ಕಲ್ಪ ಮೀಡಿಯಾ ಹೌಸ್ | ಕೈವ್ (ರಷ್ಯಾ) |
ರಷ್ಯಾ–ಉಕ್ರೇನ್ (Russia–Ukraine) ಯುದ್ಧ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದ್ದು, ಉಕ್ರೇನ್‌ನ ಸುಮಿ ಪ್ರದೇಶದಲ್ಲಿರುವ ಭಾರತೀಯ ಮೂಲದ ಕುಸುಮ್ ಗ್ರೂಪ್ (Kusum Group)ಗೆ ಸೇರಿದ ಬೃಹತ್ ಔಷಧ ತಯಾರಿಕಾ ಘಟಕದ ಮೇಲೆ ರಷ್ಯಾ ಡ್ರೋನ್ ದಾಳಿ ನಡೆದಿದೆ. ದಾಳಿಯಲ್ಲಿ ಫಾರ್ಮಾ ಘಟಕದ ಮುಖ್ಯ ಕಟ್ಟಡ ಬಹುತೇಕ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ಓರ್ವ ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಘಟಕಕ್ಕೆ ಉಂಟಾಗಿರುವ ಹಾನಿಯ ಪ್ರಮಾಣವನ್ನು ಪ್ರಾಥಮಿಕವಾಗಿ ಕನಿಷ್ಠ ₹400 ಕೋಟಿ ಎಂದು ಅಂದಾಜಿಸಲಾಗಿದೆ. ದಾಳಿಯ ಬಳಿಕ ಘಟಕದ ಪ್ರದೇಶದಿಂದ ಭಾರೀ ಪ್ರಮಾಣದಲ್ಲಿ ಹೊಗೆ ಮೇಲಕ್ಕೆ ಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
Russia: ಡ್ರೋನ್ ದಾಳಿಗೆ ತತ್ತರಿಸಿದ ಫಾರ್ಮಾ ಘಟಕ
ಸುಮಿ ಪ್ರದೇಶದಲ್ಲಿರುವ ಕುಸುಮ್ ಗ್ರೂಪ್‌ನ ಔಷಧ ತಯಾರಿಕಾ ಘಟಕವನ್ನು ರಷ್ಯಾ ಡ್ರೋನ್‌ಗಳು ಗುರಿಯಾಗಿಸಿಕೊಂಡಿವೆ. ದಾಳಿಯ ತೀವ್ರತೆಗೆ ಘಟಕದ ಮುಖ್ಯ ಕಟ್ಟಡಕ್ಕೆ ಭಾರೀ ಹಾನಿಯಾಗಿದ್ದು, ಕಟ್ಟಡದ ಬಹುಪಾಲು ನಾಶವಾಗಿದೆ ಎಂದು ವರದಿಗಳು ತಿಳಿಸಿವೆ.
ದಾಳಿಯ ನಂತರ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರಕ್ಷಣಾ ಮತ್ತು ತುರ್ತು ಸೇವಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯಿಂದ ಮೃತಪಟ್ಟವರು ಹಾಗೂ ಗಾಯಗೊಂಡವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಕೂಡ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
1994ರಲ್ಲಿ ಭಾರತೀಯ ಔಷಧ ವಿತರಕ ಸಂಸ್ಥೆಯಾಗಿ ಆರಂಭ
ಕುಸುಮ್ ಗ್ರೂಪ್ 1994ರಲ್ಲಿ ಉಕ್ರೇನ್‌ಗೆ ಭಾರತೀಯ ಔಷಧಗಳನ್ನು ರಫ್ತು ಮಾಡುವ ವಿತರಕ ಸಂಸ್ಥೆಯಾಗಿ ತನ್ನ ಕಾರ್ಯಾಚರಣೆ ಆರಂಭಿಸಿತ್ತು. ಪ್ರಸ್ತುತ ಭಾರತೀಯ ಮೂಲದ ರಾಜೀವ್ ಗುಪ್ತಾ ಅವರು ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
2002ರಲ್ಲಿ ಇತರ ಕಂಪನಿಗಳ ಔಷಧಗಳ ವಿತರಣೆಯನ್ನು ಸ್ಥಗಿತಗೊಳಿಸಿದ ಸಂಸ್ಥೆ, ತನ್ನದೇ ಬ್ರ್ಯಾಂಡ್‌ಗಳ ಔಷಧಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಆರಂಭಿಸಿತು. ಬಳಿಕ ಔಷಧ ತಯಾರಿಕಾ ಕ್ಷೇತ್ರಕ್ಕೂ ಕಾಲಿಟ್ಟಿತು.
2007ರಲ್ಲಿ ಭಾರತದಲ್ಲಿ ತನ್ನ ಮೊದಲ ಔಷಧ ತಯಾರಿಕಾ ಘಟಕವನ್ನು ಸ್ಥಾಪಿಸಿದ ಕುಸುಮ್ ಗ್ರೂಪ್, 2009ರಲ್ಲಿ ಉಕ್ರೇನ್‌ನ ಸುಮಿಯಲ್ಲಿ ಫಾರ್ಮಾ ತಯಾರಿಕಾ ಘಟಕವನ್ನು ಆರಂಭಿಸಿತು. ನಂತರ ಭಾರತದಲ್ಲಿಯೂ ಮತ್ತೆರಡು ತಯಾರಿಕಾ ಘಟಕಗಳನ್ನು ಸ್ಥಾಪಿಸಿತು.
50ಕ್ಕೂ ಹೆಚ್ಚು ಜೆನೆರಿಕ್ ಔಷಧಗಳ ತಯಾರಿಕೆ
ಕುಸುಮ್ ಗ್ರೂಪ್ ಪ್ರಮುಖವಾಗಿ ಜೆನೆರಿಕ್ ಔಷಧಗಳನ್ನು ತಯಾರಿಸುತ್ತಿದ್ದು, 50ಕ್ಕೂ ಹೆಚ್ಚು ಉತ್ಪನ್ನಗಳನ್ನು ಹೊಂದಿದೆ. ಸಂಸ್ಥೆಯ ಔಷಧಗಳು 9ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿವೆ.
ಉಕ್ರೇನ್, ಉಜ್ಬೇಕಿಸ್ತಾನ್, ಕಜಕಿಸ್ತಾನ್ ಮತ್ತು ಫಿಲಿಪ್ಪೀನ್ಸ್ ಸಂಸ್ಥೆಯ ಪ್ರಮುಖ ಮಾರುಕಟ್ಟೆಗಳಾಗಿವೆ.
ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ಬಳಿಕವೂ ಸುಮಿಯಲ್ಲಿದ್ದ ಕುಸುಮ್ ಗ್ರೂಪ್‌ನ ಘಟಕ ತನ್ನ ಕಾರ್ಯಾಚರಣೆಯನ್ನು ಮುಂದುವರಿಸಿತ್ತು. ಆದರೆ ಇದೀಗ ನಡೆದ ಭೀಕರ ಡ್ರೋನ್ ದಾಳಿಯಿಂದ ಘಟಕಕ್ಕೆ ಭಾರೀ ಪ್ರಮಾಣದ ಹಾನಿಯಾಗಿದೆ.
Also Read>> ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಲಾರಿಗೆ ಡಿಕ್ಕಿ | ಯೋಧನ ಪುತ್ರ ಸೇರಿ ನಾಲ್ವರು ಸಾವು!
₹400 ಕೋಟಿಗೂ ಹೆಚ್ಚು ನಷ್ಟದ ಅಂದಾಜು
ದಾಳಿಯಿಂದ ತಯಾರಿಕಾ ಘಟಕದ ಕಟ್ಟಡ, ಮೂಲಸೌಕರ್ಯ ಮತ್ತು ಇತರ ಆಸ್ತಿಪಾಸ್ತಿಗಳಿಗೆ ಭಾರೀ ಹಾನಿಯಾಗಿರುವ ಹಿನ್ನೆಲೆಯಲ್ಲಿ ನಷ್ಟದ ಪ್ರಮಾಣ ಕನಿಷ್ಠ ₹400 ಕೋಟಿ ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ. ಅಂತಿಮ ನಷ್ಟದ ಪ್ರಮಾಣವನ್ನು ಅಧಿಕಾರಿಗಳು ಮತ್ತು ಸಂಸ್ಥೆಯ ವತಿಯಿಂದ ನಡೆಸಲಾಗುವ ಪರಿಶೀಲನೆಯ ಬಳಿಕವಷ್ಟೇ ಖಚಿತಪಡಿಸಬೇಕಿದೆ.
ಯುದ್ಧದ ನಡುವೆ ಭಾರತೀಯ ಮೂಲದ ಕಂಪನಿಗೆ ಭಾರೀ ಹೊಡೆತ
ರಷ್ಯಾ–ಉಕ್ರೇನ್ ಯುದ್ಧದ ಹಲವು ವರ್ಷಗಳ ನಡುವೆಯೂ ಸುಮಿಯಲ್ಲಿನ ಘಟಕ ಕಾರ್ಯನಿರ್ವಹಿಸುತ್ತಿತ್ತು. ಆದರೆ ಈ ಬಾರಿ ನಡೆದ ಡ್ರೋನ್ ದಾಳಿ ಸಂಸ್ಥೆಯ ಕಾರ್ಯಾಚರಣೆಗೆ ದೊಡ್ಡ ಹೊಡೆತ ನೀಡಿದೆ.
ಔಷಧ ತಯಾರಿಕಾ ಘಟಕದ ಮೇಲೆ ನಡೆದ ದಾಳಿಯು ಕೇವಲ ಆಸ್ತಿ ನಷ್ಟಕ್ಕೆ ಸೀಮಿತವಾಗದೆ, ಜೀವಹಾನಿಗೂ ಕಾರಣವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ಹಾಗೂ ನಿಖರ ಹಾನಿಯ ಪ್ರಮಾಣ ಮುಂದಿನ ದಿನಗಳಲ್ಲಿ ಹೊರಬರುವ ನಿರೀಕ್ಷೆಯಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










