ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಚಾಮರಾಜನಗರ (Chamarajanagar) ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ (R.Gundurao) ಅವರ ಕೊಡುಗೆಗಳ ಕುರಿತು ವಿಶೇಷ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆರ್. ಗುಂಡೂರಾವ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿ, ಅವರ ಆಡಳಿತ, ಅಭಿವೃದ್ಧಿ ಕಾರ್ಯಗಳು, ಕನ್ನಡ ಪ್ರೇಮ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.
ರೈತರಿಗೆ ಗುಂಡೂರಾವ್ರ ಕೊಡುಗೆ ಅಪಾರ
ತಮಿಳು ಸಂಘದ ಅಧ್ಯಕ್ಷ ಜಗದೀಶನ್ ಮಾತನಾಡಿ, ಆರ್. ಗುಂಡೂರಾವ್ ಅವರು ರೈತರಿಗೆ ಅಪಾರ ಕೊಡುಗೆ ನೀಡಿದ್ದಾರೆ. ನೀರಾವರಿ, ವಿದ್ಯುತ್ ಹಾಗೂ ರೈತರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ದಿಟ್ಟ ನಿರ್ಧಾರಗಳ ಮೂಲಕ ಬಗೆಹರಿಸಿದ ಅಪರೂಪದ ಮುಖ್ಯಮಂತ್ರಿ ಎಂದು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಗುಂಡೂರಾವ್ ಅವರ ಕೊಡುಗೆಗಳ ಕುರಿತು ಕಾರ್ಯಕ್ರಮ ಆಯೋಜಿಸಿರುವುದು ಮೆಚ್ಚುವಂತಹ ವಿಚಾರವಾಗಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲೂ ಮಹತ್ವದ ಬದಲಾವಣೆ
ಬರಹಗಾರ ಎಸ್. ಲಕ್ಷ್ಮೀನರಸಿಂಹ ಮಾತನಾಡಿ, ಗುಂಡೂರಾವ್ ಅವರ ಆಡಳಿತಾವಧಿಯಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳನ್ನು ನೇಮಕ ಮಾಡಲಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಪ್ರಮುಖ ಪಾತ್ರ ವಹಿಸಿದರು. ಕೈಗಾರಿಕೆ, ನೀರಾವರಿ, ಶಿಕ್ಷಣ, ಕಟ್ಟಡಗಳು ಹಾಗೂ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಅವರು ಕೊಡುಗೆ ನೀಡಿದ್ದಾರೆ ಎಂದರು.
ಪ್ರತಿಯೊಂದು ಸಮುದಾಯಕ್ಕೂ ಶಿಕ್ಷಣ ಹಾಗೂ ಅಭಿವೃದ್ಧಿಯ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅವರ ಆಡಳಿತದಲ್ಲಿ ಹಲವು ಕಾರ್ಯಗಳು ನಡೆದವು ಎಂದು ತಿಳಿಸಿದರು.
ಕನ್ನಡ ಪ್ರೇಮ ಅಪಾರವಾಗಿತ್ತು
ಅಖಿಲ ಕರ್ನಾಟಕ ಕನ್ನಡ ಮಹಾಸಭೆಯ ರಾಜ್ಯ ಅಧ್ಯಕ್ಷ ಶ್ರೀನಿವಾಸ ಗೌಡ ಮಾತನಾಡಿ, ಆರ್. ಗುಂಡೂರಾವ್ ಅವರು ನೇರ ನಡೆ-ನುಡಿಯ ವ್ಯಕ್ತಿತ್ವ ಹೊಂದಿದ್ದವರು. ಅವರ ಕನ್ನಡ ಪ್ರೇಮ ಅಪಾರವಾಗಿತ್ತು. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ನಿರ್ಮಾಣ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಹಲವು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
‘ಮರೆಯಲಾಗದ ವ್ಯಕ್ತಿತ್ವ’
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್. ಋಗ್ವೇದಿ ಮಾತನಾಡಿ, ಆರ್. ಗುಂಡೂರಾವ್ ಅವರು ಮರೆಯಲಾಗದ ವ್ಯಕ್ತಿತ್ವ. ಕ್ಷಣಮಾತ್ರದಲ್ಲಿ ನಿರ್ಧಾರಗಳನ್ನು ಕೈಗೊಂಡು ಆಡಳಿತದಲ್ಲಿ ದಕ್ಷತೆ ಮೆರೆದ ಮುಖ್ಯಮಂತ್ರಿ ಎಂದು ಬಣ್ಣಿಸಿದರು.
ಅವರ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಸಂಸ್ಥೆಗಳು ಹಾಗೂ ಇಂಜಿನಿಯರಿಂಗ್ ಸಂಸ್ಥೆಗಳು ಸ್ಥಾಪನೆಯಾದವು. ಮೈಸೂರಿನ ಕಲಾಮಂದಿರ, ಬೆಂಗಳೂರಿನ ಬಸ್ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಅವರ ಆಡಳಿತದ ಪ್ರಮುಖ ಕೊಡುಗೆಗಳಾಗಿವೆ ಎಂದರು.
ಕನ್ನಡದ ಏಳಿಗೆಗಾಗಿ ವಿಶ್ವ ಕನ್ನಡ ಸಮ್ಮೇಳನವನ್ನು ಆರಂಭಿಸಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಗೆ ವಿಶ್ವಮಟ್ಟದ ಮಾನ್ಯತೆ ದೊರೆಯುವಂತೆ ಮಾಡಿದ ಕೀರ್ತಿ ಗುಂಡೂರಾವ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಆದರೆ ಅವರ ಆಡಳಿತಾವಧಿಯಲ್ಲಿ ನಡೆದ ರೈತ ಹೋರಾಟ ಹಾಗೂ ಗೋಕಾಕ್ ಚಳುವಳಿ ಅವರಿಗೆ ರಾಜಕೀಯವಾಗಿ ಹಿನ್ನಡೆ ಉಂಟುಮಾಡಿದವು ಎಂದು ಅಭಿಪ್ರಾಯಪಟ್ಟರು.
Also Read>> ವಿಶಾಖಪಟ್ಟಣಂ–ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ: ರೈಲ್ವೆ ಇಲಾಖೆ ಗ್ರೀನ್ ಸಿಗ್ನಲ್
R.Gundurao: ಕನ್ನಡ ಹೋರಾಟಕ್ಕೆ ಸ್ಫೂರ್ತಿಯಾಗಿದ್ದ ಗುಂಡೂರಾವ್
ಕನ್ನಡ ಹೋರಾಟಗಾರ ಪಣ್ಯದ ಹುಂಡಿ ರಾಜು ಮಾತನಾಡಿ, ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಆರ್. ಗುಂಡೂರಾವ್ ಅವರು ತಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು. ಮೈಸೂರಿನಲ್ಲಿ ಆರ್. ಗುಂಡೂರಾವ್ ಹಾಗೂ ವಾಟಾಳ್ ನಾಗರಾಜ್ ಅವರ ಭಾಷಣಗಳನ್ನು ಕೇಳಿ ಕನ್ನಡದ ಅಭಿಮಾನಿಗಳಾಗಿ ರೂಪುಗೊಂಡೆವು. ಇಂದಿಗೂ ಕನ್ನಡ ಹೋರಾಟದಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಅಂದಿನ ಪ್ರಭಾವವೂ ಕಾರಣವಾಗಿದೆ ಎಂದರು.
ಗುಂಡೂರಾವ್ ಅವರ ದಕ್ಷ ಆಡಳಿತ ಇಂದಿಗೂ ನಮಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್. ಶಿವಲಿಂಗ ಮೂರ್ತಿ, ಪದ್ಮ ಪುರುಷೋತ್ತಮ್, ಕಾಗಲವಾಡಿ ರಂಗಸ್ವಾಮಿ, ಮಾಲಿನಿ, ಆಲೂರು ರಮೇಶ್ ಸೇರಿದಂತೆ ಸಾಹಿತ್ಯಾಸಕ್ತರು ಹಾಗೂ ಕನ್ನಡಪರ ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









