೂಡ ಸಮಸ್ಯೆ ಎದುರಿಸುತ್ತಿದ್ದು, ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ಕರ್ನಾಟಕದ ಜಲಾಶಯಗಳಲ್ಲಿ ಕೇವಲ 30 ಟಿಎಂಸಿ ನೀರಿನ ಸಂಗ್ರಹ ಮಾತ್ರವಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಅಂತೆಯೇ ಕರ್ನಾಟಕದ ರೈತರ ಕುರಿತಂತೆ ಮಾಹಿತಿ ನೀಡಿರುವ ಜಿಎಸ್ ಝಾ, ಕರ್ನಾಟಕದ ರೈತರಲ್ಲಿ ಅಭಿವೃದ್ಧಿ ಆಕಾಂಕ್ಷೆ ಹಾಗೂ ಆಶೋತ್ತರಗಳಿದ್ದು, ಅವರನ್ನು ನೀರಿನ ಸದ್ಭಳಕೆ ಕುರಿತಂತೆ ಶಿಕ್ಷಿತರನ್ನಾಗಿ ಮಾಡುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ತಮಿಳುನಾಡು ವಿಚಾರಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ರೈತರಿಗೂ ನೀರಿ ಅವಶ್ಯಕತೆ ಇದ್ದು, ಬೆಳೆದು ನಿಂತ ಬೆಳೆಗಳನ್ನು ರಕ್ಷಿಸಿಕೊಳ್ಳಲು ಅಲ್ಲಿನ ರೈತರಿಗೆ ನೀರು ಅನಿವಾರ್ಯವಾಗಿದೆ. ತಮಿಳುನಾಡು ಸರ್ಕಾರ ರೈತರಿಗೆ ಸಾಕಷ್ಟು ಸಬ್ಸಿಡಿ ಘೋಷಣೆ ಮಾಡಿದ್ದು, ಈ ಸಬ್ಸಿಡಿ ಪರಿಣಾಮಕಾರಿಯಾಗಿ ರೈತರ ತಲುಪಲು ನೀರು ಬೇಕೇ ಬೇಕು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದೇ ವೇಳೆ ಬೆಳೆ ಉಳಿಸಿಕೊಳ್ಳಲು ನೀರು ಬೇಕು ಬೇಕು ಎಂದು ಹೇಳಿರುವ ಝಾ ಮುಂದುವರೆದ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಬಹುದು. ತಮಿಳುನಾಡಿಗೆ ಶೇ.50ರಷ್ಟು ನೀರು ಕಡಿತವಾದರೂ ಬೆಳೆ ನಿಭಾಯಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ತಜ್ಞರ ಪ್ರಕಾರ ಈ ಅಂಶ ನಾಳೆ ಕರ್ನಾಟಕ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಲು ನೆರವಾಗಬಹುದು ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ 6ರಿಂದ 10ರವರೆಗೂ ಜಿ.ಎಸ್.ಝಾ ನೇತೃತ್ವದ ತಂಡ ಎರಡು ರಾಜ್ಯಗಳ ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಅಧ್ಯಯನ ನಡೆಸಿತ್ತು. ಕೆಆರೆಸ್, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಜಲಾಶಯಗಳ ಹಾಗೂ ಜಲಾಶಯ ವ್ಯಾಪ್ತಿಯಲ್ಲಿ 2 ದಿನಗಳ ಕಾಲ ಅಧ್ಯಯನ ನಡೆಸಿ ವರದಿ ಸಿದ್ಧ ಮಾಡಿತ್ತು.
ಇಂದು ಏನಾಗುತ್ತೆ?
ಹಿಂದಿನ ವಿಚಾರಣೆಯಲ್ಲಿ ಅ.18ರ ವರೆಗೆ 2000 ಕ್ಯೂಸೆಕ್ ನೀರು ಹರಿಸಲು ಆದೇಶಿಸಿತ್ತು. ಸುಪ್ರೀಂಕೋರ್ಟ್ ಆದೇಶವನ್ನು ಸರ್ಕಾರ ಪಾಲಿಸಿದೆ. ಈಗ ಈ ವರದಿ ಆಧರಿಸಿ ಮಂಗಳವಾರ ಸುಪ್ರೀಂಕೋರ್ಟ್ ಯಾವ ಆದೇಶವನ್ನು ನೀಡಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಅಕ್ಟೋಬರ್ 6ರಿಂದ 10ರವರೆಗೂ ಜಿ.ಎಸ್.ಝಾ ನೇತೃತ್ವದ ತಂಡ ಎರಡು ರಾಜ್ಯಗಳ ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಅಧ್ಯಯನ ನಡೆಸಿತ್ತು. ಈ ವೇಳೆ ತಮಿಳುನಾಡಿಗಿಂತಲೂ ಕರ್ನಾಟಕದ ಸ್ಥಿತಿ ಶೋಚನೀಯವಾಗಿದೆ ಎಂಬ ಸತ್ಯಸಂಗತಿ ಅರಿತ ಕೇಂದ್ರ ತಂಡ ಮರುಕ ವ್ಯಕ್ತಪಡಿಸಿತ್ತು. ಹೀಗಾಗಿ ನಾಳೆ ನಡೆಯುವ ವಿಚಾರಣೆಯಲ್ಲಿ ರಾಜ್ಯಕ್ಕೆ ಒಂದಿಷ್ಟು ನ್ಯಾಯ ಸಿಗುವ ಆಶಾಭಾವನೆಯಿದೆ.
2 ದಿನ ಕರ್ನಾಟಕದ ಕಾವೇರಿ ಕೊಳ್ಳದಲ್ಲಿ ಅಧ್ಯಯನ ನಡೆಸಿದ ವೇಳೆ ಝಾ ನೇತೃತ್ವದ ತಂಡ ಇಲ್ಲಿನ ಪರಿಸ್ಥಿತಿ ಕಂಡು ಮರುಗಿತ್ತು. ನಿಮಗೆ ತುಂಬಾ ಕಷ್ಟವಿದೆ. ನಿಮ್ಮ ಕಷ್ಟ ನಮಗೆ ಅರ್ಥವಾಗಿದೆ ನಿಮಗೆ ಕುಡಿಯಲು ನೀರೂ ಇಲ್ಲ ಅಂತಾ ಹೇಳಿತ್ತು. ನಿಮ್ಮ ಕಷ್ಟವನ್ನು ಸುಪ್ರೀಂ ಕೋರ್ಟ್ ಮುಂದೆ ಇಡುತ್ತೇವೆ ಅಂತಾ ಹೇಳಿತ್ತು. ಕೆಆರೆಸ್, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಜಲಾಶಯಗಳ ಹಾಗೂ ಜಲಾಶಯ ವ್ಯಾಪ್ತಿಯಲ್ಲಿ 2 ದಿನಗಳ ಕಾಲ ಅಧ್ಯಯನ ನಡೆಸಿ ವರದಿ ಸಿದ್ಧ ಮಾಡಿತ್ತು. ಈ ವೇಳೆ ಕಾವೇರಿ ಕೊಳ್ಳದ ಜನ ಕೂಡಾ ಕಾವೇರಿ ಟೀಂ ಮುಂದೆ ತಮ್ಮ ಕಷ್ಟವನ್ನು ಹೇಳಿಕೊಂಡು ಅಳಲು ತೋಡಿಕೊಂಡಿದ್ದರು.
ರಾಜ್ಯಕ್ಕೆ ವರವೋ…ಶಾಪವೋ…?
ಕಾವೇರಿ ಕೊಳ್ಳದ ಜಲಾನಯನ ಪ್ರದೇಶಗಳ ವಾಸ್ತವಿಕ ಪರಿಸ್ಥಿತಿ ಅಧ್ಯಯನ ಮಾಡಲು ಸುಪ್ರೀಂಕೋರ್ಟ್ ನೇಮಿಸಿದ್ದ ತಾಂತ್ರಿಕ ಸಮಿತಿ ನೀಡಿರುವ ವರದಿ ರಾಜ್ಯಕ್ಕೆ ವರವಾಗುವ ಸಾಧ್ಯತೆ ಇದೆಯಾದರೂ ಕಾದುನೋಡಬೇಕಿದೆ.
ಸುಪ್ರೀಂಕೋರ್ಟ್ ಸೂಚನೆಯಂತೆ ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಕೊಳ್ಳದ ವಸ್ತುಸ್ಥಿತಿ ಅಧ್ಯಯನ ನಡೆಸಿರುವ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿಯಲ್ಲಿ ರಾಜ್ಯಕ್ಕೆ ಪೂರಕವಾಗಿರುವ ಅಂಶಗಳು ಉಲ್ಲೇಖವಾಗಿರುವುದು ಕಂಡುಬಂದಿದೆ.
ರಾಜ್ಯದ ಕಾವೇರಿ ಕೊಳ್ಳದ ಪ್ರದೇಶಗಳಲ್ಲಿ ಬರದ ಛಾಯೆ ಆವರಿಸಿದೆ. ಜಲಾಶಯಗಳಲ್ಲಿ ನೀರಿಲ್ಲ. ಸುಮಾರು 42 ತಾಲೂಕುಗಳನ್ನು ರಾಜ್ಯ ಸರ್ಕಾರ ಬರ ಪ್ರದೇಶವೆಂದು ಘೋಷಿಸಿದೆ. ಕಾವೇರಿ ಜಲಾಶಯದ ಪ್ರದೇಶಗಳಲ್ಲಿ ಬೆಳೆ ಒಣಗಿ ಹಾಳಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ಹಂತ ತಲುಪಿದೆ. ಬೆಳೆದು ನಿಂತ ಬೆಳೆಗಳಿಗೆ ನೀರಿಲ್ಲ. ಕೆಲ ಹಳ್ಳಿಗಳಲ್ಲಿ ರೈತರು ಪರ್ಯಾಯ ಬೆಳೆಗೆ ಮಾರು ಹೋಗಿದ್ದಾರೆ. ತಮಿಳುನಾಡಿನ ಜಲಾಶಯಗಳಲ್ಲಿ ನೀರಿನ ಪ್ರಮಾಣ ಸಾಕಷ್ಟಿದೆ. ಅಲ್ಲಿನ ಬೆಳೆ ನಷ್ಟದ ಪ್ರಮಾಣ ಕಡಿಮೆ ಇದೆ. ಇಲ್ಲಿ ಕುಡಿಯುವ ನೀರಿಗೆ ನೀರು ಸಂಗ್ರಹ ಮಾಡಿಕೊಳ್ಳಲಾಗಿದೆ. ಆದರೆ, ಅಲ್ಲಿ ಸಾಂಬಾ ಬೆಳೆಗೆ ನೀರು ಸಂಗ್ರಹ ಮಾಡಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ತಮಿಳುನಾಡಿಲ್ಲೂ ಕೂಡ ಸಾಂಬಾ ಬೆಳೆ, ಅರಿಶಿನ ಬೆಳೆ ನಷ್ಟ ಉಂಟಾಗಿದೆ. ಆದರೆ, ಕರ್ನಾಟಕದ ಪ್ರಮಾಣದಲ್ಲಿ ಬೆಳೆ ನಷ್ಟವಾಗಿಲ್ಲ ಎಂದು ಸಮಿತಿ ಹೇಳಿದೆ.
Discussion about this post