ಕಲ್ಪ ಮೀಡಿಯಾ ಹೌಸ್
ಚಿತ್ರದುರ್ಗ: ಜಿಲ್ಲೆಯ ಭರಮಸಾಗರ ಮೂರು ವರ್ಷಗಳ ಅವಧಿಯಲ್ಲಿ ಹೊಳಲ್ಕೆರೆ ಹಾಗೂ ಭರಮಸಾಗರ ಕೇತ್ರಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಕೆರೆಗೆ ನೀರು ತುಂಬಿಸುವ ಯೋಜನೆಗೆ, ವಿದ್ಯುತ್ ಪ್ರಸರಣ ಘಟಕಗಳ ಸ್ಥಾಪನೆಗೆ 1552 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದ್ದಾರೆ.
ಕುಡಿಯುವ ನೀರಿಗೆ 302 ಕೋಟಿ ರೂ., 94 ಕೆರೆಗಳಿಗೆ ನೀರು ತುಂಬಿಸಲು 700 ಕೋಟಿ ರೂ. ವಿದ್ಯುತ್ ಪ್ರಸರಣ ಘಟಕಗಳ ಸ್ಥಾಪನೆಗೆ 550 ಕೋಟಿ ರೂ.ಅನುದಾನ ತರಲಾಗಿದೆ ಎಂದು ಮಾಹಿತಿ ನೀಡಿದರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ವಿಶೇಷವಾಗಿ ಸಿರಿಗೆರೆಯ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶ್ರೀಗಳ ಆಶೀರ್ವಾದ ಹಾಗೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು. ಕೆರೆಗಳಿಗೆ ನೀರು ಹರಿದ ಬಳಿಕ ಅಂತರ್ಜಲ ವೃದ್ಧಿಯಾಗಲಿದ್ದು ಕೃಷಿಗೆ ವಿದ್ಯುತ್ ಬೇಡಿಕೆ ಹೆಚ್ಚಲಿದೆ ಎಂಬುದನ್ನು ಮನಗಂಡು ಭರಮಸಾಗರ, ಹೊಳಲ್ಕೆರೆಯಲ್ಲಿ ತಲಾ 220 ಕೆವಿ ಸಾಮರ್ಥ್ಯದ ಎರಡು ವಿದ್ಯುತ್ ಪ್ರಸರಣ ಘಟಕಗಳನ್ನು ಮಂಜೂರು ಮಾಡಿಸಲಾಗಿದೆ.
ಭರಮಸಾಗರ ಬಳಿಯ ಕಾಕಬಾಳುವಿನಲ್ಲಿ ವಿದ್ಯುತ್ ಘಟಕ ನಿರ್ಮಿಸಲು ಸ.ನಂ.6 ರಲ್ಲಿ 9.30 ಎಕರೆ ಜಾಗ ಗುರುತಿಸಲಾಗಿದೆ. ಇದರಿಂದ 1.50 ಲಕ್ಷ ರೈತರ 3 ಲಕ್ಷ ಎಕರೆ ಜಮೀನಿಗೆ ಅನುಕೂಲವಾಗಲಿದೆ. ಉದ್ದೇಶಿತ ಘಟಕದಿಂದ ಸಿರಿಗೆರೆ, ಭರಮಸಾಗರ, ವಿಜಾಪುರ, ಬಿದರಕೆರೆ, ಬಿಳಿಜೋಡು ಸೇರಿ 10 ವಿದ್ಯುತ್ ಸರಬರಾಜು ಕೇಂದ್ರಗಳಿಗೆ ವಿದ್ಯುತ್ ವಿತರಣೆ ಆಗಲಿದೆ. ಹೀಗಿದ್ದೂ ಯಾರೋ ಬಗರ್ ಹುಕುಂ ಸಾಗುವಳಿ ಮಾಡಿದವರು ಕೆರೆ ಇದೆ ಎಂದು ಹುನ್ನಾರ ಮಾಡುತ್ತಿದ್ದಾರೆ. ಇನ್ನಾರೋ ಬಂದು ಅಭಿವೃದ್ದಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
5 ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ನೀರು
ಹೊಸಪೇಟೆಯಿಂದ ಬರುವ ತುಂಗಭದ್ರಾ ಹಿನ್ನೀರು ಬಳಸಿ ಕೋಗುಂಡೆ, ಕಾಲಗೆರೆ, ಯಳಗೋಡು, ಬ್ಯಾಲಹಾಳು ಇಸಾಮುದ್ರದ ಐದು ಪಂಚಾಯಿತಿಯ ಗ್ರಾಮಗಳಿಗೆ ನಿರು ಹರಿಸಲಾಗುವುದು. ಈ ಸಂಬಂಧ ಸುಲ್ತಾನಿಪುರ ಬಳಿ 26 ಕೋಟಿ ರೂ.ವೆಚ್ಚದಲ್ಲಿ ನೀರು ಶೇಖರಣಾ ಕೇಂದ್ರ ನಿರ್ಮಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಮುಕ್ತಾಯ ಹಂತದಲ್ಲಿ 94 ಕೆರೆ ಕಾಮಗಾರಿ ಹೊಳಲ್ಕೆರೆ, ಭರಮಸಾಗರ ವ್ಯಾಪ್ತಿಯ 94 ಕೆರೆಗಳಿಗೆ ನೀರು ಹರಿಸಲು ಪೈಪ್ ಲೈನ್ ಅಳವಡಿಕೆ ಕಾರ್ಯ ಮುಕ್ತಾಯ ಹಂತದಲ್ಲಿದೆ. ಈ ಪೈಕಿ 38 ಕೆರೆಗಳಿಗೆ ಅಪ್ಪರ್ ಭದ್ರಾದಿಂದ, 12ಕ್ಕೆ ಸಾಸ್ವೇಹಳ್ಳಿ ಯೋಜನೆಯಿಂದ, 40 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಒಂದು ಸಾವಿರ ಎಕರೆ ವಿಸ್ತೀರ್ಣದ ಭರಮಸಾಗರ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸಲು 60 ಕಿ. ಮೀ. ಪೈಪ್ ಲೈನ್ ಅಳವಡಿಕೆ ಪೈಕಿ ಈಗಾಗಲೇ 58 ಕಿ.ಮೀ. ಪೂರ್ಣವಾಗಿದೆ. ಕೆರೆಯಲ್ಲಿ ನೀರು ಹಿಡಿದಿಡಲು 3 ಕೋಟಿ ರೂ.ವೆಚ್ಚ ಮಾಡಿ ಹೂಳು ತೆಗೆಸಲಾಗಿದೆ. ಇಲ್ಲಿಂದ 40 ಕೆರೆಗಳಿಗೆ ನೀರು ಲಿಫ್ಟ್ ಮಾಡಲಾಗುತ್ತದೆ ಎಂದು ತಿಳಿಸಿದರು.
68 ಕೋಟಿ ರೂ. ವೆಚ್ಚದಲ್ಲಿ ತೇಕಲವಟ್ಟಿ, ಅರಿಶಿನಘಟ್ಟ, ಎನ್.ಜೆ.ಹಳ್ಳಿಯಲ್ಲಿ ತಲಾ 66 ಕೆ ವಿ ಸಾಮರ್ಥ್ಯದ ವಿದ್ಯುತ್ ಪ್ರಸರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು. ರಸ್ತೆಗಳ ಅಭಿವೃದ್ಧಿ ಹಾಗೂ ಕೆರೆಗಳ ಹೂಳು ತೆಗೆಸುವ ಕಾರ್ಯ ಪ್ರಗತಿಯಲ್ಲಿದೆ. ರೈತರು ಸಾರ್ವಜನಿಕರು ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಡಿ.ವಿ.ಶರಣಪ್ಪ, ಎಚ್.ಎಂ. ಮಂಜುನಾಥ್, ಕೊಳಹಾಳು ಶರಣಪ್ಪ, ಸಾಮಿಲ್ ಶಿವಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್‌ಕುಮಾರ್, ಹೋಬಳಿಯ ರೈತರು, ಕಾರ್ಯಕರ್ತರು ಇದ್ದರು.
(ವರದಿ: ಎಂ.ಎಂ. ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post