ಕಲ್ಪ ಮೀಡಿಯಾ ಹೌಸ್ | ಪೇಶಾವರ (ಪಾಕಿಸ್ತಾನ) |
ಪಾಕಿಸ್ತಾನದ (Pakistan) ಪೇಶಾವರದಲ್ಲಿ ಖಾಸಗಿ ಶಾಲೆಯ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದ ಪರಿಣಾಮ 31 ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕಿ ಸೇರಿದಂತೆ ಕನಿಷ್ಠ 32 ಮಂದಿ ಮೃತಪಟ್ಟಿರುವ (Death) ಹೃದಯವಿದ್ರಾವಕ ಘಟನೆ ಗುರುವಾರ ಸಂಭವಿಸಿದೆ.
ಪೇಶಾವರದ ಆಫ್ರಿದಿ ಅಬಾದ್ ಪ್ರದೇಶದಲ್ಲಿರುವ ಅಲ್ ಖೈರ್ ಎಜುಕೇಷನ್ ಸೆಂಟರ್ನಲ್ಲಿ ಈ ದುರಂತ ಸಂಭವಿಸಿದೆ. ಬೆಳಗ್ಗೆ ತರಗತಿಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಮಕ್ಕಳು ಹಾಗೂ ಶಿಕ್ಷಕಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.
ಅವಶೇಷಗಳಡಿ ಸಿಲುಕಿದ ಮಕ್ಕಳು
ಮೇಲ್ಛಾವಣಿ ಕುಸಿದ ಪರಿಣಾಮ ಕಟ್ಟಡದ ಎರಡು ಮಹಡಿಗಳ ಭಾಗಕ್ಕೂ ಹಾನಿಯಾಗಿದ್ದು, ತರಗತಿಯಲ್ಲಿದ್ದ ಮಕ್ಕಳು ಅವಶೇಷಗಳಡಿ ಸಿಲುಕಿಕೊಂಡರು. ಘಟನೆ ಸಂಭವಿಸುತ್ತಿದ್ದಂತೆ ಶಾಲಾ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ದುರಂತದಲ್ಲಿ ಮೃತಪಟ್ಟ ಮಕ್ಕಳಲ್ಲಿ ಹೆಚ್ಚಿನವರು 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ವರದಿಯಾಗಿದೆ. ಘಟನೆಯಲ್ಲಿ ಓರ್ವ ಶಿಕ್ಷಕಿಯೂ ಮೃತಪಟ್ಟಿದ್ದಾರೆ.

45 ಮಕ್ಕಳಿಗೆ ಗಾಯ
ದುರಂತದಲ್ಲಿ ಸುಮಾರು 45 ಮಕ್ಕಳು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತುರ್ತು ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅವಶೇಷಗಳಡಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆದು ಆಂಬುಲೆನ್ಸ್ಗಳ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.
Also Read>> ಚಿಕ್ಕಮಗಳೂರು | ಏಕಾಏಕಿ ಬೆಂಕಿ: 2 ಎಲೆಕ್ಟ್ರಿಕ್ ಸ್ಕೂಟರ್ಗಳು ಸುಟ್ಟು ಭಸ್ಮ
Pakistan: ಶಾಲೆಯ ಕಟ್ಟಡದ ಸುರಕ್ಷತೆ ಬಗ್ಗೆ ತನಿಖೆ
ಪ್ರಾಥಮಿಕ ಮಾಹಿತಿಯ ಪ್ರಕಾರ ಶಾಲಾ ಕಟ್ಟಡದ ಮೇಲ್ಛಾವಣಿ ದುರ್ಬಲವಾಗಿದ್ದು, ಅದರ ಮೇಲೆ ಹೆಚ್ಚುವರಿ ಭಾರವಿದ್ದ ಕಾರಣ ಕಟ್ಟಡದ ಭಾಗ ಕುಸಿದಿರುವ ಸಾಧ್ಯತೆ ಕುರಿತು ತನಿಖೆ ನಡೆಯುತ್ತಿದೆ.
ಘಟನೆ ಸಂಬಂಧ ಶಾಲೆಯ ಮಾಲೀಕರನ್ನು ಬಂಧಿಸಲಾಗಿದ್ದು, ದುರಂತಕ್ಕೆ ಕಾರಣವಾದ ಅಂಶಗಳ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











