ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಕಾರ್ಕಳದ (Karkala) ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ನ 2026-27ನೇ ಸಾಲಿನ ನೂತನ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಸಮಾರಂಭವು ಜುಲೈ 31ರಂದು ಸಂಸ್ಥೆಯ ಸಪ್ತಸ್ವರ ವೇದಿಕೆಯಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರಾದ ಅಶ್ವಥ್ ಎಸ್.ಎಲ್., ಆದರ್ಶ ಎಂ.ಕೆ., ಡಾ. ಗಣನಾಥ್ ಶೆಟ್ಟಿ, ಗಣಪತಿ ಭಟ್ ಕೆ.ಎಸ್., ವಿಮಲ್ ರಾಜ್ ಹಾಗೂ ಅಮೃತ ರೈ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದೇ ವೇಳೆ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಗೌರವದ ಬ್ಯಾಡ್ಜ್ಗಳನ್ನು ತೊಡಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥಾಪಕ ವಿಮಲ್ ರಾಜ್ ಅವರು, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನಾಯಕತ್ವ ಗುಣ ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. “ನಾಯಕತ್ವ ಎಂದರೆ ಕೇವಲ ಅಧಿಕಾರವಲ್ಲ, ಅದು ಜವಾಬ್ದಾರಿ, ಶಿಸ್ತು ಮತ್ತು ಪ್ರಾಮಾಣಿಕತೆಯ ಪ್ರತೀಕ. ಶಾಲೆಯ ಗೌರವವನ್ನು ಹೆಚ್ಚಿಸುವ ರೀತಿಯಲ್ಲಿ ವಿದ್ಯಾರ್ಥಿ ನಾಯಕರು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು,” ಎಂದು ಕರೆ ನೀಡಿದರು.
Also read>> ದೇಶದ ಶ್ರೀಮಂತ ಸಿಎಂ ಡಿ.ಕೆ. ಶಿವಕುಮಾರ್; ಎಷ್ಟು ಕೋಟಿ ಆಸ್ತಿ ಘೋಷಣೆ?
ಸಂಸ್ಥಾಪಕ ಅಶ್ವಥ್ ಎಸ್.ಎಲ್. ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ದೊಡ್ಡ ಕನಸುಗಳನ್ನು ಕಾಣಬೇಕು. ಸಮಾಜದ ಒಳಿತಿಗಾಗಿ ಕೆಲಸ ಮಾಡುವ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ತಿಳಿಸಿದರು.
ಬಳಿಕ ಶಾಲೆಯ ಪ್ರಾಂಶುಪಾಲರಾದ ಅಕ್ಷತಾ ಶೆಣೈ ಅವರು ನೂತನವಾಗಿ ಆಯ್ಕೆಯಾದ ಶಾಲಾ ನಾಯಕ ಪ್ರತ್ಯಕ್ಷ ನಾಯಕ್ ಹಾಗೂ ನಾಯಕಿ ಪ್ರಾಪ್ತಿ ನೆಲ್ಲಿ ಸೇರಿದಂತೆ ವಿವಿಧ ಸದನಗಳ ನಾಯಕರು, ಕ್ರೀಡೆ, ಶಿಸ್ತು ಮತ್ತು ಸಾಂಸ್ಕೃತಿಕ ವಿಭಾಗಗಳ ಪ್ರತಿನಿಧಿಗಳಿಗೆ ಅಧಿಕಾರದ ಪ್ರತಿಜ್ಞಾವಿಧಿ ಬೋಧಿಸಿದರು.
ಸಮಾರಂಭದಲ್ಲಿ ಶಾಲೆಯ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









