Read - 2 minutes
ಶಿವಮೊಗ್ಗ, ಸೆ.8: ಚೌತಿ ಗಣಪತಿ ಹಬ್ಬದ ಸಂಭ್ರಮದಲ್ಲಿದ್ದ ಹಾಡೋನಹಳ್ಳಿ ಗ್ರಾಮದಲ್ಲೀಗ ಸೂತಕದ ಛಾಯೆ ಆವರಿಸಿದೆ. ಇಡಿಯ ಗ್ರಾಮಕ್ಕೆ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದ್ದು, ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದೆ. ಈ ಗ್ರಾಮಸ್ಥರ ದುಃಖ ಶತ್ರುಗಳಿಗೂ ಬೇಡ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇದು ನಿನ್ನೆ ಗಣಪತಿ ವಿಸರ್ಜನೆ ವೇಳೆ ಹಾಡೋನಹಳ್ಳಿಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ೧೨ ಮಂದಿ ಮೃತಪಟ್ಟ ಹಿನ್ನೆಲೆ ಗ್ರಾಮದ ಇಂದಿನ ಪರಿಸ್ಥಿತಿ.
ಇಲ್ಲಿನ ಮಾರಿಕಾಂಬಾ ದೇವಾಲಯದ ಬಳಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ತುಂಗಭದ್ರಾ ನದಿಯಲ್ಲಿ ವಿಸರ್ಜಿಸುವ ವೇಳೆ ನಿನ್ನೆ ಮಧ್ಯಾಹ್ನ ದೋಣಿ ಮಗುಚಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಒಟ್ಟು ೧೨ ಮಂದಿ ಕಾಣೆಯಾಗಿದ್ದರು. ಇದರಲ್ಲಿ ೧೦ ಮಂದಿಯ ಶವ ಪತ್ತೆಯಾಗಿದ್ದು, ಇನ್ನೂ ಇಬ್ಬರಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಮಧ್ಯಾಹ್ನದವರೆಗೂ ಶೋಧ ಕಾರ್ಯ ನಡೆದಿತ್ತು. ಆದರೂ ಕಾಣೆಯಾದವರು ಪತ್ತೆಯಾಗಿರಲಿಲ್ಲ.
ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ್ ಖರೆ, ಜಿಪಂ ಸಿಇಒ ರಾಕೇಶ್ ಕುಮಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಕಾರ್ಯಾಚರಣೆಯ ಉಸ್ತುವಾರಿ ಗಮನಿಸಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಹಾಡೋನಹಳ್ಳಿ ಗ್ರಾಮದಲ್ಲಿ ಊರಿನ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಗೌರಿ ಹಾಗೂ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಸರಿಸುಮಾರು ೧೧.೩೦ ರ ವೇಳೆಗೆ ವಿಗ್ರಹಗಳ ಮೆರವಣಿಗೆ ಆರಂಭವಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ಮಧ್ಯಾಹ್ನ ೨ ರಿಂದ ೨.೧೫ ರ ಸುಮಾರಿಗೆ ತುಂಗಾಭದ್ರಾ ನದಿಯ ಬಳಿ ವಿಗ್ರಹಗಳ ವಿಸರ್ಜನೆಗೆ ಗ್ರಾಮಸ್ಥರು ಆಗಮಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷ ಕೂಡ ಸುಮಾರು ೨೦ ರಿಂದ ೨೨ ಜನರು ದೋಣಿಯಲ್ಲಿ ಕುಳಿತುಕೊಂಡು ವಿಗ್ರಹಗಳ ವಿಸರ್ಜನೆಗೆ ಮುಂದಾಗಿದ್ದಾರೆ. ದಡದಿಂದ ಸರಿಸುಮಾರು ೧೦೦ ಅಡಿ ದೂರದಲ್ಲಿ ಗೌರಿ ವಿಗ್ರಹವನ್ನು ಯಶಸ್ವಿಯಾಗಿ ವಿಸರ್ಜನೆ ಮಾಡಿ ಹಿಂದಿರುಗಿದ್ದಾರೆ. ತದನಂತರ ಗಣಪತಿ ವಿಗ್ರಹವನ್ನು ದೋಣಿಯಲ್ಲಿ ಕೊಂಡೊಯ್ದು ನದಿಯಲ್ಲಿ ವಿಸರ್ಜನೆ ಮಾಡಿದ್ದಾರೆ.
ಈ ವೇಳೆ ದೋಣಿಯು ಒಂದು ಕಡೆ ವಾಲಿಕೊಂಡು, ಒಳಗೆ ನೀರು ನುಗ್ಗಿದೆ. ಒಂದು ಬದಿಯಲ್ಲಿ ನಿಂತುಕೊಂಡಿದ್ದವರು ಮತ್ತೊಂದು ಬದಿಗೆ ಆಗಮಿಸಿದಾಗ ಮತ್ತೆ ವಾಲಿಕೊಂಡು ನೀರು ಒಳಗೆ ಬಂದಿದೆ. ಇದರಿಂದ ದೋಣಿಯ ಅರ್ಧದಷ್ಟು ನೀರು ತುಂಬಿಕೊಂಡು ಮುಳುಗಲಾರಂಭಿಸಿದೆ.
ಇದರಿಂದ ಆತಂಕಗೊಂಡು ಕೆಲವರು ದೋಣಿಯಿಂದ ನೀರಿಗೆ ಜಿಗಿದಿದ್ದಾರೆ. ಮತ್ತೆ ಕೆಲವರು ದೋಣಿ ಸಮೇತ ನೀರು ಪಾಲಾಗಿದ್ದಾರೆ. ಈಜು ಗೊತ್ತಿದ್ದ ಸರಿಸುಮಾರು ೧೦ ರಿಂದ ೧೨ ಜನರು ಈಜಿಕೊಂಡು ದಡ ಸೇರಿದ್ದಾರೆ. ಈ ವೇಳೆ ಒಂದಿಬ್ಬರನ್ನು ಕೆಲವರು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ. ಉಳಿದವರು ನೀರು ಪಾಲಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮೃತರೆಲ್ಲರೂ ಹಾಡೋನಹಳ್ಳಿ ಗ್ರಾಮದವರೇ ಆಗಿದ್ದು, ಕೆಲವರು ಬಂಧು-ಬಳಗದವರಾಗಿದ್ದಾರೆ. ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಇಡಿಯ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಮೃತರ ಕುಟುಂಬಸ್ಥರ ಆಕ್ರಂದನ ನೆರೆದಿದ್ದರ ಕಣ್ಣಾಲಿಗಳನ್ನು ಒದ್ದೆ ಮಾಡಿತ್ತು.
ಇಂತಹ ದುರಂತವೊಂದು ಸಂಭವಿಸಬಾರದಿತ್ತು. ಇದು ನಿಜಕ್ಕೂ ಒಂದು ದುಃಖಕರ ವಿಚಾರ. ಈ ಭಾಗದ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎನ್ನುವುದು ಹಿಂದಿನಿಂದಲೂ ಇರುವ ಆರೋಪವಾಗಿದೆ. ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಈ ಭಾಗದ ನದಿಯಲ್ಲಿ ಆಳ ಹೆಚ್ಚಾಗಿದೆ. ಇದು ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ, ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿಕೊಂಡವರ ವಿರುದ್ಧ ಕ್ರಮಕೈಗೊಳ್ಳಬೇಕು. ದುರಂತದಲ್ಲಿ ಮೃತರಾದ ವ್ಯಕ್ತಿಗಳ ಕುಟುಂಬಕ್ಕೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.
-ಕೆ.ಈ. ಕಾಂತೇಶ್, ಹೊಳಲೂರು ಜಿಪಂ ಸದಸ್ಯ
ಯಾವುದೇ ಮುನ್ನೆಚ್ಚರಿಕೆ ಇರಲಿಲ್ಲವೇ?
ನಿನ್ನೆ ದುರಂತದಲ್ಲಿ ಮಗುಚಿಕೊಂಡ ದೋಣಿಯ ಸಾಮರ್ಥ್ಯ ಕೇವಲ ೧೦ ಮಂದಿ ಮಾತ್ರ ಎನ್ನುವುದು ಪ್ರಾಥಮಿಕ ಹಂತದಲ್ಲಿ ತಿಳಿದುಬಂದಿದೆ. ಆದರೆ, ದೋಣಿಯಲ್ಲಿ ೨೦ಕ್ಕೂ ಹೆಚ್ಚು ಯುವಕರು ತೆರಳಿದ್ದು, ಅತಿಯಾದ ಭಾರವೇ ದುರಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಗಣಪತಿ ಪ್ರತಿಷ್ಠಾಪನೆ ಮಾಡಲು, ಮೈಕ್ ಬಳಸಲು, ಕಾರ್ಯಕ್ರಮ ನಡೆಸಲು ಅನುಮತಿ ಕಡ್ಡಾಯ ಎನ್ನುವ ಸ್ಥಳೀಯಾಡಳಿತ, ನದಿ ಹಾಗೂ ಕೆರೆಗಳಲ್ಲಿ ಗಣಪತಿ ವಿಸರ್ಜನೆ ಮಾಡುವ ವೇಳೆ ಮುಂಜಾಗ್ರತಾ ಕ್ರಮಕ್ಕೆ ನಿಯಮ ರೂಪಿಸಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಮುನ್ನೆಚ್ಚರಿಕೆ ಕೈಗೊಳ್ಳಿ…
ಶಿವಮೊಗ್ಗ ಸೇರಿದಂತೆ ಜಿಲ್ಲೆಯಾದ್ಯಂತ ಇನ್ನೂ ನೂರಾರು ಗಣಪತಿಗಳನ್ನು ವಿಸರ್ಜನೆ ಮಾಡುವ ಕಾರ್ಯ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಸಣ್ಣ ಮಟ್ಟದಿಂದ ಹಿಡಿದು ದೊಡ್ಡ ಗಣೇಶನವರೆಗೂ ಯಾವುದೇ ವಿಸರ್ಜನೆ ವೇಳೆ ಭದ್ರತೆ ಕೈಗೊಳ್ಳಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ನಗರ ಪಾಲಿಕೆ ತತಕ್ಷಣದ ಕ್ರಮ ಕೈಗೊಳ್ಳಬೇಕಿದೆ.
ಜಿಲ್ಲಾಡಳಿತ ತತಕ್ಷಣದ ಕ್ರಮವಾಗಿ ಇದನ್ನು ಮಾಡಬಹುದು…
*ನಾಳೆಯಿಂದ ಮುಂದಿನ ಒಂದು ತಿಂಗಳಲ್ಲಿ ವಿಸರ್ಜನೆ ಮಾಡುವ ಗಣಪತಿಯ ಪಟ್ಟಿ ತರಿಸಿಕೊಳ್ಳುವುದು.
*ಗಣಪತಿ ಪ್ರತಿಷ್ಠಾಪಿಸಿರುವ ಸಂಘದ ಸದಸ್ಯರೊಂದಿಗೆ ಭದ್ರತೆ ಕುರಿತು ಚರ್ಚಿಸುವುದು ಹಾಗೂ ಸೂಚನೆ ನೀಡುವುದು.
*ಈಗಾಗಲೇ ಸೂಚಿಸಿರುವ ಮೆರವಣಿಗೆಯ ಭದ್ರತೆ ಕುರಿತಾಗಿ ಮತ್ತೊಮ್ಮೆ ಮನವರಿಕೆ ಮಾಡಿಕೊಡುವುದು.
*ಎಲ್ಲ ಗಣಪತಿ ವಿಸರ್ಜನೆಗೆ ಸುರಕ್ಷಿತವಾದ ಒಂದೇ ಜಾಗವನ್ನು ತತಕ್ಷಣವೇ ಗುರುತಿಸಿ, ಎಲ್ಲ ವಿಗ್ರಹಗಳನ್ನು ಅಲ್ಲೇ ವಿಸರ್ಜಿಸುವಂತೆ ಸೂಚಿಸುವುದು.
*ವಿಸರ್ಜನೆ ವೇಳೆ ಮಧ್ಯಪಾನ ಮಾಡಿ ಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡುವುದು.
*ಪ್ರಮುಖವಾಗಿ ವಿಸರ್ಜನೆ ವೇಳೆ ಇಂತಿಷ್ಟೇ ಮಂದಿ ನೀರಿಗೆ ಇಳಿಯಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿ, ಪೊಲೀಸರ ಸಮ್ಮುಖದಲ್ಲಿ ವಿಸರ್ಜನೆ ನೆರವೇರುವಂತೆ ಮಾಡುವುದು.
Discussion about this post