ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ಮಹಿಳೆ ಹೊರತಾಗಿ ಸಂಸ್ಕೃತಿ ಇಲ್ಲ, ಸಂಸ್ಕೃತಿ ಹೊರತಾಗಿ ಮಹಿಳೆ ಇಲ್ಲ. ಸಂಸ್ಕೃತಿ ಉಳಿದಿದ್ದು ಮಹಿಳೆಯಿಂದ, ಮಹಿಳೆ ಸಂಸ್ಕೃತಿಯ ಬ್ರಾಂಡ್ ಅಂಬಾಸಿಡರ್ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಲಕ್ಷ್ಮೀ ಹೆಬ್ಬಾಳಕರ್ Minister Lakshmi Hebbalkar ಹೇಳಿದರು.
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಹಿಳೆ ಮತ್ತು ಸಂಸ್ಕೃತಿ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. ಭಾರತ ದೇಶದ ವೈಭವಪೂರಿತ ಇತಿಹಾಸವನ್ನು ನಾವು ಕೇಳಿ ತಿಳಿದುಕೊಂಡಿದ್ದೇವೆ. ಆದರೆ ಮಹಿಳೆಯನ್ನು ಕೇವಲ ಹೆರೋಕೆ, ಲಾಲಿ ಹಾಡೋಕೆ, ಅಡುಗೆ ಮಾಡೋಕೆ ಸೀಮಿತ ಮಾಡಲಾಗಿದೆ. ಗಂಡ ಸತ್ತರೆ ಬದುಕಲು ಸಾಧ್ಯವೇ ಇಲ್ಲ ಎಂದು ಚಿತೆಗೆ ಹಾರಿ ಪ್ರಾಣ ಬಿಡುವ ಅನಿಷ್ಠ ಪದ್ಧತಿಯನ್ನು ಭಾರತ ಕಂಡಿದೆ. ಇಂದು ಹೆಣ್ಣು ಬದಲಾಗಿದ್ದಾಳೆ. ಪೈಲಟ್ ಆಗಿಯೂ ಸಾಧನೆ ಮಾಡಿದ್ದಾಳೆ, ಕೂಲಿ ಮಾಡಿಯೂ ಸಂಸಾರ ನಡೆಸುತ್ತಾಳೆ, ಗಂಡನ ಹೆಗಲಿಗೆ ಹೆಗಲು ಕೊಟ್ಟು ಸಂಸಾರದ ಚಕ್ಕಡಿಯನ್ನು ಮುಂದೆ ಒಯ್ಯುತ್ತಾಳೆ. ಹಾಗಾಗಿ ಮಹಿಳೆ ಬಗೆಗಿನ ನಮ್ಮ ಭಾವನೆಗಳು ಬದಲಾವಣೆಯಾಗಬೇಕು ಎಂದು ಹೆಬ್ಬಾಳಕರ್ ಹೇಳಿದರು.
Also read: ಯತ್ನಾಳ್ 40 ಸಾವಿರ ರೂ ಕೋಟಿ ಹಗರಣದ ಆರೋಪ: ಬಿಜೆಪಿ ನಾಯಕರ ಮೌನ ಪ್ರಶ್ನೆ ಮಾಡಿದ ಸಚಿವ ಡಾ. ಪಾಟೀಲ್
ಬೆಳಗ್ಗೆ ಎದ್ದು ಕಸ ಗುಡಿಸಿ ರಂಗವಲ್ಲಿ ಹಾಕುವಲ್ಲಿಂದ ಸಂಸ್ಕೃತಿ ಹರಡುವ ತನ್ನ ಕಾಯಕವನ್ನು ಮಹಿಳೆ ಆರಂಭಿಸುತ್ತಾಳೆ. ಪ್ರತಿ ನಿತ್ಯ ತಡವಾಗಿ ಮಲಗುವವಳೂ ಮಹಿಳೆ, ಬೆಳಗ್ಗೆ ಬೇಗ ಏಳುವವಳೂ ಮಹಿಳೆ, ಹಬ್ಬಹರಿದಿನ ಬಂದರೆ ಹೋಳಿಗೆ ಮಾಡುವವಳೂ ಹೆಣ್ಣು ಎಂದು ಅವರು ಹೇಳಿದರು.
ಶಾರೀರಿಕವಾಗಿ ಮಹಿಳೆ ಸ್ವಲ್ಪ ದುರ್ಬಲಳಾಗಿರಬಹುದು. ಆದರೆ ಮಾನಸಿಕವಾಗಿ ನಾವು ಗಟ್ಟಿಯಾಗಿದ್ದೇವೆ. ಪುರುಷರು ಸಣ್ಣ ಕಷ್ಟ ಬಂದರೆ ನಲುಗಿ ಆತ್ಮಹತ್ಯೆ ಯೋಚನೆ ಮಾಡುತ್ತಾರೆ. ಆದರೆ ಮಹಿಳೆ ಎಂತಹ ಸಂದರ್ಭ ಬಂದರೂ ಕಂಗೆಡದೆ ಕೂಲಿ ಮಾಡಿಯಾದರೂ ಸಂಸಾರ ನಡೆಸುತ್ತಾಳೆ, ಆತ್ಮಹತ್ಯೆಯ ಯೋಚನೆ ಮಾಡುವುದಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮಹಿಳೆ ಮುಂದೆ ಬರಬೇಕು ಎಂದು ಹೆಬ್ಬಾಳಕರ್ ಹೇಳಿದರು.
ಸಿದ್ದೇಶ್ವರ ಸ್ವಾಮೀಜಿಯವರು ಕಂಡ ಸಮೃದ್ಧ ಸಮಾಜ, ಸಮೃದ್ಧ ಭಾರತದ ಕನಸು ನನಸಾಗಬೇಕು. 12ನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದೂ ಅದೇ, ಸಿದ್ದೇಶ್ವರ ಸ್ವಾಮೀಜಿ ಅವರು ಹೇಳಿದ್ದೂ ಅದೇ. ಇಂದು ನಮ್ಮ ಚಿಂತನೆ, ಆಚಾರ, ವಿಚಾರ ಬದಲಾಗಬೇಕು. ಹೆಣ್ಣು ತಪ್ಪು ಮಾಡಿದರೆ ಕುಟುಂಬಕ್ಕೆ, ಗಂಡು ತಪ್ಪು ಮಾಡಿದರೆ ಅವನಿಗಷ್ಟೆ ಎನ್ನುವ ಅಸಮಾನತೆಯ ಭಾವನೆ ಹೋಗಬೇಕು. ಹೆಣ್ಣು ಭ್ರೂಣ ಹತ್ಯೆಯಂತಹ ನಾಚಿಕೆಗೇಡಿನ ಕೃತ್ಯ ಇಂದೂ ನಡೆಯುತ್ತಿದೆ. ನಾವು ಬೇರೆಯವರ ಗುಲಾಮರಾಗಿ ಇರುವುದು ಬೇಡ. ನಮ್ಮ ಸ್ವಾಭಿಮಾನ ಎತ್ತಿ ಹಿಡಿಯೋಣ. ಬೇರೆಯವರ ಹೆಗಲಿಗೆ ಹೆಗಲು ಕೊಟ್ಟು ನಮ್ಮ ಸಂಸ್ಕೃತಿಯನ್ನು ಉಳಿಸೋಣ. ನಡೆ ನುಡಿಯಲ್ಲಿ ವ್ಯತ್ಯಾಸವಿಲ್ಲದಂತೆ ನಡೆಯೋಣ. ನಮ್ಮ ಮಕ್ಕಳಿಗೆ ರಾಮಾಯಣ, ಮಹಾಭಾರತ ಓದಿಸೋಣ. ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವ ಜವಾಬ್ದಾರಿ ಮಹಿಳೆಯರಷ್ಟೇ ಪುರುಷರಿಗೂ ಇದೆ ಎನ್ನುವುದನ್ನು ನೆನಪಿಟ್ಟುಕೊಳ್ಳೋಣ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಗಂಗಾ ಮಾತಾಜಿ, ಬಸವಲಿಂಗ ಮಹಾಸ್ವಾಮಿ, ವೀಣಾ ಬನ್ನಂಜೆ, ಯೋಗೇಶ್ವರಿ ಮಾತಾಜಿ ಮೊದಲಾದವರು ಇದ್ದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post