ತಿರುವನಂತಪುರಂ: ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಇತಿಹಾಸ ಪ್ರಸಿದ್ದ ಶಬರಿಮಲೆ ದೇವಾಲಯದಲ್ಲಿ ನಾಳೆಯಿಂದ ದರ್ಶನ ಆರಂಭವಾಗಲಿದ್ದು, ಈ ಕುರಿತಂತೆ ಇಂದು ನಡೆದ ಸಭೆಯಲ್ಲಿ ಒಮ್ಮತ ಮೂಡದೇ ಹೋಗಿದೆ.
ಎಲ್ಲಾ ವಯೋಮಾನದ ಮಹಿಳೆಯರು ಅಯ್ಯಪ್ಪ ದರ್ಶನ ಪಡೆದು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸುವ ಬಗ್ಗೆ ಟ್ರಾವಂಕೂರು ದೇವಸ್ಥಾನ ಮಂಡಳಿ ಹಾಗೂ ಪಂಡಲಂ ರಾಯಲ್ ಕುಟುಂಬ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ಇಂದು ನಡೆದ ಮಾತುಕತೆಯಲ್ಲಿ ಒಮ್ಮತ ಮೂಡದೆ ವಿಫಲವಾಗಿದೆ.
ಈ ಕುರಿತಂತೆ ಸಭೆಯಿಂದ ಮಧ್ಯದಲ್ಲಿಯೇ ಹೊರಬಂದ ಪಂಡಲಂ ಪ್ಯಾಲೇಸ್ ಸಮನ್ವಯ ಸಮಿತಿ ಅಧ್ಯಕ್ಷ ಶಶಿಕುಮಾರ್ ಮಾತನಾಡಿದ್ದು, ಭಕ್ತರ ಪ್ರಶ್ನೆಗಳಿಗೆ ಸಭೆಯಲ್ಲಿ ಉತ್ತರ ಕಂಡುಕೊಳ್ಳುವಲ್ಲಿ ಸಭೆ ವಿಫಲವಾಗಿದೆ. ಶಬರಿಮಲೆಯಲ್ಲಿ ಮಹಿಳೆಯರು ಪೂಜೆ ಸಲ್ಲಿಸಲು ಅವಕಾಶ ನೀಡುವ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಕೂಡಲೇ ಮರು ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಲಾಯಿತು ಎಂದರು.
ಮುಂಬರುವ ದಿನಗಳಲ್ಲಿ ಪ್ರತಿಭಟನೆ ನಡೆಸಲು ಧಾರ್ಮಿಕ ಮುಖಂಡರು ಹಾಗೂ ಪಂಡಲಂ ಪ್ಯಾಲೇಸ್, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘಂ, ಮತ್ತು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಸೇರಿದಂತೆ ಮತ್ತಿತರ ಸಂಘಟನೆಗಳ ಮನವೊಲಿಸಲು ಶೀಘ್ರದಲ್ಲಿಯೇ ಸಭೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದರು.
Discussion about this post