Read - 2 minutes
ಚೆನ್ನೈ, ಸೆ.8: ಸ್ವದೇಶಿ ತಂತ್ರಜ್ಞಾನ ಬಳಸಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿಸಿದ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್-3ಡಿಆರ್ ಅನ್ನು ಇಂದು ಯಶಸ್ವಿಯಾಗಿ ಉಡಾಯಿಸುವ ಮೂಲಕ ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಇನ್ನೊಂದು ತ್ರಿವಿಕ್ರಮ ಹೆಜ್ಜೆ ಇಟ್ಟಿತು.
ಇದು ಸಾಗರದ ಮೇಲ್ಭಾಗದಲ್ಲಿ ಬೀಸುವ ಮಾರುತ ಚಲನೆಯಿಂದ ಚಂಡಮಾರುತವನ್ನು ಮುಂಚಿತವಾಗಿಯೇ ಗ್ರಹಿಸಬಲ್ಲದು. ಹವಾಮಾನ ಏರಿಳಿತವನ್ನು ನಿಖರವಾಗಿ ತಿಳಿಸಬಲ್ಲದು. ಸಮುದ್ರದಲ್ಲಿ ಪತನವಾಗುವ ವಿಮಾನ ಹಾಗೂ ಮುಳುಗುವ ಹಡಗನ್ನು ಪತ್ತೆ ಮಾಡಬಲ್ಲ ಸಾಮಥ್ರ್ಯ ಹೊಂದಿದೆ.ವಿಶೇಷವಾಗಿ ಕರಾವಳಿಯ ರಕ್ಷಣಾ ಸೇವೆಗಳಿಗೂ ಈ ಸುಧಾರಿತ ಉಪಗ್ರಹ ಮಾಹಿತಿ ಒದಗಿಸಲು ಶಕ್ತವಾಗಿದೆ.
ಇಂದು ಸಂಜೆ ನಿಗದಿತ ವೇಳೆಗಿಂತ ಸುಮಾರು 40 ನಿಮಿಷಗಳ ವಿಳಂಬವಾಗಿ ಅಂದರೆ 4.50ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್-3ಡಿಆರ್ ನಭಕ್ಕೆ ಯಶಸ್ವಿಯಾಗಿ ನೆಗೆದು ಭಾರತೀಯ ವಿಜ್ಞಾನಿಗಳ ಮೊಗದಲ್ಲಿ ಗೆಲುವಿನ ನಗೆ ಚಿಮ್ಮಿತು.
ಮೇಲ್ದರ್ಜೇಗೇರಿಸಲ್ಪಟ್ಟ ಸ್ವದೇಶಿ ಕ್ರಯೋಜೆನಿಕ್ ಇಂಜಿನ್ನಿಂದ ಚಾಲನೆಗೊಳ್ಳುವ ಜಿಎಸ್ಎಲ್ವಿ- ಎಫ್05 ರಾಕೆಟ್ನ ಬೋರ್ಡ್ ನಲ್ಲಿ ಕುಳಿತು ಈ ಇನ್ಸಾಟ್-3ಡಿಆರ್ ನಭಕ್ಕೇರಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡ್ಡಯನ ನೆಲೆಯಿಂದ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದೆ. ಕ್ರಯೋಜೆನಿಕ್ ಎಂಜಿನನ್ನು 4ನೇ ಬಾರಿಗೆ ಜಿಎಸ್ಎಲ್ ವಿ ರಾಕೆಟ್ ನಲ್ಲಿ ಬಳಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆದಾಗ್ಯೂ ಜಿಎಸ್ಎಲ್ ವಿ-ಎಫ್05ಯಲ್ಲಿ ಈ ಇಂಜಿನ್ ಪರೀಕ್ಷೆಗೆ ಒಳಪಡುತ್ತಿರುವುದು ಇದೇ ಮೊದಲು.
49.13ಮೀ.ಉದ್ದದ ಜಿಎಸ್ಎಲ್ ವಿ -ಎಫ್0 5 ರಾಕೆಟ್ ಮೂಲಕ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ 2211 ಕೆ.ಜಿ. ತೂಕದ ಇನ್ಸಾಟ್ -3ಡಿಆರ್ ಉಪಗ್ರಹ ನಂತರ ತನ್ನದೇ ಮುನ್ನೂಕುವ ಶಕ್ತಿ ಬಳಸಿಕೊಂಡು 17ನಿಮಿಷಗಳ ಬಳಿಕ ತನ್ನ ಅಂತಿಮ ಗುರಿಯಾದ ಭೂಸ್ಥಿರ ಕಕ್ಷೆಯನ್ನು ಸೇರಿಸಿಕೊಳ್ಳಲಿದೆ.ಇನ್ಸಾಟ್ -3ಡಿಆರ್ 10ವರ್ಷಗಳ ಆಯಸ್ಸು ಹೊಂದಿದ್ದು, ವಿವಿಧ ಹವಾಮಾನ , ಸಂಶೋಧನೆ ಹಾಗೂ ರಕ್ಷಣಾ ಸೇವೆಗಳಲ್ಲಿ ಬಳಕೆಯಾಗಲಿದೆ.
ಬುಧವಾರ ಆರಂಭಗೊಂಡ 29ತಾಸುಗಳ ಕ್ಷಣಗಣನೆಯ ಬಳಿಕ ಉಡಾವಣೆಗೊಂಡ ಈ ಅತ್ಯಾಧುನಿಕ ಉಪಗ್ರಹವು ಇನ್ಸಾಟ್ ಸರಣಿ ಉಪಗ್ರಹಗಳಲ್ಲಿ ಒಂದಾಗಿದೆ. ಈ ಹಿಂದೆ 2013ರಲ್ಲಿ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹವನ್ನು ಫ್ರಾನ್ಸ್ ನ ಗಯಾನದಿಂದ ಉಡಾವಣೆ ಮಾಡಲಾಗಿತ್ತು. 2015ರ ಆಗಸ್ಟ್ ನಲ್ಲಿ ಜಿಸ್ಯಾಟ್-6 ಉಪಗ್ರಹವನ್ನು ಜಿಎಸ್ ಎಲ್ ವಿ-ಡಿ6 ಉಡಾವಣಾ ವಾಹಕದ ಮೂಲಕ ಇದೇ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿ ಇಸ್ರೋ ಯಶಸ್ಸು ಸಾಧಿಸಿತ್ತು. ಇದರ ಮುಂದುವರಿದ ಭಾಗವಾಗಿ ಇದೀಗ ಇನ್ಸಾಟ್ 3ಡಿಆರ್ ಉಪಗ್ರಹವನ್ನು ಇಸ್ರೋ ಉಡಾವಣೆ ಮಾಡಿದೆ.
Discussion about this post